ಆರ್ಥಿಕ ಕಾರಿಡಾರ್ ವಿಷಯದಲ್ಲಿ ಭಾರತ ಬೆಂಬಲಿಸಿದ ಅಮೆರಿಕ, ಚೀನಾ-ಪಾಕಿಸ್ತಾನಕ್ಕೆ ಶಾಕ್!

ಡಿಜಿಟಲ್ ಕನ್ನಡ ಟೀಮ್:

ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಹಾಗೂ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗಳಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತಿರುವ ಸಂಗತಿ. ಈಗ ಈ ವಿಚಾರವಾಗಿ ಅಮೆರಿಕ ಸಹ ಭಾರತದ ಬೆನ್ನಿಗೆ ನಿಂತಿದೆ.

ಚೀನಾದ ಈ ಯೋಜನೆಗಳು ಭಾರತದ ವಿವಾದದ ಪ್ರದೇಶದಲ್ಲಿ ಹಾದುಹೋಗುತ್ತಿದ್ದು, ಇದು ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ ಎಂದು ಅಮೆರಿಕ ಸಂದೇಶ ರವಾನಿಸಿದೆ.

ಇದೇ ವರ್ಷ ಮೇ ತಿಂಗಳಲ್ಲಿ ಚೀನಾ ಬೆಲ್ಟ್ ಮತ್ತು ರೋಡ್ ಫೋರಂ ಸಭೆಯನ್ನು ನಡೆಸಿ ಎಲ್ಲಾ ದೇಶಗಳಿಗೂ ಆಹ್ವಾನ ನೀಡಿತ್ತು. ಆದರೆ, ಭಾರತ ಮಾತ್ರ ಈ ಸಭೆಯನ್ನು ಧಿಕ್ಕರಿಸಿತ್ತು. ಒಬಿಒಆರ್ ಯೋಜನೆಯಡಿಯಲ್ಲೇ ಬರುವ ಸಿಪಿಇಸಿ ಯೋಜನೆಯು ತನ್ನ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ಕೊಟ್ಟು ಈ ಯೋಜನೆಯನ್ನು ವಿರೋಧಿಸಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಚೀನಾ, ನಂತರ ದೋಕಲಂ ವಿಚಾರಕ್ಕೆ ಕೈ ಹಾಕಿ ಭಾರತದ ವಿರುದ್ಧ ಜಟಾಪಟಿಗೆ ನಿಂತಿತ್ತು.

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ರಸ್ತೆಯು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದುಹೋಗಬೇಕು. ಹೀಗಾಗಿ ಈ ಯೋಜನೆಗೆ ಭಾರತ ಸಮ್ಮತಿ ಸೂಚಿಸಿಲ್ಲ. ಒಂದು ವೇಳೆ ಭಾರತ ಈ ಯೋಜನೆಗೆ ಒಪ್ಪಿಗೆ ನೀಡಿದರೆ, ನಂತರ ಪಾಕಿಸ್ತಾನ ಪಿಒಕೆಯನ್ನು ತನ್ನ ಭಾಗ ಎಂದು ಹೇಳಿಕೊಳ್ಳುತ್ತದೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಸಾರ್ವಭೌಮತೆಗೆ ಧಕ್ಕೆ ಬರುವ ಈ ಯೋಜನೆಯನ್ನು ಭಾರತ ವಿರೋಧಿಸಿದೆ.

ಈಗ ಈ ವಿಷಯದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟ್ಟಿಸ್, ‘ಜಾಗತಿಕವಾಗಿ ಬೆಸೆದುಕೊಂಡಿರುವ ವಿಶ್ವದಲ್ಲಿ ಅನೇಕ ರಸ್ತೆಗಳು, ಅನೇಕ ಯೋಜನೆಗಳು ಅನೇಕ ರಾಷ್ಟ್ರಗಳನ್ನು ಬೆಸೆದಿವೆ. ಆದರೆ, ಯಾವುದೇ ರಾಷ್ಟ್ರದ ಯೋಜನೆ ಮತ್ತೊಂದು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ಮಾಡಬಾರದು.

ಆದರೆ ಚೀನಾದ ಒಬಿಒಆರ್ ಯೋಜನೆ ವಿವಾದಿತ ಪ್ರದೇಶಗಳಲ್ಲಿ ಹಾದು ಹೋಗಲಿದ್ದು, ಇದು ಬಲವಂತವಾಗಿ ಬೇರೊಂದು ದೇಶದ ಮೇಲೆ ಬಲವಂತವಾಗಿ ಅಧಿಕಾರ ಸಾಧಿಸುವ ಪ್ರಯತ್ನವಾಗಿ ಕಾಣುತ್ತಿದೆ. ಚೀನಾದ ಈ ಯೋಜನೆ, ಭೂ ಹಾಗೂ ಸಾಗರ ಮಾರ್ಗದ ಮೇಲೆ ಚೀನಾದ ಸಂಪೂರ್ಣ ನಿಯಂತ್ರಣದ ಉದ್ದೇಶವೇ ಅಡಗಿದ್ದು, ಯೂರೋಪ್ ಏಷ್ಯಾ ಭಾಗಗಳ ಮೇಲೆ ಹಿಡಿತ ಸಾಧಿಸಿ, ಅಲ್ಲಿನ ಸಂಪನ್ಮೂಲ ಕಬಳಿಸುವ ಒಂದು ಪ್ರಯತ್ನವಾಗಿದೆ. ಈ ನಿಯಮವು ಅಮೆರಿಕಕ್ಕಿಂತ ಭಿನ್ನವಾಗಿದೆ. ಚೀನಾ ತನ್ನ ಯೋಜನೆ ಮೂಲಕ ಅಪ್ಘಾನಿಸ್ತಾನದಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸಲಿದೆ’ ಎಂದು ಪ್ರಶ್ನಿಸಿದರು.

ಚೀನಾದ ಈ ಒಬಿಒಆರ್ ಯೋಜನೆ ವಿಚಾರದಲ್ಲಿ ಅಮೆರಿಕದ ಈ ನಿಲುವು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಕಾರಣ, ಚೀನಾದ ಈ ಯೋಜನೆಯ ಕಾರ್ಯಕ್ರಮದ ವೇಳೆ ಏಷ್ಯಾ ಹಾಗೂ ಯುರೋಪಿನ ಬಹುತೇಕ ಎಲ್ಲಾ ರಾಷ್ಟ್ರಗಳ ಅಧ್ಯಕ್ಷರು ಅಥವಾ ಪ್ರಧಾನಮಂತ್ರಿಗಳು ಹಾಗೂ ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಭಾರತ ಮಾತ್ರ ಈ ಯೋಜನೆಯನ್ನು ಧಿಕ್ಕರಿಸಿತ್ತು. ಈಗ ಭಾರತದ ವಿರೋಧಕ್ಕೆ ಅಮೆರಿಕ ಸಹ ಬೆಂಬಲ ಸೂಚಿಸಿರುವುದು ಭಾರತಕ್ಕೆ ಆತ್ಮಸ್ಥೈರ್ಯ ಹೆಚ್ಚಿದಂತಾಗಿದೆ. ಅಲ್ಲದೆ ಭಾರತಕ್ಕೆ ಅಮೆರಿಕದ ಈ ಬೆಂಬಲ ಚೀನಾ ಹಾಗೂ ಪಾಕಿಸ್ತಾನಕ್ಕೆ ಅನಿರೀಕ್ಷಿತವಾಗಿದ್ದು, ಶಾಕ್ ನೀಡಿದೆ.

ಇನ್ನು ಪಾಕಿಸ್ತಾನ ಹಾಗೂ ಭಯೋತ್ಪಾದನೆಯ ವಿಚಾರವಾಗಿಯೂ ಮಾತನಾಡಿರುವ ಮ್ಯಾಟಿಸ್, ‘ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಖಚಿತವಾಗಿದೆ. ಹೀಗಾಗಿ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ. ನಾವು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶವನ್ನು ಕೊಟ್ಟು ನೋಡುತ್ತೇವೆ. ಈ ಅವಕಾಶದಲ್ಲಿ ಪಾಕಿಸ್ತಾನ ನಮ್ಮ ನಿರೀಕ್ಷೆಗೆ ತಕ್ಕಂತೆ ಉಗ್ರರ ವಿರುದ್ಧ ಹೋರಾಡದಿದ್ದರೆ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಕುರಿತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ’ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಭಾರತವು ಅನೇಕ ವರ್ಷಗಳಿಂದಲೂ ಪಾಕಿಸ್ತಾನ ಹಾಗೂ ಉಗ್ರರ ನಡುವಣ ನಂಟಿನ ಬಗ್ಗೆ ವಿಶ್ವಕ್ಕೆ ಸಾರುತ್ತಲೇ ಬಂದಿತ್ತು, ಆದರೆ ಅಮೆರಿಕ ಸೇರಿದಂತೆ ಅನೇಕ ಪ್ರಬಲ ರಾಷ್ಟ್ರಗಳು ಭಾರತದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಅಮೆರಿಕದದ ರಕ್ಷಣಾ ಕಾರ್ಯದರ್ಶಿಯೇ ಪಾಕಿಸ್ತಾನ ಗುಪ್ತಚರ ಸಂಸ್ಥೆ ಹಾಗೂ ಉಗ್ರ ಸಂಘಟನೆ ನಡುವೆ ಸಂಪರ್ಕ ಇರುವುದನ್ನು ಒಪ್ಪಿಕೊಂಡು ಎಚ್ಚರಿಕೆ ನೀಡಿರುವುದು ಭಾರತಕ್ಕೆ ಸಿಕ್ಕ ಮತ್ತೊಂದು ಯಶಸ್ಸು ಎಂದೇ ಪರಿಗಣಿಸಬಹುದಾಗಿದೆ.

Leave a Reply