ಸಾರ್ವಜನಿಕರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ, ಇದೇ ಮೊದಲ ಬಾರಿಗೆ ಪೆಟ್ರೋಲ್- ಡೀಸೆಲ್ ಮೇಲಿನ ₹ 2 ಸುಂಕ ಕಡಿತ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರವನ್ನು ಪ್ರಶ್ನಿಸಿ ಒತ್ತಡ ಹೇರಿದ್ದರು. ಈಗ ಸರ್ಕಾರ ಸಾರ್ವಜನಿಕರ ಒತ್ತಾಯಕ್ಕೆ ಮಣಿದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕದಲ್ಲಿ ₹ 2 ರಷ್ಟು ಕಡಿತ ಮಾಡಿದೆ.

ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದು, ಬುಧವಾರದಿಂದ ಈ ಹೊಸ ಸುಂಕದ ಪ್ರಮಾಣ ಜಾರಿಯಾಗಲಿದೆ. ಅದರೊಂದಿಗೆ ಇಂಧನಗಳ ಬೆಲೆ ₹ 2 ರಷ್ಟು ಕಡಿಮೆಯಾಗಲಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಕೆಲಸ ಮಾಡಿರುವ ಪ್ರಮುಖ ಅಂಶಗಳೇನು ಎಂದು ನೋಡುವುದಾದರೆ…

  • ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಿರುವ ಸಂದರ್ಭದಲ್ಲಿ ಸುಂಕದ ಪ್ರಮಾಣವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಧಿಸಿರುವುದರಿಂದ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇತ್ತು. 2014ರ ನವೆಂಬರ್ ನಿಂದ 2016ರ ಜನವರಿ ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಒಂಬತ್ತು ಬಾರಿ ಬೆಲೆ ಏರಿಕೆ ಮಾಡಿತ್ತು. ಇರಿಂದ ಪ್ರತಿ ಲೀಟರ್ ಪೆಟ್ರೋಲ್ ಗೆ ₹ 11.77 ರಷ್ಟು ಸುಂಕ ಹೆಚ್ಚಿಸಿತ್ತು. ಈ 15 ತಿಂಗಳ ಅವಧಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಮೇಲೆ ₹13.47 ರಷ್ಟು ಸುಂಕ ಹೆಚ್ಚಿಸಿತ್ತು. ಹೀಗೆ ಸುಂಕ ಹೆಚ್ಚಳದಿಂದ ಕೇಂದ್ರ ಸರ್ಕಾರ ತನ್ನ ಆದಾಯದಲ್ಲಿ ಎರಡು ಪಟ್ಟು ಹೆಚ್ಚು ಗಳಿಕೆ ಮಾಡಿತ್ತು. 2014-15ನೇ ಸಾಲಿನಲ್ಲಿ ₹ 99 ಸಾವಿರ ಕೋಟಿಯಷ್ಟು ಇದ್ದ ಆದಾಯ, 2016-17ನೇ ಸಾಲಿನಲ್ಲಿ ₹ 2.42 ಲಕ್ಷ ಕೋಟಿಯಷ್ಟು ಹೆಚ್ಚಿಸಿಕೊಂಡಿತ್ತು.
    ಆಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸಿರುವುದರಿಂದ ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸುಂಕ ಕಡಿತದ ನಿರ್ಧಾರ ಪ್ರಕಟಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಮೇಲೆ ಆಗುವ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ತಿಳಿಸಿದೆ.
  • ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಸರ್ಕಾರದ ಆದಾಯದಲ್ಲಿ ₹ 26 ಸಾವಿರ ಕೋಟಿಯಷ್ಟು ಕಡಿಮೆಯಾಗಲಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 13 ಸಾವಿರ ಕೋಟಿ ಕಡಿಮೆಯಾಗಲಿದೆ.
  • ಇನ್ನು ಸರ್ಕಾರದ ಈ ನಿರ್ಧಾರ ತೈಲ ಕಂಪನಿಗಳ ಮೇಲೂ ಪರಿಣಾಮ ಬೀರಲಿದ್ದು, ಕಂಪನಿಗಳ ಮಾರುಕಟ್ಟೆಯ ಬೆಲೆಯ ಅಂತರದ ಮೇಲೆ ಪರಿಣಾಮ ಬೀರಲಿದೆ.
  • ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರಿಗೆ ಆಗುವ ಲಾಭವೇನು ಎಂಬುದನ್ನು ನೋಡುವುದಾದರೆ, ಕೇಂದ್ರ ಸರ್ಕಾರದ ಸುಂಕ ಕಡಿತದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಲಿದೆ. ಇನ್ನು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಸಹ ವ್ಯಾಟ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಪ್ರತಿ ಲೀಟರ್ ಗೆ ₹ 5 ರಷ್ಟು ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿವೆ.

Leave a Reply