ಮಳೆಗೆ ತತ್ತರಿಸಿದ ಬೆಂಗಳೂರು: ಕೆರೆಗಳಂತಾದವು ರಸ್ತೆಗಳು, ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆ ಸಾಧ್ಯತೆ

FLOOD IN KORAMAGALA 4TH BLOCK SONY JUNCTION WERE ONE BMTC BUS AND VAN FILLED WITH WATER

ಡಿಜಿಟಲ್ ಕನ್ನಡ ಟೀಮ್:

ಹಾಲಿ ಡೇ ಮೂಡಿನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಶಾಕ್ ನೀಡಿದೆ. ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಕೆಲವೇ ಹೊತ್ತಿನಲ್ಲಿ ಬೆಂಗಳೂರಿನ ಚಿತ್ರಣ ಸಂಪೂರ್ಣ ಬದಲಾಯಿತು. ರಸ್ತೆಗಳಲ್ಲೆಲ್ಲಾ ನೀರು ನಿಂತು, ವಾಹನಗಳು ರಸ್ತೆಯಲ್ಲಿವೆಯೋ ಅಥವಾ ಕೆರೆಯಲ್ಲಿವೆಯೋ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ಮೆಜೆಸ್ಟಿಕ್, ಕೆ.ಆರ್ ವೃತ್ತ, ಬಿಟಿಎಂ ಲೇಒಟ್, ಜಯನಗರ, ಮಲ್ಲೇಶ್ವರಂ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರ ಸ್ಥಿತಿ ಶೋಚನೀಯವಾಯಿತು. ಕೆಲವೆಡೆ ಬಿಎಂಟಿಸಿ ಬಸ್ ಗಳು ಮುಳುಗಿರುವ ಬಗ್ಗೆ ವರದಿ ಬಂದಿದ್ದು, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬೆಂಗಳೂರಿನ ರಸ್ತೆಗಳು ಈಗಾಗಲೇ ಡಾಂಬರು ಕಾಣದೇ ಹೊಂಡಗಳೇ ನಿರ್ಮಾಣವಾಗಿವೆ. ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ಮಳೆ ಸುರಿದು, ಮಳೆ ನೀರು ರಸ್ತೆಯಲ್ಲಿ ನಿಂತಿರುವುದರಿಂದ ವಾಹನ ಸವಾರರಿಗೆ ಸವಾಲಾಗಿದೆ.

ಇದೇ ವೇಳೆ ಎಂದಿನಂತೆ ಮಳೆಯಿಂದಾಗಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದ್ದು, ಒಟ್ಟಿನಲ್ಲಿ ರಜೆ ದಿನದಂದು ಜನರ ಪ್ಲಾನ್ ಗೆ ಮಳೆ ಅಡ್ಡಿಪಡಿಸಿದೆ. ಇನ್ನು ಈ ದಿಢೀರ್ ಮಳೆಗೆ ಕಾರಣ, ಅರಬ್ಬಿ ಸಮುದ್ರದ ಪೂರ್ವಭಾಗದಿಂದ ಬಂದ ಗಾಳಿಯಿಂದಾಗಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮುಂದಿನ ಐದು ದಿನ ಮಳೆ ಬೀಳುವ ನಿರೀಕ್ಷೆ ಹೊಂದಲಾಗಿದೆ.

ಕೇವಲ ರಾಜಧಾನಿ ಮಾತ್ರವಲ್ಲದೆ, ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಕರಾವಳಿ ಭಾಗಗಳಲ್ಲಿ ಮುಂದಿನ 24ರಿಂದ 48 ಗಂಟೆಗಳ ಕಾಲ ನಿರಂತರವಾಗಿ ಮಳೆ ಬೀಳಲಿದೆ ಎಂದು ಸ್ಕೈಮೆಟ್ ವರದಿ ಮಾಡಿದೆ.

Leave a Reply