ಮುಂದಿನ ವರ್ಷವೇ ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ? ಇದರ ಹಿಂದಿರುವ ಬಿಜೆಪಿ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್:

ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲೇ ನಡೆಸಬೇಕು ಎಂಬ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಾದ ಸಾಕಷ್ಟು ದಿನಗಳಿಂದ ಕೇಳುತ್ತಲೇ ಬಂದಿದೆ. ಈ ಕುರಿತು ಸರ್ಕಾರಕ್ಕೆ ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆ ಮೋದಿಯ ಕನಸು ಚಿಗುರೊಡೆಯುವಂತೆ ಮಾಡಿದೆ.

ಬುಧವಾರ ಈ ಕುರಿತಾಗಿ ಮಾಹಿತಿ ನೀಡಿರುವ ಚುನಾವಣಾ ಆಯೋಗ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿದೆ ಎಂದು ಸರ್ಕಾರಕ್ಕೆ ತಿಳಿಸಿರುವುದಾಗಿ ಹೇಳಿದೆ. ಹೀಗಾಗಿ ಬಿಜೆಪಿಯ ಆಸೆಯಂತೆ ವಿವಿಧ ರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯನ್ನು ಮುಂದಿನ ವರ್ಷವೇ ನಡೆಸುವ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭೋಪಾಲ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚುನಾವಣಾ ಆಯುಕ್ತ ಒ.ಪಿ ರಾವತ್ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು ಅದು ಹೀಗಿದೆ… ‘ಕೇಂದ್ರ ಸರ್ಕಾರವು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವಿಚಾರವಾಗಿ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೇಳಿತ್ತು. ಅದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಉತ್ತರಿಸಿದ್ದು, 2018ರ ಸೆಪ್ಟೆಂಬರ್ ತಿಂಗಳಲ್ಲಿ ಈ ಎರಡೂ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿದೆ ಎಂದು ಹೇಳಿದೆ. ಈ ಎರಡು ಚುನಾವಣೆಗಳನ್ನು ನಡೆಸಲು ಸುಮಾರು 40 ಲಕ್ಷ ಇವಿಎಂ ಹಾಗೂ ವಿವಿಪ್ಯಾಟ್ ಗಳ ಅಗತ್ಯವಿದ್ದು, ಇದಕ್ಕಾಗಿ ಕ್ರಮವಾಗಿ ₹ 3,400 ಹಾಗೂ ₹ 12,000 ಕೋಟಿ ಹಣದ ಅಗತ್ಯವಿದೆ.

ಎರಡೂ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ತಾಂತ್ರಿಕವಾಗಿ ಸಿದ್ಧವಿದೆ. ಆದರೆ ಅದಕ್ಕೆ ತಕ್ಕ ಕಾನೂನು ತಿದ್ದುಪಡಿ ಮಾಡುವ ಅಧಿಕಾರ ಸರ್ಕಾರದ ಕೈಯಲ್ಲಿದೆ.’

ಚುನಾವಣಾ ಆಯೋಗದ ಈ ಹೇಳಿಕೆಯಿಂದ ದೇಶದಲ್ಲಿ ಏಕಕಾಲದಲ್ಲಿ ಎರಡೂ ಪ್ರಮುಖ ಚುನಾವಣೆಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. 2018ರಲ್ಲಿ ಒಟ್ಟು ಏಳು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಬೇಕಿವೆ. ಹಿಮಾಚಲ ಪ್ರದೇಶದಲ್ಲಿ (ಜನವರಿ 7), ಗುಜರಾತಿನಲ್ಲಿ (ಜನವರಿ 22), ಮೇಘಾಲಯ (ಮಾರ್ಚ್ 6), ನಾಗಾಲ್ಯಾಂಡ್ (ಮಾರ್ಚ್ 13), ತ್ರಿಪುರಾ (ಮಾರ್ಚ್ 14), ಕರ್ನಾಟಕ (ಮೇ 28), ಮತ್ತು ಮಿಜೋರಾಂ (ಡಿಸೆಂಬರ್ 15), ರಾಜ್ಯಗಳಲ್ಲಿನ ಸರ್ಕಾರದ ಅವಧಿ ಮುಕ್ತಾಯವಾಗಲಿದ್ದು, ಈ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ.

ಮಿಜೋರಾಂ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆ ಸೆಪ್ಟೆಂಬರ್ ತಿಂಗಳ ಒಳಗೆ ಮುಕ್ತಾಯವಾಗಬೇಕಿದೆ. ಇನ್ನು 2019ರಲ್ಲಿ ಲೋಕಸಭೆ ಚುನಾವಣೆ ನಡೆಯಬೇಕಿದ್ದು, ಅದನ್ನು ಮುಂಚಿತವಾಗಿಯೇ ನಡೆಸಲು ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಮೋದಿ ಸರ್ಕಾರ ಈ ಏಕಕಾಲದ ಚುನಾವಣೆ ಬಗ್ಗೆ ಯಾಕಿಷ್ಟು ತಲೆ ಕೆಡಿಸಿಕೊಂಡಿದೆ, ಇದರಿಂದ ಎಲ್ಲರಿಗೂ ಆಗುವ ಪ್ರಯೋಜನಗಳೇನು ಹಾಗೂ ಬಿಜೆಪಿಗೆ ಆಗುವ ರಾಜಕೀಯ ಲಾಭಗಳೇನು ಎಂಬುದನ್ನು ನೋಡಿದರೆ ನಮಗೆ ಸಿಗುವ ಪ್ರಮುಖ ಅಂಶಗಳು ಹೀಗಿವೆ…

  • ಏಕಕಾಲದಲ್ಲಿ ರಾಜ್ಯಗಳ ಹಾಗೂ ಲೋಕಸಭೆ ಚುನಾವಣೆ ನಡೆಸುವುದರಿಂದ ಸಾಕಷ್ಟು ಲಾಭಗಳಿವೆ. ಇದರಿಂದ ಚುನಾವಣೆ ನಡೆಸಲು ಸಮಯ ಹಾಗೂ ವೆಚ್ಚವನ್ನು ದೊಡ್ಡಮಟ್ಟದಲ್ಲಿ ನಿಯಂತ್ರಿಸಬಹುದು. ಏಕಕಾಲದಲ್ಲಿ ಚುನಾವಣೆ ನಡೆಸಿದರೆ, ಸಂಸದೀಯ ಬಲ, ಸರ್ಕಾರಿ ನೌಕರರು, ಚುನಾವಣಾ ಆಯೋಗದ ಸಿಬ್ಬಂದಿಗಳನ್ನು ಏಕಕಾಲದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಅಲ್ಲದೆ ಮತದಾನ ಬೂತ್ ಗಳ ಆಯೋಜನೆ, ಮತದಾನ ಗುರುತಿನ ಚೀಟಿ, ಮತದಾನ ಯಂತ್ರವನ್ನು ಸರಿಯಾಗಿ ಬಳಸಿಕೊಳ್ಳಬಹುದು. ಅಲ್ಲದೆ ಚುನಾವಣಾ ನೀತಿ ಸಂಹಿತೆಯನ್ನು ಏಕಕಾಲದಲ್ಲಿ ಜಾರಿಗೊಳಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುವಾಗ ಪ್ರತಿಬಾರಿಯೂ ನೀತಿ ಸಂಹಿತೆ ಜಾರಿ ಮಾಡಲಾಗುವುದು. ಆಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು, ಮೂಲಭೂತ ಸೌಕರ್ಯ ಕಾಮಗಾರಿಗಳು ನೆನೆಗುದಿಗೆ ಬೀಳುತ್ತವೆ. ಇನ್ನು ಪ್ರತಿಬಾರಿಯೂ ಚುನಾವಣೆ ನಡೆಯುವಾಗಲು ಆ ಚುನಾವಣೆ ಆಯೋಜನೆಗೆ ಸಾಕಷ್ಟು ಶ್ರಮ ವ್ಯಯಿಸಬೇಕಾಗುತ್ತದೆ. ಹೀಗಾಗಿ ಏಕಕಾಲದ ಚುನಾವಣೆ ಇವುಗಳನ್ನು ತಪ್ಪಿಸಲು ನೆರವಾಗುತ್ತದೆ.
  • ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲೂ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣ ಸುರಿಯುತ್ತವೆ. ಅದೇ ಏಕಕಾಲದಲ್ಲಿ ಚುನಾವಣೆ ನಡೆದರೆ, ಪ್ರಚಾರ ಕಾರ್ಯದ ವೆಚ್ಚವನ್ನು ತಗ್ಗಿಸಬಹುದು. ಇನ್ನು ಒಂದೇ ಕಾಲದಲ್ಲಿ ಚುನಾವಣೆ ನಡೆದರೆ, ಮತದಾರರು ರಾಜ್ಯ ಹಾಗೂ ಕೇಂದ್ರದ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಮತಹಾಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಉತ್ತಮ ಸ್ಥಿರ ಮೈತ್ರಿ ಹಾಗೂ ಸಹಕಾರದಿಂದ ಸರ್ಕಾರ ರಚನೆಯಾಗಲಿವೆ.
  • ಇನ್ನು ಸರ್ಕಾರದ ಈ ವಾದದ ಹಿಂದೆ ಇರುವ ರಾಜಕೀಯ ಲೆಕ್ಕಾಚಾರವನ್ನು ನೋಡುವುದಾದರೆ, ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ 2014ರ ಚುನಾವಣೆಯ ವೇಳೆ ನಡೆಸಿದಂತೆ ಸಂಘಟಿತ ಹಾಗೂ ಪರಿಣಾಮಕಾರಿ ಪ್ರಚಾರ ನಡೆಸಿ ರಾಜ್ಯಗಳ ಹಾಗೂ ಲೋಕಸಭೆಯಲ್ಲಿ ಪಕ್ಷ ತನ್ನ ನಿಯಂತ್ರಣವನ್ನು ಸಾಧಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಒಂದು ಭಯದಿಂದಲೇ ವಿರೋಧ ಪಕ್ಷಗಳು ಏಕಕಾಲಕ್ಕೆ ಬಿಜೆಪಿ ವಿರುದ್ಧ ಚುನಾವಣೆಯನ್ನು ಎದುರಿಸಲು ಹಿಂದೇಟು ಹಾಕುತ್ತಿವೆ.
  • ಏಕಕಾಲದಲ್ಲಿ ಚುನಾವಣೆ ನಡೆದರೆ, ತಮ್ಮ ಅಧಿಕಾರ ಹಾಗೂ ರಣತಂತ್ರದ ಮೂಲಕ ಜನರನ್ನು ತಮ್ಮತ್ತ ಸೆಳೆದು ಒಂದೇ ಏಟಿನಲ್ಲಿ ಕೇಂದ್ರ ಹಾಗೂ ರಾಜ್ಯಗಳ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಬಹುದು. ಇದರಿಂದ ವಿರೋಧ ಪಕ್ಷಗಳನ್ನು ನಿಗ್ರಹಿಸಿ ತಮ್ಮ ವಿರುದ್ಧ ನಿಲ್ಲುವವರಿಲ್ಲದಂತೆ ಮಾಡಬಹುದು. ಆ ಮೂಲಕ ‘ವಿರೋಧ ಪಕ್ಷ ಮುಕ್ತ ಭಾರತ’ ನಿರ್ಮಾಣದ ಲೆಕ್ಕಾಚಾರವೂ ಅಡಗಿದೆ.

ಈ ಎಲ್ಲ ಅಂಶಗಳಿಂದ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವಾದ ಮಂಡನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸಾಧಿಸುವುದರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಫಲವಾಗುವುದೇ ಎಂಬ ಕುತೂಹಲ ಮೂಡಿದೆ.

Leave a Reply