ಕ್ರಿಕೆಟ್ ಪ್ರಿಯ ದೇಶದಲ್ಲಿ ಕಮಾಲ್ ಮಾಡುವುದೇ ಫಿಫಾ ಕಿರಿಯರ ವಿಶ್ವಕಪ್? ಬದಲಾಗುವುದೇ ಭಾರತೀಯ ಫುಟ್ಬಾಲ್ ಭವಿಷ್ಯ?

ಡಿಜಿಟಲ್ ಕನ್ನಡ ಟೀಮ್:

ಕ್ರಿಕೆಟ್ ಅನ್ನು ಧರ್ಮವಂತೆ ಆರಾಧಿಸೋ ಭಾರತದಲ್ಲಿ ಬೇರೆ ಕ್ರೀಡೆಗಳಿಗೆ ಸಿಗುವ ಪ್ರೋತ್ಸಾಹ ಕಡಿಮೆಯೇ. ಇಂತಹ ಪರಿಸ್ಥಿತಿಯಲ್ಲಿ ಈಗ ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟಗಳ ಸಂಸ್ಥೆ ಇದೇ ಮೊದಲ ಬಾರಿಗೆ ಭಾರತದಲ್ಲಿ 17 ವರ್ಷದವರೊಗಿನ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸುತ್ತಿದ್ದು, ಈ ಟೂರ್ನಿಯಿಂದ ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಭವಿಷ್ಯ ಬದಲಿಸುವ ಇರಾದೆ ಹೊಂದಿದೆ.

ವಿಶ್ವದ ಬಹುತೇಕ ಎಲ್ಲಾ ದೇಶಗಳು ಆಡುವ ಫುಟ್ಬಾಲ್ ಜಾಗತಿಕ ಕ್ರೀಡೆ ಎಂದೇ ಗುರುತಿಸಿಕೊಂಡಿದೆ. ಯೂರೋಪ್, ಅಮೆರಿಕ, ಆಫ್ರಿಕಾ ಖಂಡಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಫುಟ್ಬಾಲ್ ಏಷ್ಯಾದ ಕೆಲವು ರಾಷ್ಟ್ರಗಳಲ್ಲೂ ತನ್ನ ಪ್ರಾಬಲ್ಯವನ್ನು ಹೊಂದಿದೆ. ಆದರೆ ಭಾರತದಲ್ಲಿ ಈ ಕ್ರೀಡೆಯ ಹವಾ ಸ್ವಲ್ಪ ಕಡಿಮೆಯೇ. ಭಾರತದ ಈಶಾನ್ಯ ರಾಜ್ಯಗಳು ಹಾಗೂ ಕೇರಳದಂತಹ ಕೆಲವು ರಾಜ್ಯಗಳಲ್ಲಿ ಹೊರತು ಪಡಿಸಿದರೆ, ಮಿಕ್ಕ ರಾಜ್ಯಗಳಲ್ಲಿ ಫುಟ್ಬಾಲ್ ಹುಚ್ಚು ಕಡಿಮೆ ಇದೆ. ಐ-ಲೀಗ್ ಹಾಗೂ ಇಂಡಿಯನ್ ಸೂಪರ್ ಲೀಗ್ ನಂತಹ ಟೂರ್ನಿಗಳ ಮೂಲಕ ಫುಟ್ಬಾಲ್ ಕ್ರೀಡೆಯತ್ತ ಜನರನ್ನು ಆಕರ್ಷಿಸಲು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ಪರಿಶ್ರಮಿಸುತ್ತಿದೆ. ಆದರೆ ಕ್ರಿಕೆಟ್ ನಲ್ಲಿ ಮುಳುಗಿರುವ ಭಾರತೀಯರನ್ನು ತನ್ನತ್ತ ಸೆಳೆದುಕೊಳ್ಳಲು ಸ್ವಲ್ಪ ಕಷ್ಟವೇ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಫಿಫಾದ ಟೂರ್ನಿಯೊಂದು ಭಾರತದ ನೆಲದಲ್ಲಿ ಆಯೋಜನೆಯಾಗುತ್ತಿದೆ.

ಈ ಟೂರ್ನಿಯ ಆಯೋಜನೆಯಿಂದ ಭಾರತೀಯ ಕ್ರೀಡಾಭಿಮಾನಿಗಳನ್ನು ಸೆಳೆಯುವ ಉದ್ದೇಶವಿದೆ. ಈ ಉದ್ದೇಶ ನಿಜವಾಗಿಯೂ ಈಡೇರಬೇಕಾದರೆ, ಭಾರತ ಕಿರಿಯ ತಂಡದ ಪ್ರದರ್ಶನ ನಿಜಕ್ಕೂ, ವಿಶ್ವದ ಪ್ರಬಲ ತಂಡಗಳಿಗೆ ಸರಿಸಮನಾಗಿರಬೇಕು. ಹಾಗಾದರೆ, ಭಾರತ ಕಿರಿಯರ ತಂಡ ಹೇಗಿದೆ? ಅವರ ತಯಾರಿ ಹೇಗೆ ಸಾಗಿದೆ ಎಂಬುದನ್ನು ನೋಡೋಣ ಬನ್ನಿ.

ಭಾರತ ಕಿರಿಯರ ಫುಟ್ಬಾಲ್ ತಂಡ ಕಳೆದ ಎರಡು ವರ್ಷಗಳಿಂದ ಈ ಐತಿಹಾಸಿಕ ಟೂರ್ನಿಗಾಗಿ ಸಿದ್ಧತೆ ನಡೆಸಿದೆ. 2015ರಲ್ಲಿ ತಂಡದ ಕೋಚ್ ಆಗಿ ಜರ್ಮನಿಯ ನಿಕೊಲೈ ಆಡಮ್ಸ್ ನೇಮಕವಾದ ನಂತರ ಅವರು ಭಾರತ ಕಿರಿಯರ ತಂಡಕ್ಕೆ ವಿದೇಶಗಳಲ್ಲಿ ಪ್ರಬಲ ತಂಡಗಳ ವಿರುದ್ಧ ಆಡುವ ಅನುಭವ ಬೇಕು ಎಂದು ಪಟ್ಟ ಹಿಡಿದರು. ಇದರ ಮಹತ್ವವನ್ನು ಅರಿತ ಎಐಎಫ್ಎಫ್ ಕಳೆದ ಎರಡು ವರ್ಷಗಳಲ್ಲಿ ಭಾರತ ಕಿರಿಯರ ತಂಡವನ್ನು ವಿದೇಶಕ್ಕೆ ಕಳುಹಿಸಿ ಅಲ್ಲಿ ಪ್ರಬಲ ತಂಡಗಳ ವಿರುದ್ಧ ಆಡಿಸಿದೆ.

ಈ ತಂಡ ಇದುವರೆಗೂ ನಾಲ್ಕು ಖಂಡಗಳನ್ನು ಸುತ್ತಿದ್ದು, 18 ದೇಶಗಳಿಗೆ ಭೇಟಿ ನೀಡಿದ್ದಾರೆ. ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೂ ಮೆಕ್ಸಿಕೊ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸಗಳಲ್ಲಿ ಭಾರತ ತಂಡ ಸುಮಾರು 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿದೆ. ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಈ ತಂಡವೇ ಟೂರ್ನಿಯೊಂದಕ್ಕೆ ಇಷ್ಟು ದೊಡ್ಡ ಮಟ್ಟದ ತಯಾರಿ ನಡೆಸಿದೆ. ಈ ವರ್ಷ ಭಾರತ ಕಿರಿಯರ ತಂಡಕ್ಕೆ ಪೋರ್ಚುಗಲ್ ನ ಲೂಯಿಸ್ ಡೆ ನೊರ್ಟನ್ ಮ್ಯಾಟ್ಟೊಸ್ ಕೋಚ್ ಆಗಿ ನೇಮಕವಾಗಿದ್ದಾರೆ. ಇವರ ಗರಡಿಯಲ್ಲೂ ನಮ್ಮ ಹುಡುಗರು ಸಕಲ ಸಿದ್ಧತೆ ನಡೆಸಿದ್ದಾರೆ. ಈ ಸಿದ್ಧತೆಗೆ ಎಲ್ಲಾ ರೀತಿ ಪ್ರೋತ್ಸಾಹ ನೀಡಿರುವ ಭಾರತೀಯ ಫುಟ್ಬಾಲ್ ಸಂಸ್ಥೆ ಕೋಚ್ ಗಳ ವೇತನ ಸೇರಿದಂತೆ ಈವರೆಗೂ ಒಟ್ಟು ₹ 15 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ.

ಈ ಸಿದ್ಧತಾ ಹಂತದಲ್ಲಿ ಭಾರತ ಕಿರಿಯ ತಂಡದ ಆಟಗಾರರ ಪ್ರದರ್ಶನ ನಿಜಕ್ಕೂ ಗಮನ ಸೆಳೆದಿದೆ. ಅಸ್ಸಾಂ ಮೂಲದ ಮಿಡ್ ಫೀಲ್ಡರ್ ಕೋಮಲ್ ಥಾತಲ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ಬ್ರಿಕ್ಸ್ ಕಪ್ ಟೂರ್ನಿಯಲ್ಲಿ ಪ್ರಬಲ ಬ್ರೆಜಿಲ್ ವಿರುದ್ಧ ಗೋಲು ದಾಖಲಿಸಿದ್ದ. ಆ ಮೂಲಕ ಈ ತಂಡದ ವಿರುದ್ಧ ಗೋಲು ದಾಖಲಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ. ಈ ಕಿರಿಯ ತಂಡದ ಆಟಗಾರರು ಇಂತಹ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅಲ್ಲದೆ, ವಿದೇಶ ಪ್ರವಾಸಗಳಲ್ಲಿನ ಅನುಭವದಿಂದ ತಾವು ಸಹ ಇತರೆ ತಂಡಗಳಿಗಿಂತ ಕಡಿಮೆ ಏನಿಲ್ಲ ಎಂಬ ಆತ್ಮವಿಶ್ವಾಸ ಬೆಳಸಿಕೊಂಡಿದ್ದು, ಮಾನಸಿಕವಾಗಿಯೂ ಸದೃಢರಾಗಿದ್ದಾರೆ.

ಇನ್ನು ಈ ಕಿರಿಯರ ತಂಡ ಆಟಗಾರರ ಪಯಣ ಸಹ ಒಂದೊಂದು ಸಾಧನೆಯ ಹಾದಿಯಾಗಿದೆ. ಬಡತನ ಹಾಗೂ ಕ್ರೀಡೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿದೆ. ಅದರಲ್ಲೂ ಬಡತನ ಹಾಗೂ ಫುಟ್ಬಾಲ್ ನಡುವಣ ಸಮರ ಬ್ರೆಜಿಲ್ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚಾಗಿ ಸಿಗುತ್ತವೆ. ಈಗ ಭಾರತದ ಈ ತಂಡದಲ್ಲೂ ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಭಾರತ ತಂಡದಲ್ಲಿ ಮಿಡ್ ಫೀಲ್ಡರ್ ಆಗಿ ಸ್ಥಾನಪಡೆದಿರುವ ಅಭಿಜಿತ್ ಸರ್ಕಾರ ತಂದೆ ಬಂಗಾಳದ ಚಿಂನ್ಸೂರಾದಲ್ಲಿ ರಿಕ್ಷಾ ಚಾಲಕ. ಇನ್ನು ಡಿಫೆಂಡರ್ ಅನ್ವರ್ ಅಲಿ ಪಂಜಾಬಿನಲ್ಲಿ ದನ ಕಾಯುತ್ತಾರೆ. ಜಿತೇಂದ್ರ ಸಿಂಗ್ ಅವರ ತಂದೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರೆ, ಬೆಂಗಳೂರಿನ ಹುಡುಗ ಸಂಜೀವ್ ಸ್ಟಾಲಿನ್ ತಾಯಿ ರಸ್ತೆ ಬದಿಯಲ್ಲಿ ಬಟ್ಟೆ ಮಾರುತ್ತಾರೆ. ಹೀಗೆ ತಂಡದ ಒಬ್ಬೊಬ್ಬ ಆಟಗಾರನ ಕೌಟುಂಬಿಕ ಹಿನ್ನೆಲೆಯೂ ಸವಾಲಿನಿಂದ ಕೂಡಿದೆ. ತಮ್ಮ ಕಷ್ಟದ ಬದುಕಿನಲ್ಲೂ ಕ್ರೀಡೆಯ ಮೇಲಿನ ಆಸಕ್ತಿ, ಶ್ರದ್ಧೆ ಹಾಗೂ ಪರಿಶ್ರಮದವರೆಗೂ ನಮ್ಮ ಹುಡುಗರು ಈ ಮಟ್ಟದವರೆಗೂ ಬಂದು ನಿಂತಿದ್ದು, ಮುಂದೆ ಸಾಗಬೇಕಾದ ಹಾದಿ ದೊಡ್ಡದಿದೆ. ಇವರ ಭವಿಷ್ಯದ ಹಾದಿಗೆ ಒಂದು ದೊಡ್ಡ ತಿರುವಾಗಿ ಈ ವಿಶ್ವಕಪ್ ಟೂರ್ನಿ ಬಿಂಬಿತವಾಗಿದೆ.

ಭಾರತ ತಂಡ ಫಿಫಾ ವಿಶ್ವಕಪ್ ನಲ್ಲಿ ಭಾಗವಹಿಸಬೇಕು ಎಂಬುದು ಪ್ರತಿಯೊಬ್ಬ ಕ್ರೀಡಾಭಿಮಾನಿಯ ಕನಸು. 1950ರಲ್ಲಿ ಬ್ರೆಜಿಲ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಅರ್ಹತೆಯನ್ನು ಪಡೆದು ಮೂರನೇ ಗುಂಪಿನಲ್ಲಿ ಸ್ಥಾನಪಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರಿಯುಮಾರು 7 ದಶಕಗಳ ಕಾಲ ಭಾರತದ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾಗವಹಿಸುವ ಕನಸು ಕನಸಾಗಿಯೇ ಉಳಿದಿದೆ. ಈಗ ಭಾರತದ ಕೋಟ್ಯಂತರ ಕ್ರೀಡಾಂಭಿಮಾನಿಗಳ ಕನಸನ್ನು ಹೊತ್ತು ಕಿರಿಯ ಆಟಗಾರರು ನಾಳೆಯಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ಭಾರತ ಕಿರಿಯರ ತಂಡ ನಾಳೆ ನವದೆಹಲಿಯ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪ್ರಬಲ ಅಮೆರಿಕ ತಂಡವನ್ನು ಎದುರಿಸಲಿದೆ (ಈ ಪಂದ್ಯ ಆರಂಭ ರಾತ್ರಿ 8 ಗಂಟೆಗೆ). ಪ್ರಧಾನಿ ನರೇಂದ್ರ ಮೋದಿ, ಫಿಫಾ ಕಾರ್ಯದರ್ಶಿ ಫಾತಿಮಾ ಸಮೌರಿ, ಎಎಫ್ ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಈ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಭಾರತೀಯ ಫುಟ್ಬಾಲ್ ನ ಐತಿಹಾಸಿಕ ಟೂರ್ನಿ ಎಂದೇ ಬಿಂಬಿತವಾಗಿರುವ ಈ ಫಿಫಾ 17 ವರ್ಷದೊಳಗಿನ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾರತದ ಹುಡುಗರು ಉತ್ತಮ ಪ್ರದರ್ಶನ ನೀಡಲಿ ಎಂದು ನಾವೆಲ್ಲರೂ ಹಾರೈಸೋಣ ಹಾಗೂ ಅವರನ್ನು ಬೆಂಬಲಿಸೋಣ.

Leave a Reply