ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ದೋಕಲಂ ವಿವಾದ! ಮತ್ತೆ ಬಾಲ ಬಿಚ್ಚುತ್ತಿದೆಯಾ ಚೀನಾ?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ವಿಚಾರದಲ್ಲಿ ಚೀನಾ ಭರತದ ರಾಜತಾಂತ್ರಿಕತೆಯ ಒತ್ತಡಕ್ಕೆ ಮಣಿದಿದ್ದು, ಅಲ್ಲಿನ ರಸ್ತೆ ನಿರ್ಮಾಣ ಕಾಮಗಾರಿ ಯೋಜನೆ ಕೈಬಿಟ್ಟಿದೆ. ಆಮೂಲಕ ಗಡಿ ಪ್ರದೇಶದಲ್ಲಿ ಸಹಜ ಸ್ಥಿತಿ ಕಾಯ್ದುಕೊಳ್ಳಲು ಒಪ್ಪಿಕೊಂಡು ಈ ವಿವಾದಕ್ಕೆ ತೆರೆಬಿದ್ದಿದೆ ಎಂದು ಎಲ್ಲರು ನಿಟ್ಟುಸಿರು ಬಿಟ್ಟಿದ್ದರು. ಆದರೆ ವಾಸ್ತವದಲ್ಲಿ ಇನ್ನು ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂಬ ಸೂಚನೆಗಳು ಗೋಚರಿಸುತ್ತಿವೆ.

ಈ ಅನುಮಾನ ಹುಟ್ಟಿಕೊಳ್ಳಲು ಕಾರಣವೂ ಇವೆ. ಮೊದನೆಯದಾಗಿ ಚುಂಬಿ ಕಣಿವೆ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೇನೆಗಳು ಮುಖಾಮುಖಿಯಾಗಿದ್ದ ಸ್ಥಳದಿಂದ ಕೇವಲ 800 ಮೀಟರ್ ದೂರದಲ್ಲಿ ಚೀನಾ ಸೇನಾ ಪಡೆಗಳು ಇನ್ನು ಠಿಕಾಣಿ ಹೂಡಿವೆ. ಉಭಯ ದೇಶಗಳ ಸರ್ಕಾರಗಳು ತಮ್ಮ ಸೇನೆಯನ್ನು ವಿವಾದಿತ ಪ್ರದೇಶದಿಂದ ಹಿಂಪಡೆದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರೂ ಭಾರತ ಸೇನೆ ಮಾತ್ರ ಆ ಪ್ರದೇಶದ ಮೇಲೆ ನಿಗಾವಹಿಸಿದೆ. ಇನ್ನು ಚೀನಾ ಸೇನೆ ದೋಕಲಂ ಪ್ರದೇಶದಲ್ಲಿ ಇರುವಿಕೆಯ ಬಗ್ಗೆ ಭಾರತ ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ಬಿ.ಎಸ್ ಧನೊವಾ ನಿನ್ನೆಯಷ್ಟೇ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ವಿವಾದಿತ ದೋಕಲಂ ಪ್ರದೇಶದಿಂದ 12 ಕಿ.ಮೀ ದೂರದಲ್ಲಿ ಚೀನಾ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಸೇನೆಯ ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ಭಾಗದಲ್ಲಿ ಚೀನಾ ದಿನೇ ದಿನೇ ತನ್ನ ಸೇನೆ ನಿಯೋಜನೆಯ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿರುವುದು ಈ ಅನುಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಈ ಮಧ್ಯೆ ಪ್ರತಿ ವರ್ಷ ನಡೆಯುವ ಗಡಿ ಅಧಿಕಾರಿಗಳ ಸಭೆ (ಬಾರ್ಡರ್ ಪರ್ಸೊನೆಲ್ ಮೀಟೀಂಗ್)ಗೆ ಚೀನಾ ಭಾರತಕ್ಕೆ ಯಾವುದೇ ಆಹ್ವಾನ ನೀಡಿಲ್ಲ. 2005ರಿಂದ ಪ್ರತಿ ವರ್ಷ ಚೀನಾ ತನ್ನ ರಾಷ್ಟ್ರೀಯ ದಿನದಂದು ಈ ಸಭೆ ನಡೆಸಿಕೊಂಡು ಬರುತ್ತಿದ್ದ ಚೀನಾ ಇದೇ ಮೊದಲ ಬಾರಿಗೆ ಭಾರತ- ಚೀನಾ ಗಡಿಯ ವಿಷಯವಾಗಿ ಬಿಪಿಎಂ ಆಯೋಜಿಸಿಲ್ಲ. ಇದರೊಂದಿಗೆ ದೋಕಲಂ ವಿವಾದ ರಾಜತಾಂತ್ರಿಕ ಮಟ್ಟದಲ್ಲಿ ಬಗೆಹರಿದರೂ ಉಭಯ ದೇಶಗಳ ಪರಿಸ್ಥಿತಿ ಇನ್ನು ಸಹಜ ಸ್ಥಿತಿಗೆ ಮರಳಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

Leave a Reply