ಐಕ್ಯಾನ್ ಗೆ ನೋಬೆಲ್ ಶಾಂತಿ ಪ್ರಶಸ್ತಿ: ಈ ಅಭಿಯಾನದ ಮುಂದಿರುವ ದೊಡ್ಡ ಸವಾಲೇನು?

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧ ಅಭಿಯಾನ (ICAN)ಕ್ಕೆ ಇಂದು ವಿಶ್ವದ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರ ಸಂದಿದೆ. ವಿಶ್ವಕ್ಕೆ ಮಾರಕವಾಗಿರುವ ಅಣ್ವಸ್ತ್ರಗಳನ್ನು ನಾಶಪಡಿಸಬೇಕು. ಇವುಗಳಿಗೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಬೇಕು ಎಂದು ಆಗ್ರಹಿಸಿ ಈ ಅಭಿಯಾನ ಸತತ 10 ವರ್ಷಗಳಿಂದ ಶ್ರಮಿಸುತ್ತಿದೆ.

ಸದ್ಯ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಹಾಗೂ ಅಣ್ವಸ್ತ್ರ ದಾಳಿಯ ಕುರಿತಾಗಿ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ಐಕ್ಯಾನ್ ಗೆ ಪ್ರಶಸ್ತಿ ಲಭಿಸಿರುವುದು ಮಹತ್ವ ಪಡೆದುಕೊಂಡಿದೆ. ಅಣ್ವಸ್ತ್ರಗಳು ಹೇಗೆ ಭೂಮಿಯ ಮೇಲಿನ ಜೀವ ಸಂಕುಲಕ್ಕ ಮಾರಕ ಹಾಗೂ ಅವುಗಳನ್ನು ಇತರೆ ದೇಶಗಳು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂದು 10 ವರ್ಷಗಳಿಂದ ಐಕ್ಯಾನ್ ವಿಶ್ವಕ್ಕೆ ಸಾರುತ್ತತಲೇ ಬಂದಿದೆ.

ಐಕ್ಯಾನ್ ಹೆಸರಿನ ಸರ್ಕಾರೇತ್ತರ ಸಂಸ್ಥೆ ಆಸ್ಟ್ರೇಲಿಯಾದಲ್ಲಿ ಸ್ಥಾಪಿತವಾದರೂ 2007ರಲ್ಲಿ ವಿಯೆನ್ನಾದಲ್ಲಿ ಅಧಿಕೃತವಾಗಿ ಉದ್ಘಾಟನೆಯಾಯಿತು. ಅಣ್ವಸ್ತ್ರ ವಿರುದ್ಧದ ಹೋರಾಟವನ್ನೇ ಮುಖ್ಯವಾಗಿಸಿಕೊಂಡಿರುವ ಈ ಸಂಸ್ಥೆಗೆ ಈಗ ಸೂಕ್ತ ಗೌರವ ಸಂದಿದೆ. ಇದುವರೆಗೂ 100ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ಅಣ್ವಸ್ತ್ರದ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ. ಈ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ಸಿಕ್ಕಿದ್ದು, ಕಳೆದ ಜುಲೈ ತಿಂಗಳಲ್ಲಿ.

ಹೌದು, ಐಕ್ಯಾನ್ ಸಂಸ್ಥೆಯ ಸುದೀರ್ಘ 10 ವರ್ಷಗಳ ಪರಿಶ್ರಮದ ಫಲವಾಗಿ 2017ರ ಜೂನ್ ತಿಂಗಳಲ್ಲಿ ವಿಶ್ವಸಂಸ್ಥೆಯು ನೂತನ ಅಣು ಶಸ್ತ್ರಾಸ್ತ್ರ ನೀತಿಯನ್ನು ಅಳವಡಿಸಿಕೊಂಡಿತು. ವಿಶ್ವಸಂಸ್ಥೆಯ 120 ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಣ್ವಸ್ತ್ರ ಶಸ್ತ್ರಾಸ್ತ್ರ ನಿಷೇಧದ ನೀತಿಗೆ ಮತ ಚಲಾಯಿಸಿದವು. ಆ ಮೂಲಕ ಅಣ್ವಸ್ತ್ರ ಶಸ್ತ್ರಾಸ್ತ್ರ ನಿಷೇಧಕ್ಕೆ ಕಾನೂನಿನ ಅಸ್ತ್ರ ಸಿಕ್ಕಂತಾಯಿತು. ಹೀಗೆ ಜಾಗತಿಕ ಮಟ್ಟದ ಯಶಸ್ಸು ಸಾಧಿಸಿರುವ ಐಕ್ಯಾನ್ ಸಹಜವಾಗಿಯೇ ನೋಬೆಲ್ ಶಾಂತಿ ಪ್ರಶಸ್ತಿಗೆ ಅರ್ಹವಾಗಿದೆ.

ಇನ್ನು ಅಣ್ವಸ್ತ್ರದ ವಿರುದ್ಧ ಈ ಸಂಸ್ಥೆ ನಡೆಸುತ್ತಿರುವ ಹೋರಾಟ ಇಲ್ಲಿಗೆ ನಿಂತಿಲ್ಲ. ಬದಲಾಗಿ ಈಗ ದೊ್ ಮಟ್ಟದ ಆರಂಭ ಪಡೆದುಕೊಳ್ಳುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ವಿಶ್ವಸಂಸ್ಥೆಯಲ್ಲಿ ಅಳವಡಸಲಾದ ನೂತನ ಅಣ್ವಸ್ತ್ರ ನಿಷೇಧ ನೀತಿಗೆ ಪ್ರಮುಖ ರಾಷ್ಟ್ರಗಳ ಬೆಂಬಲವಿರಲಿಲ್ಲ. ಭಾರತವೂ ಸೇರಿದಂತೆ ಅಮೆರಿಕ, ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್, ಪಾಕಿಸ್ತಾನ, ಉತ್ತರ ಕೊರಿಯಾ ಹಾಗೂ ಇಸ್ರೆಲ್ ದೇಶಗಳು ಈ ನೂತನ ನೀತಿಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ. ಆ ಮೂಲಕ ಅಣ್ವಸ್ತ್ರ ನಿಷೇಧ ನೀತಿಗೆ ತಮ್ಮ ಒಪ್ಪಿಗೆ ಸೂಚಿಸಿರಲಿಲ್ಲ. ಅಣ್ವಸ್ತ್ರಗಳನ್ನು ಹೊಂದಿರುವ ಈ ಎಂಟು ರಾಷ್ಟ್ರಗಳು ಹೆಚ್ಚು ಕಡಿಮೆ ಇಡೀ ವಿಶ್ವವನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿವೆ. ಪರಿಸ್ಥಿತಿ ಹೀಗಿರುವಾಗ ಈ ರಾಷ್ಟ್ರಗಳಿಗೆ ತಮ್ಮಲ್ಲಿರುವ ಅಣ್ವಸ್ತ್ರಗಳನ್ನು ನಾಶ ಮಾಡುವಂತೆ ಹೇಳುವವರಾದರು ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಈ ರಾಷ್ಟ್ರಗಳ ಮೇಲೆ ಒತ್ತಡ ಹೇರುವುದು ಈ ಸಂಸ್ಥೆಯ ಮುಂದಿರುವ ಮಹತ್ವದ ಜವಾಬ್ದಾರಿಯಾಗಿದೆ.

ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿರುವ ಐಕ್ಯಾನ್ ಸಂಸ್ಥೆಯ ಮುಖ್ಯಸ್ಥೆ ಬೀಟ್ರೈಸ್ ಫಿನ್ ಹೇಳಿರುವುದಿಷ್ಟು… ‘ನಮ್ಮ ಕೆಲಸ ಇಲ್ಲಿಗೆ ಮುಗಿದಿಲ್ಲ. ಅಣ್ವಸ್ತ್ರಗಳು ಸಂಪೂರ್ಣವಾಗಿ ನಶಿಸುವವರೆಗೂ ನಮ್ಮ ಕೆಲಸ ಮುಕ್ತಾಯವಾಗುವುದಿಲ್ಲ. ಸದ್ಯ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ನಡೆಯುತ್ತಿರುವ ತಿಕ್ಕಾಟ ಈ ಅಣ್ವಸ್ತ್ರದ ಅಪಾಯದ ಕುರಿತು ಕೇಳಿಸುತ್ತಿರುವ ಎಚ್ಚರಿಕೆ ಗಂಟೆಯಾಗಿದೆ. ಪ್ರಸ್ತುತ ವಿಶ್ವದಲ್ಲಿ 15 ಸಾವಿರ ಅಣು ಶಸ್ತ್ರಾಸ್ತ್ರಗಳಿವೆ. ಇವುಗಳು ಇಡೀ ವಿಶ್ವವನ್ನೇ ಸಂಪೂರ್ಣವಾಗಿ ನಾಶ ಮಾಡುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸಬೇಕಾದ ಅಗತ್ಯವಿದೆ. ಅವು ಎಲ್ಲಿಯವರೆಗೂ ಜೀವಂತವಾಗಿರುತ್ತದೋ ಅಲ್ಲಿಯವರೆಗೂ ಅಪಾಯ ಕಟ್ಟಿಟ್ಟಬುತ್ತಿ’

Leave a Reply