ಮುಗಿಯದ ಕಥೆಯಾಗಿದೆ ಹೃತಿಕ್- ಕಂಗನಾ ಫೈಟ್

ಡಿಜಿಟಲ್ ಕನ್ನಡ ಟೀಮ್:
ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರನೌತ್ ನಡುವಿನ ಕಿತ್ತಾಟ ಬಾಲಿವುಡ್ಡಿನಲ್ಲಿ ಮುಗಿಯದ ಕಥೆಯಾಗುತ್ತಿದೆ. ಈ ಇಬ್ಬರು ಅನೇಕ ತಿಂಗಳುಗಳಿಂದ ತಮ್ಮ ವೈಯಕ್ತಿಕ ಸಂಬಂಧದ ಕುರಿತಾದ ವಿಷಯವನ್ನು ಬೀದಿ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಾ ತಮ್ಮನ್ನು ತಾವು ಮುಗ್ಧರು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಕಂಗನಾ ಇಷ್ಟು ದಿನಗಳ ಕಾಲ ಸಿಕ್ಕ ಸಿಕ್ಕಲ್ಲಿ ಹೃತಿಕ್ ಮಾನವನ್ನು ಹರಾಜು ಹಾಕಿದ್ದರು. ಆಗ ಸುಮ್ಮನಿದ್ದ ಹೃತಿಕ್ ಇತ್ತೀಚೆಗೆ ತಮ್ಮ ಫೇಸ್ ಬುಕ್ಕಿನಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕಂಗನಾ ಪಾಳಯದಿಂದ ಉತ್ತರ ಬರುವ ಬದಲಿಗೆ ಪ್ರಶ್ನೆಗಳ ಸುರಿಮಳೆಯೇ ಹರಿದಿದೆ.
ಈಗ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಹೃತಿಕ್ ಅವರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದ್ದು, ಅವುಗಳು ಹೀಗಿವೆ…
  • 2014ರಿಂದ ಕಂಗನಾರ ಖಾಸಗಿ ಇ ಮೇಲ್ ಹ್ಯಾಕ್ ಆಗಿರುವುದು ಗೊತ್ತಿದ್ದರೂ ಹೃತಿಕ್ ಆ ಖಾತೆಯಿಂದ ಬಂದ ಮೇಲ್ ಗಳನ್ನು ತಮ್ಮ ಖಾಸಗಿ ಮೇಲ್ ಐಡಿಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಏಕೆ ಮತ್ತು ಈ ವಿಷಯ ಕುರಿತು ಪೊಲೀಸರಿಗೆ ದೂರು ನೀಡಲಿಲ್ಲ ಏಕೆ?
  • ವಿವಾಹಿತ ಹಾಗೂ ಇಬ್ಬರು ಮಕ್ಕಳ ತಂದೆಯಾಗಿರುವ ಹೃತಿಕ್ ತಮಗೆ ಬಂದ ಇಮೇಲ್ ಗಳನ್ನು ನೋಡಿದ ಮೇಲೆ ಕಂಗನಾ ಅವರಿಗೆ ವಿಷಯ ತಿಳಿಸಲಿಲ್ಲ ಏಕೆ?
  • ದೂರು ನೀಡುವುದಕ್ಕೆ ಕಂಗನಾ ಸಂಪೂರ್ಣ ಸಹಕಾರ ನೀಡಿದ್ದರೂ ಹೃತಿಕ್ ರೋಷನ್ ಎಫ್ಐ ಆರ್ ದಾಖಲಿಸಲು ವಿಳಂಬ ಮಾಡಿದ್ದು ಏಕೆ? ಕೇವಲ ಅನೌಪಚಾರಿಕವಾಗಿ ಏಕೆ ದೂರು ನೀಡಿದರು? ಇಲ್ಲಿ ಯಾರ ಹಿತಾಸಕ್ತಿ ಅಡಗಿದೆ?
  • ಹ್ಯಾಕ್ ಆದ ಖಾತೆಯಿಂದ ಬಂದ ಸಾವಿರಾರು ಇಮೇಲ್ ಗಳನ್ನು ಸಂಗ್ರಹಿಸಿ ದೂರು ನೀಡಲು ಹೃತಿಕ್ ರೋಷನ್ 7 ತಿಂಗಳು ಸಮಯ ತೆಗೆದುಕೊಂಡಿದ್ದು ಏಕೆ? ಇದರ ಹಿಂದಿನ ಉದ್ದೇಶವೇನು?
  • ತಮಗೆ ನೊಟೀಸ್ ಬಂದ ಮೇಲಷ್ಟೇ ಹೃತಿಕ್ ಏಕೆ ಎಫ್ಐಆರ್ ದಾಖಲಿಸಿದರು? ಅದು ಕೂಡ ಎರಡು ವರ್ಷಗಳು ಕಳೆದ ನಂತರ?
  • ಕಂಗನಾ ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದು ಗೊತ್ತಿದ್ದರೂ, ಮಾಧ್ಯಮಗಳ ಮುಂದೆ ತಿರುಚಲಾದ ಇಮೇಲ್ ಬಿಡುಗಡೆ ಮಾಡಿದ್ದು ಏಕೆ?
  • ಕಂಗನಾ ಮತ್ತು ಹೃತಿಕ್ ನಡುವಿನ ಸಂಬಂಧವನ್ನು ಪುಷ್ಟೀಕರಿಸುವ ಫೋಟೋಗಳನ್ನು ಯಾರಿಗೂ ತೋರಿಸಬಾರದು ಎಂದು ಹೇಳಿದ್ದರೂ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಏಕೆ?

ಒಟ್ಟಿನಲ್ಲಿ ಈ ವಿವಾದ ದಿನದಿಂದ ದಿನಕ್ಕೆ ಬೆಳೆಯುತ್ತಿದೆಯೇ ಹೊರತು ಅಂತ್ಯ ಕಾಣುವ ಯಾವ ಸೂಚನೆಗಳೂ ಇಲ್ಲ.

Leave a Reply