ಜಿಎಸ್ಟಿ ಸಮಿತಿ ಸಭೆಯ ನಿರ್ಧಾರಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆಮ್ಮದಿ, ಮೋದಿ ಕೊಟ್ಟ ಮಾತಿನಂತೆ ಸಡಿಲಗೊಂಡ ನಿಯಮಗಳೇನು?

ಡಿಜಿಟಲ್ ಕನ್ನಡ ಟೀಮ್:

ಜಿಎಸ್ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಮೂರು ತಿಂಗಳು ಕಳೆದಿದ್ದು, ಈಗ ಕೇಂದ್ರ ಹಣಕಾಸು ಇಲಾಖೆ ಈಗ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರ ಅನುಕೂಲಕ್ಕಾಗಿ ಕೆಲವು ನಿಯಮಗಳನ್ನು ಸಡಿಲ ಮಾಡಿದೆ.

ಇತ್ತಿಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಹೊರೆ ಎನಿಸಿರುವ ಜಿಎಸ್ಟಿ ನಿಯಮಗಳನ್ನು ಸಡಿಲ ಮಾಡುವುದಾಗಿ ಮಾತು ಕೊಟ್ಟಿದ್ದರು. ಮೋದಿ ಅವರ ಈ ಹೇಳಿಕೆಯ ಎರಡು ದಿನಗಳ ಅಂತರದಲ್ಲೇ ನಡೆದ 22ನೇ ಜಿಎಸ್ಟಿ ಸಮಿತಿ ಸಭೆಯಲ್ಲಿ ಈ ವರ್ಗದ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲ ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶುಕ್ರವಾರ ಸುದೀರ್ಘ 9 ತಾಸುಗಳ ಕಾಲ ಜಿಎಸ್ಟಿ ಸಮಿತಿ ಸಭೆ ನಡೆಯಿತು. ಇಲ್ಲಿ 25ಕ್ಕೂ ಹೆಚ್ಚು ಸರಕು ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಸಲಾಯಿತು. ಇದರೊಂದಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಉಸಿರುಗಟ್ಟಿಸುವಂತಾಗಿದ್ದ ತೆರಿಗೆ ಪ್ರಮಾಣವನ್ನು ತಗ್ಗಿಸಲಾಗಿದೆ.

ಇನ್ನು ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಹೀಗಿವೆ…

  • ಈವರೆಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಪ್ರತಿ ತಿಂಗಳು ತಮ್ಮ ಆದಾಯ ಪ್ರಮಾಣವನ್ನು ಸಲ್ಲಿಕೆ ಮಾಡಬೇಕಿತ್ತು, ಈಗ ಅದನ್ನು ತ್ರೈಮಾಸಿಕಕ್ಕೆ ವಿಸ್ತರಣೆ ಮಾಡಲಾಗಿದೆ. ಇನ್ನು ಮುಂದೆ ₹ 1.5 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಉದ್ದಿಮೆದಾರರು ಪ್ರತಿ ತಿಂಗಳ ಬದಲಾಗಿ ಮೂರು ತಿಂಗಳಿಗೊಮ್ಮೆ ಆದಾಯ ಸಲ್ಲಿಕೆ ಮಾಡಬಹುದಾಗಿದೆ.
  • ಅಲ್ಲದೆ ಜಿಎಸ್ಟಿ ಪಾವತಿಗೆ ಸಂಬಂಧಿಸಿದ ಕಾಂಪೊಸಿಷನ್ ಸ್ಕೀಮ್ ಅನ್ನು ₹ 1 ಕೋಟಿಗೆ ವಿಸ್ತರಿಸಿದ್ದು, ಆ ಮೂಲಕ ರಫ್ತುದಾರರು ತೆರಿಗೆ ಮರುಪಾವತಿ ಪಡೆಯಲು ಸುಲಭ ದಾರಿ ಮಾಡಿಕೊಡಲಾಗಿದೆ.
  • ಎಸಿ ರೆಸ್ಟೊರೆಂಟ್ ಗಳಿಗೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಶೇ.12ಕ್ಕೆ ಇಳಿಸಲಾಗಿದೆ.
  • ಸುಮಾರು 60 ವಸ್ತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಶೇ.12ರಿಂದ, ಶೇ.5ಕ್ಕೆ ಇಳಿಸಲಾಗಿದೆ.

ಈ ನಿರ್ಧಾರಗಳಿಂದ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ.

ಜಿಎಸ್ಟಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ವಿರೋಧ ಪಕ್ಷಗಳು, ‘ಈ ನೀತಿ ಜಾರಿಯಿಂದ ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ಕೈಗಾರಿಕೆದಾರರಿಗೆ ಬರೆ ಎಳೆದಂತಾಗಿದ್ದು, ಅವರಿಗೆ ಈ ಜಿಎಸ್ಟಿ ತೆರಿಗೆ ದರದಿಂದ ಹೊರೆ ಹೆಚ್ಚಾಗಿದೆ’ ಎಂದು ಟೀಕೆ ನಡೆಸುತ್ತಿದ್ದವು. ಇನ್ನು ಸಾರ್ವಜನಿಕವಾಗಿಯೂ ಕೆಲವು ವಿಭಾಗಗಳಲ್ಲಿ ವಿಧಿಸಲಾಗಿರುವ ತೆರಿಗೆ ಪ್ರಮಾಣ ಕುರಿತು ಅಸಮಾಧಾನ ವ್ಯಕ್ತವಾಗಿದ್ದವು. ಈ ಎಲ್ಲ ಒತ್ತಡಗಳಿಗೆ ಮಣಿದಿರುವ ಕೇಂದ್ರ ಸರ್ಕಾರ ಈಗ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯ ನಂತರ ಮಾತನಾಡಿರುವ ಅರುಣ್ ಜೇಟ್ಲಿ ಹೇಳಿದಿಷ್ಟು…

‘ಈಗ ತೆಗೆದುಕೊಂಡಿರುವ ನಿರ್ಣಯಗಳು ಶೇ.90ರಷ್ಟು ತೆರಿಗೆ ಹೊರೆಯನ್ನು ಕಡಿಮೆ ಮಾಡಲಿವೆ. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಂದ ಶೇ.10 ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಲಿದ್ದು, ಇವುಗಳಲ್ಲಿನ ಬದಲಾವಣೆಯಿಂದ ಸರ್ಕಾರಕ್ಕೆ ತೀವ್ರ ಒತ್ತಡ ಬೀಳುವುದಿಲ್ಲ. ಇನ್ನು ಶೇ.90 ರಷ್ಟು ತೆರಿಗೆ ಸಂಗ್ರಹವಾಗುವ ದೊಡ್ಡ ಉದ್ದಿಮೆಗಳ ಜಿಎಸ್ಟಿ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಜಿಎಸ್ಟಿಯಲ್ಲಿ ಸಣ್ಣ ಉದ್ದಿಮೆದಾರರಿಗೆ ತೆರಿಗೆಯ ಒತ್ತಡ ಕಡಿಮೆ ಇತ್ತಾದರೂ, ಅನುಸರಣೆಯ ಒತ್ತಡ ತೀವ್ರವಾಗಿತ್ತು. ಹೀಗಾಗಿ ಇದನ್ನು ಸರಿಪಡಿಸಲಾಗಿದ್ದು, ಇವರ ಮೇಲಿನ ಒತ್ತಡವನ್ನು ಕಡಿಮೆ ಮಾಡಲಾಗಿದೆ. ₹ 1.5 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವವರು ಪ್ರತಿ ತಿಂಗಳು ಆದಾಯ ಸಲ್ಲಿಕೆ ಮಾಡುವುದರ ಬದಲಾಗಿ 3 ತಿಂಗಳಿಗೊಮ್ಮೆ ಆದಾಯ ಸಲ್ಲಿಕೆ ಮಾಡಬಹುದಾಗಿದೆ.’

Leave a Reply