ಕೊರಿಯಾ ನಿಯಂತ್ರಿಸಲು ಇರೋದು ‘ಒಂದೇ ಮಾರ್ಗ’ ಎಂದ ಟ್ರಂಪ್, ಇದು ದಾಳಿಯ ಮುನ್ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ವಿರುದ್ಧದ ದಾಳಿಯ ಕುರಿತ ಎಚ್ಚರಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಮೊನ್ನೆಯಷ್ಟೇ ‘ಬಿರುಗಾಳಿ ಏಳುವ ಮುನ್ನ ಎಲ್ಲವು ಶಾಂತವಾಗುತ್ತದೆ’ ಎಂದು ಹೇಳುವ ಮೂಲಕ ಅಮೆರಿಕದ ಮೌನದ ಹಿಂದೆ ದಾಳಿಯ ಉದ್ದೇಶವಿದೆ ಎಂದು ಸಂದೇಶ ನೀಡಿದ್ದ ಟ್ರಂಪ್, ಶನಿವಾರ ಮತ್ತೆ ಗುಡುಗಿದ್ದಾರೆ. ‘ಹಲವು ವರ್ಶಗಳಿಂದ ಉತ್ತರ ಕೊರಿಯಾ ಜತೆಗಿನ ರಾಜತಾಂತ್ರಿಕ ಸಂದಾನಗಳು ವಿಫಲವಾಗಿವೆ. ಹೀಗಾಗಿ ಈಗ ಉಳಿದಿರುವುದು ಒಂದೇ ದಾರಿ’ ಎಂದು ಮತ್ತೊಂದು ಎಚ್ಚರಿಕೆ ರವಾನಿಸಿದ್ದಾರೆ.

ಟ್ರಂಪ್ ನೇರವಾಗಿ ಉತ್ತರ ಕೊರಿಯಾ ಮೇಲೆ ದಾಳಿ ಮಾಡುವುದಾಗಿ ಹೇಳದಿದ್ದರೂ, ಇಂತಹ ಪರೋಕ್ಷವಾದ ಎಚ್ಚರಿಕೆಗಳನ್ನು ಹರಿಯಬಿಡುತ್ತಲೇ ಇದ್ದಾರೆ. ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಲು ಟ್ರಂಪ್ ನಿರಾಕರಿಸಿದ್ದು, ಅತ್ತ ಉತ್ತರ ಕೊರಿಯಾ ಟ್ರಂಪ್ ಅವರ ಹೇಳಿಕೆ ಯುದ್ಧದ ಘೋಷಣೆ ಎಂದು ಕರೆದಿದೆ. ಅದರ ಬೆನ್ನಲ್ಲೇ ಮತ್ತೊಂದು ಸಂದೇಶ ರವಾನಿಸಿರೋ ಟ್ರಂಪ್ ಹೇಳಿರುವುದಿಷ್ಟು…

‘ಕಳೆದ 25 ವರ್,ಗಳಿಂದ ಅಮೆರಿಕದ ಎಲ್ಲ ಅಧ್ಯಕ್ಷರುಗಳು ಹಾಗೂ ಅವರ ಆಡಳಿತದ ಅಧಿಕಾರಿಗಳು ಉತ್ತರ ಕೊರಿಯಾ ಜತೆಗೆ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ. ಅನೇಕ ಒಪ್ಪಂದಗಳು ಆಗಿವೆ, ದೊಡ್ಡ ಪ್ರಮಾಣದ ಹಣವನ್ನು ನೀಡಲಾಗಿದೆ. ಆದರೂ ಯಾವುದೂ ಕೆಲಸ ಮಾಡಿಲ್ಲ. ಈ ಎಲ್ಲ ಒಪ್ಪಂದಗಳು ಸಹಿ ಹಾಕಿದ ಮರುಕ್ಷಣವೇ ಮುರಿದು ಬಿದ್ದಿವೆ. ಉತ್ತರ ಕೊರಿಯಾ ಈವರೆಗೂ ಅಮೆರಿಕವನ್ನು ಮುರ್ಖವನ್ನಾಗಿ ಮಾಡುತ್ತಲೇ ಬಂದಿದೆ. ಆದರೆ ಈಗ ಇರುವುದು ಒಂದೇ ಮಾರ್ಗ. ಅದು ಖಂಡಿತವಾಗಿಯೂ ಯಶಸ್ವಿಯಾಗಲಿದೆ.’

ಟ್ರಂಪ್ ಅವರ ಈ ಹೇಳಿಕೆ ಹಿಂದೆ ದೊಡ್ಡ ಕಾರಣವೇ ಇದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾದರೂ ಉದ್ಧಟತನದಿಂದ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಮಾಡಿದ್ದ ಉತ್ತರ ಕೊರಿಯಾ, ನಂತರ ಎರಡು ಬಾರಿ ಜಪಾನ್ ಮೇಲೆ ಹಾರಿಸಿತ್ತು. ಈಗ ಅಮೆರಿಕದ ತಜ್ಞರ ಪ್ರಕಾರ, ಉತ್ತರ ಕೊರಿಯಾ ಅಣ್ವಸ್ತ್ರ ಯೋಜನೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಈಗ ಅಣು ಅಸ್ತ್ರಗಳನ್ನು ತಯಾರಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಇದರ ಜತೆಗೆ ಕಳೆದ ವಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ, ‘ಅಮೆರಿಕದ ಯುದ್ಧ ವಿಮಾನಗಳು ತನ್ನ ವಾಯು ವ್ಯಾಪ್ತಿಯಿಂದ ಹೊರಗೆ ಹಾರಾಡಿದರೂ ಅವುಗಳನ್ನು ಹೊಡೆದುರುಳಿಸಲಾಗುವುದು’ ಎಂದಿತ್ತು. ಇದರಿಂದ ಸಹಜವಾಗಿಯೇ ಅಮೆರಿಕಕ್ಕೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

Leave a Reply