ಧೋನಿ ಯಶಸ್ವಿ ಕ್ರಿಕೆಟರ್ ಆಗಲು ಗಂಗೂಲಿ ತ್ಯಾಗ ಕಾರಣವಂತೆ! ದಾದಾ ಬಗ್ಗೆ ಸೆಹ್ವಾಗ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಎಂ.ಎಸ್ ಧೋನಿ… ಭಾರತ ಕಂಡ ಅತ್ಯದ್ಭುತ ವಿಕೆಟ್ ಕೀಪರ್ ಹಾಗೂ ಮ್ಯಾಚ್ ಫಿನಿಷರ್. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎಂದು ಹೆಸರು ಪಡೆದಿರುವ ಮಹಿ ಇಂದು ಟೀಂ ಇಂಡಿಯಾದ ಅತ್ಯಂತ ಅನುಭವಿ ಆಟಗಾರ. ಧೋನಿ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ ಸೌರವ್ ಗಂಗೂಲಿ ಮಾಡಿದ ತ್ಯಾಗವಂತೆ.

ಹೌದು, ಈ ವಿಚಾರವನ್ನು ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಧೋನಿ ಇಂದು ಯಶಸ್ವಿ ಕ್ರಿಕೆಟರ್ ಆಗಲು ಸೌರವ್ ಗಂಗೂಲಿ ನಾಯಕನಾಗಿದ್ದ ವೇಳೆ ಧೋನಿಗಾಗಿ ಮಾಡಿದ ತ್ಯಾಗವೇ ಕಾರಣ ಎಂದಿದ್ದಾರೆ. 2004ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಧೋನಿ, ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ 148 ಹಾಗೂ ಶ್ರೀಲಂಕಾ ವಿರುದ್ಧ 183 ರನ್ ಬಾರಿಸಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿ ಉಳಿದು ಬಿಟ್ಟರು. ಕೇವಲ ಧೋನಿ ಮಾತ್ರವಲ್ಲ, ಗಂಗೂಲಿ ತಮ್ಮ ನಾಯಕತ್ವದ ಅವಧಿಯಲ್ಲಿ ಅನೇಕ ಯುವ ಪ್ರತಿಭೆಗಲಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿ ಹೊಸ ತಂಡವನ್ನೇ ಕಟ್ಟಿದ ಕೀರ್ತಿ ಹೊಂದಿದ್ದಾರೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಗಂಭೀರ್, ಜಹೀರ್ ಖಾನ್ ಹೀಗೆ ಅನೇಕ ಖ್ಯಾತನಾಮರು ಇಂದು ಕ್ರಿಕೆಟ್ ದಿಗ್ಗಜರಾಗಿ ಬೆಳೆದಿರುವುದು ಗಂಗೂಲಿ ನೀಡಿರುವ ಪ್ರೊತ್ಸಾಹದಿಂದಲೇ.

ಧೋನಿ ಹಾಗೂ ಗಂಗೂಲಿ ಮಾಡಿದ ತ್ಯಾಗದ ವಿಚಾರವಾಗಿ ಮಾತನಾಡಿರುವ ಸೆಹ್ವಾಗ್ ಹೇಳಿರುವುದಿಷ್ಟು…

‘ಧೋನಿ ತಂಡಕ್ಕೆ ಆಗಮಿಸಿದ ಸಮಯದಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿದ್ದವು. ತಂಡಕ್ಕೆ ಉತ್ತಮ ಆರಂಭ ಸಿಕ್ಕರೆ ಮೂರನೇ ಸ್ಥಾನದಲ್ಲಿ ಗಂಗೂಲಿ ಕಣಕ್ಕಿಳಿಯುವುದು, ಇಲ್ಲವಾದರೆ ದೊಡ್ಡ ಹೊಡೆತಗಳನ್ನು ಹೊಡೆಯುವ ಆಟಗಾರರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಹೊಂದಿದ್ದೆವು.

ಆ ಸಂದರ್ಭದಲ್ಲಿ ಗಂಗೂಲಿ ಅವರು ಧೋನಿ ಅವರನ್ನು ಕೆಲವು ಪಂದ್ಯಗಳ ಕಾಲ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಿದರು. ಅದಕ್ಕಾಗಿಯೇ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಆ ರೀತಿಯಾಗಿ ನಾಯಕನೊಬ್ಬ ತಂಡದ ಯುವ ಆಟಗಾರನಿಗಾಗಿ ತನ್ನ ಸ್ಥಾನವನ್ನು ಬಿಟ್ಟುಕೊಡುವುದು ತೀರಾ ಕಡಿಮೆ. ಮೊದಲು ಆರಂಭಿಕರಾಗಿ ಆಡುತ್ತಿದ್ದ ಗಂಗೂಲಿ ನಂತರ ನನಗೆ ಆ ಸ್ಥಾನವನ್ನು ಬಿಟ್ಟುಕೊಟ್ಟು, ಮೂರನೇ ಕ್ರಮಾಂಕಕ್ಕೆ ಹೊಂದುಕೊಂಡಿದ್ದರು. ನಂತರ ಧೋನಿಗಾಗಿ ಆ ಸ್ಥಾನವನ್ನು ಬಿಟ್ಟು ಕೊಟ್ಟರು. ಒಂದು ವೇಳೆ ಗಂಗೂಲಿ ಆ ಸಮಯದಲ್ಲಿ ಧೋನಿಗಾಗಿ ಆ ತ್ಯಾಗ ಮಾಡದೇ ಹೋಗಿದ್ದರೆ, ಧೋನಿ ಇಂದು ಇಷ್ಟು ದೊಡ್ಡ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದರಲ್ಲಿ ಗಂಗೂಲಿ ನಂಬಿದ್ದರು.

ಗಂಗೂಲಿ ನಾಯಕತ್ವ ತ್ಯಜಿಸಿದ ನಂತರ ದ್ರಾವಿಡ್ ಅವರ ಅವಧಿಯಲ್ಲಿ ಧೋನಿಗೆ ಮ್ಯಾಚ್ ಫಿನಿಶರ್ ಜವಾಬ್ದಾರಿ ನೀಡಲಾಯಿತು. ಆರಂಭದಲ್ಲಿ ಧೋನಿ ಅತ್ಯಂತ ಕೆಟ್ಟ ಹೊಡೆತಗಳಿಗೆ ಮುಂದಾಗಿ ಔಟಾದರು. ಆಗ ದ್ರಾವಿಡ್, ಧೋನಿಯ ಆಟವನ್ನು ಖಂಡಿಸಿದ್ದರು. ಜತೆಗೆ ಮ್ಯಾಚ್ ಫಿನಿಶ್ ಮಾಡುವ ಬಗ್ಗೆ ಧೋನಿಗೆ ಮಾರ್ಗದರ್ಶನ ನೀಡಿದರು. ಆನಂತರ ಧೋನಿ ಸಂಪೂರ್ಣವಾಗಿ ತಮ್ಮ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿಕೊಂಡು ಅತ್ಯುತ್ತಮ ಫಿನಿಶರ್ ಆಗಿ ಬೆಳೆದರು. ಧೋನಿ ಹಾಗೂ ಯುವರಾಜ್ ಸಿಂಗ್ ಟೀಂ ಇಂಡಿಯಾದಲ್ಲಿ ನೀಡಿರುವ ಜತೆಯಾಟಗಳನ್ನು ಮರೆಯಲಾಗದು.’

ಹೀಗೆ ಧೋನಿಯ ಬೆಳವಣಿಗೆಯಲ್ಲಿ ಗಂಗೂಲಿ ಹಾಗೂ ದ್ರಾವಿಡ್ ಅವರ ಪಾತ್ರ ಏನು ಎಂಬುದನ್ನು ಸೆಹ್ವಾಗ್ ವಿವರಿಸಿದ್ದಾರೆ.

Leave a Reply