ವಿವಿಗಳ ಹೆಸರಿನಲ್ಲಿರುವ ‘ಮುಸ್ಲಿಂ- ಹಿಂದೂ’ ಪದಗಳನ್ನು ತೆಗೆಯಲು ಶಿಫಾರಸ್ಸು, ಜಾತ್ಯಾತೀತೆಗೆ ಯುಜಿಸಿ ಸಮಿತಿಯ ಒತ್ತು!

ಡಿಜಿಟಲ್ ಕನ್ನಡ ಟೀಮ್:

ವಿಶ್ವವಿದ್ಯಾಲಯ ಅನುದಾಯ ಆಯೋಗ (ಯೂನಿವರ್ಸಿಟಿ ಗ್ರಾಂಡ್ ಕಮಿಷನ್) ಅಥವಾ ಯುಜಿಸಿಯ ಸಮಿತಿಯು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿ ‘ಮುಸ್ಲಿಂ’ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹೆಸರಿನಿಂದ ‘ಹಿಂದೂ’ ಪದಗಳನ್ನು ತೆಗೆದುಹಾಕಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ನೀಡಿದೆ.

ಇನ್ನು ಈ ಸಮಿತಿಯ ತನಿಖೆ ನಡೆಸುವ ಪಟ್ಟಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಇಲ್ಲದಿದ್ದರೂ ಈ ವರದಿಯ ಶಿಫಾರಸ್ಸಿನಲ್ಲಿ ಈ ವಿವಿಯ ಹೆಸರು ಪ್ರಸ್ತಾಪ ಮಾಡಲಾಗಿದೆ.

ಅಂದಹಾಗೆ, ದೇಶದ ಪ್ರಮುಖ 10 ವಿಶ್ವ ವಿದ್ಯಾಲಯಗಳಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 25ರಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಒಳಪಡುವ ಯುಜಿಸಿಯು ಈ ಸಮಿತಿ ರಚಿಸಿ ವರದಿ ನೀಡುವಂತೆ ತಿಳಿಸಿತ್ತು. ಅದರಂತೆ ಈ ಸಮಿತಿಯು ಅಲಿಘರ್ ಮುಸ್ಲಿಂ ವಿವಿ ಜತೆಗೆ ಪಾಂಡಿಚೇರಿ ವಿಶ್ವವಿದ್ಯಾಲಯ, ಅಲಹಬಾದ್ ವಿವಿ, ಉತ್ತರಾಖಂಡದ ಹೆಮ್ವತಿ ನಂದನ್ ಬಹುಗುಣ ವಿವಿ, ಜಾರ್ಖಂಡಿನ ಕೇಂದ್ರಿಯ ವಿಶ್ವವಿದ್ಯಾಲಯ, ರಾಜಸ್ಥಾನದ ಕೇಂದ್ರೀಯ ವಿವಿ, ಜಮ್ಮುವಿನ ಕೇಂದ್ರೀಯ ವಿವಿ, ವಾರ್ದಾದಲ್ಲಿರುವ ಮಹಾತ್ಮಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ತ್ರಿಪುರಾ ವಿಶ್ವವಿದ್ಯಾಲಯ ಹಾಗೂ ಮಧ್ಯ ಪ್ರದೇಶದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯಗಳಲ್ಲಿ ತನಿಖೆ ನಡೆಸಿ ವರದಿ ನೀಡಿದೆ ಎಂದು ವರದಿಗಳು ಬಂದಿವೆ.

ಈ ಸಮಿತಿಯ ಮೂಲಗಳ ಗಳ ಪ್ರಕಾರ, ಈ ಎಲ್ಲ ವಿಶ್ವವಿದ್ಯಾಲಯಗಳು ಕೇಂದ್ರ ಸರ್ಕಾರದ ಅನುದಾನ ಪಡೆಯುತ್ತಿದ್ದು, ಈ ವಿಶ್ವವಿದ್ಯಾಲಯಗಳು ಒಂದು ಧರ್ಮ ಅಥವಾ ಜಾತಿಯ ಪ್ರತೀಕವಾಗಿರದೇ, ಜಾತ್ಯಾತೀತ ಶಿಕ್ಷಣ ಸಂಸ್ಥೆಯಾಗಿರಬೇಕು. ಈ ಕಾರಣಕ್ಕಾಗಿಯೇ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಿಂದ ಮುಸ್ಲಿಂ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಹಿಂದೂ ಎಂಬ ಪದಗಳನ್ನು ತೆಗೆದುಹಾಕಲು ಶಿಫಾರಸ್ಸು ನೀಡಲಾಗಿದೆ. ಈ ತಮಿತಿಯು ತನ್ನ ಶಿಫಾರಸ್ಸಿನಲ್ಲಿ ಈ ವಿಶ್ವವಿದ್ಯಾಲಯವನ್ನು ಕೇವಲ ಅಲಿಘರ್ ವಿಶ್ವವಿದ್ಯಾಲಯ ಎಂದು ಕರೆಯಬಹುದು ಅಥವಾ ಆ ವಿವಿಯ ಸಂಸ್ಥಾಪಕರಾದ ಸರ್ ಸೈಯದ್ ಅಹ್ಮದ್ ಖಾನ್ ಅವರ ಹೆಸರನ್ನು ಇಡಬಹುದಾಗಿದೆ. ಅದೇ ರೀತಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಬೇಕು ಎಂದು ಸಮಿತಿಯು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯಗಳಲ್ಲಿ ಸಮಾನತೆ ಹಾಗೂ ಜಾತ್ಯಾತೀತತೆಯನ್ನು ತರುವ ನಿಟ್ಟಿನಲ್ಲಿ ಯುಜಿಸಿ ನೇಮಿತ ಸಮಿತಿಯ ಈ ಶಿಫಾರಸ್ಸು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಬಹುತೇಕ ಎಲ್ಲ ವಿವಿಗಳಲ್ಲೂ ಒಂದೊಂದು ಜಾತಿ, ಧರ್ಮದ ರಾಜಕೀಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಜಿಸಿ ಈ ಕ್ರಮ ಕೈಗೊಂಡಿರುವುದು ಗಮನ ಸೆಳೆದಿದೆ. ಹೀಗಾಗಿ ಈ ಸಮಿತಿಯು ತನ್ನ ತನಿಖಾ ಪಟ್ಟಿಯಲ್ಲಿದ್ದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಮಾತ್ರ ಪರಿಗಣಿಸದೇ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಲು ಶಿಫಾರಸ್ಸು ನೀಡಿದೆ.

ಇನ್ನು ಈ ಶಿಫಾರಸ್ಸಿಗೆ ಸಂಬಂಧಿಸಿದಂತೆ ಅಲಿಘರ್ ಮುಸ್ಲಿಂ ವಿವಿಯ ಅಧಿಕಾರಿಗಳಿಂದ ಸ್ಪಷ್ಟನೆ ಬಂದಿದ್ದು, ಈ ಬಗ್ಗೆ ವಿವಿಯ ಉಪಕುಲಪತಿ ಪ್ರೊ. ತಾರೀಕ್ ಮನ್ಸೂರ್ ನೀಡಿರುವ ಹೇಳಿಕೆ ಹೀಗಿದೆ… ‘ಈ ವಿವಿಯಲ್ಲಿ 29 ರಾಜ್ಯಗಳ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿ 60-40 ಅನುಪಾತದಲ್ಲಿ ಮುಸಲ್ಮಾನ ಹಾಗೂ ಇತರೆ ಧರ್ಮದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ಅರೆಬಿಕ್, ಉರ್ದು ಮತ್ತು ಫಾರ್ಸಿಯಂತಹ ಕೋರ್ಸುಗಳಿಗೆ ಮುಸಲ್ಮಾನ ವಿದ್ಯಾರ್ಥಿಗಳೇ ಅರ್ಜಿಯಾಕುವುದರಿಂದ ಇಲ್ಲಿ ಮುಸಲ್ಮಾನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.’

Leave a Reply