ಗುಜರಾತ್ ಚುನಾವಣೆ ಬೆನ್ನಲ್ಲೇ ಗೋಧ್ರಾ ಹತ್ಯಾಕಾಂಡದ ತೀರ್ಪು: 11 ಮಂದಿಯ ಮರಣದಂಡನೆ ಶಿಕ್ಷೆ ಜೀವಾವಧಿಗೆ ಇಳಿಕೆ

ಡಿಜಿಟಲ್ ಕನ್ನಡ ಟೀಮ್:

ಕಳೆದ 15 ವರ್ಷಗಳಿಂದ ಅನೇಕ ತಿರುವುಗಳನ್ನು ಪಡೆದಿದ್ದ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಈ ತೀರ್ಪಿನಲ್ಲಿ ಪ್ರಕರಣದ ಅಪರಾಧಿಗಳಿಗೆ ಈ ಹಿಂದೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿದೆ. ಅಲ್ಲದೆ ಅಂದು ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಗುಜರಾತ್ ಹೈಕೋರ್ಟಿನ ಈ ತೀರ್ಪು ಪ್ರಸ್ತುತ ಹಂತದಲ್ಲಿ ಮಹತ್ವ ಪಡೆದುಕೊಂಡಿದೆ. ಕಾರಣ, ಗುಜರಾತ್ ರಾಜ್ಯ ವಿಧಾನಸಭೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ಪ್ರಕರಣದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಹಾಗೂ ಅಂದಿನ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಕ್ಕೆ ನ್ಯಾಯಾಲಯ ಖಂಡಿಸಿರುವುದು ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿದೆ. ಈ ತೀರ್ಪಿನ ನಂತರ ಗುಜರಾತಿನಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಪ್ರಚಾರದ ಸಂಪೂರ್ಣ ಚಿತ್ರಣವೇ ಬದಲಾಗುವ ನಿರೀಕ್ಷೆ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ನ್ಯಾಯಾಲಯವು 2011ರಲ್ಲೇ ತೀರ್ಪು ನೀಡಿತ್ತು. ಆಗ 11 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದರೆ, 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇನ್ನು ಉಳಿದ 63 ಆರೋಪಿಗಳನ್ನು ದೋಷಮುಕ್ತ ಎಂದು ಕೋರ್ಟ್ ತೀರ್ಪು ನೀಡಿತ್ತು. ಎಸ್ ಐಟಿ ನ್ಯಾಯಾಲಯ 63 ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡಿದ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಗುಜರಾತ್ ಹೈಕೋರ್ಟ್ ಸಹ ಎಸ್ಐಟಿಯ ತೀರ್ಪನ್ನೇ ಎತ್ತಿ ಹಿಡಿದಿದ್ದು, 11 ಮಂದಿಯ ಮರಣ ದಂಡನೆಯನ್ನು ಜೀವಾವಧಿಗೆ ಇಲಿಸುವ ಮೂಲಕ ಅಪರಾಧಿಯಾಗಿದ್ದ 31 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿದಂತಾಗಿದೆ.

ಇದು ಕಾನೂನು ಹೋರಾಟದಲ್ಲಿ ಗುಜರಾತ್ ಸರ್ಕಾರಕ್ಕೆ ದೊಡ್ಡ ಸೋಲಾಗಿ ಪರಿಣಮಿಸಿದ್ದು, ಗುಜರಾತ್ ಸರ್ಕಾರದ ಮುಂದಿನ ನಡೆ ಏನು? ಈ ತೀರ್ಪಿನ ಪರಿಣಾಮ ಹೇಗೆಲ್ಲಾ ಬೀರಲಿದೆ? ಎಂಬ ಕುತೂಹಲ ಮೂಡಿದೆ.

Leave a Reply