ಕಾಶ್ಮೀರದಲ್ಲಿ ಜೆಇಎಂ ಕಮಾಂಡರ್ ಖಲೀದ್ ಹತ್ಯೆ, ಈತನ ಬೇಟೆ ಸೇನೆಗೆ ದೊಡ್ಡ ಯಶಸ್ಸು ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ನ ಪ್ರಮುಖ ಕಮಾಂಡರ್ ಖಲೀದ್ ಅಲಿಯಾಸ್ ಖಲೀದ್ ಭಾಯ್ ನನ್ನು ಸೋಮವಾರ ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ.

ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ಆತ್ಮಹುತಿ ದಾಳಿಗಳ ಹಿಂದೆ ಈತನ ಕೈವಾಡವೇ ಇತ್ತು ಎಂದು ಮೂಲಗಳು ತೀಳಿಸಿವೆ.

ಕಾಶ್ಮೀರದ ಬರಾಮುಲ್ಲಾ ಪ್ರದೇಶಗಳಲ್ಲಿ ಸೋಮವಾರ ನಡೆದ ಅಲ್ಪಾವಧಿಯ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಖಲೀದ್ ನನ್ನು ಹೊಡೆದು ಹಾಕಿದೆ. ಈತನ ಹತ್ಯೆಯನ್ನು ಕಾಶ್ಮೀರ ವಿಭಾಗದ ಪೊಲೀಸ್ ಅಧಿಕಾರಿ ಮುನೀರ್ ಖಾನ್, ಹೇಳಿರುವುದಿಷ್ಟು…

‘ಇಂದಿನ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಉಗ್ರ ಖಲೀದ್ ಅಲಿಯಾಸ್ ಖಲೀದ್ ಭಾಯ್. ಈತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಕಾಶ್ಮೀರದ ಮುಖ್ಯಸ್ಥನಾಗಿದ್ದು, ಇತ್ತೀಚೆಗೆ ನಡೆದ ಅನಾಹುತಗಳ ಹಿಂದೆ ಈತನ ಕೈವಾಡ ಹೆಚ್ಚಾಗಿತ್ತು.’

ಖಲೀದ್ ನ ಹತ್ಯೆಯಿಂದ ಈಗ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಸಂಘಟನೆಗೆ ದೊಡ್ಡ ಹೊಡೆತ ಬಿದ್ದುದ್ದ, ಇದು ಭಾರತೀಯ ಭದ್ರತಾ ಪಡೆಗಳ ಪಾಲಿಗೆ ದೊಡ್ಡ ಯಶಸ್ಸು ಎಂದೇ ಪರಿಗಣಿಸಲಾಗುತ್ತಿದೆ. ಕಳೆದ ವರ್ಷ ಬುಹ್ರಾನ್ ವಾನಿಯ ಹತ್ಯೆಯ ಬೆನ್ನಲ್ಲೇ ಭಾರತೀಯ ಸೇನೆ ಇತರೆ ಉಗ್ರ ಸಂಘಟನೆಗಳ ಪ್ರಮುಖ ಕಮಾಂಡರ್ ಗಳನ್ನು ಹೊಡೆದು ಹಾಕಿದೆ. ಖಲೀದ್ ಪಾಕಿಸ್ತಾನ ಮೂಲದವನಾಗಿದ್ದು, ಈತ ಭಾರತೀಯ ಪಡೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿದ್ದ ಉಗ್ರನಾಗಿದ್ದ. ಈತನನ್ನು ಭಾರತೀಯ ಪಡೆಗಳು A++ ಪಟ್ಟಿಯಲ್ಲಿಟ್ಟುಕೊಂಡು ಹುಡುಕುತ್ತಿತ್ತು.

ಈತನ ಹತ್ಯೆಯ ನಂತರವೂ ಭಾರತೀಯ ಸೇನೆ ಇತರೆ ಉಗ್ರರಿಗಾಗಿ ಶೋಧ ನಡೆಸುತ್ತಿದೆ. ಕಳೆದ ಜುಲೈ ಹಾಗೂ ಆಗಸ್ಟ್ ನಲ್ಲಿ ಆರರಿಂದ ಏಳು ಗುಗ್ರರು ದೇಶದೊಳಗೆ ನುಸುಳಿದ್ದಾರೆ ಎಂದು ಮುನೀರ್ ಖಾನ್ ತಿಳಿಸಿದ್ದು, ಆ ಉಗ್ರರಿಗಾಗಿ ಸೇನೆ ಹುಡುಕಾಟ ನಡೆಸುತ್ತಿದೆ.

Leave a Reply