ನಾಯಕರ ನಾಲಿಗೆ ನಿಯಂತ್ರಣ ಕಳೆದ ಹತಾಶೆ, ಹಪಾಹಪಿ!

ಹಿಂದೆಲ್ಲ ಚುನಾವಣೆಗೆ ತಿಂಗಳು ಬಾಕಿ ಇರೋವಾಗ ರಾಜಕೀಯ ಪಕ್ಷಗಳು, ಮತ್ತದರ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯ್ದುಕೊಳ್ಳುತ್ತಿದ್ದರು. ಅದಕ್ಕೆ ಇಂಥದ್ದೇ ವಿಷಯ ಇರಬೇಕು ಎಂದೇನಿರಲಿಲ್ಲ. ಚುನಾವಣೆಯಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಖೊಟ್ಟಿ ರಾಜಕೀಯ ಹೇಳಿಕೆಗಳವು. ಯಾವುದೋ ಒಂದು ವಿಷಯ ಇಟ್ಟುಕೊಂಡು ಎದುರಾಳಿ ಕೆಣಕಿ ಮತದಾರರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದರು. ಚುನಾವಣೆಯಲ್ಲಿ ಎಷ್ಟು ಲಾಭ ಆಗುತ್ತದೋ ಆಗಲಿ ಎಂದು. ಅದು ನಿಜಕ್ಕೂ ಮತದಾರನ ಮೇಲೆ ಪ್ರಭಾವ ಬೀರುತ್ತಿತ್ತೋ, ಇಲ್ಲ ಇವರ ಕಂಠಶೋಷಣೆಯಷ್ಟೇ ಆಗುತ್ತಿತ್ತೋ ಎಂಬುದು ಬೇರೆ ಮಾತು.

ಆದರೆ ಕರ್ನಾಟಕದಲ್ಲಿ ಈಗೊಂದು ಹೊಸ ಸಂಪ್ರದಾಯ ಶುರುವಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇರುವಾಗಲೇ ರಾಜಕೀಯ ನಾಯಕರು ನಾಲಗೆಯನ್ನೇ ಕತ್ತಿ ಮಾಡಿಕೊಂಡು ಸಮರಕ್ಕಿಳಿದಿದ್ದಾರೆ. ಸಿಕ್ಕಸಿಕ್ಕವರು, ಸಿಕ್ಕಸಿಕ್ಕವರ ಮೇಲೆ ಅದನ್ನು ಝಳಪಿಸುತ್ತಿದ್ದಾರೆ. ಆದರೆ ಹಿಂದಿನವರ ಹೇಳಿಕೆಗಳಿಗೂ ಈಗಿನ ಹೇಳಿಕೆಗಳಿಗೂ ಅಜಗಜಾಂತರವಿದೆ. ಮೊನಚಿನ ಭರದಲ್ಲಿ ವಿವೇಚನೆ ಮಾಯವಾಗಿದೆ. ವಿವೇಕವಂತೂ ಕಳದೇ ಹೋಗಿದೆ. ಮನಸಿಗೆ ತೋಚಿದ್ದು ಹೇಳಿಬಿಡುವುದು. ‘ಹಿಟ್ ಅಂಡ್ ರನ್ ಕೇಸ್’ ಥರಾ. ಎದುರಾಳಿ ಮೇಲೊಂದು ಹೇಳಿಕೆ ಎಸೆದು ಪಲಾಯನ ಮಾಡುವುದು. ಅದರಲ್ಲಿ ಅರ್ಥ, ಸತ್ಯ, ತರ್ಕ ಇದೆಯೋ, ಇಲ್ಲವೋ ಎಂದು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಕೊಟ್ಟ ಹೇಳಿಕೆಗಳ ಪ್ರಕಾರ ನಡೆಯುವ ಜಾಯಮಾನವಂತೂ ಇಲ್ಲವೇ ಇಲ್ಲ. ಏನೋ ಒಂದು ವಿಷಯ ಅರಹುವುದು. ನಂತರ ಅದನ್ನು ಸಾಕ್ಷಿ, ಪುರಾವೆಗಳ ಜತೆ ಸಮರ್ಥಿಸಿಕೊಳ್ಳಲಾಗದೆ, ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಒದ್ದಾಡುವುದು. ಇಲ್ಲವೇ ಪಲಾಯನ ಮಾಡುವುದು.

ಇದು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಈ ಸ್ವಪಚನ ಕಾರ್ಯದಲ್ಲಿ ನಿರತವಾಗಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದಿನಕ್ಕೊಂದು, ಕ್ಷಣಕ್ಕೊಂದು ಅಸ್ತ್ರ ಅನ್ವೇಷಣೆಯಲ್ಲೇ ಕಳೆದು ಹೋಗುತ್ತಿವೆ. ಈ ಪಕ್ಷಗಳ ಮುಖಂಡರಿಗೆ ತಾವೇನು ಮಾಡುತ್ತಿದ್ದೇವೆ, ಜನ ಏನೆಂದುಕೊಂಡಾರು ಎಂಬುದರ ಅರಿವು ಇಲ್ಲದಿರಬಹುದು. ಆದರೆ ಜನರಿಗಂತೂ ಸುಸ್ಪಷ್ಟವಾಗಿ ಹೋಗಿದೆ. ಇದು ಚುನಾವಣೆ ಸುತ್ತ ಗಿರಗಿಟ್ಟಲೆ ಹೊಡೆಯುತ್ತಿರುವ ಗಿಮಿಕ್ ಎಂದು. ಹೀಗಾಗಿ ಅವರೂ ಪುಗ್ಸಟ್ಟೆ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ.

ನಿಜ, ಹತಾಶೆ ಮತ್ತು ಹಪಾಹಪಿ ರಾಜಕಾರಣಿಗಳ ನಾಲಿಗೆ ಮೇಲಿನ ನಿಯಂತ್ರಣ ಕಳೆದು ಹಾಕಿದೆ. ಕೆಲವರಂತೂ ನಾಲಿಗೆ ಮತ್ತು ಮಿದುಳಿಗೆ ಸಂಬಂಧ, ಸಂಪರ್ಕವೇ ಇಲ್ಲದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಮೇಲಿನ ವಿಶ್ವಾಸ, ನಂಬಿಕೆ ಕೊರತೆ ಅವರನ್ನು ಈ ಸ್ಥಿತಿಗೆ ದೂಡಿರಬಹುದು. ಆದರೆ ಅವರಾರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಾಧನೆಯೇ ಅಳತೆಗೋಲಾದರೆ, ಅದೇ ಭವಿಷ್ಯದ ಊರುಗೋಲಾದರೆ ವೃಥಾ ಪ್ರಲಾಪಗಳ ಪ್ರಮೇಯವೇ ಬಾರದು. ಆದರೆ, ಮೇಲೆ ಎಷ್ಟೇ ವಿಶ್ವಾಸ ತೋರಿಸಿಕೊಂಡರೂ ಒಳಗಿರುವ ಅಳಕು ನಿಯಂತ್ರಣ ಕಳೆದುಕೊಂಡ ಮಾತುಗಳ ಮೂಲಕ ಅನಾವರಣಗೊಳ್ಳುತ್ತಿರುತ್ತದೆ. ಅಂಥ ಹಲವು ನಿದರ್ಶನಗಳಿಗೆ ಕರ್ನಾಟಕ ರಾಜಕಾರಣ ಷೋಕೇಸ್ ಆಗಿದ್ದು, ದಿನಕ್ಕೊಂದು ಹುಸಿ, ಹುಂಬ ಹೇಳಿಕೆಗಳನ್ನು ಉರುಳಿಸುತ್ತಿರುವ ರಾಜಕಾರಣಿಗಳು ಅನುಕಂಪಕ್ಕೆ ಅರ್ಜಿ ಗುಜರಾಯಿಸಿಕೊಂಡವರಂತೆ ಗೋಚರಿಸುತ್ತಿದ್ದಾರೆ.

ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಾರದ ಹಿಂದೆ ಕೊಟ್ಟ ಹೇಳಿಕೆಯೊಂದು ದಿಗ್ಭ್ರಮೆ ಮೂಡಿಸುವಂತಿತ್ತು. ಸೌಜನ್ಯ ಮತ್ತು ಮಾನವೀಯತೆಯ ಸೂಕ್ಷ್ಮ ಅಂಶಗಳನ್ನು ಒಳಗೊಂಡಿದ್ದ ಬೆಳವಣಿಗೆಯೊಂದನ್ನು ಅವರು ನೋಡಿದ ರೀತಿ, ಪರಾಮರ್ಶಿದ ಶೈಲಿ ಅವರ ಬಗ್ಗೆಯೇ ‘ಅನುಕಂಪ’ ಮೂಡಿಸುವಂತಿತ್ತು. ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸೌಜನ್ಯ ಮೆರೆದಿದ್ದರು. ಹಿಂದೆ ತಾವು ಒಡನಾಡಿದ್ದ ಜಾತ್ಯತೀತ ಜನತಾ ದಳ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಮೇಲಾಗಿ ವಿಧಾನಸಭೆಯ ಸಹೋದ್ಯೋಗಿ ಎಂಬ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟು ಸೌಖ್ಯ ವಿಚಾರಿಸಿಕೊಂಡಿದ್ದರು. ಇದೆಲ್ಲವನ್ನೂ ಮೀರಿದ ಮಾನವೀಯತೆ ಈ ಭೇಟಿ ಹಿಂದಿತ್ತು. ಇದರಲ್ಲಿ ಯಾವುದೇ ತಪ್ಪು ಇರಲಿಲ್ಲ, ಅದನ್ನೂ ಹುಡುಕುವುದೂ ಸಲ್ಲ.

ಆದರೆ ಆಸ್ಪತ್ರೆಯಿಂದ ಮರಳಿದ ನಂತರ ಕುಮಾರಸ್ವಾಮಿ ಅವರು ಈ ಬಗ್ಗೆ ನೀಡಿದ ಹೇಳಿಕೆ ಮಾತ್ರ ‘ಭಯಾನಕ’ವಾಗಿತ್ತು. ಸಿದ್ದರಾಮಯ್ಯನವರು ಆಸ್ಪತ್ರೆಗೆ ಬಂದು ತಮ್ಮನ್ನು ಭೇಟಿ ಮಾಡುವ ಬದಲು ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿದ್ದರೆ ಒಳ್ಳೆಯದಿತ್ತು ಎಂಬುದು ಅವರ ವ್ಯಂಗ್ಯಭರಿತ ಮಾತಾಗಿತ್ತು. ಕುಮಾರಸ್ವಾಮಿ ಅವರೇನಾ ಈ ಮಾತು ಆಡಿದ್ದು, ಅವರ ಬುದ್ಧಿಗೇ ಏನಾಗಿ ಹೋಗಿದೆ ಎಂಬಷ್ಟರ ಮಟ್ಟಿಗೆ ಶಾಕ್ ಮೂಡಿಸಿತ್ತು. ಒಬ್ಬ ಮುಖ್ಯಮಂತ್ರಿ ಆದವರು ಆಸ್ಪತ್ರೆಯಲ್ಲಿರುವ ಶಾಸಕರೊಬ್ಬರ ಆರೋಗ್ಯ ವಿಚಾರಿಸಿಕೊಂಡು ಬರುವುದರಲ್ಲಿ ತಪ್ಪೇನಿದೆ? ರೈತರ ಸಮಸ್ಯೆಯೇ ಬೇರೆ, ಕುಮಾರಸ್ವಾಮಿ ಆರೋಗ್ಯದ ವಿಚಾರವೇ ಬೇರೆ. ರೈತರ ಸಮಸ್ಯೆ ಬಗ್ಗೆ ಸಿದ್ದರಾಮಯ್ಯನವರು ಗಮನ ಹರಿಸಬೇಕು ಎಂಬುದು ಸರಿಯೇ ಆದರೂ, ಅದರ ನೆಲೆಯಲ್ಲಿ ಮುಖ್ಯಮಂತ್ರಿ ಸೌಜನ್ಯವನ್ನು ತೂಕ ಮಾಡಿದ್ದು ಕುಮಾರಸ್ವಾಮಿ ವ್ಯಕ್ತಿತ್ವದ ತೂಕವನ್ನು ಕುಗ್ಗಿಸಿತು. ಅದು ಶತ್ರುವೇ ಆದರೂ ಕಷ್ಟಸುಖ ವಿಚಾರಿಸಲು ಬಂದವರರನ್ನು ಹೀಗೆ ‘ಎಕ್ಸರೇ ಕಣ್ಣು’ಗಳಿಂದ ನೋಡಿದ ನಿದರ್ಶನ ಕರ್ನಾಟಕ ರಾಜಕೀಯ ಇತಿಹಾಸದಲ್ಲಂತೂ ಇಲ್ಲವೇ ಇಲ್ಲ. ಬಹುಶಃ ಕೌರವರು-ಪಾಂಡವರ ನಡುವಣ ವೈರತ್ವದಲ್ಲೂ ಇಂಥದ್ದೊಂದು ಪ್ರಹಸನ ಕಂಡಿರಲಿಕ್ಕಿಲ್ಲ!

ವರ್ಷದ ಹಿಂದೆ ಸಿದ್ದರಾಮಯ್ಯನವರ ಪುತ್ರ ರಾಕೇಶ್ ನಿಧನರಾದಾಗ ದೇವೇಗೌಡರು ಸಿದ್ದರಾಮಯ್ಯನವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ ಬಂದಿದ್ದರು. ಆಗ ಅಪ್ಪ ಮಾಡಿದ ಕೆಲಸದಲ್ಲಿ ಕಾಣದೇ ಹೋದ ‘ಅಚಾತುರ್ಯ’, ಈಗ ಸಿದ್ದರಾಮಯ್ಯನವರು ತಮ್ಮನ್ನು ಭೇಟಿ ಮಾಡಿದ್ದರಲ್ಲಿ ಕಂಡ ಕುಮಾರಸ್ವಾಮಿಯವರ ‘ಕಣ್ಚಾತುರ್ಯ’ ಅವರಿಗೇ ಮೆಚ್ಚುಗೆಯಾಗಬೇಕು. ಕುಮಾರಸ್ವಾಮಿ ಅವರು ಕಷ್ಟದಲ್ಲಿದ್ದ, ಆರೋಗ್ಯ ತಪ್ಪಿದ್ದ ಅನೇಕರನ್ನು ಸಿದ್ದರಾಮಯ್ಯನವರ ತೆರದಲ್ಲೇ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಇದರಲ್ಲಿ ಲೋಪ ಹುಡುಕಿದರೆ ಲೋಪ ಹುಡುಕಿದವರ ತಪ್ಪಾಗುತ್ತದೆಯೇ ಹೊರತು ಹುಡುಕಿಸಿಕೊಂಡವರದಲ್ಲ!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ‘ಕುಲಬಾಂಧವ’, ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಬಗ್ಗೆ ಆಡಿರುವ ಮಾತುಗಳು. ‘ವಿಶ್ವನಾಥ್ ಎಲ್ಲೇ ಚುನಾವಣೆಗೆ ನಿಲ್ಲಲಿ, ಕುರುಬರಾರೂ ಅವರಿಗೆ ವೋಟು ಹಾಕಬಾರದು, ಅವರನ್ನು ಸೋಲಿಸಿ ಪಾಠ ಕಲಿಸಬೇಕು’ ಎಂದು ಕರೆ ನೀಡಿದ್ದಾರೆ. ಯಾರು ಏನೇ ಹೇಳಲಿ, ಹಿಂದೆ ಜೆಡಿಎಸ್‌ನಲ್ಲಿ ಸಿಎಂ ಪದವಿ ಸಿಗದೆ, ಮೂಲೆಗುಂಪಾಗಿ ಪ್ರತಿಕ್ಷಣವೂ ಕರಳು ಹಿಂಡಿಕೊಂಡೇ ನವೆಯುತ್ತಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಪಟ್ಟಕ್ಕೆ ಏರುವುದರಲ್ಲಿ ಕೊಡುಗೆ ನೀಡಿದವರ ಪೈಕಿ ವಿಶ್ವನಾಥ್ ಪಾಲು ಕಡಿಮೆಯೇನಿಲ್ಲ. ನಂತರ ತಮ್ಮನ್ನು ಉಪೇಕ್ಷಿಸಿದರು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರ ಬಗ್ಗೆ ವಿಶ್ವನಾಥ್ ಕೂಡ ಅನೇಕ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕೀಯ ಲೆಕ್ಕಾಚಾರದಲ್ಲಿ ವಿಶ್ವನಾಥ್ ಅವರಿಂದ ಸಿದ್ದರಾಮಯ್ಯನವರಿಗೆ ಆಗಿರುವ ನಷ್ಟಕ್ಕಿಂತ ಲಾಭವೇ ಹೆಚ್ಚು. ವಿಶ್ವನಾಥ್ ಹತಾಶ ನುಡಿಗಳ ಜತೆಗೆ ಕೃತಜ್ಞತೆ, ಕ್ಷಮಾಗುಣ ಸಮೀಕರಿಸಿ ನೋಡಿದಾಗ ಸಿದ್ದರಾಮಯ್ಯನವರು ಇಂಥ ಹೇಳಿಕೆ ನೀಡದೇ ಔದಾರ್ಯ ಮೆರೆಯಬಹುದಿತ್ತು. ‘ಕುರುಬರು ತಮಗೇ, ತಮ್ಮ ಪಕ್ಷಕ್ಕೇ ಮತ ನೀಡಬೇಕು’ ಎಂದು ಹೇಳುವುದಕ್ಕೂ, ‘ವಿಶ್ವನಾಥ್‌ಗೆ ಮತ ಹಾಕಬಾರದು’ ಎಂದು ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ರಾಜನಾದವನು ಆದರ್ಶಪ್ರಾಯನಾಗಬೇಕೆ ಹೊರತು ಅಸಮಬಲರ ಜತೆಗೆ ಕಾಳಗಾತುರ ತೋರಬಾರದು. ಹಾಗಂತ ವಿಶ್ವನಾಥ್ ಅವರೇನೂ ಸುಮ್ಮನೆ ಕೂತಿಲ್ಲ. ‘ಏಕವಚನ, ಬಹುವಚನ ಪ್ರಯೋಗದ ನಡುವೆ ವ್ಯತ್ಯಾಸ ಅರಿಯದ ಸಿದ್ದರಾಮಯ್ಯ ಸದನದಲ್ಲಿ ಸಂಧಿಪಾಠ ಮಾಡಿದ್ದು ದುರಂತ ಎಂದು ಪ್ರತ್ಯಸ್ತ್ರ  ಬಿಟ್ಟಿದ್ದಾರೆ. ಇದೂ ಕೂಡ ಸರಿಯಲ್ಲ. ಈ ಏಟು, ತೀರುಗೇಟುಗಳಲ್ಲಿ ಅದ್ಯಾವ ಜನಹಿತ ಅಡಗಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರಿಗೆ ಗೊತ್ತಿದ್ದರೆ ಅವರೇ ತಿಳಿಸಬೇಕು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ‘ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಗಾದೆಮಾತಿಗೆ ಪರ್ಯಾಯ ಪದವಾಗಿ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ‘ಚಾರ್ಜ್‌ಶೀಟ್’ ಬಿಡುಗಡೆ ಮಾಡುತ್ತೇನೆ ಎಂದು ತಿಂಗಳಿಂದ ಹೇಳಿ-ಹೇಳಿಯೇ ಸುಸ್ತಾದ ಅವರು ಆಡಳಿತ ಪಕ್ಷದವರೇ ಸವಾಲು ಹಾಕಿದರೂ ಒಂದು ‘ಎಫ್‌ಐಆರ್’ ಕೂಡ ದಾಖಲು ಮಾಡಲಾಗದೇ ತಿಣಕಾಡುತ್ತಿದ್ದಾರೆ. ಈ ಬಗ್ಗೆ ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಬರೀ ಹೇಳಿದ್ದೇ ಆಯ್ತು. ಯಾವ ದಾಖಲೆನೂ ಬಿಡುಗಡೆ ಮಾಡಲಿಲ್ಲ. ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಎಂದು ಬಿಜೆಪಿ ಮುಖಂಡರು ಪಕ್ಷದ ವೇದಿಕೆಯಲ್ಲೇ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಬಿ.ಜೆ. ಪುಟ್ಟಸ್ವಾಮಿ ಕೈಯಲ್ಲಿ,  ಸಿಎಂ ಪುತ್ರ ಡಾ. ಯತೀಂದ್ರ ಅವರಿಗೆ ಸೇರಿದ ಕಂಪನಿಗೆ ಬದಲಿ ನಿವೇಶನ ಹೆಸರಲ್ಲಿ ₹ 200 ಕೋಟಿ ಮೌಲ್ಯದ ಜಮೀನು ಅಕ್ರಮ ಮಂಜೂರು ಮಾಡಲಾಗಿದೆ ಎಂದು ಆರೋಪ ಮಾಡಿಸಿದ್ದಾರೆ. ಈ ಕೆಲಸವನ್ನು ಯಡಿಯೂರಪ್ಪನವರೇ ಮಾಡಬಹುದಿತ್ತು. ಅದನ್ನು ಬಿಟ್ಟು ಪುಟ್ಟಸ್ವಾಮಿ ಅವರನ್ನು ಬಳಕೆ ಮಾಡಿಕೊಂಡಿರುವುದನ್ನು ನೋಡಿದರೆ ‘ಚಾರ್ಜ್‌ಶೀಟ್’ ಬಗ್ಗೆ, ಅದು ಬೀರುವ ಪರಿಣಾಮದ ಬಗ್ಗೆ ಅವರಿಗೇ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಗಣಪತಿ ಮಾಡಬೇಕಾದ ಕೆಲಸವನ್ನು ಗಣಪತಿಯೇ ಮಾಡ ಬೇಕೇ ವಿನಃ ತನ್ನ ಬಳಿ ಇರುವ ಇಲಿ ಕೈಯಲ್ಲಿ ಮಾಡಿಸಬಾರದು. ಹಾಗೆ ಮಾಡಿಸಿದರೆ ಅದಕ್ಕೆ ಹೇಳಿಕೊಳ್ಳುವಂಥ ಕಿಮ್ಮತ್ತು ಸಿಗುವುದಿಲ್ಲ. ಈಗ ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ತಮ್ಮ ಮಗನಿಂದ ಮಾನನಷ್ಟ ಮೊಕದ್ದಮೆ ಹಾಕಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಒಂದೊಮ್ಮೆ ಹಾಗೇನಾದರೂ ಕೇಸು ಬಿದ್ದರೆ ಅದರಿಂದ ಪಾರಾದಷ್ಟೇ ಯಡಿಯೂರಪ್ಪನವರಿಗೆ ಆಗುವ ಲಾಭ. ಪುಟ್ಟಸ್ವಾಮಿ ಹಣೆಬರಹ ಅವರು ಅನುಭವಿಸಿಕೊಂಡು ಹೋಗುತ್ತಾರೆ. ಹೀಗಾಗಿ ಯಡಿಯೂರಪ್ಪನವರ ಬೆದರಿಕೆ ಎಂಬುದು ಕಾಂಗ್ರೆಸ್‌ ನವರು ಹೇಳುವಂತೆ ಬುಟ್ಟಿಯೊಳಗಿನ ಹಾವಿನಂತೆಯೇ ಆಗಿದೆ. ಹೊರಗೆ ಬರದಿದ್ದರೆ ಅದು ಕಾಗದದ ಹಾವೋ, ನಿಜವಾದ ಹಾವೋ ಗೊತ್ತಾಗುವುದಿಲ್ಲ. ಬದಲಿಗೆ ಅದೊಂದು ರಾಜಕೀಯ ಹೇಳಿಕೆಗಷ್ಟೇ ಸೀಮಿತವಾಗುತ್ತದೆ. ಯಡಿಯೂರಪ್ಪನವರು ಸದ್ಯಕ್ಕೆ ಅಲ್ಲಿಯೇ ಗಿರಕಿ ಹೊಡೆಯುತ್ತಿದ್ದಾರೆ.

ಅದೇ ರೀತಿ ಆರ್‌ಎಸ್‌ಎಸ್ ಮುಖಂಡ ಸು.ರಾಮಣ್ಣ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಲಿಂಗಾಯತರನ್ನು ‘ಶನಿ ಸಂತಾನ’ ಎಂದು ಕರೆದು ಬಾಯಿಗೆ ಬಂದಂತೆ ಜರಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರಿಂದ ಆರೆಸ್ಸೆಸ್‌ಗೆ ‘ಗೋಡ್ಸೆ ಸಂತಾನ’ ಎಂಬ ಪಟ್ಟ ದಯಪಾಲಿಸಿಕೊಂಡಿದ್ದಾರೆ. ಬಾಯಿಗೆ ಬರುತ್ತದೆ ಎಂದು ಸಿಕ್ಕಿದ್ದನ್ನೆಲ್ಲ ಅರುಹಿದರೆ ಆಗುತ್ತದೆಯೇ? ತಾವಾಡುವ ಮಾತಿಂದ ಒಂದು ಧರ್ಮ, ಸಮುದಾಯದ ಭಾವನೆಗಳಿಗೆ ನೋವಾಗುತ್ತದೆ, ಪ್ರತಿಕೂಲ ಪರಿಣಾಮಗಳಿಗೆ ನಾಂದಿ ಹಾಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತದೆ ಎಂಬ ಕನಿಷ್ಟ ಪ್ರಜ್ಞೆ ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡುವವರಿಗೆ ಇರಬಾರದೇ? ಈ ರೀತಿ ಹೇಳಿಕೆಗಳಿಂದ ಅದ್ಯಾವ ಪುರುಷಾರ್ಥ ಸಾಧನೆ ಸಾಧ್ಯವೋ ಗೊತ್ತಿಲ್ಲ. ದೇಶ ಕಟ್ಟೋ ದೇಶಭಕ್ತರು ಆಡುವ ಮಾತೇ ಇದು? ರಾಮಣ್ಣನವರ ಮಾತಿಗೂ ಅವರು ಪ್ರತಿನಿಧಿಸುವ ಸಂಘಟನೆಗೂ ಸಂಬಂಧ ಇಲ್ಲ ಎಂದು ವಾದಿಸಿದರೂ ಅವರಿಗೂ ಮತ್ತು ಸಂಘಟನೆಗೂ ಇರುವ ಸಂಬಂಧವನ್ನೂ ಯಾರೂ ತಳ್ಳಿ ಹಾಕಲು ಸಾಧ್ಯವಿಲ್ಲವಲ್ಲ!

ಇನ್ನು ‘ಮುಂದಿನ ಸಿಎಂ ತಾವೇ, ಮುಂದಿನ ದಸರಾ ಉದ್ಘಾಟನೆ ತಮ್ಮ ಕೈಯಲ್ಲೇ’ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪೈಪೋಟಿ ಮೇಲೆ ಹೇಳಿಕೊಂಡು ತಿರುಗುತ್ತಿದ್ದಾರೆ. ಸಿಎಂ ಆಗೋದು ಅತ್ಲಾಗಿರಲಿ ಮೊದಲು ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಲಿ. ಮೇಲ್ನೋಟಕ್ಕೆ ತಾವೇ ಮುಂದಿನ ಸರಕಾರದ ವಾರಸುದಾರರು ಎಂದು ಹೇಳಿಕೊಂಡರೂ ಆಂತರ್ಯದಲ್ಲಿ ಒಬ್ಬರಿಗೂ ಆ ಬಗ್ಗೆ ವಿಶ್ವಾಸವಿಲ್ಲ. ಆ ವಿಶ್ವಾಸ ಮೂಡಲು ಪಕ್ಷದ ಆಂತರಿಕ ಬೆಳವಣಿಗೆಗಳೇ ಆಸ್ಪದ ನೀಡುತ್ತಿಲ್ಲ. ಭಯ ಅವರನ್ನು ಆಳುತ್ತಿದೆ. ಭೀತಿಗೆ ಒಳಗಾದವರು ಜೋರು ಧ್ವನಿಯಲ್ಲಿ ಮಾತಾಡುತ್ತಾ, ಗುನುಗುತ್ತಾ, ಕೂಗುತ್ತಾ, ಹುಸಿಧೈರ್ಯ ತೋರ್ಪಡಿಸಿಕೊಳ್ಳುತ್ತಾರೆ. ಹಾಗೆಯೇ ಕಾಣುತ್ತಾರೆ ಇದೀಗ ಹಣೆ ಮೇಲೆ ತಾವೇ ಸಿಎಂ ಲೇಬಲ್ ಅಂಟಿಸಿಕೊಂಡು, ಜೋರಾಗಿ ಕೂಗುತ್ತಾ ತಿರುಗಾಡುತ್ತಿರುವವರು.

ಅಧಿಕಾರ ಯಾರ ಸ್ವತ್ತೂ ಅಲ್ಲ. ಕನಸು ಕಂಡವರಿಗೆಲ್ಲ ಸಿಗುವುದಿಲ್ಲ. ಹೇಳಿಕೊಂಡು ತಿರುಗುವವರಿಗೂ ದಕ್ಕುವುದಿಲ್ಲ. ಏಕೆಂದರೆ ಕನಸಲ್ಲೂ ಕೂಡ ಸಿಎಂ ಪಟ್ಟ ಕಲ್ಪಿಸಿಕೊಳ್ಳದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಧರ್ಮಸಿಂಗ್, ಜಗದೀಶ್ ಶೆಟ್ಟರ್, ಸದಾನಂದಗೌಡ ಅವರಂಥವರು ಸದ್ದಿಲ್ಲದೆ ಆ ಪದವಿ ಅಲಂಕರಿಸಿ ಹೋಗಿದ್ದು ಇನ್ನು ನಮ್ಮ ಕಣ್ಣ ಮುಂದೆಯೇ ಇದೆ. ಅದೇ ರೀತಿ ಹಲವು ದಶಕಗಳಿಂದಲೂ ಆ ಕನಸು ಕಾಣುತ್ತಲೇ ರಾಜಕೀಯ ಸಂಜೆಯಲ್ಲಿ ಬಂದು ನಿಂತಿರುವ ಮಲ್ಲಿಕಾರ್ಜುನ ಖರ್ಗೆ, ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪನವರು ಇದಕ್ಕೆ ವ್ಯತಿರಿಕ್ತ ಉದಾಹರಣೆಗಳಾಗಿದ್ದಾರೆ. ಹೇಳಿಕೆಗಳ ಮೇಲೆ ಚುನಾವಣೆಗಳೂ ನಡೆಯುವುದಿಲ್ಲ, ಸರಕಾರಗಳೂ ಅಧಿಕಾರಕ್ಕೆ ಬರುವುದಿಲ್ಲ, ಮುಖ್ಯಮಂತ್ರಿ ಪಟ್ಟವೂ ಸಿಗುವುದಿಲ್ಲ. ಸರಕಾರ, ಅಧಿಕಾರ ಏನಿದ್ದರೂ ಜನರ ಕೈಯಲ್ಲೇ. ಅವರು ಆಡಿಸಿದಂತೆ ಆಟ. ಅಧಿಕಾರಕ್ಕೆ ಅರ್ಹತೆ ಜತೆಗೆ ಅದೃಷ್ಟವೂ ಬೇಕು. ಈಗ ಹೇಳಿಕೆ ರಾಜಕೀಯದಲ್ಲಿ ನಿರತರಾಗಿರುವವರು ಮೂರೂ ಪಕ್ಷಗಳ ಪ್ರಮುಖ ನಾಯಕರು ಹಾಗೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದವರು. ಈ ನಾಯಕರುಗಳು ಏನೇ ಮಾತನಾಡಿದರೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಇತರೆ ನಾಯಕರುಗಳಿಗೆ ಸಂದೇಶ ರವಾನೆಯಾಗುತ್ತಿರುತ್ತದೆ. ಹೀಗಾಗಿ ತಾವು ಆಡುವ ಪ್ರತಿಯೊಂದು ಮಾತಿನ ಮೇಲೂ ಅವರಿಗೆ ನಿಗಾ ಇರಬೇಕು, ಜನರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವಿರಬೇಕು. ಇಲ್ಲದಿದ್ದರೆ ಎಲ್ಲರ ಮುಂದೆ ಅವರೇ ಪೇಚಿಗೀಡಾಗುತ್ತಾರೆ ಎಂಬುದನ್ನು ಮರೆಯಬಾರದು.

ಲಗೋರಿ: ನವೆಗೆ ಚಿನಕುರಳಿ ಸೊಪ್ಪಲ್ಲಿ ಮದ್ದು ಹುಡುಕಬಾರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

2 COMMENTS

  1. “ನಾಯಕರ ನಾಲಿಗೆ ನಿಯಂತ್ರಣ..”ಓದುತ್ತಿರುವ(13.10.2017 ಸಮಯ : 16.00Hrs) ಈ ಸಂದರ್ಭದಲ್ಲಿಯೇ ಕಾಂಗ್ರೆಸ್ಸಿನ ರೋಷನ್ ಬೇಗ್ ಪ್ರಧಾನಿ ಮೋದಿಯವರನ್ನು ಅಸಂಸದೀಯ (ಮೋದಿ ಸೂ..ಮಗೂ)ಅತ್ಯಂತ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ರಮಾನಾಥ ರೈ ಇದನ್ನು ಸಮರ್ಥಿಸುವಂತೆ ಮಾತಾಡಿದ್ದಾರೆ. ಮೋದಿ ಬೇಡ, ಪ್ರಧಾನಿ ಸ್ಥಾನಗೌರವವನ್ನಾದರೂ ಅರಿತು ಬೇಗ್ ಮಾತನಾಡಬೇಕಿತ್ತು. ಮುಖ್ಯಮಂತ್ರಿಯವರಂತೂ ತಾವೊಬ್ಬ ಸವ್ಯಸಾಚಿ ಅನ್ನೋಥರಾ ಮಾತಾಡುತ್ತಿದ್ದಾರೆ.ಅವರ ದೃಷ್ಟಿಯಲ್ಲಿ ಮೋದಿಯವರು ಏನೂ ಅಲ್ಲ. “ಮೋದಿ ಹುಲಿಯಂತೆ… ಪೇಪರು ಹುಲಿಯೋ ಏನೋ..”, ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರ ಬಗ್ಗೆ “ಅದೇನೋ ಯೋಗಿ ….ನಾಥ…ಅಂತೆ. ನಂಗೇನೂ ಯಾವ ನಾತವೂಬರಲಿಲ್ಲ…”ಅಂತ ಅಸಹ್ಯ ನಗೆ ಪ್ರದರ್ಶಿಸಿದರು.
    ರಾಜ್ಯ ಸಂಪುಟದ ಒಬ್ಬೊಬ್ರೂನೂ ಒಂದೊಂಥರಾ ಮಾತಾಡ್ತಾ ಇರ್ತಾರೆ. ಈ ಹಿಂದೆ ಕಬ್ಬನ್ ಪಾರ್ಕಿನಲ್ಲಿ ರಾತ್ರಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದ ವರದಿಗೆ “ಅಷ್ಟು ಹೊತ್ತಿನಲ್ಲಿ ಆಕೆ ಅಲ್ಲಿಗ್ಯಾಕೆ ಹೋಗ್ಬೇಕಾಗಿತ್ತು”,”ಇಂಥಾವೆಲ್ಲ ಮಾಮೂಲು”ಅನ್ನೋ ನುಡಿಮುತ್ತು ಉದುರಿಸಿದ ಪುಣ್ಯಪುರುಷ ಯಾರಂತೀರಿ?. ರಾಜ್ಯ ಗೃಹ ಶಾಖೆಯ ಜವಾಬ್ದಾರಿ ಹೊತ್ತ ಜಿ.ಪರಮೇಶ್ವರ್. “ಮೋದಿ ಸಾಯಲಿ..”ಅಂತಾ ಗಳಹಿದ ರಾಯರೆಡ್ಡಿ.ಆದರೆ ಇವರ್ಯಾರ ಬಗ್ಗೆಯಾದ್ರೂ ಯಾವಾಗಾದ್ರೂ ಮೋದಿ ಒಂದೇ ಒಂದು ಅಸಹ್ಯ
    ಮಾತು ಆಡಿದ್ದಾರಾ?. ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಪಕ್ಷಾತೀತ ವ್ಯಕ್ತಿ. ರಾಜಕೀಯ ಬೇಡ. ಆದರೆ ಮೋದಿಯವರ ಭಾಷಣದ ವೈಖರಿ ಅನನ್ಯ. ಅವರ ಮಾತಿನಲ್ಲಿ ಏನೋ ಆಕರ್ಷಣೆಯಿದೆ. ಯಾವುದೇ ವಿಷಯದ ಬಗ್ಗೆಯೂ ನಿಖರವಾಗಿ, ನಿರರ್ಗಳವಾಗಿ ಮಾತನಾಡುತ್ತಾರೆ. ಬಸವಣ್ಣನವರ ಬಹುಭಾಷಾ ಅನುವಾದಿತ ವಚನ ಸಂಪುಟಗಳ ಲೋಕಾರ್ಪಣೆ ಸಮಾರಂಭ ದೆಹಲಿ ವಿಜ್ಞಾನ ಭವನದಲ್ಲಿ ಜರುಗಿದಾಗ ಮೋದಿ ಬಸವಣ್ಣನವರ ಬದುಕು, ವಚನ-ವಿಚಾರಗಳ ಬಗ್ಗೆ , ಲಿಖಿತ ಚೀಟಿ ಆಧಾರವಿಲ್ಲದೇ ಮುಕ್ತವಾಗಿ ಮಾತಾಡಿದರು. ಆದರೆ ನಮ್ಮವರೇ ಆದ, ಶರಣ ಸಂಸ್ಕೃತಿ ನೆಲೆವೀಡಿನವರಾದ ರಾಯರೆಡ್ಡಿ ಲಿಖಿತ ಭಾಷಣ ಓದಿದರು. ಇನ್ನು ಮೋದಿಯವರ “ಮನ್ ಕೀ ಬಾತ್ ” ಪಡೆದ ಜನಪ್ರಿಯತೆಗೆ ಎಲ್ಲರೂ ಕರುಬುತ್ತಿರೋದು ಗಮನಾರ್ಹ. ಬಳ್ಳಾರಿಯ ವೈಚಾರಿಕ, ವೈಜ್ಞಾನಿಕ, ಯುವಕವಿಯೋರ್ವರು “ಹೊಸತು”ಮಾಸಿಕದಲ್ಲಿ “ಮನ್ ಕೀ ಬಾತ್” ಎನ್ನುವುದನ್ನು “ಮಂಕೀ ಬಾತ್’ ಎಂದು ವ್ಯಂಗ್ಯ ಕವನ ಬರೆದರು………”

Leave a Reply