ಗುಜರಾತಿನಲ್ಲಿ ರಾಹುಲ್ ಯಾತ್ರೆ- ಬಿಜೆಪಿ ವಿರುದ್ಧ ‘ಬೇಟಾ ಬಚಾವ್’ ಲೇವಡಿ

ಡಿಜಿಟಲ್ ಕನ್ನಡ ಟೀಮ್:

‘ಆರಂಭದಲ್ಲಿ ಬೇಟಿ ಬಚಾವೋ ಎನ್ನುತ್ತಿದ್ದ ಬಿಜೆಪಿ ಇಂದು, ಅಮಿತ್ ಶಾರ ಬೇಟಾ ಬಚಾವ್ ಎನ್ನುತ್ತಿದೆ…’ ಇದು ಗುಜರಾತಿನಲ್ಲಿ ನವ್ಸರ್ಜನ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ನಡೆಸಿದ ವಾಗ್ದಾಳಿ.

ಚುನಾವಣೆ ಸಮೀಪಿಸುತ್ತಿರುವ ಗುಜರಾತಿನಲ್ಲಿ ಎರಡನೇ ಹಂತದ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಇಂದು ಅಹಮದಾಬಾದ್, ಖೆಡಾ ಆನಂದ್ ಮತ್ತು ವಡೋದರಾಗೆ ಭೇಟಿ ನೀಡಿದರು. ಈ ವೇಳೆ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ವಿವಾದವನ್ನಿಟ್ಟುಕೊಂಡೇ ಬಿಜೆಪಿಯ ವಿರುದ್ಧ ಟೀಕಿಸಿದರು. ಈ ವೇಳೆ ರಾಹುಲ್ ಹೇಳಿದಿಷ್ಟು…

‘ಕೇಂದ್ರ ಸರ್ಕಾರ ಒಂದೆಡೆ ಸ್ಟಾರ್ಟ್ ಅಪ್ ಗಳ ಬಗ್ಗೆ ಮಾತನಾಡುತ್ತಿದೆ. ಮತ್ತೊಂದೆಡೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ನೀತಿಗಳ ಮೂಲಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲೆ ಬರೆ ಎಳೆದಿದ್ದಾರೆ. ಇದರಿಂದ ಈ ಕೈಗಾರಿಕೆಗಳ ಮಾಲೀಕರು ಬೀದಿಗೆ ಬಂದಿದ್ದಾರೆ. ಆದರೆ ಅಮಿತ್ ಶಾ ಅವರು ಪುತ್ರನ ಕಂಪನಿ ಮಾತ್ರ ಅತ್ಯಂತ ಯಶಸ್ಸು ಕಂಡಿದೆ.

ಕೇವಲ ₹ 50 ಸಾವಿರ ಆದಾಯ ಹೊಂದಿದ್ದ ಆತನ ಕಂಪನಿ ಕೆಲವೇ ತಿಂಗಳಲ್ಲಿ ₹ 80 ಕೋಟಿ ಆದಾಯದ ಕಂಪನಿಯಾಗಿದೆ. ಆ ಮೂಲಕ ಜಯ್ ಶಾ ಭಾರತದ ಸ್ಟಾರ್ಟ್ ಅಪ್ ನ ಐಕಾನ್ ಆಗಿದ್ದಾರೆ. ಹೀಗೆ ಲಾಭ ಮಾಡುತ್ತಿದ್ದ ಕಂಪನಿಯನ್ನು ಆತ ಬೇಗೆ ಮುಚ್ಚಿದ್ದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆರಂಭದಲ್ಲಿ ಬಿಜೆಪಿ ಬೇಟಿ ಬಚಾವೋ ಎಂದು ಹೇಳಿಕೊಂಡು ಬರುತ್ತಿದ್ದು, ಈಗ ಅಮಿತ್ ಶಾ ಅವರ ಬೇಟಾ ಬಚಾವೋ ಬಗ್ಗೆ ಚಿಂತಿಸುತ್ತಿದೆ. ಆ ಮೂಲಕ ಅಮಿತ್ ಶಾರ ಪುತ್ರನ ಅಕ್ರಮಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ.

2014ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ನಾನು ದೇಶದ ಪ್ರಧಾನಿಯಾಗುವ ಬದಲು ಕಾವಲುಗಾರನಾಗುತ್ತೇನೆ ಎಂದಿದ್ದರು. ಒಬ್ಬ ಕಾವಲುಗಾರನ ಮುಂದೆಯೇ ಕಳ್ಳತನ ನಡೆದರೆ ಆತ ಕಾವಲುಗಾರನಾಗತ್ತಾನೋ ಅಥವಾ ಕಳ್ಳತನದಲ್ಲಿ ಭಾಗಿದಾರನಾಗುತ್ತಾನೋ?

ಸ್ಮಾರ್ಟ್ ಫೋನ್ ಗಳಲ್ಲಿ ಸೆಲ್ಫಿ ತೆಗೆದುಕೊಂಡರೆ ಖುಷಿಯಾಗುತ್ತದೆ ನಿಜ. ಆದರೆ ಬಹುತೇಕ ಸ್ಮಾರ್ಟ್ ಫೋನ್ ಗಳು ಚೀನಾ ಮೂಲದ ಕಂಪನಿಗಳದ್ದಾಗಿದ್ದು, ಇದರಿಂದ ಲಾಭ ಚೀನಾಕ್ಕೆ ಹೊರತು ನಮಗಲ್ಲ. ಆದ್ದರಿಂದ ದೇಶದ ಯುವಕರು ದೇಶೀಯ ಫೋನ್ ಗಳನ್ನೇ ಬಳಸಬೇಕು.’

Leave a Reply