ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಪಟಾಕಿ ನಿಷೇಧ, ಈ ಆದೇಶದಿಂದಲೇ ಎಲ್ಲವೂ ಸರಿ ಹೋಗುತ್ತದೆಯೇ?

ಡಿಜಿಟಲ್ ಕನ್ನಡ ಟೀಮ್:

ನವದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ಸಿನಿಮಾ ತಾರೆಯರಿಂದ ಹಿಡಿದು ಅನೇಕರು ಪಟಾಕಿ ಸಿಡಿಸದೇ ದೀಪಾವಳಿ ಹಬ್ಬ ಆಚರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಿದ್ದು, ಇದು ಅಭಿಯಾನವಾಗಿ ಮಾರ್ಪಡುತ್ತಿದೆ.

ದೀಪಾವಳಿಯ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಪಟಾಕಿಯಿಂದ ದೂರವಿದ್ದು, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂಬ ಕೂಗು ಹೆಚ್ಚುತ್ತಿದೆ. ಪರಿಸರ ಹಾಗೂ ಶಬ್ಧ ಮಾಲೀನ್ಯ ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಬಹುದು. ಆದರೆ… ಪರಿಸರದ ಬಗ್ಗೆ ಇಷ್ಟು ಕಾಳಜಿ ವಹಿಸುವ ನಾವು ಕೇವಲ ಪಟಾಕಿ ನಿಷೇಧ ಮಾಡಿದರೆ ಸಾಕೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ದೆಹಲಿಯನ್ನೇ ಉದಾಹರಣೆಗೆ ತೆಗೆದುಕೊಂಡು ನೋಡುವುದಾದರೆ, ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾಲೀನ್ಯ ಪ್ರಮಾಣದಲ್ಲಿ ಈ ಪಟಾಕಿಗಳ ಕೊಡುಗೆ ತೀರಾ ಕಡಿಮೆ ಇದ್ದು, ಇತರೆ ಅಂಶಗಳಿಂದ ಮಾಲೀನ್ಯ ಹೆಚ್ಚುತ್ತಿದೆ.

ಈ ವಿಷಯವಾಗಿ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಈ ವಿಚಾರವಾಗಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟಿನ ಈ ನಿರ್ಧಾರ ಸ್ವಾಗತಾರ್ಹವಾದರೂ, ದೆಹಲಿಯ ಮಾಲೀನ್ಯಕ್ಕೆ ಪ್ರಮುಖ ಕಾರಣವಾಗಿರುವ ಇತರೆ ಮಾಲೀನ್ಯ ಮೂಲಗಳ ಕಥೆ ಏನು? ಅವುಗಳ ವಿರುದ್ಧ ಏಕೆ ಕ್ರಮ ಇಲ್ಲ? ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತಿವೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ನಾವು ಗಂಭೀರವಾಗಿ ಗಮನಿಸಬೇಕಾಗಿರುವ ಪ್ರಮುಖ ಅಂಶಗಳು ಹೀಗಿವೆ…

  • ಈ ಬಾರಿ ದೀಪಾವಳಿ ಹಬ್ಬ ಸಮೀಪಿಸಿದ್ದು, ಹಬ್ಬಕ್ಕೆ ಎರಡು ವಾರಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.  ವರದಿಗಳ ಪ್ರಕಾರ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ಆದೇಶ ಹೊರಡಿಸಿರುವುದರಿಂದ, ಪಟಾಕಿ ವರ್ತಕರ ವರ್ಗಕ್ಕೆ ಸುಮಾರು ₹ 1 ಸಾವಿರ ಕೋಟಿ ನಷ್ಟವಾಗಲಿದೆ. ಬಹುತೇಕ ಪಟಾಕಿ ತಯಾರಕರು ಈಗಾಗಲೇ ದೊಡ್ಡ ದೊಡ್ಡ ಪ್ರಮಾಣಗಳಲ್ಲಿ ಪಟಾಕಿಯನ್ನು ತಯಾರಿಸಿ ಅವುಗಳನ್ನು ವರ್ತಕರಿಗೆ ಕಳುಹಿಸಿಕೊಟ್ಟಿದ್ದಾರೆ. ಈಗಾಗಲೇ ಪಟಾಕಿ ಖರೀದಿಸಿ ಮಾರಲು ಸಜ್ಜಾಗಿದ್ದ ವ್ಯಾಪಾರಿಗಳಿಗೆ ಈ ಆದೇಶ ದೊಡ್ಡ ಶಾಕ್ ಕೊಟ್ಟಿದೆ. ನ್ಯಾಯಾಲಯ ಈ ತೀರ್ಪನ್ನು ಕೆಲವು ತಿಂಗಳ ಹಿಂದೆಯೇ ನೀಡಿದ್ದರೆ, ತಯಾರಕರು ಹಾಗೂ ವರ್ತಕರಿಗೆ ಆಗುತ್ತಿದ್ದ ನಷ್ಟ ತಡೆಯಬಹುದಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
  • ಪರಿಸರ ಮಾಲೀನ್ಯ ನಿಯಂತ್ರಣ ಮಾಡುವುದೇ ಈ ಆದೇಶದ ಪ್ರಮುಖ ಉದ್ದೇಶ ಆಗಿದ್ದಲ್ಲಿ, ಮಾಲೀನ್ಯಕ್ಕೆ ದೊಡ್ಡ ಮಟ್ಟದಲ್ಲಿ ಕಾರಣವಾಗಿರುವ ಅಂಶಗಳನ್ನು ಯಾಕೆ ತಡೆಯಲಾಗುತ್ತಿಲ್ಲ? ಕಾನ್ಪುರದ ಐಐಟಿಯ ಸಂಶೋಧನಾ ವರದಿ ಪ್ರಕಾರ ದೆಹಲಿಯಲ್ಲಿನ ಮಾಲೀನ್ಯಕ್ಕೆ ಈ ಪಟಾಕಿಗಳ ಕೊಡುಗೆ ತೀರಾ ಕಡಿಮೆ. ಇಲ್ಲಿನ ಪರಿಸರ ಮಾಲೀನ್ಯಕ್ಕೆ ಪ್ರಮುಖ ಕಾರಣವಾಗಿರುವುದು ವಾಹನ ದಟ್ಟಣೆ, ರಸ್ತೆ ಧೂಳು ಹಾಗೂ ಅತಿಯಾದ ಇಂಧನ ಬಳಕೆ, ಇಟ್ಟಿಗೆ ತಯಾರಿ ಹಾಗೂ ಇತರೆ ಕೈಗಾರಿಕೆಗಳು. ಪರಿಸರ ಕಾಳಜಿಯಿಂದ ಪಟಾಕಿ ಮೇಲೆ ನಿಷೇಧದಂತೆ ಈ ಅಂಶಗಳ ಮೇಲೆ ಏಕೆ ನಿಷೇಧವಿಲ್ಲ?
  • ದೆಹಲಿಯಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಜೆನರೇಟರ್ ಗಳನ್ನು ಬಳಸಲಾಗುತ್ತಿದೆ. ದೊಡ್ಡ ಮಾಲ್ ಗಳು, ಹೊಟೇಲ್ ಗಳು, ಅಪಾರ್ಟ್ ಮೆಂಟ್, ಕಾಂಪ್ಲೆಕ್ಸ್ ಗಳಲ್ಲಿ ಈ ಜೆನರೇಟರ್ ಗಳ ಬಳಕೆ ಹೆಚ್ಚಿದ್ದು, ಇವುಗಳಿಂದಲೂ ಮಾಲೀನ್ಯ ಪ್ರಮಾಣ ಹೆಚ್ಚುತ್ತಿದೆ. ಇವುಗಳಿಂದಲೇ ಗಾಳಿಯ ಸ್ವಚ್ಛತೆಯ ಮಟ್ಟ ಪಿಎಂ 10ರ ಮಟ್ಟಕ್ಕೆ ಕುಸಿಯುವಂತಾಗಿದೆ. ಹೀಗಾಗಿ ಮಾಲೀನ್ಯಕ್ಕೆ ದೊಡ್ಡ ಮೂಲವಾಗಿರುವುದನ್ನು ತಡೆಯುವ ಬದಲು ಪಟಾಕಿಯನ್ನು ಮಾತ್ರ ತಡೆಯುತ್ತಿರುವುದು ಏಕೆ.
  • ಇನ್ನು ದೆಹಲಿಯ ಮಾಲೀನ್ಯಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿರುವುದು ವಾಹನಗಳ ಸಂಚಾರ. ಹೀಗಾಗಿ ಪಟಾಕಿ ನಿಷೇಧಿಸುವಂತೆ, ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ನಿಷೇದಿಸಿ ಸಾರ್ವಜನಿಕ ಬಸ್ ಹಾಗೂ ಮೆಟ್ರೋಗಳಲ್ಲಿ ಸಂಚರಿಸುವಂತೆ ಯಾಕೆ ವ್ಯವಸ್ಥೆ ಕಲ್ಪಿಸಬಾರದು ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತಿವೆ. 2016ರ ದೆಹಲಿಯ ಅಂಕಿ ಅಂಶಗಳ ಪುಸ್ತಕದ ಮಾಹಿತಿ ಪ್ರಕಾರ 2015-15ರಲ್ಲಿ ಹೊಸದಾಗಿ ನೋಂದಣಿಯಾಗಿದ್ದ ವಾಹನಗಳ ಸಂಖ್ಯೆ 5.34 ಲಕ್ಷವಾಗಿದ್ದರೆ, 2015-16ನೇ ಸಾಲಿನಲ್ಲಿ 8.77 ಲಕ್ಷ ಹೊಸ ವಾಹನಗಳು ನೋಂದಣಿಗೊಂಡಿದ್ದವು. ಒಂದೇ ವರ್ಷದಲ್ಲಿ ಹೊಸ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ.64 ರಷ್ಟು ಏರಿಕೆ ಕಂಡಿತ್ತು.

ಸುಪ್ರೀಂ ಕೋರ್ಟಿನ ಈ ಆದೇಶವನ್ನು ಎಲ್ಲೆಡೆ ಸ್ವಾಗತಿಸುತ್ತಿರವ ಸಂದರ್ಭದಲ್ಲಿ ಮಾಲೀನ್ಯಕ್ಕೆ ಕಾರಣವಾಗಿರುವ ಇತರೆ ಪ್ರಮುಖ ಅಂಶಗಳ ಬಗ್ಗೆಯೂ ಗಮನಹರಿಸಬೇಕು. ಕೇವಲ ಸುಪ್ರೀಂ ಕೋರ್ಟಿನ ಆದೇಶದಿಂದಲೇ ಎಲ್ಲವೂ ಸರಿ ಹೋಗಲಿದೆ ಎಂದು ತೃಪ್ತಿಪಟ್ಟರೆ, ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಸರ್ಕಾರ ಆದಷ್ಟು ಬೇಗ ಮಾಲೀನ್ಯಕ್ಕೆ ಪ್ರಮುಖ ಕಾರಣವಾಗಿರುವ ಅಂಶಗಳ ಮೇಲೆ ನಿರ್ಬಂಧ ಹೇರಬೇಕು. ಆಗ ಮಾತ್ರ ದೆಹಲಿಯ ಮಾಲೀನ್ಯ ನಿಯಂತ್ರಣಕ್ಕೆ ಬರುತ್ತದೆ.

Leave a Reply