ಕೊಹ್ಲಿ ತಂಡದಲ್ಲಿ ಯುವಿ-ರೈನಾಗೆ ಸ್ಥಾನವಿಲ್ಲ ಏಕೆ ಗೊತ್ತೇ? ಕೊನೆಗೂ ಬಯಲಾಯ್ತು ಇದರ ಹಿಂದಿನ ಕಾರಣ

ಡಿಜಿಟಲ್ ಕನ್ನಡ ಟೀಮ್:

ಒಂದು ಕಾಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದ್ದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಇಂದು ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಶ್ರೀಲಂಕಾ ಪ್ರವಾಸ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಈ ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅಭಿಮಾನಿಗಳು ಆಯ್ಕೆ ಸಮಿತಿಯನ್ನು ಪ್ರಶ್ನಿಸುವುದರ ಜತೆಗೆ ಟೀಕೆ ಸಹ ಮಾಡಿದ್ದರು. ಈಗ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹೌದು, ಈ ಇಬ್ಬರು ಎಡಗೈ ಬ್ಯಾಟ್ಸ್ ಮನ್ ಗಳು ತಂಡದಿಂದ ಹೊರಗುಳಿಯಲು ಮುಖ್ಯ ಕಾರಣ, ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗಲಿರುವ ಆಟಗಾರರಿಗೆ ನೀಡಿರುವ ಹೊಸ ಮಾದರಿಯ ಫಿಟ್ನೆಸ್ ಪರೀಕ್ಷೆ. ನಿಜ, ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಲಿರುವ ಆಟಗಾರರಿಗೆ ಹೊಸ ಮಾದರಿಯ ಫಿಟ್ನೆಸ್ ಪರೀಕ್ಷೆಯನ್ನು ನೀಡಿದ್ದಾರೆ. ಈ ಫಿಟ್ನೇಸ್ ಪರೀಕ್ಷೆಯನ್ನು ಯೊ-ಯೊ ಫಿಟ್ನೆಸ್ ಪರೀಕ್ಷೆ ಎಂದು ಕರೆಯಲಾಗುತ್ತಿದ್ದು, ಈ ಪರೀಕ್ಷೆಯಲ್ಲಿ ಯುವಿ ಹಾಗೂ ರೈನಾ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ಈ ಇಬ್ಬರು ಆಟಗಾರರು ತಂಡದಿಂದ ಹೊರಗುಳಿಯಬೇಕಾಗಿದೆ ಎಂದು ಹೇಳಲಾಗಿದೆ.

ಸ್ವತಃ ವಿರಾಟ್ ಕೊಹ್ಲಿಯೇ ಅತ್ಯುತ್ತಮ ಫಿಟ್ನೆಸ್ ಸಾಮರ್ಥ್ಯ ಹೊಂದಿದ್ದು, ತನ್ನ ತಂಡದ ಇತರೆ ಆಟಗಾರರು ಸಹ ಮೈದಾನದಲ್ಲಿ ಅತ್ಯುತ್ತಮ ಫಿಟ್ನೆಸ್ ಹೊಂದಿರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಈ ಕುರಿತು ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಹೇಳಿರುವುದಿಷ್ಟು…

‘ತಂಡದ ನಾಯಕ, ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥರು ಹಾಗೂ ತಂಡದ ದೈಹಿಕ ತಜ್ಞರು ಸೇರಿ ತಂಡದ ಆಟಗಾರರ ದೈಹಿಕ ಸಾಮರ್ಥ್ಯದ ಮಟ್ಟವನ್ನು ನಿಗದಿಪಡಿಸಿರುತ್ತಾರೆ. ತಂಡದ ವ್ಯವಸ್ಥಾಪಕ ಮಂಡಳಿ ನಿಗದಿ ಪಡಿಸುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಯಾವುದೇ ರಾಜಿ ಇಲ್ಲ. ಅದುವೇ ಅಂತಿಮವಾಗಿದ್ದು, ಅದರ ಆಧಾರದ ಮೇಲೆ ತಂಡದ ಆಟಗಾರರ ಆಯ್ಕೆ ನಡೆಯಲಿದೆ. ಈಗ ಭಾರತ ತಂಡದ ಆಟಗಾರರಿಗೆ ಯೊ-ಯೊ ಫಿಟ್ನೆಸ್ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

ಈ ಪರೀಕ್ಷೆಯಲ್ಲಿ 16.1ರ ಕನಿಷ್ಠ ಮಟ್ಟವನ್ನು ಆಟಗಾರ ತಲುಪಬೇಕಿದ್ದು, ಇದು ಅಂತಾರಾಷ್ಟ್ರೀಯ ಪ್ರಮುಖ ಅಥ್ಲೀಟ್ ಗಳಿಗಿರಬೇಕಾದ ಫಿಟ್ನೆಸ್ ಮಟ್ಟವಾಗಿದೆ. ಈ ಬಗ್ಗೆ ಆಟಗಾರರಿಗೆ ಈ ಮುನ್ನವೇ ಮಾಹಿತಿ ನೀಡಲಾಗಿರುತ್ತದೆ. ಕೆಲವೊಮ್ಮೆ ಕೆಲವು ಆಟಗಾರರಿಗೆ ಈ ಮಟ್ಟ ತಲುಪಲು ಹೆಚ್ಚಿನ ಕಾಲಾವಕಾಶ ನೀಡಲಾಗುತ್ತದೆ. ಇನ್ನು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದ ಭಾರತ ತಂಡದ ಎಲ್ಲಾ ಆಟಗಾರರು ಈ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದರು.’

ಆದರೆ ಈ ಬಗ್ಗೆ ಕೆಲವರಿಂದ ವಿಭಿನ್ನ ರಾಗ ಕೇಳಿಬರುತ್ತಿದ್ದು, ‘ಕ್ರಿಕೆಟ್ ಕ್ರೀಡೆ ಒಂದು ಕೌಶಲ್ಯದ ಕ್ರೀಡೆಯಾಗಿದ್ದು, ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ಬೇಕು. ಯೊಯೊ ಪರೀಕ್ಷೆಯೊಂದೇ ತಂಡದ ಆಟಗಾರರ ದೈಹಿಕ ಸಾಮರ್ಥ್ಯಯ ನಿರ್ಧರಿಸುವುದು ಸರಿಯಲ್ಲ’ ಎಂದು ಟೀಂ ಇಂಡಿಯಾದ ಮಾಜಿ ಫಿಟ್ನೆಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೇ ಈ ಯೊ-ಯೊ ಫಿಟ್ನೆಸ್ ಪರೀಕ್ಷೆ ಅಂದ್ರೆ ಏನು?

ಇದು ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲೂ ಅಥ್ಲೀಟ್ ಗಳ ಫಿಟ್ನೆಸ್ ಪರೀಕ್ಷಿಸುವ ಒಂದು ವಿಧಾನ. ಈಗ ಕ್ರಿಕೆಟ್ ನಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಕ್ರಿಕೆಟರ್ ಗಳು ಬೀಪ್ ಟೆಸ್ಟ್ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಸಾಬೀತುಗೊಳಿಸಬೇಕಿತ್ತು. ಇದರಲ್ಲಿ ಒಬ್ಬ ಆಟಗಾರ ಸತತವಾಗಿ ನಿರ್ದಿಷ್ಟ ದೂರವನ್ನು ಇಂತಿಷ್ಟು ಸುತ್ತು ಓಡುವ ಮೂಲಕ ಆ ಆಟಗಾರನ ಸಾಮರ್ಥ್ಯ ಪರಿಶೀಲಿಸಲಾಗುತ್ತಿತ್ತು. ಆದರೆ ಯೊ-ಯೊ ಟೆಸ್ಟ್ ಸ್ವಲ್ಪ ಉನ್ನತ ಮಟ್ಟದ ಪರೀಕ್ಷೆಯಾಗಿದ್ದು, ಇಲ್ಲಿ ಆಟಗಾರ ನಿರ್ದಿಷ್ಟ ದೂರವನ್ನು ವಿವಿಧ ಸುತ್ತುಗಳಲ್ಲಿ ಓಡಬೇಕು. ಪ್ರತಿ ಸುತ್ತಿನ ನಡುವೆ ಇಂತಿಷ್ಟು ವಿರಾಮವೂ ಇರುತ್ತದೆ. ಆದರೆ ಪ್ರತಿ ಸುತ್ತಿನ ನಂತರ ಆಟಗಾರನ ಓಟದ ವೇಗ ಹೆಚ್ಚುತ್ತಲೇ ಇರುತ್ತದೆ. ಅಲ್ಲದೆ ಆ ಟಾಗಾರ ಆ ನಿರ್ದಿಷ್ಟು ದೂರವನ್ನು ಓಡಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಒಂದು ವೇಳೆ ಆಟಗಾರ ಒಂದು ಸುತ್ತಿನಲ್ಲಿ ನಿಗದಿತ ವೇಗದಲ್ಲಿ ಹಾಗೂ ನಿಗದಿತ ಸಮಯದಲ್ಲಿ ಆ ದೂರವನ್ನು ಕ್ರಮಿಸದಿದ್ದರೆ, ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗುವುದು. ಮತ್ತೆ ಆದ ಎರಡನೇ ಬಾರಿ ಇದನ್ನು ಪೂರೈಸಲು ವಿಫಲವಾದರೆ, ಆ ಪರೀಕ್ಷೆಯನ್ನು ಅಲ್ಲಿಗೆ ನಿಲ್ಲಿಸಲಾಗುತ್ತದೆ. ಆ ನಂತರ ಆತ ಓಡಿದ ಸುತ್ತಿನ ಸಮಯ ಹಾಗೂ ದೂರದ ಸರಾಸರಿ ಪ್ರಮಾಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಈ ಪರೀಕ್ಷೆಯನ್ನು ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ…

Leave a Reply