ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು?

ಡಿಜಿಟಲ್ ಕನ್ನಡ ಟೀಮ್:

ಬಡವರು ಮತ್ತು ದುಡಿಯುವ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಸ ವರ್ಷದ ದಿನದಿಂದ ಇಡೀ ರಾಜ್ಯಾದ್ಯಂತ ಆರಂಭಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಹೇಳಿದಿಷ್ಟು… ‘ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆ, ಬಸ್ ನಿಲ್ದಾಣಗಳ ಸಮೀಪ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲು ₹ 185 ಕೋಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 171 ಪ್ರದೇಶಗಳ 246 ಕೇಂದ್ರಗಳಲ್ಲಿ ಜನವರಿ 1, 2018ರಿಂದಲೇ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಕ್ಯಾಂಟೀನ್ ಮೂಲಕ ಪ್ರತಿನಿತ್ಯ ಒಂದು ಲಕ್ಷ ಮಂದಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ, ಇದಕ್ಕಾಗಿ ಸರ್ಕಾರ ಮಾಸಿಕ ₹ 9 ಕೋಟಿ ವೆಚ್ಚ ಮಾಡಲಿದೆ. ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲು ನವೆಂಬರ್ 17 ರೊಳಗೆ ಸ್ಥಳ ಗುರುತಿಸಬೇಕು. ಡಿಸೆಂಬರ್ 17 ರೊಳಗೆ ಕಟ್ಟಡ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.’

ಉಳಿದಂತೆ ಸಚಿವ ಸಂಪುಟಸಭೆಯಲ್ಲಿ ತೆಗೆದುಕೊಂಡ ಇತರೆ ಪ್ರಮುಖ ನಿರ್ಧಾರಗಳ ಬಗ್ಗೆ ಸಚಿವರು ಹೇಳಿದಿಷ್ಟು ಹೀಗಿವೆ…

  • ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನವೆಂಬರ್ 13ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ವಿಧಾನಸೌಧದ ವಜ್ರ ಮಹೋತ್ಸವ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ವಿಶೇಷ ಅಧಿವೇಶನ ನಡೆಸಲಾಗುವುದು. ಈ ಸಂಬಂಧ ವಿಧಾನಮಂಡಲದ ಕಾರ್ಯಾಲಯದಿಂದ ಮಾಹಿತಿ ಬಂದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಕೈಗೊಳ್ಳಲಾಗುವುದು.
  • ಡಿಸೆಂಬರ್ ತಿಂಗಳಿನಿಂದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್, ಸ್ಟೌ, ಎರಡು ರೀಫಿಲ್ ಹಾಗೂ ಎರಡು ಬರ್ನರ್ ಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ 1137 ಕೋಟಿ ರೂ ವೆಚ್ಚವಾಗಲಿದೆ. ರಾಜ್ಯದಲ್ಲಿ ಅನಿಲ ಸಂಪರ್ಕ ಪಡೆಯದ ಕುಟುಂಬಗಳ ಸಂಖ್ಯೆ 28 ಲಕ್ಷವಿದೆ ಎಂದು ಅಂದಾಜಿಸಲಾಗಿದ್ದು ಈ ಪೈಕಿ ಎಂಟು ಲಕ್ಷ ಕುಟುಂಬಗಳು ಕೇಂದ್ರದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲಿವೆ. ಅವುಗಳನ್ನು ಹೊರತುಪಡಿಸಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಮುಂಬರುವ ಮಾರ್ಚ್ ಒಳಗಾಗಿ ಹತ್ತು ಲಕ್ಷ ಕುಟುಂಬಗಳಿಗೆ ಯೋಜನೆಯ ಅನುಕೂಲ ಮಾಡಿಕೊಡಲಾಗುವುದು ಎಂದರು.
  • ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಲೀಟರ್ ಸೀಮೆಎಣ್ಣೆ ಪಡೆಯುತ್ತಿರುವವರು ಆ ಸೌಲಭ್ಯವನ್ನು ಹಿಂತಿರುಗಿಸಿದರೆ ಅವರಿಗೆ ಪುನರ್ ಬೆಳಕು ಯೋಜನೆಯಡಿ ಎಲ್‍ಇಡಿ ಬಲ್ಬ್ ನೀಡಲು ತೀರ್ಮಾನಿಸಲಾಗಿದೆ.
  • ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು 10 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಪ್ಲೊಮಾ ಇನ್ ನ್ಯಾಷನಲ್ ಬೋರ್ಡ್ ಕೋರ್ಸ್‍ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಚಿತ್ರದುರ್ಗ, ಕೋಲಾರ, ತುಮಕೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಕಲಬುರಗಿ ಹಾಗೂ ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಮತ್ತು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ಬಿ.ಎಸ್. ವೈದ್ಯರಿಗೆ ಡಿ.ಎನ್.ಬಿ (ಡಿಪ್ಲೋಮಾ ಇನ್ ನ್ಯಾಷನಲ್ ಬೋರ್ಡ್) ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು.
  • ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 108 ಅಂಬುಲೆನ್ಸ್ ಗಳು ಸುಸ್ಥಿತಿಯಲ್ಲಿಲ್ಲದೇ ಇರುವುದರಿಂದ 95 ವೆಂಟಿಲೇಟರ್ ಸೌಲಭ್ಯ ಇರುವ ಅಂಬುಲೆನ್ಸ್‍ಗಳು ಹಾಗೂ 276 ಜೀವರಕ್ಷಕ ಆಂಬುಲೆನ್ಸ್ ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು ₹ 61 ಕೋಟಿ ವೆಚ್ಚ ಮಾಡಲಾಗುವುದು, ಆ ಮೂಲಕ 108 ಸೇವೆಯನ್ನು ಉತ್ತಮಪಡಿಸಲಾಗುವುದು ಎಂದರು.

Leave a Reply