ಜಾರ್ಜ್ ಅವರೇ ಮಳೆಗೆ ಕೊಡೆ ಹಿಡಿಬೇಡಿ… ರಸ್ತೆ ಗುಂಡಿ ಮುಚ್ಚಿ ಪ್ರಾಣ ಉಳಿಸಿ ಸಾಕು

ಡಿಜಿಟಲ್ ಕನ್ನಡ ವಿಶೇಷ:

‘ಬೆಂಗಳೂರಿನಲ್ಲಿ ನಡೆಯುವ ಎಲ್ಲ ಅಪಘಾತಗಳಿಗೂ ರಸ್ತೆಯಲ್ಲಿರುವ ಗುಂಡಿಗಳೇ ಕಾರಣ ಅಲ್ಲ. ಮಾಧ್ಯಮಗಳು ಅಪಪ್ರಚಾರ ನಿಲ್ಲಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ…’ ಇದು ನಮ್ಮ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸಾಹೇಬರು ಮಂಡಿಸುತ್ತಿರುವ ಸಮರ್ಥನೆ ಸಮೇತದ ವಾದ.

ನಿಜ, ಬೆಂಗಳೂರಲ್ಲಿ ನಡೆಯೋ ಎಲ್ಲ ಅಪಘಾತಗಳು ಗುಂಡಿಗಳಿಂದಲೇ ಆಗುತ್ತಿಲ್ಲ. ಆದರೆ ಈ ರಸ್ತೆ ಗುಂಡಿಗಳಿಂದ ಯಾರು ಸತ್ತಿಲ್ಲ ಎಂದು ಹೇಳಲು ಜಾರ್ಜ್ ಅವರಿಗೆ ಸಾಧ್ಯವೇ? ಕಳೆದ ಒಂದು ವಾರದಲ್ಲಿ ಮೂರು ಮಂದಿ ರಸ್ತೆ ಗುಂಡಿಗೆ ಬಿದ್ದು ಸತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗುಂಡಿಗೆ ಬಿದ್ದು ಜನರು ಸತ್ತ ಜಾಗವನ್ನು ನೋಡಿ, ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಾಗ ಗುಂಡಿಗಳಿಂದ ಯಾರು ಸಾಯುತ್ತಿಲ್ಲ ಎಂದು ಅದ್ಯಾವ ಧೈರ್ಯದ ಮೇಲೆ ಜಾರ್ಜ್ ಅವರು ಹೇಳುತ್ತಿದ್ದಾರೊ ಗೊತ್ತಿಲ್ಲ.

ಜಾರ್ಜ್ ಹೇಳ್ತಾರೆ, ‘ಕಳೆದ 10 ವರ್ಷದಲ್ಲೇ ದಾಖಲೆ ಪ್ರಮಾಣದ ಮಳೆ ಈ ಬಾರಿ ಸುರಿದಿದೆ. ಮಳೆ ತಡೆಯುವುದು ನಮ್ಮ ಕೈಯಲ್ಲಿಲ್ಲ. ಮಳೆಗೆ ಕೊಡೆ ಹಿಡಿಯಕ್ಕೂ ಆಗಲ್ಲ. ಮುಖ್ಯಮಂತ್ರಿಗಳು ರಸ್ತೆ ಗುಂಡಿಗಳನ್ನು ಮುಚ್ಚಲು 15 ದಿನ ಕಾಲಾವಕಾಶ ನೀಡಿದ್ದಾರೆ. ಮಳೆಗಾಲದಲ್ಲಿ ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೀಗಾಗಿ ಕೋಲ್ಡ್ ಮಿಕ್ಸ್ ಗಳಿಂದಲೇ ಗುಂಡಿ ಮುಚ್ಚುತ್ತಿದ್ದೇವೆ. ಮುಂದಿನ 3-4 ತಿಂಗಳಲ್ಲಿ ಉತ್ತಮ ರಸ್ತೆಯಾಗುತ್ತೆ’ ಎಂದು.

ಜಾರ್ಜ್ ಅವರು ಏನನ್ನಾದರು ಹೇಳುವ ಮೊದಲು ತಾವೇನು ಹೇಳುತ್ತಿದ್ದೀವಿ ಎಂಬುದರ ಬಗ್ಗೆ ಗಮನಹರಿಸಬೇಕು. ಮಳೆಯನ್ನು ತಡೆಯಿರಿ… ಮಳೆಗೆ ಕೊಡೆ ಹಿಡಿಯಿರಿ… ಎಂದು ಯಾವ ಮಾಧ್ಯಮಗಳು ನಿಮ್ಮನ್ನು ಕೇಳುತ್ತಿಲ್ಲ. ಮಳೆಗಾಲ ಆರಂಭವಾಗೋದಕ್ಕೆ ಮೊದಲೇ ರಸ್ತೆಗಳನ್ನು ಏಕೆ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲಿಲ್ಲ. ಮಳೆಗಾಲ ಆರಂಭವಾಗುತ್ತದೆ, ಮಳೆ ಸುರಿಯುತ್ತದೆ ಎಂಬ ಜ್ಞಾನ ನಿಮಗೆ ಇರಲಿಲ್ಲವೇ. ಮಳೆಗಾಲ ಆರಂಭವಾಗುವ ಮುನ್ನ ಅದೆಷ್ಟು ರಸ್ತೆಗಳನ್ನು ನೀವು ಸುಸ್ಥಿತಿಯಲ್ಲಿಟ್ಟಿದ್ದಿರಿ? ಈ ಕುರಿತ ಅಂಕಿ ಅಂಶಗಳನ್ನು ಕೊಡಿ.

ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಕಥೆಗಳೆಲ್ಲಾ ಬೇಡ. ನೀವು ಬೇಸಿಗೆ ಸಮಯದಲ್ಲೇ ಹಾಟ್ ಮಿಕ್ಸ್ ಮೂಲಕ ರಸ್ತೆ ಮುಚ್ಚಿದ್ದರೆ, ಇವತ್ತು ಕೋಲ್ಡ್ ಮಿಕ್ಸ್ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ನೀವು ಅವತ್ತು ಸರಿಯಾಗಿ ಕೆಲಸ ಮಾಡದಿದ್ದಕ್ಕೆ ಇವತ್ತು ಬೆಂಗಳೂರಿನ ಜನ ಗುಂಡಿಗೆ ಬಿದ್ದು ಸಾಯುತ್ತಿದ್ದಾರೆ. ಇದು ಸರ್ಕಾರ ಮಾಡಬೇಕಿರುವ ಕೆಲಸವೇ ಹೊರತು, ನಾಗರೀಕರು ಮಾಡಬೇಕಿರುವ ಕೆಲಸ ಅಲ್ಲ.

ಮಾಧ್ಯಮಗಳು ನಿಮ್ಮ ಜವಾಬ್ದಾರಿಯನ್ನು ನೆನಪಿಸುತ್ತಿದೆಯೇ ಹೊರತು, ಬೆಂಗಳೂರಿನ ಮರ್ಯಾದೆ ಹರಾಜಾಕುತ್ತಿಲ್ಲ. ಬೆಂಗಳೂರಿನ ಮಾನ ಕಳೆಯುತ್ತಿರೋರು ನೀವು. ಹದಿನೈದು ದಿನಗಳ ಹಿಂದೆ ‘ಪ್ರವಾಹ ಪರಿಸ್ಥಿತಿಯನ್ನು ಎದುರಿಸೋಕೆ ಬೆಂಗಳೂರು ನ್ಯೂಯಾರ್ಕ್ ಗಿಂತಲೂ ಸುಸಜ್ಜಿತವಾಗಿದೆ’ ಎಂಬ ಹೇಳಿಕೆಯನ್ನು ನೀವೇ ಕೊಟ್ಟಿದ್ರಿ. ನ್ಯೂರ್ಯಾಕ್ ಗಿಂತ ಸುಸಜ್ಜಿತ ಬೆಂಗಳೂರು ಎಂದರೆ ಇದೇನಾ ಸ್ವಾಮಿ? ನ್ಯೂಯಾರ್ಕಿನಲ್ಲೂ ಇದೇ ರೀತಿ ಜನರು ಗುಂಡಿಗೆ ಬಿದ್ದು ಸಾಯುತ್ತಿದ್ದಾರಾ ಎಂಬುದನ್ನು ನೋಡಿಕೊಂಡು ಬಂದು ಆಮೇಲೆ ಮಾಧ್ಯಮದವರ ಮೇಲೆ ಗೂಬೆ ಕೂರಿಸಿ.

Leave a Reply