ಹಿಮಾಚಲ ಪ್ರದೇಶ ಚುನಾವಣೆಗೆ ನ.9ರಂದು ಮುಹೂರ್ತ ಫಿಕ್ಸ್, ಈ ವರ್ಷವೇ ಗುಜರಾತ್ ಚುನಾವಣೆ ಎಂದ ಚುನಾವಣಾ ಆಯೋಗ

ಡಿಜಿಟಲ್ ಕನ್ನಡ ಟೀಮ್:

ದಿನೇ ದಿನೇ ಕ್ರಮೇಣವಾಗಿ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ಇಂದು ಚುನಾವಣೆ ಕುರಿತು ಮಾಹಿತಿ ನೀಡಿದ್ದು, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನು ನವೆಂಬರ್ 9ರಂದು ನಡೆಸುವುದಾಗಿ ತಿಳಿಸಿದೆ. ಇನ್ನು ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸದಿದ್ದರೂ ಡಿಸೆಂಬರ್ 18ರ ಒಳಗಾಗಿ ಈ ಚುನಾವಣೆ ನಡೆಯಲಿದೆ ಎಂದು ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆಗೆ 27 ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ನಾಳೆಯಿಂದಲೇ ಚುನಾವಣ ಪ್ರಚಾರದ ರಂಗು ಗರಿಗೆದರಲಿದೆ. ಇನ್ನು ಗುಜರಾತ್ ಚುನಾವಣೆಯು ಸಹ ಮುಂದಿನ ಎರಡು ತಿಂಗಳ ಒಳಗಾಗಿ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಸಹ ಪ್ರಚಾರ ಕಾರ್ಯ ಹೆಚ್ಚಾಗುವ ನಿರೀಕ್ಷೆ ಇದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಗುಜರಾತಿನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಿಮಾಚಲದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಮಣಿಸಿ ಈ ರಾಜ್ಯದಲ್ಲೂ ಕಮಲದ ಕಂಪು ಪಸರಿಸುವಂತೆ ಮಾಡಲು ಬಿಜೆಪಿ ಎದುರು ನೋಡುತ್ತಿದೆ. ಇತ್ತ ಗುಜರಾತಿನಲ್ಲಿ ಸತತ 22 ವರ್ಷಗಳಿಂದ ಕಮಲ ಅರಳುತ್ತಲೇ ಬಂದಿದ್ದು, ಈಗ ಕಾಂಗ್ರೆಸ್ ತನ್ನ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ.

ಚುನಾವಣೆಯ ದಿನಾಂಕ ಪ್ರಕಟವಾಗುವುದನ್ನು ಕಾಯದೇ ಈಗಾಗಲೇ ಎರಡೂ ಪಕ್ಷಗಳು ಈ ರಾಜ್ಯಗಳಲ್ಲಿ ತಮ್ಮ ಸಮಾವೇಶ, ಯಾತ್ರೆಗಳ ಮೂಲಕ ಚುನಾವಣಾ ಪ್ರಚಾರ ಆರಂಭಿಸಿವೆ.

ಒಂದೆಡೆ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಗೆ ದೇಶದ ಆರ್ಥಿಕತೆ ಕುಸಿತ, ಜಿಎಸ್ಟಿಯ ಒತ್ತಡ ಇದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆಯ ಗಾಳಿ ಬೀಸುವ ಸಮಯ ಸಮೀಪಿಸುತ್ತಿದೆ. ಹೀಗೆ ಈ ಎರಡೂ ರಾಷ್ಟ್ರೀಯ ಪಕ್ಷಗಳು ವಿಭಿನ್ನ ಪರಿಸ್ಥಿತಿಯಲ್ಲಿದ್ದು, ಈ ಸಂದರ್ಭದಲ್ಲಿ ಚುನಾವಣೆಯನ್ನು ಹೇಗೆ ಎದುರಿಸಲಿವೆ ಎಂಬ ಕುತೂಹಲ ಮೂಡಿದೆ.

Leave a Reply