ಶಹಬ್ಬಾಸ್ ಸಿದ್ರಾಮಯ್ಯನವರೇ, ಕರ್ನಾಟಕ ಸರಕಾರದ ಹೆಣ ಹೊರ್ತೀನಿ ಅಂದವನ ಕ್ಷೇತ್ರಕ್ಕೆ 10 ಕೋಟಿ ಅನುದಾನ!

ಡಿಜಿಟಲ್ ಕನ್ನಡ ವಿಶೇಷ:

‘ಬೆಳಗಾವಿಯ ಮರಾಠಿ ಬಂಧುಗಳೇ, ಎಂಇಎಸ್ ನ  ಇಬ್ಬರು ಶಾಸಕರನ್ನು ಮಾತ್ರ ಆರಿಸಿದ್ದೀರಿ. ಇನ್ನಿಬ್ಬರು ಶಾಸಕರನ್ನು ಆರಿಸಿದಿದ್ದರೆ ಕರ್ನಾಟಕ ಸರಕಾರದ ಹೆಣ ಹೊರುತ್ತಿದ್ದೆವು.’!

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಮರಾಠಿ ಏಕೀಕರಣ ಸಮಿತಿಯಿಂದ (ಎಂಇಎಸ್) ಗೆದ್ದು ಬಂದ ಸಂಭಾಜಿ ಪಾಟೀಲ್ ಮರಾಠಿ ಭಾಷಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಹಂಕಾರದಿಂದ ಉದುರಿಸಿದ್ದ ಅಣಿಮುತ್ತಿದು. ಆಗ ಅದೇ ಜಿಲ್ಲೆ ಖಾನಾಪುರ ಕ್ಷೇತ್ರದಿಂದ ಅರವಿಂದ ಪಾಟೀಲ್ ಕೂಡ ಎಂಇಎಸ್ ನಿಂದ ಗೆದ್ದಿದ್ದರು. ಇಂಥ ನಾಡದ್ರೋಹಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿ ಕನ್ನಡಿಗರನ್ನು ಪಾವನ ಮಾಡಿದ್ದಾರೆ.

ಸಿದ್ದರಾಮಯ್ಯನವರ ಸರಕಾರ ಬೆಳಗಾವಿ ಜಿಲ್ಲೆಯ ಪ್ರಗತಿಗೆ ಅಂತ 15 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಅದೂ ಚುನಾವಣೆ ಹೊಸ್ತಿಲಲ್ಲಿ. ಹಾಗೆ ಬಿಡುಗಡೆ ಮಾಡಿದ ಹಣದ ಪೈಕಿ 10 ಕೋಟಿ ರುಪಾಯಿ ಸಂಭಾಜಿ ಪಾಟೀಲ್ ಕ್ಷೇತ್ರಕ್ಕಾದರೆ ಅನೇಕ ವರ್ಷಗಳಿಂದ ಕಾಂಗ್ರೆಸ್ಸಿಗೆ ದುಡಿಯುತ್ತಾ ಬಂದಿರುವ ಅಶೋಕ್ ಪಟ್ಟಣ ಕ್ಷೇತ್ರ ರಾಮದುರ್ಗಕ್ಕೆ ಐದು ಕೋಟಿ ರುಪಾಯಿ. ಇದು ಬೆಳವಾಗಿ ಕನ್ನಡಿಗರನ್ನು ನಖಶಿಖಾಂತ ಉರಿಸಿದೆ.

ಇರಲಿ ಸಂಭಾಜಿ ಸರಿಇಲ್ಲ ಎಂದ ಮಾತ್ರಕ್ಕೆ ಅವರು ಪ್ರತಿನಿಧಿಸುವ ಬೆಳಗಾವಿ ದಕ್ಷಿಣ ಕ್ಷೇತ್ರ ಉದ್ಧಾರ ಆಗಬಾರದು ಎಂದೇನೂ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಕನ್ನಡಿಗರ ಊರದು. ಆದರೆ ಬಿಡುಗಡೆ ಮಾಡಿದ ಅನುದಾನವನ್ನು ಜಿಲ್ಲೆಯ ಬೇರೆ, ಬೇರೆ ಕ್ಷೇತ್ರಗಳಿಗೂ ಸಮಾನವಾಗಿ ಹಂಚಬಹುದಿತ್ತು. ನ್ಯಾಯ-ನೀತಿ ಮೆರೆಯಬಹುದಿತ್ತು. ಅದು ಬಿಟ್ಟು ಕನ್ನಡದ್ರೋಹಿಯ, ನಾಡದ್ರೋಹಿಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವುದು ಕೂಡ ನಾಡದ್ರೋಹದ ಕೆಲಸವೇ!

ಬೆಳಗಾವಿಯಲ್ಲಿ ದಿನೇ ದಿನೇ ಕನ್ನಡಿಗರ ವಿರುದ್ಧ ಎಂಇಎಸ್ ನ ಪುಂಡಾಟಗಳು ಹೆಚ್ಚುತ್ತಿವೆ. ಇದಕ್ಕೆ ಸಂಭಾಜಿಯಂಥ ನಾಡದ್ರೋಹಿಗಳ ಕುಮ್ಮಕ್ಕೇ ಕಾರಣ. ಬೆಳಗಾವಿಯಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆವ ಸಂದರ್ಭದಲ್ಲೇ ಅದಕ್ಕೆ ಪರ್ಯಾಯವಾಗಿ ಮರಾಠಿ ಭಾಷಿಕರನ್ನು ಒಳಗೊಂಡ “ಮಹಾ ಮೇಳಾವ” ಸಮಾವೇಶ ಉತ್ತೇಜಿಸುವ, 2015 ರ ವಿಧಾನಸಭೆ ಕಲಾಪ ಬಹಿಷ್ಕರಿಸಿ ಮಹಾ ಮೇಳಾವ ದಲ್ಲಿ ಪಾಲ್ಗೊಂಡು ಕನ್ನಡಿಗರ ವಿರುದ್ಧ, ಕರ್ನಾಟಕ ಸರಕಾರದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡುವ ಸಂಭಾಜಿಯಂಥವರು ಅದ್ಹೇಗೆ ಸಿದ್ದರಾಮಯ್ಯನವರ ಸರಕಾರದ ಮಿದುಳಿಗೇ ಮಸಿ ಬಳಿದರು ಎಂಬುದು ಗೊತ್ತಾಗುತ್ತಿಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. 2015 ರ “ಮಹಾಮೇಳಾವ”ದಲ್ಲಿ ಭಾಗವಹಿಸಿದ್ದ ಸಂಭಾಜಿ ಮುಂದಿವ ವರ್ಷ ಸುವರ್ಣ ವಿಧಾನಸೌಧದಲ್ಲಿ ಮಹಾರಾಷ್ಟ್ರ ಸರಕಾರ ಅಧಿವೇಶನ ನಡೆಸಬೇಕು ಎಂಬ ಉದ್ಧಟತನದ ಭಾಷಣ ಮಾಡಿದ್ದರು. ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದ್ದರು.

ಕನ್ನಡದ್ರೋಹಿ ಕೆಲಸದಿಂದಲೇ ರಾಜಕೀಯ ಭವಿಷ್ಯ ಅರಸಿಕೊಂಡಿರುವ ಸಂಭಾಜಿಯಂಥವರನ್ನು ಮಟ್ಟ ಹಾಕುವುದನ್ನು ಬಿಟ್ಟು, ಅವರನ್ನು ಈ ರೀತಿ ಬೆಂಬಲಿಸುತ್ತಿರುವ ಹಿಂದೆ ಮುಂದಿನ ವಿಧಾನಸಭೆ ಚುನಾವಣೆಯ ಮಸಲತ್ತು ಇದ್ದಂತಿದೆ. ಹಿಂದೆ ಕಾಂಗ್ರೆಸ್ಸಿನಿಂದ ಗೆದ್ದು ನಂತರ ಅದನ್ನು ಬಿಟ್ಟು ಎಂಇಎಸ್ ನಲ್ಲಿ ರಾಜಕೀಯ ಏಳ್ಗೆ ಅರಸುತ್ತಿರುವ ಸಂಭಾಜಿಯವರನ್ನು ಮತ್ತೆ ಕಾಂಗ್ರೆಸ್ಸಿಗೆ ಕರೆತರಲು ಹುನ್ನಾರ ನಡೆದಂತಿದೆ. ಹೀಗಾಗಿಯೇ ಆತ ಕನ್ನಡದ್ರೋಹಿ ಎಂಬುದನ್ನು ಮರೆತು ಕ್ಷೇತ್ರಕ್ಕೆ 10 ಕೋಟಿ ರುಪಾಯಿ ಬಿಡುಗಡೆ ಮಾಡಿದಂತಿದೆ.

ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಎಂಇಎಸ್ ಮಟ್ಟಹಾಕಲು ಹಗಲು-ರಾತ್ರಿ ಒಗ್ಗಟ್ಟಿನ ಪ್ರಯತ್ನ ನಡೆಸುತ್ತಿವೆ. ಅಂಥದ್ದರಲ್ಲಿ ಈ ರೀತಿ ಕರ್ನಾಟಕ ಸರಕಾರವೇ ಪಕ್ಷಪಾತ ಮಾಡಿಬಿಟ್ಟರೆ, ತಾರತಮ್ಯ ಮೆರೆದರೆ ಸಂಭಾಜಿಯಂಥವರನ್ನು ಕಟ್ಟಿಹಾಕುವುದಾದರೂ ಹೇಗೆ? ರಾಜ್ಯದ ಮುಖ್ಯಮಂತ್ರಿಯಾಗಿ  ಸಿದ್ದರಾಮಯ್ಯನವರು ಜಿಲ್ಲೆಯ ಅಭಿವೃದ್ಧಿಗೆ ಈ ಅನುದಾನ ನೀಡಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೆ ಅದರಲ್ಲಿ ಸಿಂಹಪಾಲು ಎಂಇಎಸ್ ಶಾಸಕರಿಗೇ ಏಕೆ? ಬೇರೆ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಆಗುವುದು ಬೇಡವೇ?  ಹಾಗಿದ್ದರೆ ಎಲ್ಲರಿಗೂ ಸಮಾನವಾಗಿ ಹಂಚಬಹುದಿತ್ತಲ್ಲ.

ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕರ್ನಾಟಕ ಸರಕಾರ ಇಂಥ ಮತಿಗೇಡಿ ಕೆಲಸ ಮಾಡಬಾರದಿತ್ತು. ಕನ್ನಡಿಗರ ಕಣ್ಣು ಕೆಂಪಾಗಿಸಬಾರದಿತ್ತು. ನಾಡಧ್ವಜ ವಿನ್ಯಾಸ ಬದಲಿಸಲು ಸಮಿತಿ ರಚಿಸವ ಮೂಲಕ ವಿವಾದ ಸೃಷ್ಟಿಸಿ ರಾಜ್ಯದ ಜನರ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವನ್ನು ವಿಲನ್ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿಗಳು ಈಗ ತಮ್ಮ ನಾಡ ಪ್ರೇಮವನ್ನು ಎಂಇಎಸ್ ಪಾದತಳದಲ್ಲಿ, ರಾಜಕೀಯ ಉದ್ದೇಶಗಳಿಗೆ ಅಡವಿಟ್ಟುವಿರುವುದು ಕನ್ನಡಿಗರ ದುರಂತವೇ ಸರಿ.

Leave a Reply