ವಿವಾದಾತ್ಮಕ ವಿಡಿಯೋ ಬದ್ಮೇಲೆ ಬಿಗ್ ಬಾಸ್ ನ ಜನ ನಂಬ್ತಾರಾ? ಸುದೀಪ್ ಹೇಳೋದೇನು?

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ 5ನೇ ಸೀಸನ್ ಕಾರ್ಯಕ್ರಮ ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಆವೃತ್ತಿಯ ಬಿಗ್ ಬಾಸ್ ನ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಅದರಲ್ಲಿ ಮಾಳವಿಕ ಹಾಗೂ ಪರಮೇಶ್ವರ್ ಗುಂಡ್ಕಲ್ ಅವರ ನಡುವಣ ಗುಸುಗುಸು ಮಾತು ಅನೇಕ ಅನುಮಾನಗಳಿಗೆ ಗ್ರಾಸವಾಗಿತ್ತು. ಈ ಎಲ್ಲ ಅನುಮಾನಗಳಿಗೆ ಕಾರ್ಯಕ್ರಮದ ನಿರೂಪಕರಾಗಿರುವ ಕಿಚ್ಚ ಸುದೀಪ್ ಇಂದಿನ ಬಿಗ್ ಬಾಸ್ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ಸ್ಪಷ್ಟನೆಯ ಸಾರಂಶವಿದು…

‘ನನ್ನ ಪ್ರಕಾರ ಜೀವನ ಎಂದರೆ ನಾವು ನೋಡುವ ದೃಷ್ಟಿಕೋನ ಅಷ್ಟೇ. ಜನ ಯಾವತ್ತೂ ನನ್ನನ್ನು ಅನುಮಾನದಿಂದ ನೋಡಿಲ್ಲ, ನೋಡಲಿಕ್ಕೆ ಸಾಧ್ಯನೂ ಇಲ್ಲ. ನನಗೆ ಮಾಳವಿಕಾ ಹಾಗೂ ಪರಮ್ ಇಬ್ಬರೂ ತುಂಬಾ ಚೆನ್ನಾಗಿ ಗೊತ್ತು. ಇಬ್ಬರೂ ಒಳ್ಳೆಯವರೇ.

ಅದೇನೇ ಇರಲಿ ಈ ವಿಡಿಯೋ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿರುವವರು ಮಾಳವಿಕ ಅವರ ಪತಿ ಅವಿನಾಶ್ ಹಾಗೂ ಪರಮ್ ಹೆಂಡತಿ ಗೀರ್ವಾಣಿ. ಅವರೇ ಏನು ಹೇಳುತ್ತಿಲ್ಲ ಅಂದಮೇಲೆ ಯಾರಿಗೆ ಏನು ತೊಂದರೆ? ಪರಮ್ ತುಂಬಾ ಒಳ್ಳೆಯ ವ್ಯಕ್ತಿ. ಹೀಗಾಗಿ ನಾನು ಅವರ ಬೆನ್ನಿಗೆ ನಿಂತು ಮಾತನಾಡುತ್ತಿದ್ದೇನೆ.

ಪ್ರತಿವಾರ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋದು ನಮಗೆ ಗೊತ್ತಿರಲ್ಲ. ಅವರಿಗೆ ಭರವಸೆ ಕೊಡಬೇಕಿರೋದು ನಮ್ಮ ಕೆಲಸ ಅಷ್ಟೇ. ಆ ಕೆಲಸವನ್ನು ಪರಮ್ ಮಾಡಿದ್ದಾರೆ. ವಿಡಿಯೋದಲ್ಲಿ ಪಿಸುಮಾತಿನಲ್ಲಿರೋದು ಅಷ್ಟೇ. ಮಾಳವಿಕ ಇಲ್ಲಿಗೆ ಬರುವ ಮುನ್ನ ಸಾಕಷ್ಟು ಹೆಸರು ಗಳಿಸಿದ್ದರು. ಇಲ್ಲಿಗೆ ಬಂದಮೇಲೆ ಹೇಗಿರುತ್ತೇನೋ ಎಂಬ ಭಯ ಅವರಲ್ಲಿತ್ತು. ಸೀಕ್ರೆಟ್ ರೂಮಿಗೆ ಹೋಗುವಾಗ ಹೊರಗಡೆ ನನ್ನ ಬಗ್ಗೆ ಜನ ಏನು ಹೇಳುತ್ತಿದ್ದಾರೆ ಅನ್ನೋದನ್ನು ಪರಮ್ ಬಳಿ ಕೇಳಿದ್ದಾರೆ. ನಾವೆಲ್ಲಾ ಇದ್ದೇವೆ. ನೀವು ನೀವಾಗಿರಿ ಎಂದು ಧೈರ್ಯ ತುಂಬಿದ್ದರು. ಇದರಲ್ಲಿ ಮತ್ತೇನು ಕಾಣಿಸುತ್ತಿಲ್ಲ. ಒಂದುವೇಳೆ ಮಾಳವಿಕಾ ಅವರಿಗೆ ಸಹಾಯ ಮಾಡಿದ್ದೇ ಆಗಿದ್ದರೆ, ಅವರೇ ಗೆಲ್ಲಬೇಕಿತ್ತು.

ಇನ್ನು ಮುತ್ತಿನ ವಿಷಯಕ್ಕೆ ಬರೋದಾದ್ರೆ ನನಗೂ ವೇದಿಕೆ ಮೇಲೆ ತುಂಬಾ ಜನ ಚುಂಬಿಸಿದ್ದಾರೆ. ಅಲ್ಲಿ ಸ್ನೇಹದ ಭಾವವಿತ್ತೇ ಹೊರತು ಬೇರೆನು ಇರಲಿಲ್ಲ. ಇಲ್ಲೂ ಕೂಡ ಅಷ್ಟೇ.

ನೀವಂದುಕೊಂಡಂತೆ ಅಲ್ಲಿ ಬೇರೆಯದೇ ಉದ್ದೇಶ ಇದ್ದಿದ್ದರೆ ಕ್ಯಾಮೆರಾ ಮುಂದೆ, ಮೈಕ್ ಆನ್ ಆಗಿರುವಾಗ ಮುತ್ತು ಕೊಡುತ್ತಿರಲಿಲ್ಲ. ಅಲ್ಲದೆ ತಕ್ಷಣವೇ ಕ್ಯಾಮೆರಾ ಆಫ್ ಮಾಡಬಹುದಿತ್ತು ಅಥವಾ ಪರಮ್ ಅವರಿಗಿರುವ ಪವರ್ ನಿಂದ ಆ ವಿಡಿಯೋ ಡಿಲೀಟ್ ಮಾಡಿಸಬಹುದಿತ್ತು. ಇಷ್ಟರಲ್ಲೇ ಅರ್ಥ ಮಾಡಿಕೊಳ್ಳಬೇಕಾಗಿರೋದು ನಾವೇನನ್ನು ನೋಡುತ್ತೀವೆಯೋ ಅದೇ ಕಾಣಿಸುತ್ತದೆ. ಇಲ್ಲಿ ನೋಡುವ ದೃಷ್ಟಿಕೋನವಷ್ಟೇ ಕೆಟ್ಟ ರೀತಿಯಲ್ಲಿ ಬಿಂಬಿಸಿದೆ.

ನನ್ನ ಬಗ್ಗೆ ನಂಬಿಕೆ ಇರೋ ಎಲ್ಲರೂ ಬಿಗ್ ಬಾಸ್ ನೋಡೇ ನೋಡ್ತಾರೆ. ಇನ್ನು ಈ ವಿಡಿಯೋ ಲೀಕ್ ಮಾಡಿದವರು ಹೊರಗಿನವರಲ್ಲ. ತೀರಾ ಒಳಗಿನವರೇ ಆಗಿದ್ದಾರೆ. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ.

ಪರಮ್ ಗೆ ಕರೆ ಮಾಡಿ ವಿಡಿಯೋ ಲೀಕ್ ಮಾಡದಿರಲು ಹಣದ ಬೇಡಿಕೆಯನ್ನೂ ಇಟ್ಟಿದ್ದರು. ಆದರೆ ಪರಮ್ ಇದಕ್ಕೆ ಹೆದರಲಿಲ್ಲ. ಇದೆಲ್ಲದಕ್ಕೂ ಮೀರಿ ಈ ವಿಡಿಯೋ ಲೀಕ್ ಮಾಡಿದವರು ಅವರಿಗೇ ಗೊತ್ತಿಲ್ಲದ ಹಾಗೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಚಾರವನ್ನೇ ತಂದುಕೊಟ್ಟಿದ್ದಾರೆ.’

Leave a Reply