ಬಯಲಾಗಲೇ ಇಲ್ಲ ಆರುಷಿ ಕೊಲೆ ರಹಸ್ಯ, ಊಹೆ- ಮರ್ಯಾದೆ ಹತ್ಯೆ ಸಿದ್ಧಾಂತದಲ್ಲೇ ಮೈಮರೆತ ಸಿಬಿಐಗೆ ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಒಂಬತ್ತು ವರ್ಷಗಳಿಂದ ದೇಶದ ಗಮನವನ್ನು ಸೆಳೆದಿದ್ದ ಆರುಷಿ ಹಾಗೂ ಹೇಮರಾಜ್ ಅವರ ಕೊಲೆ ಪ್ರಕರಣ ರಹಸ್ಯವಾಗಿಯೇ ಉಳಿದುಕೊಂಡಿದೆ. ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆರುಷಿ ಪಾಲಕರಾದ ರಾಜೇಶ್ ಮತ್ತು ನುಪುರ್ ತಲ್ವಾರ್ ಅವರನ್ನು ನಿನ್ನೆ ಅಲಹಬಾದ್ ಹೈಕೋರ್ಟ್ ನಿರ್ದೋಷಿ ಎಂದು ಪ್ರಕಟಿಸಿದ್ದು, ಆಕೆಯನ್ನು ಕೊಂದವರಾರು ಎಂಬ ಪ್ರಶ್ನೆ ಹಾಗೇ ಉಳಿದುಕೊಂಡಿದೆ.

ಆರುಷಿ ಪೋಷಕರನ್ನು ಅಪರಾಧಿ ಎಂದು ನಿರ್ಣಯಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಕೇವಲ ಊಹೆ ಮತ್ತು ಮರ್ಯಾದೆ ಹತ್ಯೆ ದೃಷ್ಟಿಕೋನದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದು, ತಲ್ವಾರ್ ದಂಪತಿಗಳು ಸಂಜೆ ವೇಳೆಗೆಬಿಡುಗಡೆಯಾಗಲಿದ್ದಾರೆ. ಹಾಗಾದರೆ ಆರುಷಿ ಮತ್ತು ಹೇಮರಾಜ್ ಕೊಂದವರಾರು? ಈ ಕೊಲೆಗೆ ಕಾರಣ ಏನು? ಯಾರು ಕೊಲ್ಲದಿದ್ದರೆ, ಈ ಹತ್ಯೆ ನಡೆದಿದ್ದಾದರೂ ಹೇಗೆ? ಹೀಗೆ ಮೊದಲಾದ ಪ್ರಶ್ನೆಗಳಿಗೆ ಸತತ 9 ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ ಉತ್ತರ ಒದಗಿಸಲು ವಿಫಲವಾಗಿದೆ.

ಹೇಮರಾಜ್ ಮತ್ತು ಆರುಶಿ ನಡುವೆ ಅನೈತಿಕ ಸಂಬಂಧ ತಿಳಿದ ಪೋಷಕರೆ ಈ ಜೋಡಿ ಹತ್ಯೆ ಮಾಡಿದ್ದಾರೆ ಎಂದು ಸಿಬಿಐ ತಾನೇ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಸಾಬೀತುಮಾಡುವಲ್ಲಿ ವಿಫಲವಾಗಿದೆ. ಸಿಬಿಐ ಸುಖಾಸುಮ್ಮನೆ ಆರೋಪ ಪಟ್ಟಿ ಸಲ್ಲಿಸಲು ಸಾಧ್ಯವಿಲ್ಲ. ಸಾಕ್ಷ್ಯಾಧಾರ ಇಟ್ಟುಕೊಂಡೆ ಆರೋಪ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ ಆ ಸಾಕ್ಷ್ಯಗಳನ್ನು ಪ್ರಕರಣದ ವಿಚಾರಣೆ ಮುಗಿಯುವವರೆಗೂ ಕಾಪಿಟ್ಟುಕೊಳ್ಳುವಲ್ಲಿ ಎಡವಿದ್ದರಿಂದ ತಲ್ವಾರ್ ದಂಪತಿಗಳು ಬಿಡುಗಡೆಯ ಭಾಗ್ಯ ಕಂಡಿದ್ದಾರೆ. ಆರುಷಿ ಮತ್ತು ಹೇಮರಾಜ್ ಹತ್ಯೆಯ ಹಿಂದಿನ ಸತ್ಯ ಇದರೊಂದಿಗೆ ಸಮಾಧಿಯಾಗಿದೆ.

ಹೈಕೋರ್ಟ್ ಪ್ರಕಾರ ತಲ್ವಾರ್ ದಂಪತಿ ವಿರುದ್ಧ ಸಾಕ್ಷಾಧಾರ ಕೊರತೆ ಎದುರಾಗಲು ಪ್ರಮುಖವಾಗಿರುವ ಅಂಶಗಳು ಹೀಗಿವೆ…

  • ಎರಡು ಬಾರಿ ನಡೆದ ಮರಣೋತ್ತರ ಪರೀಕ್ಷೆಯಲ್ಲೂ ವಿಭಿನ್ನವಾದ ವರದಿಗಳು ಬಂದಿದ್ದವು. ಒಂದಲ್ಲಿ ಆರುಷಿಯ ಗುಪ್ತಾಂಗದ ಬಳಿ ಅನುಮಾನ ಮೂಡುವ ಗುರುತು ಬದಲಾಗಿದೆ ಎಂದು ಒಂದು ವರದಿ ಹೇಳಿದ್ದರೆ, ಮತ್ತೊಂದು ವರದಿ ಇದನ್ನು ನಿರಾಕರಿಸಿದೆ.
  • ಇನ್ನು ಆರುಷಿ ಹಾಗೂ ಹೇಮರಾಜ್ ನಡುವೆ ಸಂಬಂಧ ಇದ್ದ ಕುರಿತಾಗಿ ಸಿಬಿಐ ಯಾವುದೇ ರೀತಿಯ ಸಾಕ್ಷ್ಯ ನೀಡಲಿಲ್ಲ. ಇವರ ನಡುವೆ ಸಂಬಂಧವಿತ್ತು ಎಂಬುದಕ್ಕೆ ಕೂದಲು, ರಕ್ತ ಹಾಗೂ ವೀರ್ಯದಂತಹ ವೈಜ್ಞಾನಿಕ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ.
  • ಕೊಲೆಯಾದ ರಾತ್ರಿ ತಲ್ವಾರ್ ಮನೆಗೆ ಮೂರನೇ ವ್ಯಕ್ತಿ ಬಂದೇ ಇಲ್ಲ ಎಂಬುದನ್ನು ಸಾಬೀತುಪಡಿಸಲು ಸಿಬಿಐಗೆ ಸಾಧ್ಯವಾಗಿಲ್ಲ.
  • ಈ ಇಬ್ಬರ ನಡುವೆ ಸಂಬಂಧವಿತ್ತು ಎಂಬುದು ಮಾಧ್ಯಮ ಹಾಗೂ ತನಿಖಾಧಿಕಾರಿಗಳ ಸೃಷ್ಟಿಯೇ ಹೊರತು ಬೇರೇನೂ ಅಲ್ಲ ಎಂಬುದನ್ನು ಸಾಕ್ಷ್ಯಾಧಾರಗಳ ಕೊರತೆಯೇ ಶೃತಪಡಿಸಿದೆ. ಈ ಊಹೆ ಆಧಾರದ ಮೇರೆಗೆ ಮರ್ಯಾದ ಹತ್ಯೆಯ ದೃಷ್ಟಿಕೋನದಲ್ಲಿ ನಡೆಸಿದ ತನಿಖೆಗೆ ಪೂರಕ ಸಾಕ್ಷಿಗಳನ್ನು ಒದಗಿಸಲು ಸಿಬಿಐ ಎಡವಿದೆ.
  • ಶಸ್ತ್ರಚಿಕಿತ್ಸೆಗೆ ಬಳಸುವ ಹರಿತವಾದ ಆಯುಧ, ಗಾಲ್ಫ್ ಲಾಫ್ ಅನ್ನು ಈ ಕೊಲೆಗೆ ಬಳಸಲಾಗಿದೆ ಎಂಬ ಆರೋಪಗಳನ್ನು ಮಾಡಲಾಗಿತ್ತು. ದಂತವೈದ್ಯರಾಗಿರುವ ತಲ್ವಾರ್ ದಂಪತಿಗಳ ಬಳಿಯೇ ಈ ಆಯುಧ ಇದ್ದು, ಹೊರಗಡೆಯವರು ಈ ಆಯುಧದಿಂದ ಕೊಲೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ಸಿಬಿಐ ಹೇಳಿತ್ತಾದರೂ, ಇವುಗಳನ್ನು ಸಾಕ್ಷ್ಯಗಳನ್ನಾಗಿ ಬಳಸಿಕೊಳ್ಳುವಲ್ಲಿ ಸಿಬಿಐ ವಿಫಲವಾಗಿದೆ.ಇವೆಲ್ಲವೂ ತನಿಖೆಯ ಕಾರ್ಯಕ್ಷಮತೆಯ ಲೋಪಕ್ಕೆ ಹಿಡಿದ ಕನ್ನಡಿ.

ಹೀಗೆ ಕೇವಲ ತಮ್ಮ ಊಹೆಗೆ ತಕ್ಕಂತೆ ಆರೋಪಗಳನ್ನು ಮಾಡಿದ್ದ ಸಿಬಿಐ ತನಿಖಾಧಿಕಾರಿಗಳು, ಸೂಕ್ತ ಸಾಕ್ಷಾಧಾರ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಸುದೀರ್ಘ ಒಂಬತ್ತು ವರ್ಷ ತಮ್ಮ ಊಹೆಯಲ್ಲಿಯೇ ತನಿಖೆ ನಡೆಸಿ ಕಾಲಹರಣ ಮಾಡಿದ್ದಾರೆ. ತಲ್ವಾರ್ ದಂಪತಿ ನಿರ್ದೋಷಿಯಾಗುತ್ತಿದ್ದಂತೆ ಎಲ್ಲರ ಮುಂದೆ ಉದ್ಭವಿಸಿರೋದು ಒಂದೇ ಪ್ರಶ್ನೆ. ಅದು, ಆರುಶಿಯನ್ನು ಕೊಂದವರಾರು? ಎಂದು. ಸಿಬಿಐ ತನಿಖಾಧಿಕಾರಿಗಳು ತಮ್ಮ ಊಹೆಯಿಂದಾಚೆಗೂ ಸರಿಯಾಗಿ ತನಿಖೆ ಮಾಡಿದ್ದರೆ ಈ ಕೊಲೆಯ ರಹಸ್ಯವನ್ನು ಪತ್ತೆ ಹಚ್ಚಬಹುದಿತ್ತೇನೊ.

ಒಟ್ಟಿನಲ್ಲಿ ಈ ಪ್ರಕರಣ ಒಂಬತ್ತು ವರ್ಷಗಳ ನಂತರವೂ ಆರುಷಿಯನ್ನು ಕೊಂದವರಾರು ಎನ್ನುವ ಪ್ರಶ್ನೆಯನ್ನು ಹಾಗೇ ಉಳಿಸಿದೆ. ಉದ್ದೇಶಪೂರ್ವಕವಾಗಿ ಈ ಸಾಕ್ಷ್ಯಾಧಾರವನ್ನು ನಾಶ ಮಾಡಲಾಗಿದೆಯೇ ಅಥವಾ ತನಿಖಾಧಿಕಾರಿಗಳ ಕಾರ್ಯಕ್ಷಮತೆಯ ಕೊರತೆಯಿಂದ ಆಗಿದೆಯೇ ಎಂಬ ಪ್ರಶ್ನೆಗಳು ಕೂಡ ಈ ಕೊಲೆ ಜತೆ ಉಳಿದುಕೊಂಡಿದೆ. ಇನ್ನು ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿತನೆ ನಡೆಸುಚತ್ತಿರುವ ಸಿಬಿಐ ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿ, ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಿಕೊಂಡು ತನ್ನ ಸಂಸ್ಥೆಗಿರುವ ಗೌರವ ಉಳಿಸಿಕೊಳ್ಲಬೇಕು. ಅದರ ಜತೆಗೆ ಆರುಷಿ ಮತ್ತು ಹೇಮರಾಜ್ ಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು.

Leave a Reply