ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ! ಟೆಸ್ಟ್- ಏಕದಿನದ ಹೊಸ ಟೂರ್ನಿಯ ಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಡಿಜಿಟಲ್ ಕನ್ನಡ ಟೀಮ್:

ಟೆಸ್ಟ್ ಕ್ರಿಕೆಟ್ ನಲ್ಲೂ ಎಲ್ಲಾ ತಂಡಗಳು ಭಾಗವಹಿಸುವ ಟೂರ್ನಿಯನ್ನು ಆಯೋಜಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನೇಕ ವರ್ಷಗಳಿಂದ ಯೋಜನೆ ಹಾಕುತ್ತಲೇ ಬಂದಿತ್ತು. ಈಗ ಅದಕ್ಕೆ ಕಾಲ ಕೂಡಿಬಂದಿದ್ದು, ಈ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನು ಏಕದಿನ ಮಾದರಿಯಲ್ಲೂ ಹೊಸ ಟೂರ್ನಿ ನಡೆಸಲು ಒಪ್ಪಿಗೆ ದೊರೆತಿದೆ.

ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಮಹಾಧಿವೇಶನದಲ್ಲಿ ಈ ಟೂರ್ನಿಗಳಿಗೆ ಒಪ್ಪಿಗೆ ಸಿಕ್ಕಿದೆ. ಹಾಗಾದ್ರೆ ಈ ಎರಡು ಹೊಸ ಟೂರ್ನಿಗಳು ಏನು? ಅವುಗಳನ್ನು ಹೇಗೆ ನಡೆಸಲಾಗುತ್ತದೆ? ಎಂಬುದರ ಕುರಿತ ಮಾಹಿತಿ ಹೀಗಿದೆ ನೋಡಿ…

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್…

ಈ ಹೊಸ ಟೂರ್ನಿಯಲ್ಲಿ ಟೆಸ್ಟ್ ಮಾನ್ಯತೆ ಪಡೆದಿರುವ 9 ದೇಶಗಳ ತಂಡಗಳು ಭಾಗವಹಿಸಲಿವೆ. ಪ್ರತಿ ತಂಡಗಳು ಒಟ್ಟು 6 ಸರಣಿಗಳನ್ನಾಡಲಿವೆ. ಈ ಪೈಕಿ ಮೂರು ಸರಣಿ ತವರಿನ ಅಂಗಣದಲ್ಲಿ ನಡೆದರೆ, ಮೂರು ಸರಣಿ ಹೊರಗಿನ ಅಂಗಣದಲ್ಲಿ ನಡೆಯಲಿದೆ. ಈ ಸರಣಿಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಆಯಾ ತಂಡಗಳಿಗೆ ಅಂಕಗಳನ್ನು ನೀಡಲಾಗುವುದು. ಅಂತಿಮವಾಗಿ ವಿಶ್ವ ಟೆಸ್ಟ್ ಲೀಗ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ವಿಜೇತ ತಂಡ ಯಾರು ಎಂಬುದು ನಿರ್ಧಾರವಾಗಲಿದೆ.

ಈ ಟೆಸ್ಟ್ ಚಾಂಪಿಯನ್ ಶಿಪ್ ಯಾವಾಗಿನಿಂದ ಶುರುವಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. 2019ರ ಏಕದಿನ ವಿಶ್ವಕಪ್ ಮುಗಿಯುತ್ತಿದ್ದಂತೆ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಲಿದ್ದು, 2021ರವರೆಗೂ ನಡೆಯಲಿದೆ. ಇನ್ನು ಈ ಟೂರ್ನಿಯಲ್ಲಿ ನಡೆಯಲಿರುವ ಸರಣಿಗಳಲ್ಲಿ ಕನಿಷ್ಠ 2 ಪಂದ್ಯಗಳಿಂದ ಗರಿಷ್ಠ 5 ಪಂದ್ಯಗಳು ನಡೆಯಲಿವೆ. ಇನ್ನು ಅಂಕ ಹಂಚಿಕೆ ವಿಧಾನದ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು.

ವಿಶ್ವದೆಲ್ಲೆಡೆ ಟೆಸ್ಟ್ ಕ್ರಿಕೆಟ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಅಭಿಮಾನಿಗಳನ್ನು ಟೆಸ್ಟ್ ಮಾದರಿಯತ್ತ ಸೆಳೆಯಲು ಐಸಿಸಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಒಂದು ಟೆಸ್ಟ್ ಟೂರ್ನಿ ನಡೆಯಬೇಕು ಎಂಬ ಪ್ರಸ್ತಾವ 1997ರಿಂದಲೇ ಐಸಿಸಿಯಲ್ಲಿತ್ತಾದರೂ ಅದು ಕಾರ್ಯರೂಪಕ್ಕೆ ಬರಲು ಎರಡು ದಶಕಬೇಕಾಯಿತು.

ಐಸಿಸಿ ಏಕದಿನ ಲೀಗ್…

ಈಗಾಗಲೇ ಐಸಿಸಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ನಡೆಯುತ್ತಿರುವಾಗ ಏಕದಿನ ಮಾದರಿಯಲ್ಲಿ ಮತ್ತೊಂದು ಹೊಸ ಟೂರ್ನಿಯ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಐಸಿಸಿ ನೀಡುವ ಉತ್ತರ ಹೀಗಿದೆ… ‘ಉಭಯ ದೇಶಗಳ ಸರಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಲುವಾಗಿ ಈ ಟೂರ್ನಿ ಆಯೋಜಿಸಲಾಗುತ್ತಿದೆ.’

ಟೆಸ್ಟ್ ಚಾಂಪಿಯನ್ ಶಿಪ್ ಮಾದರಿಯಂತೆ ಈ ಟೂರ್ನಿಯಲ್ಲಿ ಪ್ರತಿ ತಂಡ ಎಂಟು ಸರಣಿಗಳನ್ನಾಡಲಿದ್ದು, ತವರಿನಲ್ಲಿ ನಾಲ್ಕು ಹೊರ ಅಂಗಣದಲ್ಲಿ ನಾಲ್ಕು ಸರಣಿಗಳನ್ನು ಆಡಬೇಕಾಗುತ್ತದೆ. 2020ರಲ್ಲಿ ಈ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಲಿವೆ. ಆ ಪೈಕಿ ಐಸಿಸಿಯ ಪೂರ್ಣ ಸದಸ್ಯತ್ವ ಪಡೆದಿರುವ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಜಿಂಬಾಬ್ವೆ, ಐರ್ಲೆಂಡ್, ಅಫ್ಘಾನಿಸ್ತಾನ ಹಾಗೂ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಗೆಲ್ಲುವ ತಂಡ ಭಾಗವಹಿಸಲಿದೆ. ಈ ಟೂರ್ನಿಯಿಂದ 2023ರ ವಿಶ್ವಕಪ್ ಗೆ ನೇರ ಅರ್ಹತೆ ಪಡೆದುಕೊಳ್ಳಬಹುದಾಗಿದೆ.

ಈ ಮಾದರಿಯ ಟೂರ್ನಿಯನ್ನು ಈಗಾಗಲೇ ಮಹಿಳಾ ಕ್ರಿಕೆಟ್ ನಲ್ಲಿ ಪರಿಚಯಿಸಲಾಗಿದ್ದು, ಈಗ ಪುರುಷರ ಕ್ರಿಕೆಟ್ ನಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ಈ ಸರಣಿಯಲ್ಲೂ ಸಹ ಪ್ರತಿ ತಂಡಗಳು ಆಡುವ ಆಯಾ ಪಂದ್ಯದಲ್ಲಿನ ಪ್ರದರ್ಶನಕ್ಕೆ ತಕ್ಕಂತೆ ಅಂಕಗಳನ್ನು ನೀಡಲಾಗುವುದು.

Leave a Reply