ಅವಾಚ್ಯ ಶಬ್ದಗಳಿಂದ ಮೋದಿ ನಿಂದಿಸಿ ಪಾತಾಳಕ್ಕಿಳಿದ ಸಚಿವ ರೋಶನ್ ಬೇಗ್ !

ಡಿಜಿಟಲ್ ಕನ್ನಡ ಟೀಮ್:

‘ಕುಲವಂ ಪೇಳ್ವದು ನಾಲ್ಗೆ’ ಅನ್ನೋ ಮಾತಿದೆ. ಅಂದರೆ ಒಬ್ಬ ವ್ಯಕ್ತಿಯ ಯೋಗ್ಯತೆ, ಸಂಸ್ಕಾರ ಆತನಾಡುವ ಮಾತಿಂದ ಗೋಚರಿಸುತ್ತದೆ ಎಂಬುದು ಇದರ ಅರ್ಥ. ಮೋದಿ ಅವರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ರಾಜ್ಯ ಸಚಿವ, ಕಾಂಗ್ರೆಸ್ ಮುಖಂಡ ರೋಶನ್ ಬೇಗ್ ತಮ್ಮನ್ನು ಪಾತಾಳಕ್ಕಿಳಿಸಿಕೊಂಡಿದ್ದಾರೆ. ಅವರಿಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ಕೂಡ ಬಾವಿಗಿಳಿದಿದ್ದಾರೆ.

ರಾಜಕೀಯದಲ್ಲಿ ಆರೋಪ- ಪ್ರತ್ಯಾರೋಪ, ಟೀಕೆ-ಟಿಪ್ಪಣಿ ಸಹಜ. ಅದು ಇರಲೇಬೇಕು ಕೂಡ. ಆದರೆ ಮಾತಿಗೊಂದು ಮಿತಿ ಇರಬೇಕು. ಬಾಯಿಗೆ ಬಂದದ್ದು ಮಾತಾಡುವುದರಿಂದ ಪ್ರತಿಭೆ ವಿಕಸನ ಆಗುವುದಿಲ್ಲ. ಬದಲಿಗೆ ಅವರೆಷ್ಟು ತುಚ್ಛರು ಎಂಬುದು ದೃಢಪಡುತ್ತದೆ. ಇಂಥವರ ಸಾಲಿಗೆ ಈಗ ಬೇಗ್ ಹೊಸ ಸೇರ್ಪಡೆ. ಅವರು ತಮ್ಮನ್ನಷ್ಟೇ ಕೀಳುಮಟ್ಟಕೆ ಇಳಿಸಿಕೊಂಡಿಲ್ಲ. ಬದಲಿಗೆ ರಾಜಕೀಯ ಕ್ಷೇತ್ರವನ್ನೂ ಕೀಳು ಮಟ್ಟಕ್ಕಿಳಿಸಿದ್ದಾರೆ.

ಬೆಂಗಳೂರಿನ ಪುಲಕೇಶಿನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ತಮಿಳು ಭಾಷಿಕರನ್ನು ಉದ್ದೇಶಿಸಿ ತಮಿಳಿನಲ್ಲೇ ಮಾತಾನಾಡಿದ ಬೇಗ್, ಕೇಂದ್ರ ಸರ್ಕಾರ, ಮತ್ತದರ ನಿರ್ಧಾರಗಳನ್ನು ಟೀಕಿಸುವ ಭರದಲ್ಲಿ ಮೋದಿ ಅವರನ್ನು ‘ಸೂ… ಮಗ, ಬೋ… ಮಗ’ ಎಂದೆಲ್ಲ ಜರಿದಿದ್ದಾರೆ. ಅವರು ಹೀಗೆ ಮಾತಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೇಶದ ಪ್ರಧಾನಿಯನ್ನು ಕೀಳು ಶಬ್ದಗಳಿಂದ ಜರಿದಿರುವ ರೋಶನ್ ಬೇಗ್ ಅವರನ್ನು ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಬಿಜೆಪಿ ಮುಖಂಡರೂ ತಿರುಗೇಟು ನೀಡಿದ್ದಾರೆ.

ಸುಮ್ಮನೆ ಇರಲಾರದೆ ಇರುವೆ  ಬಿಟ್ಟುಕೊಂಡರು ಎಂಬಂತಾಗಿರುವ ರೋಶನ್ ಬೇಗ್ ಈ ಪ್ರಹಸನದಿಂದ ಬರೀ ತಮ್ಮ ಗೌರವ ಮಾತ್ರ ಕಳೆದುಕೊಂಡಿಲ್ಲ. ಜತೆಗೆ ಕಾಂಗ್ರೆಸ್ ಮರ್ಯಾದೆಯನ್ನೂ ಹರಾಜು ಹಾಕಿದ್ದಾರೆ.

ರೋಶನ್ ಬೇಗ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷದ ಅನೇಕ ನಾಯಕರುಗಳೇ ಈ ಹೇಳಿಕೆ ಸರಿಯಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ‘ಸಿಎಂ ಆಗಲಿ, ಪ್ರಧಾನಿಯಾಗಲಿ ಅಥವಾ ಬೇರೆ ಯಾರಿಗೆ ಆದರೂ ಇಂತಹ ಪದ ಬಳಕೆ ಮಾಡುವುದು ಸರಿಯಲ್ಲ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶೋಭಕರಂದ್ಲಾಜೆ, ವಕ್ತಾರರಾದ ಗೋ ಮಧುಸುಧನ್ ಹೀಗೆ ಪ್ರಮುಖ ನಾಯಕರುಗಳು ಟೀಕಿಸಿದ್ದು ರೋಶನ್ ಬೇಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವಿವಾದ ಸೃಷ್ಟಿಸಿರುವ ಬೇಗ್ ಭಾಷಣದ ಮುಖ್ಯಾಂಶ ಹೀಗಿದೆ:

‘ಎಲ್ಲರು ನಮ್ಮ ಮೋದಿ, ನಮ್ಮ ಮೋದಿ ಎನ್ನುತ್ತಿದ್ದರು. ಆದ್ರೆ ಈಗ ಏನಾಯ್ತು? ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಅವರನ್ನು ಹೊಗಳುತ್ತಿದ್ದವರೆಲ್ಲ 500 ಮತ್ತು 1000 ನೋಟು ಬ್ಯಾನ್ ಮಾಡಿದ ಮೇಲೆ ಬಯ್ಯುತ್ತಿದ್ದಾರೆ. ಈ ಸೂ… ಮಗ ಏವೆಲ್ಲ ಯಡವಟ್ಟು ಮಾಡಿಬಿಟ್ಟ ಎನ್ನುತ್ತಿದ್ದಾರೆ. ಮೋದಿ ಅವರ ನಿರ್ಧಾರವನ್ನು ಬರೀ ಕಾಂಗ್ರೆಸ್ಸಿಗರಲ್ಲ, ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸಿಕೊಂಡು ಬಂದಿದ್ದ ಗುಜರಾತಿಗಳು,  ಮಾರ್ವಾಡಿಗಳೇ ನಿಂದಿಸುತ್ತಿದ್ದಾರೆ.’

ಕಾಂಗ್ರೆಸ್ ನವರು ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ. ಇಂದಿರಾ ಗಾಂಧಿ ದೇಶಕ್ಕಾಗಿ ದುಡಿದು ಪ್ರಾಣತ್ಯಾಗ ಮಾಡಿದರು. ಹಾಗೆಯೇ ರಾಜೀವ್ ಗಾಂಧಿ ಕೂಡ ಬಲಿದಾನವಾದರು. ಈಗ ಅವರ ಮಗ ರಾಹುಲ್ ಗಾಂಧಿ ಅವರನ್ನು ಎಲ್ಲರೂ ಬೈಯುತ್ತಿದ್ದಾರೆ. ಇದು ಎಷ್ಟು ಸರಿ? ಮೋದಿ ಕೇವಲ ಮೈಕ್ ಹಿಡಿದುಕೊಂಡು ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದೇ ಮನ್ ಕಿ ಬಾತ್. ಆದರೆ ಸಿದ್ದರಾಮಯ್ಯನವರು ಅನ್ನ ಭಾಗ್ಯ, ಶಾಲಾ ಮಕ್ಕಳಿಗೆ ಹಾಲು, ಬಾಣಂತಿಯರಿಗೆ ಬಿಸಿಯೂಟ, ಐದು ರೂ.ಗೆ ಉಪಹಾರ, 10 ರೂ.ಗೆ ಊಟ ಕೊಟ್ಟಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಇವುಗಳನ್ನು ನೀಡಲಿಲ್ಲ? ಆಗ ಅವರೇನು ಮಾಡುತ್ತಿದ್ದರು? ಯಾವಾಗಲೂ ಶೋಭಾ ಕರಂದ್ಲಾಜೆ ಅವರನ್ನು ನೋಡಿಕೊಂಡು ಕೂತಿದ್ರು.’

ಇಷ್ಟೆಲ್ಲ ಆದ ಮೇಲಾದರೂ ಬೇಗ್ ತಮ್ಮ ನಡೆ ಸರಿಪಡಿಸಿಕೊಂಡರಾ? ಇಲ್ಲಾ,

ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ‘ಮೋದಿ ವಿರುದ್ಧ ಮಾತನಾಡಲೇ ಬಾರದಾ?’ ಎಂದು ರೋಪು ಹಾಕಿ ಹೋರಟು ಹೋಗಿದ್ದಾರೆ. ಬೇಗ್ ಅವರನ್ನು ಮೋದಿಯವರ ಬಗ್ಗೆ ಟೀಕೆ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಆದರೆ ಯಾವ ಪದ ಬಳಸಬೇಕು, ಬಳಸಬಾರದು ಎಂಬುದರ ಬಗ್ಗೆ ಸಚಿವ ಸ್ಥಾನದಲ್ಲಿರುವ ಅವರಿಗೆ ಅರಿವಿರಬೇಕು.

ರೋಶನ್ ಬೇಗ್ ಅವರ “ವಾಗ್ಚಾತುರ್ಯ”ಕ್ಕೆ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಪಕ್ಷದ ನಾಯಕರ ಈ ಎಡವಟ್ಟನ್ನು ಸಮರ್ಥಿಸಿಕೊಳ್ಳಬೇಕೆ ಅಥವಾ ಬೇಡವೇ ಎಂದು ತೋಚದೆ ಗೊಂದಲಕ್ಕೆ ಬಿದ್ದಿದ್ದಾರೆ. ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ವೇಣುಗೋಪಾಲ್ ಅವರ ಮೇಲೆ ಕೇರಳದಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂದು ತಲೆಕೆಡಿಸಿಕೊಂಡು ಕೂತಿರುವ ರಾಜ್ಯದ ಕಾಂಗ್ರೆಸ್ ನಾಯಕರಿಗೆ, ಈಗ ರೋಷನ್ ಬೇಗ್ ಹೊಸ ತಲೆನೋನು ತಂದಿಟ್ಟಿದ್ದಾರೆ.

ಈ ಮಧ್ಯೆ, ರೋಶನ್ ಬೇಗ್ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಬಿಜೆಪಿ ಮುಖಂಡರ ಪೈಕಿ ಮಾಜಿ ಸಚಿವ ಸಿ.ಟಿ. ರವಿ ಕೂಡ ಅದೇ ಧಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ. “ಮೋದಿಯವರನ್ನು ಸೂ… ಮಗ ಎಂದು ಕರೆಯಲು ಬೇಗ್ ಕೂಡ ಅದೇ ಆಗಿರಬೇಕು’ ಎಂದು ಜರಿದು, ನಾಲಿಗೆ ಮೇಲಿನ ನಿಯಂತ್ರಣ ವಿಚಾರದಲ್ಲಿ ತಮ್ಮ ಮತ್ತು ಅವರ ನಡುವಣ ವ್ಯತ್ಯಾಸವನ್ನು ಕಡಿಮೆ ಮಾಡಿಕೊಂಡಿದ್ದಾರೆ.

1 COMMENT

Leave a Reply