ಭಾರತೀಯ ಸೇನೆಯಿಂದ ಮತ್ತೆ ಭರ್ಜರಿ ಬೇಟೆ, ಪ್ರಮುಖ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಭರ್ಜರಿ ಬೇಟೆ ಮುಂದುವರಿಸಿದೆ. ಇತ್ತೀಚೆಗಷ್ಟೇ ಜೈಶ್ ಇ ಮೊಹಮದ್ ಸಂಘಟನೆಯ ಕಮಾಂಡರ್ ನನ್ನು ಹೊಡೆದು ಹಾಕಿದ್ದ ಭದ್ರತಾ ಪಡೆಗಳು, ಇಂದು ಕಾರ್ಯಾಚರಣೆ ನಡೆಸಿ ಲಷ್ಕರ್ ಸಂಘಟನೆಯ ಕಮಾಂಡರ್ ವಾಸೀಮ್ ಶಾನನ್ನು ಹತ್ಯೆ ಮಾಡಿದೆ.

ಉಗ್ರರಿಗೆ ಸುರಕ್ಷಿತ ತಾಣವೆಂದೇ ಕುಖ್ಯಾತಿ ಪಡೆಯುತ್ತಿರುವ ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಬೆಳಗಿನ ಜಾವವೇ ಕಾರ್ಯಾಚರಣೆಗಿಳಿದ ಸೇನೆ, ವಾಸೀಮ್ ಶಾ ಜತೆಗೆ ಮತ್ತೊಬ್ಬ ಉಗ್ರ ನಿಸಾರ್ ಅಹ್ಮದ್ ಎಂಬಾತನನ್ನು ಎನ್ ಕೌಂಟರ್ ಮಾಡಿದೆ. 23 ವರ್,ದ ಈ ವಾಸೀಮ್ ಶಾ ಅಬು ಒಸಾಮಾ ಭಾಯ್ ಅಂತಲೇ ಕರೆಯಲ್ಪಡುತ್ತಿದ್ದ. ಹಲವು ದಿನಗಳಿಂದ ಈತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಭದ್ರತಾ ಪಡೆಗಳು ಇಂದು ಕಾರ್ಯಾಚರಣೆ ನಡೆಸಿ ಇತನನ್ನು ಪರ ಲೋಕಕ್ಕೆ ಕಳುಹಿಸಿದ್ದಾರೆ.

ಭದ್ರತಾ ಪಡೆಗಳ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ವಾಸೀಮ್ ಹಾಗೂ ಆತನ ರಕ್ಷಕ ನಿಸಾರ್ ಅಹ್ಮದ್ ಆ ಪ್ರದೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಎಲ್ಲ ದಿಕ್ಕುಗಳಿಂದ ಸುತ್ತುವರಿದಿದ್ದ ಸಿಆರ್ ಪಿಎಫ್ ಯೋಧರು ಇತನಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡದೆ ಹೊಡೆದು ಹಾಕಿದರು.

ಶೋಪಿಯಾನಿನ ಹೆಫ್ ಶಿರ್ಮಲ್ ಪ್ರದೇಶದ ನಿವಾಸಿಯಾಗಿದ್ದ ವಾಸೀಮ್, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ನಿಲ್ಲಿಸಿದ್ದ. ಈತನ ತಂದೆ ಹಣ್ಣು ಮಾರಾಟಗಾರರಾಗಿದ್ದಾರೆ. ಶಾಲಾ ದಿನಗಳಿಂದಲೇ ಲಷ್ಕರ್ ಸಂಘಟನೆಯ ಪರ ಒಲವು ಹೊಂದಿದ್ದ ವಾಸೀಮ್, ನಂತರ ಸಂಘಟನೆಯ ಕೊರಿಯರ್ ಬಾಯ್ ಆಗಿಯೂ ಕೆಲಸ ಮಾಡಿದ್ದ. 2014ರಲ್ಲಿ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ಈತ, ಕಳೆದ ವರ್ಷ ದಕ್ಷಿಣ ಕಾಶ್ಮೀರದ ಗಲಭೆಯ ಪ್ರಮುಖ ರೂವಾರಿಯಾಗಿದ್ದ. ಇನ್ನು ಉಗ್ರ ಸಂಘಟನೆಗೆ ಯುವಕರನ್ನು ಸೆಳಯುತ್ತಿದ್ದ, ಅಷ್ಟೇ ಅಲ್ಲದೆ ಭದ್ರತಾ ಪಡೆಗಳ ಮೇಲಿನ ದಾಳಿಯ ಹಿಂದೆಯೂ ಈತನ ಕೈವಾಡವಿತ್ತು. ಹೀಗಾಗಿ ಈತನ ತಲೆಗೆ ಭಾರತೀಯ ಭದ್ರತಾ ಪಡೆಗಳು ₹ 10 ಲಕ್ಷ ಬಹುಮಾನವನ್ನು ಘೋಷಿಸಿತ್ತು.

ಈತನ ಹತ್ಯೆಯೊಂದಿಗೆ ಒಂದೇ ವಾರದಲ್ಲಿ ಭದ್ರತಾ ಪಡೆಗಳು ಇಬ್ಬರು ಪ್ರಮುಖ ಉಗ್ರರನ್ನು ಹೊಡೆದು ಹಾಕಿದಂತಾಗಿದೆ. ಇನ್ನು ಭಾರತೀಯ ಪಡೆಗಳ ಪಟ್ಟಿಯಲ್ಲಿ ಇನ್ನು ಕೆಲವು ಉಗ್ರರ ಹೆಸರಿವೆ. ಅಲ್ ಖೈದಾ ಸಂಘಟನೆಯ ಜಾಕಿರ್ ಮುಸಾ, ಹಿಜ್ಬುಲ್ ಸಂಘಟನೆಯ ಮುಖ್ಯಸ್ಥ ರಿಯಾಜ್ ನೈಕೊ, ಸದ್ದಾಂ ಪದ್ದಾರ್, ಲಷ್ಕರ್ ಸಂಘಟನೆಯ ಜೀನತ್ ಉಲ್ ಇಸ್ಲಾಂ. ಈ ಉಗ್ರರ ಬೇಟೆಗೆ ಭಾರತೀಯ ಸೇನೆ ಹಗಲು ರಾತ್ರಿ ಶ್ರಮಿಸುತ್ತಿದ್ದು, ಶೀಘ್ರದಲ್ಲೇ ಇವರೆಲ್ಲರಿಗೂ ಟಿಕೆಟ್ ನೀಡುವುದಂತೂ ಖಚಿತ.

Leave a Reply