ಅಂತೂ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗ್ತಿದ್ದಾರೆ, ಆದರೆ ಮೋದಿಗೆ ಪರ್ಯಾಯ ನಾಯಕರಾಗುವರೇ..?

ಡಿಜಿಟಲ್ ಕನ್ನಡ ಟೀಮ್:

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ. ಹಾಗಂತ ಅವರ ತಾಯಿ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ. ಅಲ್ಲಿಗೆ ಈ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದಲ್ಲಿದ್ದ ರಾಹುಲ್ ತಾವು ಪಕ್ಷದ ಜವಾಬ್ದಾರಿ ಹೊರಲು ಸಿದ್ಧ ಎಂದು ಬಹಿರಂಗವಾಗಿ ಹೇಳಿದ್ದರು. ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್ ಸಹ ದೀಪಾವಳಿ ನಂತರ ರಾಹುಲ್ ಅಧ್ಯಕ್ಷರಾಗಲಿದ್ದಾರೆ ಎಂದಿದ್ದರು. ಹೀಗೆ ಅಲ್ಲಿಇಲ್ಲಿ ಕೇಳಿಬಂದಿದ್ದ ಮಾತುಗಳಿಗೆ ಈಗ ಸ್ವತಃ ಸೋನಿಯಾ ಗಾಂಧಿ ಅವರೇ ರಾಹುಲ್ ಸದ್ಯದಲ್ಲೇ ಅಧ್ಯಕ್ಷರಾಗುವರು ಎಂದಿದ್ದಾರೆ.

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ಈ ವರ್ಷಾಂತ್ಯದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ನಡೆಯಲಿದೆ. 2019 ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ವಿವಿಧ ರಾಜ್ಯಗಳ ಚುನಾವಣೆ ಮಿನಿ ಕದನವೇ ಸರಿ. ಹೀಗಾಗಿ ರಾಹುಲ್ ಕಾಂಗ್ರೆಸ್ ಜವಾಬ್ದಾರಿ ವಹಿಸಿಕೊಳ್ಳಲು ಇದು ಸಕಾಲ ಎಂಬುದು ಕಾಂಗ್ರೆಸ್ ನಾಯಕರ ಅಭಿಮತ.

ಇನ್ನು ಕಾಂಗ್ರೆಸ್ ಪಾಳೆಯದಿಂದ ರಾಹುಲ್ ಅವರನ್ನು ‘ವಿನಯ ಸಂಪನ್ನ’,’ಬಡವರ ಸ್ನೇಹಿ’ ಎಂದೆಲ್ಲ ಬಿಂಬಿಸುವ ಕಾರ್ಯ ನಡೆಯುತ್ತಿದೆ. ಇದು ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಒಂದೆಡೆ ರಾಹುಲ್ ಅವರನ್ನು ಜನಸಾಮಾನ್ಯರ ಮನಸ್ಸಲ್ಲಿ ಸ್ಥಿರಗೊಳಿಸುತ್ತಾ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಉದ್ಯಮಿ ಸ್ನೇಹಿ’ ಎಂದು ಬಿಂಬಿಸುವ ಯತ್ನವೂ ನಡೆಯುತ್ತಿದೆ. ಹೀಗೆ ಬ್ರ್ಯಾಂಡ್ ಬಿಲ್ಡಿಂಗ್ ಮೂಲಕ ಹಂತ ಹಂತವಾಗಿ ರಾಹುಲ್ ಗಾಂಧಿ ಅವರನ್ನು ಬೆಳೆಸಲು ಕಾಂಗ್ರೆಸ್ನಲ್ಲಿ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ.

ಆದರೆ, ಪದೇ ಪದೇ ತಮ್ಮ ಎಡವಟ್ಟುಗಳಿಂದ ಅಪಹಾಸ್ಯಕ್ಕೆ ವಸ್ತುವಾಗುತ್ತಿರುವ ರಾಹುಲ್ ನಿಜಕ್ಕೂ ಪ್ರಧಾನಿ ಮೋದಿ ಅವರಿಗೆ ಪರ್ಯಾಯ ನಾಯಕರಾಗಿ ಬೆಳೆಯಲು ಸಾಧ್ಯವೇ? ಎಂಬ ಪ್ರಶ್ನೆಯೂ ಮೂಡಿದೆ. ಕಳೆದ ವಾರ ಗುಜರಾತ್ ಯಾತ್ರೆ ನಡೆಸಿದ್ದ ರಾಹುಲ್ ಅವರಿಗೆ ಅಲ್ಲಿನ ದೇವಸ್ಥಾನವೊಂದರಲ್ಲಿ ಆರತಿ ಮಾಡುವುದು ಹೇಗೆ ಎಂಬುದನ್ನು ಸ್ಥಳೀಯ ನಾಯಕರು ಹೇಳಿಕೊಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜತೆಗೆ ಆರೆಸ್ಸೆಸ್ನಲ್ಲಿ ಹೆಣ್ಣುಮಕ್ಕಳಿಗೆ ಖಾಕಿಚಡ್ಡಿ ಹಾಕದಿರುವುದು ಮಹಿಳಾ ಸಬಲೀಕರಣ ವಿರೋದಿ ನಡೆಯ ಪ್ರತೀಕ ಎಂದಿದ್ದರು. ಜತೆಗೆ ಹೆಂಗಸರ ಶೌಚಾಲಯಕ್ಕೆ ಹೋಗಿ ಪೇಚಿಗೆ ಸಿಲುಕಿದ್ದು ಸಹ ಸುದ್ದಿಯಾಗಿತ್ತು.

ಒಂದೆಡೆ ನರೇದ್ರ ಮೋದಿ ಅವರು ವಾಕ್ಚಾತುರ್ಯದಿಂದಲೇ ಜನರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದರೆ, ಇತ್ತ ರಾಹುಲ್ ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ನಿಜಕ್ಕೂ ಮೋದಿಗೆ ಪರ್ಯಾಯ ನಾಯಕನಾಗುವರೇ ಎಂಬ ಪ್ರಶ್ನೆ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕತ್ವ ಬದಲಾವಣೆ ಸಂದರ್ಭದಲ್ಲೇ ಬರುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ರಾಹುಲ್ ನಾಯಕತ್ವಕ್ಕೊಂದು ಅಗ್ನಿಪರೀಕ್ಷೆಯೇ ಸರಿ.

1 COMMENT

Leave a Reply