ತಿರುಗೇಟು ನೀಡಲು ಹೋಗಿ  ಸಿಕ್ಕಿಬಿದ್ದ ಗುಜರಾತ್ ಸಿಎಂ ವಿಜಯ್ ರುಪಾನಿ!

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಹಿಮಾಚಲ ಪ್ರದೇಶದ ಜತೆಜತೆಗೆ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಕೆಂಡ ಕಾರುತ್ತಿದೆ. ‘ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದಿರುವ ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡಲು ಗುಜರಾತ್ ಚುನಾವಣಾ ದಿನಾಂಕ ಪ್ರಕಟಿಸುತ್ತಿಲ್ಲ’ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ವಿಪರ್ಯಾಸ ಎಂದರೆ, ಕಾಂಗ್ರೆಸಿಗರ ಈ ಆರೋಪಕ್ಕೆ ಪ್ರತ್ಯುತ್ತರ ನೀಡಲು ಹೋಗಿ ಗುಜರಾತ್ ಸಿಎಂ ವಿಜಯ್ ರುಪಾನಿ ಕೂಡ ಪರೋಕ್ಷವಾಗಿ ಈ ಆರೋಪ ಒಪ್ಪಿಕೊಂಡಿದ್ದಾರೆ.

ಎಡವಟ್ಟು ಹೇಳಿಕೆ ನೀಡಿರುವ ವಿಜಯ್ ರುಪಾನಿ, ‘2012ರ ಗುಜರಾತ್ ಚುನಾವಣೆ ಸಂದರ್ಭ ಚುನಾವಣಾ ಆಯೋಗ ಕಾಂಗ್ರೆಸ್ ಗೆಲುವಿಗೆ ಸಹಕರಿಸಿತ್ತು’ ಎಂದಿದ್ದಾರೆ. ರುಪಾನಿ ಅವರ ಪ್ರಕಾರ, 2012ರ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಆಗ ಚುನಾವಣಾ ಆಯೋಗ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಹಾಯ ಮಾಡಿತ್ತು. ಅಂದರೆ ಚುನಾವಣಾ ಆಯೋಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳ ಒತ್ತಡಕ್ಕೆ ಮಣಿಯುತ್ತದೆ ಎಂದಾಯಿತು. ಅದರಂತೆ ಈಗ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದಿದೆ.

ಇನ್ನು ಚುನಾವಣಾ ಆಯೋಗ ಎರಡೂ ರಾಜ್ಯಗಳ ಚುನಾವಣೆ ದಿನಾಂಕವನ್ನು ಒಟ್ಟಿಗೆ ಪ್ರಕಟಿಸುತ್ತದೆ ಎಂಬ ನಿರೀಕ್ಷೆ ಮೂಡಿದ್ದಾದರೂ ಹೇಗೆ? ಈಗ ಯೂ ಟರ್ನ್ ಏಕೆ ತೆಗೆದುಕೊಂಡಿದೆ ಎಂಬುದನ್ನು ಪರಾಮರ್ಶಿಸಿದಾಗ ಮನವರಿಕೆ ಆಗುವ ಅಶಗಳು ಹೀಗಿವೆ:

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆಗಳ ಅವಧಿ ಎರಡು ವಾರಗಳ ಅಂತರದಲ್ಲಿ ಮುಕ್ತಾಯಗೊಳ್ಳುತ್ತದೆ. ಕಳೆದ ಬಾರಿಯೂ ಅಂದರೆ, 2012ರ ಅಕ್ಟೋಬರ್ 3 ರಂದು ಆಯೋಗವೂ ಈ ಎರಡು ರಾಜ್ಯಗಳ ಚುನಾವಣೆ ದಿನಾಂಕವನ್ನು ಒಟ್ಟಿಗೆ ಪ್ರಕಟಿಸಿತ್ತು. 2012 ರ ನ. 4 ರಂದು ಹಿಮಾಚಲ ಪ್ರದೇಶದಲ್ಲಿ, ಡಿ.13 ಮತ್ತು 17 ರಂದು ಎರಡು ಹಂತಗಳಲ್ಲಿ ಗುಜರಾತ್ ಚುನಾವಣೆ ನಡೆಸಲಾಗಿತ್ತು. ಡಿ. 20ರಂದು ಎರಡು ರಾಜ್ಯಗಳ ಫಲಿತಾಂಶವನ್ನು ಒಟ್ಟಿಗೆ ಪ್ರಕಟಿಸಲಾಗಿತ್ತು.

ಹೀಗಾಗಿ ಈ ಬಾರಿಯೂ ಎರಡೂ ರಾಜ್ಯಗಳ ಚುನಾವಣೆ ದಿನಾಂಕ ಒಟ್ಟಿಗೆ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಇದೀಗ ನ.  9ರಂದು ಹಿಮಾಚಲ ಪ್ರದೇಶ ಚುನಾವಣೆ ನಡೆಯಲಿದೆ. ಆದರೆ ಇನ್ನು ಗುಜರಾತ್ ದಿನಾಂಕ ಪ್ರಕಟಿಸಿಲ್ಲ. ಡಿ. 18ರೊಳಗೆ ನಡೆಯಲಿದೆ ಎಂದಷ್ಟೇ ಹೇಳಿದೆ. ಇದು ಚುನಾವಣೆ ದಿನಾಂಕ ಪ್ರಕಟಣೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ನಿರಾಸೆ ಮೂಡಿಸಿದ್ದು, ಆಯೋಗವನ್ನು ಟೀಕಿಸುತ್ತಿದ್ದಾರೆ.

ಅಂದಹಾಗೆ ಚುನಾವಣಾ ಆಯೋಗ ಗುಜರಾತ್ ದಿನಾಂಕ ಪ್ರಕಟಿಸದೇ ಇರುವುದಕ್ಕೆ ನೀಡಿರುವ ಸಮಜಾಯಿಷಿ ಹೀಗಿದೆ:

‘ಗುಜರಾತ್ ಪ್ರವಾಹ ಸಂಸ್ತ್ರಸ್ತರಿಗೆ ಪರಿಹಾರ ಕಲ್ಪಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ. ಹೀಗಾಗಿ ಚುನಾವಣೆ ದಿನಾಂಕ ಪ್ರಕಟಿಸಿಲ್ಲ. ಒಂದೊಮ್ಮೆ ಚುನಾವಣಾ ದಿನಾಂಕ ಪ್ರಕಟವಾದರೆ, ನೀತಿ ಸಂಹಿತೆ ಜಾರಿಯಾಗುವುದರಿಂದ ಸಂಸ್ತ್ರಸ್ತರಿಗೆ ಪರಿಹಾರ ಕಲ್ಪಿಸುವುದು ಕಷ್ಟವಾಗುತ್ತದೆ ಎಂದು ಗುಜರಾತ್ ಸರಕಾರ ಕೇಳಿಕೊಂಡಿದೆ. ಇತ್ತ ಹಿಮಾಚಲ ಪ್ರದೇಶದಲ್ಲಿ ನ. 15 ರೊಳಗೇ ಚುನಾವಣೆ ನಡೆಯಬೇಕು. ಇಲ್ಲವಾದರೆ ಈ ರಾಜ್ಯದಲ್ಲಿ ಹಿಮ ಸುರಿಯಲಾರಂಭಿಸಿ ಮತದಾನ ಕಷ್ಟವಾಗುತ್ತದೆ. ಇನ್ನು ಚುನಾವಣೆ ದಿನಾಂಕ ಪ್ರಕಟಿಸುವುದಕ್ಕೂ ಹಾಗೂ ಮತದಾನ ನಡೆಯುವ ದಿನಕ್ಕೂ ಕನಿಷ್ಠ 46 ದಿನಗಳ ಅಂತರ ಇರಬೇಕು. ಇದರಂತೆ ನ. 15ರ ನಂತರ ಮತದಾನ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ ಚುನಾವಣೆಗಳ ದಿನಾಂಕ ಒಟ್ಟಿಗೆ ಪ್ರಕಟಿಸಿಲ್ಲ. ಗುಜರಾತ್ ಚುನಾವಣೆಯನ್ನು ಮುಂದೂಡಲಾಗಿದೆ.

Leave a Reply