ಕುಂಕುಮ ಕಂಡೋರಿಗೆ ಗೌರಿ ಹಂತಕರ ಮುಸುಡಿ ಕಾಣ್ಲಿಲ್ವೇ?!

ನಮ್ಮ ಕರ್ನಾಟಕ ಪೊಲೀಸರಿಗೆ ಏನಾಗಿ ಹೋಗಿದೆ? ಅವರೇಕೆ ಹೀಗೆ ಮಾಡುತ್ತಿದ್ದಾರೆ? ತಾವೂ ದಿಕ್ಕು ತಪ್ಪಿರುವುದಲ್ಲದೇ ಜನರನ್ನೂ ದಾರಿ ತಪ್ಪಿಸುತ್ತಿದ್ದಾರಲ್ಲಾ? ಇದರಿಂದ ಅವರಿಗೇನು ಲಾಭ? ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ರೀಲು ಸುತ್ತುತ್ತಿದ್ದಾರೆ? ಸರಕಾರ ಬರುತ್ತೇ, ಹೋಗುತ್ತೆ, ಇವರಂತೂ ಇಲ್ಲೇ ಸವೆಯಬೇಕಲ್ಲಾ? ಆದರೂ ಯಾಕೀಗೆ ಸೂತ್ರದ ಗೊಂಬೆಗಳಂತೆ ಕುಣಿಯುತ್ತಿದ್ದಾರೆ?

ನಿಜಕ್ಕೂ ಅರ್ಥವಾಗದ ವಿಚಾರವಿದು!

ವೃತ್ತಿ ಸವಾಲುಗಳಲ್ಲಿ ಎಲ್ಲವನ್ನೂ ಗೆಲ್ಲಲಾಗುವುದಿಲ್ಲ. ಕೆಲವು ಪಾಸಾಗುತ್ತವೆ. ಇನ್ನೂ ಕೆಲವು ಸೋತು ಹಳ್ಳ ಹಿಡಿಯುತ್ತವೆ. ಮನುಷ್ಯ ಪ್ರಯತ್ನವನ್ನು ಗುರಿ ಮೆಟ್ಟಿ ನಿಂತಾಗ ಯಾರೇನು ಮಾಡಲಾಗುವುದಿಲ್ಲ. ಟೀಕೆ-ಟಿಪ್ಪಣಿ ಇದ್ದದ್ದೇ. ಅದು ಸಹಜ ಕೂಡ. ಸ್ವೀಕರಿಸುವುದು ಅನಿವಾರ್ಯ. ಹಾಗಂತ ಇದರಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿಯಬಾರದು. ಅಲ್ಲೂ ಮುಗ್ಗಸಿರಿ ಬಿದ್ದರೆ ಮತ್ತಷ್ಟು ಯಡವಟ್ಟಾಗುತ್ತದೆ. ಒಂದು ಸೋಲಿನಿಂದಾಗುವ ಹಿನ್ನಡೆಗಿಂತ ಒಂದು ಸುಳ್ಳಿನಿಂದಾಗುವ ಅವಮಾನ ಬಲು ದೊಡ್ಡದು. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ವಿಚಾರದಲ್ಲಿ ಕರ್ನಾಟಕ ಪೊಲೀಸರ ಪರಿಸ್ಥಿತಿ ಇದೇ ಆಗಿದೆ.

ಗೌರಿ ಲಂಕೇಶ್ ಹತ್ಯೆ ದಿನದಿಂದಲೂ ಗೊಂದಲಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ನಲ್ವತ್ತು ದಿನಗಳ ನಂತರ ಗೌರಿ ಹತ್ಯೆ ಸಂಬಂಧ ಪತ್ರಿಕಾಗೋಷ್ಠಿ ಕರೆದಾಗ ಮಾಧ್ಯಮಗಳ ಕುತೂಹಲ ಅಂಬರ ಬಾರಿಸಿದ್ದು ಸುಳ್ಳಲ್ಲ. ಏಕೆಂದರೆ ಮೊನ್ನೆ ತಾನೇ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ‘ಗೌರಿ ಹಂತಕರ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ಸಾಕ್ಷ್ಯ ನಾಶವಾಗುವ ಸಂಭವ ಇರುವುದರಿಂದ ಅದನ್ನು ಬಹಿರಂಗ ಮಾಡುತ್ತಿಲ್ಲ. ಒಂದೆರಡು ದಿನದಲ್ಲಿಯೇ ಪ್ರಕರಣ ಬೇಧಿಸಲಾಗುವುದು, ಹಂತಕರನ್ನು ಬಂಧಿಸಲಾಗುವುದು’ ಎಂದು ಹೇಳಿದ್ದರು. ಹೀಗಾಗಿ ಎಸ್‌ಐಟಿ ಪ್ರೆಸ್ ಕಾನ್ಫರೆನ್‌ಸ್‌ ಕರೆದ ತಕ್ಷಣ ಹಂತಕರಾರು ಎಂಬುದು ಬಹಿರಂಗವಾಗುತ್ತದೆ, ಅವರನ್ನು ಎಲ್ಲರ ಮುಂದೆ ತಂದು ನಿಲ್ಲಿಸುತ್ತಾರೆ ಎಂದು ಮಾಧ್ಯಮದವರು ಅಂದುಕೊಂಡಿದ್ದರು. ಗೃಹ ಸಚಿವರ ಖಡಕ್ ಮಾತಿನ ಹಿನ್ನೆಲೆ ಇಂಥದೊಂದು ಬೆಳವಣಿಗೆಗೆ ಪುಷ್ಠಿ ನೀಡಿತ್ತು.

ಆದರೆ ಎಸ್‌ಐಟಿ ಪೊಲೀಸರು ಮಾಡಿದ್ದಾದರೂ ಏನು? ಇಬ್ಬರು ಶಂಕಿತ ಹಂತಕರ ಮೂರು ರೇಖಾಚಿತ್ರ ಬಿಡುಗಡೆ ಮಾಡಿ, ಚಿತ್ರದಲ್ಲಿ ಹೋಲುವವರನ್ನು ಕಂಡರೆ ಮಾಹಿತಿ ಕೊಟ್ಟು, ಇವರ ಸೆರೆಗೆ ನೆರವಾಗಿ ಎಂದು ಮಾಧ್ಯಮದ ಮೂಲಕ ಸಾರ್ವಜನಿಕರ ಮೊರೆ ಹೋದದ್ದು! ಬಿಡುಗಡೆ ಮಾಡಿದ ರೇಖಾಚಿತ್ರಗಳಲ್ಲಿ ಒಬ್ಬನದೇ ಎರಡು ಇವೆ. ಒಂದಕ್ಕೆ ಮೀಸೆ ಇಟ್ಟು, ಕುಂಕುಮ ಹಚ್ಚಿದ್ದರೆ, ಮತ್ತೊಂದಕ್ಕೆ ಕ್ಲೀನ್ ಶೇವ್ ಮಾಡಿ, ಕುಂಕುಮ ಅಳಿಸಿಹಾಕಲಾಗಿದೆ. ಇನ್ನೊಬ್ಬನ ಚಿತ್ರವಂತೂ ನಕ್ಸಲ್ ನಾಯಕ ವಿಕ್ರಂ ಗೌಡನ ಚಹರೆಗೆ ಬಲು ಹತ್ತಿರವಾಗಿದೆ.

ಅಲ್ಲ, ಈ ಕೆಲಸ ಮಾಡುವುದಿಕ್ಕೆ ಎಸ್‌ಐಟಿ ಪೊಲೀಸರಿಗೆ ನಂತರ ನಲ್ವತ್ತು ದಿನಗಳು ಬೇಕಾದವೇ? ಈ ಕೆಲಸವನ್ನು ಮೊದಲೇ ಮಾಡಬಹುದಿತ್ತಲ್ಲ? ಅವರೇ ಹೇಳುವ ಪ್ರಕಾರ ಈ ಶಂಕಿತರ ಚಿತ್ರ ರಚನೆಗೆ ತೆಗೆದುಕೊಂಡ ಸಮಯ ಕೇವಲ 48 ಗಂಟೆಗಳು ಮಾತ್ರ. ಅಂದರೆ ಎರಡು ದಿನಗಳು. ಹತ್ಯೆ ದಿನ ಹಾಗೂ ವಾರಕ್ಕೆ ಮೊದಲು ಗೌರಿ ಮನೆ ರಸ್ತೆಯಲ್ಲಿ ಸಂಚರಿಸಿದವರ ಬಗ್ಗೆ ನೆರೆಹೊರೆಯವರು ಕೊಟ್ಟ ಮಾಹಿತಿ ಹಾಗೂ ಗೌರಿ ಮನೆಯದ್ದೂ ಸೇರಿದಂತೆ ಒಂದಷ್ಟು ಸಿಸಿ ಕ್ಯಾಮರಾಗಳ ಫೂಟೇಜ್ ಅಧರಿಸಿ ಈ ರೇಖಾಚಿತ್ರಗಳನ್ನುರೂಪಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇಲ್ಲೂ ಕೆಲಸ ಮಾಡಿರುವುದು ಊಹೆಯೇ ಹೊರತು ಯಾವುದೇ ನಿಖರತೆ ಅಲ್ಲವೇ ಅಲ್ಲ. ಕೇವಲ ಶಂಕೆ ಆಧರಿಸಿದ ಈ ಕೆಲಸಕ್ಕೆ ನಲ್ವತ್ತು ದಿನ ಬೇಕಾದವೇ ಎಂಬುದೂ ಅನೇಕ ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ.

ಪೊಲೀಸರು ಹೇಳುವ ಪ್ರಕಾರವೇ ತನಿಖೆ ಸಾಗಿರುವ ದಾರಿಯನ್ನು ಕ್ರಮಿಸುತ್ತಾ ಹೋದರೆ ಯಾರಿಗಾದರೂ ಅನುಮಾನಗಳು ಅಡ್ಡ ಬಾರದಿರದು. ಅವರು ಕಾಲಕಾಲಕ್ಕೆ ಕೊಟ್ಟಿರುವ ಮಾಹಿತಿ ಹಾಗೂ ಈಗ ರೇಖಾಚಿತ್ರ ಬಿಡುಗಡೆ ಸಂದರ್ಭ ನೀಡಿರುವ ವಿವರಗಳಿಗೆ ಹೋಲಿಕೆ ಮಾಡಿದಾಗ ಅವರೆಷ್ಟು ಸಂಕಟ ಅನುಭವಿಸುತ್ತಿದ್ದಾರೆ ಎಂಬುದರ ಅನಾವರಣ ಆಗದಿರದು. ಹತ್ಯೆ ಆರಂಭದಲ್ಲಿ ಅವರು ಹೇಳಿದ್ದು ಗೌರಿ ಮನೆಯ ಸಿಸಿ ಕ್ಯಾಮರಾದಲ್ಲಿ ಕೃತ್ಯದ ಬಗ್ಗೆ ಅಸ್ಪಷ್ಟ ಮಾಹಿತಿ ಇದೆ. ಆರಂಭದಲ್ಲಿ ನಾಲ್ವರು ಬಂದು ಈ ಕೃತ್ಯ ಎಸಗಿದ್ದಾರೆ ಎಂದರು. ನಂತರ ಅದು ಇಬ್ಬರಿಗೆ ಕುಸಿಯಿತು. ತದನಂತರ ಒಬ್ಬನೇ ಈ ಕೃತ್ಯ ಎಸಗಿರಬಹುದು ಎಂದರು. ಮೊದಲು ಹಂತಕರು ಬಳಸಿದ ವಾಹನ ಸ್ಕೂಟರ್ ಎಂದಿತ್ತು. ನಂತರ ಅದು ಕೆಂಪು ಬಣ್ಣದ ಪಲ್ಸರ್‌ಗೆ ಪರಿವರ್ತನೆ ಆಯಿತು. ಹತ್ಯೆಯನ್ನು ಯಾರೂ ಕಂಡಿಲ್ಲ. ಹೀಗಾಗಿ ಮಾಹಿತಿ ಕಲೆ ಹಾಕುವುದು ಕಷ್ಟವಾಗುತ್ತಿದೆ ಎಂದರು. ನಂತರ ಹತ್ಯೆ ಹೊತ್ತಿನಲ್ಲಿ ಅದೇ ರಸ್ತೆಯ ದಾರಿಹೋಕರೊಬ್ಬರು ಬೈಕ್‌ನಲ್ಲಿ ಒಬ್ಬ ಹೋಗುತ್ತಿದ್ದುದನ್ನು ಗಮನಿಸಿದ್ದಾರೆ ಎಂದರು. ನಂತರ ಇಬ್ಬರು ಬೈಕ್‌ನಲ್ಲಿ ಹೋಗಿದ್ದರ ಮಾಹಿತಿ ಇದೆ ಎಂದರು. ಕಾರಿನಲ್ಲಿ ಬಂದ ಗೌರಿ ಗೇಟ್ ತೆಗೆದು ಒಳಹೋಗುತ್ತಿದ್ದಾಗ ಗೇಟ್ ಬಳಿ ಬಂದ ಹೆಲ್ಮೆಟ್‌ಧಾರಿ ಅವರನ್ನು ಕೂಗಿ ಕರೆದು, ಹತ್ತಿರ ಬಂದಾಗ ಗೇಟ್ ಹೊರಗೇ ನಿಂತು ಪ್ಯಾಂಟ್ ಜೇಬಿನಿಂದ ತೆಗೆದ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿ, ಮೊದಲೇ ಹಿಮ್ಮುಖವಾಗಿ ಸ್ಟಾರ್ಟ್ ಕಂಡೀಷನ್‌ನಲ್ಲಿ ದೀಪ ಹೊತ್ತಿಸಿ ತಿರುಗಿಸಿ ನಿಲ್ಲಿಸಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದರು. ಆಮೇಲೆ, ಇಲ್ಲ, ಇಲ್ಲ ಇಬ್ಬರು ಬಂದಿದ್ದರು, ಒಬ್ಬ ಗುಂಡು ಹಾರಿಸಿದ. ಮತ್ತೊಬ್ಬ ಚಾಲನೆ ಸ್ಥಿತಿಯಲ್ಲಿಟ್ಟಿದ್ದ ಗಾಡಿ ಹತ್ತಿಕೊಂಡು ಪರಾರಿಯಾದ ಎಂದರು. ಅಂದರೆ ಆರಂಭದಿಂದಲೂ ಹತ್ಯೆ ಆರೋಪಿಗಳ ಸಂಖ್ಯೆ ಬಗ್ಗೆಯೇ ಅವರಿಗೆ ಖಚಿತ ಮಾಹಿತಿ ಇರಲಿಲ್ಲ. ಬರೀ ಗೊಂದಲಗಳೇ ಅವರನ್ನಾಳುತ್ತಿದ್ದವು. ಹದಿನೈದು ದಿನ ಕಳೆದರೂ ಹಂತಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಷ್ಟೊಂದು ಬುದ್ಧಿವಂತಿಕೆಯಿಂದ ಈ ಹತ್ಯೆ ಮಾಡಲಾಗಿದೆ. ಹಂತಕರು ಸಣ್ಣ ಸುಳಿವು ಕೂಡ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದೆಲ್ಲ ಹೇಳಿ ಕೈಕೈ ಹಿಸುಕಿಕೊಂಡಿದ್ದರು. ಆದರೂ ಆಗಷ್ಟೇ ತಾನೇ ಗೃಹ ಖಾತೆ ವಹಿಸಿಕೊಂಡಿದ್ದ ರಾಮಲಿಂಗಾರೆಡ್ಡಿ ಅವರು ಮಾತ್ರ ಹಂತಕರ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧನ ಎಂದು ಹೇಳುತ್ತಲೇ ಬಂದರು. ಹಾಗೆಂದು ಅವರೆಷ್ಟು ಬಾರಿ ಹೇಳಿದ್ದಾರೋ ಅವರಿಗೇ ಗೊತ್ತಿಲ್ಲ!

ಶೀಘ್ರದಲ್ಲೇ ಹಂತಕರ ಬಂಧನ ಎಂದು ಹೇಳಿ, ಬರೀ ಅವರ ರೇಖಾ ಚಿತ್ರ ಬಿಡುಗಡೆ ಮಾಡಿರುವ ಗೃಹ ಸಚಿವರ ಮಾತು ಮತ್ತು ಕೃತಿ ನಡುವಣ ವ್ಯತ್ಯಾಸವೇ ಈ ಹತ್ಯೆ ತನಿಖೆ ಎತ್ತ ಸಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಕೊಟ್ಟಿದೆ. ಹತ್ಯೆ ನಡೆದಿರುವುದು ರಾತ್ರಿ 7.50 ರ ಸುಮಾರಿಗೆ. ರಾಜರಾಜೇಶ್ವರಿ ನಗರ ಪಾರ್ಕ್ ಎದುರಿನ ಒಳರಸ್ತೆಯಲ್ಲಿರುವ ಗೌರಿ ಮನೆ ಪರಿಸರವನ್ನು ಕತ್ತಲೆ ಸಾಮ್ರಾಜ್ಯವೇ ಆಳುತ್ತಿದೆ. ಆ ರಸ್ತೆಯಲ್ಲಿ ಸರಿಯಾದ ಬೀದಿದೀಪಗಳಿಲ್ಲ (ಹತ್ಯೆ ನಂತರ ಗೌರಿ ಮನೆ ಆವರಣದಲ್ಲಿ ಫೋಕಸ್ ಲೈಟ್ ಅಳವಡಿಸಲಾಗಿತ್ತು). ಇರುವ ಕೆಲ ಮನೆಗಳ ಆವರಣದ ದೀಪದ ಬೆಳಕನ್ನೂ (ಸ್ವಿಚ್ ಹಾಕಿದ್ದರೆ) ಆ ರಸ್ತೆಯಲ್ಲಿರುವ ಬೃಹತ್ ಅತ್ತಿಮರ, ತಬೂಬಿಯ ಮರಗಳ ಗುಂಪು ನುಂಗಿ ಹಾಕಿರುತ್ತದೆ. ಸಂಜೆ ನಂತರ ಈ ರಸ್ತೆಯಲ್ಲಿ ಒಂಟಿಯಾಗಿ ಓಡಾಡಲು ಜನ ಅಂಜುತ್ತಾರೆ. ಗೌರಿ ಮನೆಯಿಂದ 200 ಅಡಿ ದೂರದಲ್ಲಿರೋ ಪಾರ್ಕ್ ಬಳಿ ಇರುವ ದೀಪಗಳ ಬೆಳಕನ್ನೂ ಅಲ್ಲಿರುವ ಮರಗಿಡಗಳೇ ಕಬಳಿಸಿ ಹಾಕಿವೆ. ಅಂದರೆ ಈ ರಸ್ತೆಯಲ್ಲಿ ಸದಾ ಗವ್ವೆನ್ನುವ ಕತ್ತಲು. ಪರಿಸ್ಥಿತಿ ಹೀಗಿರುವಾಗ ಮುಖ ಮುಚ್ಚುವ ಹೆಲ್ಮೆಟ್ ಧರಿಸಿದ್ದ ಗೌರಿ ಹಂತಕನ ಹಣೆಯಲ್ಲಿ ಕುಂಕುಮ ಪತ್ತೆ ಮಾಡಿದ ಪೊಲೀಸರ ಕರಾಮತ್ತನ್ನು ಮೆಚ್ಚಲೇಬೇಕು. ಕುಂಕುಮ ಪತ್ತೆ ಹಚ್ಚಿದ ಮೇಲೆ ಹಂತಕನ ಮುಸುಡಿ ಪತ್ತೆ ಮಾಡುವುದು ದೊಡ್ಡ ವಿಚಾರವೇ? ಕುಂಕುಮಕ್ಕಿಂತ ಆತನ ಮುಸುಡಿಯೇನೂ ಚಿಕ್ಕದಿರುವುದಿಲ್ಲವಲ್ಲ! ಹೀಗಾಗಿ ಮುಖಚರ್ಯೆಯನ್ನು ಕರಾರುವಕ್ಕಾಗಿಯೇ ಹೇಳಬಹುದಿತ್ತು. ಹಾಗಿದ್ದಾಗ ರೇಖಾಚಿತ್ರ ಬಿಡುಗಡೆಯ ಪ್ರಮೇಯವೇ ಬರುವುದಿಲ್ಲ. ಆತನ ಭಾವಚಿತ್ರವನ್ನೇ ಬಿಡುಗಡೆ ಮಾಡಬಹುದಿತ್ತು. ಒಂದೊಮ್ಮೆ ಪೊಲೀಸರಿಗೆ ಮಾಹಿತಿ ಕೊಟ್ಟ ಮಹಿಳೆ ಹಂತಕ ಕುಂಕುಮ ಧರಿಸಿದ್ದ ಎಂದು ಹೇಳಿದ್ದರೇ ಆ ವ್ಯಕ್ತಿಯ ಕುಂಕುಮರಹಿತ ಮತ್ತೊಂದು ರೇಖಾಚಿತ್ರ ಬಿಡುಗಡೆ ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ? ಅಲ್ಲಿಗೇ ಆಕೆ ಕೊಟ್ಟ ಮಾಹಿತಿ ಬಗ್ಗೆ ಪೊಲೀಸರಿಗೆ ಅನುಮಾನ ಇದೆ ಎಂದಾಯಿತು. ಇಲ್ಲ, ಅರಿಶಿನ, ಕುಂಕುಮ, ಬೊಟ್ಟು, ಚುಕ್ಕೆ ಇಟ್ಟು ಆರೋಪಿ ಪತ್ತೆ ಬಗ್ಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ ಎಂದಾಯಿತು, ಅಲ್ಲವೇ?

ನಿಜ, ನಲ್ವತ್ತು ದಿನಗಳಾದರೂ ಗೌರಿ ಹಂತಕರ ಪತ್ತೆ ಹಚ್ಚಿಲ್ಲ ಎಂಬುದು ಬರೀ ಪೊಲೀಸರಿಗಷ್ಟೇ ಅಲ್ಲ, ರಾಜ್ಯ ಸರಕಾರದ ಮೇಲೂ ಇನ್ನಿಲ್ಲದ ಒತ್ತಡ ತಂದಿರುವುದು ಸುಳ್ಳಲ್ಲ. ಹಾಗಂತ ಕಾಗಕ್ಕ-ಗೂಬಕ್ಕನ ಕತೆ ಹೆಣೆಯಲಾದೀತೇ? ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪ್ರತಿಯೊಂದು ಪಕ್ಷವೂ ತನಗೆಟುಕಿದ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಬೆರೆಸುತ್ತದೆ, ಮತಗಳನ್ನು ಅರಸುತ್ತದೆ. ಈ ರೇಖಾಚಿತ್ರ ಬಿಡುಗಡೆಯನ್ನು ಕೂಲಂಕಷವಾಗಿ ಪರಾಮರ್ಶೆ ಮಾಡಿದರೆ ಹತ್ಯೆ ಅನುಮಾನವನ್ನು ಕುಂಕುಮಾರಾಧನೆ ನಂಬುಗೆಯ ನಿರ್ದಿಷ್ಟ ಪಕ್ಷ, ಸಂಘಟನೆಯ ತಲೆಗೆ ಕಟ್ಟಿ ಮತ ಎಣಿಸಿಕೊಳ್ಳುವ ಹುನ್ನಾರವಿದ್ದಂತೆ ಕಾಣುತ್ತಿದೆ. ಇಲ್ಲದಿದ್ದರೆ ಕತ್ತಲಲ್ಲಿ ಕುಂಕುಮ ಕಾಣಿಸುತ್ತಿರಲಿಲ್ಲ.

ರೇಖಾಚಿತ್ರ ಬಿಡುಗಡೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದು ರೇಖಾಚಿತ್ರ ಒಬ್ಬೊಬ್ಬರ ಹೋಲಿಕೆಯೊಡನೆ ಲಾಸ್ಯವಾಡುತ್ತಿದೆ. ಹಾಸ್ಯೋತ್ಸವಕ್ಕೆ ಆಸ್ಪದ ಮಾಡಿಕೊಟ್ಟಿದೆ. ಈ ವಿಚಾರವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ ಪೊಲೀಸರು ಬಿಡುಗಡೆ ಮಾಡಿರುವ ಎರಡನೇ ಆರೋಪಿ ರೇಖಾಚಿತ್ರ ನಕ್ಸಲ್ ಗುಂಪೊಂದರ ನಾಯಕ ವಿಕ್ರಂ ಗೌಡ ಚಹರೆಗೆ ಬಹಳ ಹತ್ತಿರವಾಗಿದೆ. ಮೊದಮೊದಲು, ಹಿಂದೂ ವಿರೋಧಿ ನಿಲುವು ಸೃಷ್ಟಿಸಿರಬಹುದಾದ ಆಕ್ರೋಶ, ನಕ್ಸಲ್ ಹಗೆತನ, ವೃತ್ತಿ ವೈಷಮ್ಯ, ಕುಟುಂಬ ಕಲಹ ಮತ್ತಿತರ ಕೋನಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದ ಪೊಲೀಸರು ಯಾವುದರ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂಬುದನ್ನು ನಿಖರವಾಗಿ ಹೇಳುವಲ್ಲಿ ಸೋತರು. ವೃತ್ತಿ ವೈಷಮ್ಯ, ಕುಟುಂಬ ಕಲಹ ಕಾರಣವಲ್ಲ ಎಂದು ಹೇಳುತ್ತಾರೆ. ಆದರೆ ಹಿಂದೂವಾದಿಗಳು, ನಕ್ಸಲರ ಜತೆಗಿನ ಹಗೆತನ ಕಾರಣವೆಂದೂ ಹೇಳುವುದಿಲ್ಲ, ನಿರಾಕರಿಸುವುದೂ ಇಲ್ಲ. ಆದರೆ ರೇಖಾಚಿತ್ರ ನೋಡುವವರಿಗೆ ಹಿಂದೂವಾದಿಗಳು ಹಾಗೂ ನಕ್ಸಲರ ಬಗ್ಗೆ ಅನುಮಾನ ಮೂಡುವ ಹಾಗೆ ‘ಹಿಟ್ ಅಂಡ್ ರನ್’ ನಡೆ ಪ್ರದರ್ಶಿಸಿದ್ದಾರೆ. ಕುಂಕುಮಧಾರಿ ಚಿತ್ರ ನೋಡುವವರು ಹಿಂದೂವಾದಿಗಳನ್ನು ಅನುಮಾನಿಸಬೇಕು, ವಿಕ್ರಂ ಗೌಡ ಚಹರೆ ಕಂಡವರು ನಕ್ಸಲರ ಕಡೆ ಬೆರಳು ತೋರಿಸಬೇಕು. ಹಾಗೊಂದು ‘ಡಬಲ್ ಗೇಮ್’ ಅನ್ನು ಎಸ್‌ಐಟಿ ಪೊಲೀಸರು ಪ್ರದರ್ಶಿಸಿದ್ದಾರೆ.

ನೂರಕ್ಕೆ ತೊಂಬತ್ತರಷ್ಟು ನಕ್ಸಲ್ ನಾಯಕ ವಿಕ್ರಂ ಗೌಡ ಹೋಲುವ ರೇಖಾ ಚಿತ್ರ ಬಿಡುಗಡೆ ಮಾಡುವ ಬದಲು ಅವರದೇ ಭಾವಚಿತ್ರ ಬಿಡುಗಡೆ ಮಾಡಬಹುದಿತ್ತು. ಆದರೆ ಆ ಕೆಲಸ ಮಾಡಿಲ್ಲ. ಏಕೆಂದರೆ ವಿಕ್ರಂ ಗೌಡ ಈ ಕೃತ್ಯ ಎಸಗಿದ್ದು ಎಂಬುದನ್ನು ರುಜುವಾತು ಪಡಿಸಲು ಅವರ ಬಳಿ ಯಾವುದೇ ಸಾಕ್ಷಿ ಇಲ್ಲ. ಸುಖಾಸುಮ್ಮನೆ ಎಡಪಂಥೀಯರ ವಿರೋಧ ಏಕೆ ಕಟ್ಟಿಕೊಳ್ಳಬೇಕು ಎಂಬ ಎಚ್ಚರಿಕೆ ಜತೆಜತೆಗೆ ಅವರ ಮೇಲೊಂದು ಹಲ್ಲಿ ಎಸೆದು ಪರಾರಿಯಾಗುವ ಹುನ್ನಾರವೂ ಇದೆ. ಅದೇ ರೀತಿ ಹಿಂದೂವಾದಿಗಳ ವಿಚಾರದಲ್ಲಿಯೂ ಆಟ ಆಡಿದ್ದಾರೆ. ಆದರೆ ಪೊಲೀಸರು ಕುಂಕುಮ ಹಚ್ಚಿರುವ ವ್ಯಕ್ತಿ ನಿರ್ದಿಷ್ಟ ಹಿಂದೂವಾದಿ ನಾಯಕರನ್ನು ಹೋಲುತ್ತಿಲ್ಲ. ಏಕೆಂದರೆ ಇಲ್ಲಿಯೂ ಅವರ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಬರೀ ಬಿಜೆಪಿ, ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್‌ನವರಷ್ಟೇ ಅಲ್ಲದೇ ಕಾಂಗ್ರೆಸ್, ಜೆಡಿಎಸ್ ಮತ್ತಿತರ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಕುಂಕುಮ ಇಟ್ಟುಕೊಳ್ಳುತ್ತಾರೆ. ಕುಂಕುಮದ ವಿಸ್ತಾರ ನಿರ್ದಿಷ್ಟ ರಾಜಕೀಯ ಪಕ್ಷ ಹಾಗೂ ಸಂಘಟನೆಗಳನ್ನು ದಾಟಿರುವುದರಿಂದ ಹಿಂದೂವಾದಿಗಳೂ ತಮಗೇ ತಾವೇ ಸಮಾಧಾನ ಹೇಳಿಕೊಳ್ಳಬಹುದು. ಅದರಾಚೆಗೂ ರೇಖಾಚಿತ್ರದ ಆರೋಪಿಗೆ ಕುಂಕುಮವಿಟ್ಟಿರುವವರ ಕುತ್ಸಿತ ಬುದ್ಧಿಯ ಗುರಿ ಹಿಂದೂವಾದಿಗಳೇ ಆಗಿದ್ದಾರೆ ಎಂಬುದು ಮಾತ್ರ ಸುಳ್ಳಲ್ಲ.

ಗೌರಿ ಹತ್ಯೆ ವಿಚಾರದಲ್ಲಿ ತಾವೇನೋ ಸಾಧಿಸಿದ್ದೇವೆ (ಅಲ್ಲಿ ಯಾವ ಸಾಧನೆಯೂ ಇಲ್ಲ ಎಂಬುದು ಬೇರೆ ಮಾತು) ಎಂದು ತೋರಿಸಿಕೊಳ್ಳಲು ಎಸ್‌ಐಟಿ ಪೊಲೀಸರು ಈ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದರೋ ಅಥವಾ ಅವರ ಮೇಲಿರುವ ಅಗೋಚರ ಒತ್ತಡ ಈ ಕೆಲಸ ಮಾಡಿಸಿದೆಯೋ ಗೊತ್ತಿಲ್ಲ. ಆದರೆ ಅವರು ಎಡ, ಬಲ ಇಬ್ಬರ ಮೇಲೂ ಅನುಮಾನದ ಕಪ್ಪೆ ಎಸೆದು ತನಿಖೆಗೆ ತಿಪ್ಪೆ ಸಾರಿಸಿದ್ದಾರೆ. ಆದರೆ ಒಂದು ಸಂಗತಿ ನೆನಪಿಟ್ಟುಕೊಳ್ಳಬೇಕು. ಈಗಿನ ಜನ ಸರಕಾರ, ಪೊಲೀಸರು ಹೇಳಿದ್ದೆಲ್ಲವನ್ನೂ ನಂಬುವಷ್ಟು ದಡ್ಡರಲ್ಲ. ಒಂದು ವಿಷಯ ಎಷ್ಟೆಲ್ಲ ಆಯಾಮಗಳನ್ನು ಒಳಗೊಂಡಿರುತ್ತದೆ, ಇದರ ಹಿಂದೆ ಏನೆಲ್ಲ ರಾಜಕೀಯ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಪರಾಮರ್ಶಿಸಿ ನೋಡುವಷ್ಟು, ತಮ್ಮದೇ ಆದ ನಿರ್ಣಯದ ರೇಖೆ ಎಳೆಯುವಷ್ಟು ಬುದ್ಧಿವಂತರಿದ್ದಾರೆ. ಇದನ್ನು ರೇಖಾಚಿತ್ರ ಎಳೆದವರು, ಎಳೆಸಿದವರೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಇನ್ನೂ ಒಂದು ವಿಚಾರ. ತನಿಖೆ ಈಗ ಸಾಗುತ್ತಿರುವ ಮಾರ್ಗ ಮತ್ತು ವೇಗ ನೋಡಿದರೆ ಗೌರಿ ಹಂತಕರು ಕೈಗೆ ಸಿಗುವ ಸಂಭವ ಬಹಳ ಕ್ಷೀಣವಾಗಿದೆ. ದಿಕ್ಕುದೆಸೆ ಇಲ್ಲದ ರೇಖಾಚಿತ್ರ ಬಿಡುಗಡೆ ಮಾಡಲು ನಲ್ವತ್ತು ದಿನ ತೆಗೆದುಕೊಂಡವರು ಹಂತಕರ ಪತ್ತೆಗೆ ಮತ್ತೆಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಅಥವಾ ಪ್ರಗತಿಪರ ಚಿಂತಕರಾದ ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸಾರೆ ಹಾಗೂ ಡಾ. ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ಪಟ್ಟಿಗೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೋ ಗೊತ್ತಿಲ್ಲ.

ಲಗೋರಿ: ಬೇರೆಯವರ ಮೇಲೆ ಗೂಬೆ ಕೂರಿಸಬೇಕು ಅಂದ್ರೆ ಹಂತಕನನ್ನು ಪತ್ತೆ ಮಾಡಬಾರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

2 COMMENTS

Leave a Reply