ದಿನೇ ದಿನೇ ಭಾರತಕ್ಕೆ ಹತ್ತಿರವಾಗುತ್ತಿದೆ ಅಮೆರಿಕ, ಇದರ ಹಿಂದಿರುವ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ದಿನೇ ದಿನೇ ಭಾರತದ ಜತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ವಿಚಾರವಾಗಿ ಅಮೆರಿಕ ಜಾಗತಿಕ ಮಟ್ಟದಲ್ಲಿ ಅನೇಕ ಬಾರಿ ಬೆಂಬಲ ಸೂಚಿಸಿದೆ. ಭಯೋತ್ಪಾದನೆ, ಪಾಕಿಸ್ತಾನ, ಚೀನಾ ಹೀಗೆ ಪ್ರತಿಯೋಂದು ವಿಚಾರದಲ್ಲೂ ಅಮೆರಿಕ ಭಾರತದ ಬೆನ್ನಿಗೆ ನಿಲ್ಲುತ್ತಿದೆ.

ಮೇಲ್ನೋಟಕ್ಕೆ ಅಮೆರಿಕ ಕೇವಲ ಭಯೋತ್ಪಾದನೆ ನಿಯಂತ್ರಿಸುವ ವಿಚಾರದಲ್ಲಿ ಭಾರತದ ಜತೆ ಕೈಜೋಡಿಸಿದೆ ಎಂದು ಬಿಂಬಿತವಾಗುತ್ತಿದೆ. ಆದರೆ ಅಮೆರಿಕ ಕೇವಲ ಭಯೋತ್ಪಾದನೆ ವಿಚಾರವಷ್ಟೇ ಅಲ್ಲ, ಪಾಕಿಸ್ತಾನ ಜತೆಗಿನ ಕಾಶ್ಮೀರ ವಿಚಾರವಾಗಿರಬಹುದು, ಚೀನಾ ಜತೆಗೆ ಇತ್ತೀಚೆಗೆ ನಡೆದ ದೋಕಲಂ ವಿವಾದವಾಗಿರಬಹುದು ಅಮೆರಿಕ ತೆರೆಮರೆಯಲ್ಲಿ ಭಾರತದ ಬೆನ್ನಿಗೆ ನಿಂತಿತ್ತು.

ಅಮೆರಿಕ ಹೀಗೆ ಭಾರತದ ಬೆನ್ನಿಗೆ ನಿಲ್ಲುವುದರ ಹಿಂದೆ ಅನೇಕ ಲೆಕ್ಕಾಚಾರಗಳು ಇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಅಮೆರಿಕ ದಕ್ಷಿಣ ಏಷ್ಯಾ ಕುರಿತಾದ ತನ್ನ ನೀತಿ ಬದಲಿಸಿಕೊಳ್ಳುತ್ತಿದೆ. ಇದರಲ್ಲಿ ಭಯೋತ್ಪಾದನೆ ನಿಗ್ರಹ, ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ಜತೆಗೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಬಂಧದ ಕುರಿತು ವಿಭಿನ್ನ ವಿಭಿನ್ನ ನಿಲುವು ತಾಳಲು ಮುಂದಾಗಿದೆ. ಸದ್ಯ ಅಮೆರಿಕ ಅಫ್ಘಾನಿಸ್ತಾನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಅಪ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯತಂತ್ರ ಈಡೇರಬೇಕಾದರೆ ಭಾರತದ ನೆರವು ಅಗತ್ಯವಾಗಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಗುರಿ ಸಾಧನೆಗೆ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರ ಸಂಘಟನೆಗಳು ಅಡ್ಡಗಾಲು ಹಾಕುತ್ತಿವೆ. ಈ ಕಾರಣದಿಂದ ಭಯೋತ್ಪಾದನೆ ವಿಷಯವಾಗಿ ಅಮೆರಿಕ ಪಾಕಿಸ್ತಾನ ವಿರುದ್ಧ ಮುನಿಸಿಕೊಂಡಿದೆ. ಅತ್ತ ಚೀನಾ ಕಂಡರೆ ಮೊದಲಿನಿಂದಲೂ ಅಮೆರಿಕಕ್ಕೆ ಆಗುವುದಿಲ್ಲ. ಹೀಗಾಗಿ ಅಮೆರಿಕಕ್ಕೆ ಭಾರತದ ಸ್ನೇಹವೊಂದೇ ದಕ್ಷಿಣ ಏಷ್ಯಾದಲ್ಲಿನ ಕಾರ್ಯತಂತ್ರ ಯಶಸ್ವಿಯಾಗಿಸಲು ಇರುವ ದಾರಿ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿರುವುದಿಷ್ಟು… ‘ಇತ್ತೀಚೆಗೆ ಟ್ರಂಪ್ ಅವರು ಅಫ್ಘಾನಿಸ್ತಾನದಲ್ಲಿನ ಉಗ್ರರ ವಿರುದ್ಧದ ಹೋರಾಟಕ್ಕೆ ಹಾಗೂ ದಕ್ಷಿಣ ಏಷ್ಯಾ ಕುರಿತಾಗಿ ನೂತನ ಕಾರ್ಯತಂತ್ರವನ್ನು ರೂಪಿಸುದ್ದಾರೆ. ಈ ನೂತನ ಕಾರ್ಯತಂತ್ರಗಳಲ್ಲಿ ಭಾರತ ಜತೆಗಿನ ಸ್ನೇಹ ಸಂಬಂಧ ಪ್ರಮುಖವಾದ ಅಂಶ. ಭಾರತ ಪ್ರಜಾಪ್ರಭುತ್ವದ ದೇಶ. ಅದು ಬೇರೆ ರಾಷ್ಟ್ರವನ್ನು ಎಂದಿಗೂ ಹೆದರಿಸುವುದಿಲ್ಲ. ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನದ ಕುತಂತ್ರದ ಮೇಲೆ ನಿಗಾ ಇಡಲು ಭಾರತದಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದ್ದಾರೆ. ಇದರೊಂದಿಗೆ ಭಾರತದ ಬೆಂಬಲವನ್ನು ಪಡೆದುಕೊಂಡು, ಭಯೋತ್ಪಾದನೆ ಹಾಗೂ ಅಫ್ಘಾನಿಸ್ತಾನ ವಿಚಾರದಲ್ಲಿ ತನ್ನ ಉದ್ದೇಶ ಈಡೇರಿಸಿಕೊಳ್ಳುವುದು ಅಮೆರಿಕದ ಲೆಕ್ಕಾಚಾರ.

ಈ ಬಗ್ಗೆ ಮಾತು ಮುಂದುವರಿಸಿದ ನಿಕ್ಕಿ ಹ್ಯಾಲಿ ಹೇಳಿದಿಷ್ಟು… ‘ಅಫ್ಘಾನಿಸ್ತಾನದಲ್ಲಿ ಮತ್ತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವ ಅಮೆರಿಕದ ಪ್ರಯತ್ನಕ್ಕೆ ಭಯೋತ್ಪಾದಕರಿಂದ ಅಡ್ಡಿಯುಂಟಾಗುತ್ತಿದೆ. ಅಫ್ಘಾನಿಸ್ತಾನವನ್ನು ಈ ಉಗ್ರರಿಂದ ಮುಕ್ತಗೊಳಿಸುವುದು ಹಾಗೂ ಉಗ್ರರ ಕೈಗೆ ಅಣ್ಣಸ್ತ್ರ ದೊರಕದಂತೆ ನೋಡಿಕೊಳ್ಳುವುದು ಅಮೆರಿಕದ ಮುಂದಿರುವ ಗುರಿ. ಇದನ್ನು ಈಡೇರಿಸಿಕೊಳ್ಳಲು ಅಮೆರಿಕ ತನ್ನ ಆರ್ಥಿಕ, ರಾಯಭಾರತ್ವ ಹಾಗೂ ಮಿಲಿಟರಿ ಬಲಗಳನ್ನು ಬಳಸಿಕೊಳ್ಳಲು ಸಿದ್ಧವಿದೆ. ಇದೇ ವೇಳೆ ಭಾರತದೊಂದಿಗೆ ಆರ್ಥಿಕ ಮತ್ತು ಭದ್ರತಾ ಸಹಯೋಗಕ್ಕೆ ಅಮೆರಿಕ ಮುಂದಾಗಿದ್ದೇವೆ. ಇಷ್ಟು ದಿನಗಳ ಕಾಲ ಪಾಕಿಸ್ತಾನ ನಮ್ಮ ಸ್ನೇಹ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆ ಸ್ನೇಹವನ್ನು ನಾವು ಗೌರವಿಸಿದ್ದೆವು. ಆದರೆ ಅಮೆರಿಕವನ್ನು ಗುರಿಯಾಗಿಸಿಕೊಂಡಿರುವ ಉಗ್ರರಿಗೆ ಆಶ್ರಯ ನೀಡಿರುವ ಪಾಕಿಸ್ತಾನದೊಂದಿಗೆ ಇನ್ನು ಸ್ನೇಹ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಉಗ್ರರ ವಿರುದ್ಧದ ಈ ಹೋರಾಟಕ್ಕೆ ಭಾರತದ ನೆರವು ಅಗತ್ಯ. ಅಫ್ಘಾನಿಸ್ತಾನದ ವಿಷಯದಲ್ಲಿ ಅಮೆರಿಕಕ್ಕೆ ಭಾರತದ ಸಹಾಯ ಅಗತ್ಯವಾಗಿದೆ. ಈ ಪ್ರದೇಶದಲ್ಲಿ ಅಮೆರಿಕಕ್ಕಿರುವ ಅತ್ಯುತ್ತಮ ಸ್ನೇಹಿ ರಾಷ್ಟ್ರ ಎಂದರೆ ಅದು ಭಾರತ ಮಾತ್ರ. ಅಘ್ಘಾನಿಸ್ತಾನದ ಪುನರ್ ನಿರ್ಮಾಣದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ.’

ಅಮೆರಿಕಕ್ಕೆ ದಕ್ಷಿಣ ಏಷ್ಯಾ ವಿಚಾರದಲ್ಲಿ ಭಾರತ ಸ್ನೇಹ ಎಷ್ಟು ಪ್ರಮುಖವಾಗಿದೆ ಎಂಬುದು ನಿಕ್ಕಿ ಹ್ಯಾಲೆ ಅವರ ಈ ಮಾತುಗಳಲ್ಲಿ ಸ್ಪಷ್ಟವಾಗಿದೆ. ಇನ್ನು ಭಾರತದ ಜತೆ ಕೇವಲ ಅಮೆರಿಕ ಸಹಾಯ ಹಸ್ತ ನಿರೀಕ್ಷಿಸುತ್ತಿಲ್ಲ. ಚೀನಾವನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕದ ಮತ್ತೊಂದು ಸ್ನೇಹ ರಾಷ್ಟ್ರವಾಗಿರುವ ಜಪಾನ್ ಕೂಡ ಭಾರತದ ಜತೆಗಿನ ಸಂಬಂಧವನ್ನು ವೃದ್ಧಿಸಿಕೊಳ್ಳಲು ಉತ್ಸುಕತೆ ತೋರುತ್ತಿದೆ. ಈ ಎಲ್ಲ ಅಂಶಗಳಿಂದ ಅಮೆರಿಕಕ್ಕೆ ದಕ್ಷಿಣ ಏಷ್ಯಾದಲ್ಲಿ ಭಾರತಕ್ಕಿಂತ ಮತ್ತೊಂದು ನಂಬಿಕಸ್ತ ರಾಷ್ಟ್ರ ಬೇರೊಂದಿಲ್ಲ ಎಂಬುದು ಸಾಬೀತಾಗಿದೆ.

Leave a Reply