ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ವಿರುದ್ಧದ ಕಠಿಣ ನಿಲುವು ಲೋಧಾ ಸಮಿತಿ ಹೆಸರಿಸಿದ್ದ 13 ಮಂದಿ ಮೇಲೆ ಏಕಿಲ್ಲ?

ಡಿಜಿಟಲ್ ಕನ್ನಡ ಟೀಮ್:

2013ರ ಐಪಿಎಲ್ ಆವೃತ್ತಿ ಕ್ರಿಕೆಟ್ ಕ್ರೀಡೆಯನ್ನೇ ತಲೆತಗ್ಗಿಸುವಂತೆ ಮಾಡಿತ್ತು. ಸ್ಪಾಟ್ ಫಿಕ್ಸಿಂಗ್ ಜತೆಗೆ ಬೆಟ್ಟಿಂಗ್ ಪ್ರಕರಣ ಇಡೀ ಕ್ರೀಡೆಯ ಮಾನ ಮರ್ಯಾದೆಯನ್ನೇ ಮೂರು ಕಾಸಿಗೆ ಹರಾಜಾಕಿತ್ತು. ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಕೇರಳದ ವೇಗಿ ಶಾಂತಕುಮಾರನ್ ಶ್ರೀಶಾಂತ್ ಬಿಸಿಸಿಐ ವಿಧಿಸಿರುವ ಜೀವಮಾನ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದು, ಇದರ ವಿರುದ್ಧ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಆಜೀವ ನಿಷೇಧ ಶಿಕ್ಷೆಯನ್ನು ತೆರವುಗೊಳಿಸಿದ್ದ ಕೇರಳ ಹೈ ಕೋರ್ಟ್, ಬಿಸಿಸಿಐನ ಮರುಅರ್ಜಿಯನ್ನು ವಿಚಾರಣೆ ನಡೆಸಿ ಶ್ರೀಶಾಂತ್ ವಿರುದ್ಧದ ನಿಷೇಧವನ್ನು ಮತ್ತೆ ಹೇರಿದೆ. ಮತ್ತೆ ಕ್ರಿಕೆಟ್ ಗೆ ಮರಳುವ ಕನಸು ಕಾಣುತ್ತಿದ್ದ ಶ್ರೀಶಾಂತ್ ಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಹೀಗಾಗಿ ಹೈಕೋರ್ಟಿನ ಆದೇಶದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿರುವ ಶ್ರೀಶಾಂತ್, ಈಗ ಲೋಧ ಸಮಿತಿ ಶಿಫಾರಸ್ಸು ಮಾಡಿದ್ದ 13 ಹೆಸರುಗಳ ಪಟ್ಟಿಯಲ್ಲಿರುವವರಿಗೆ ಏಕೆ ಶಿಕ್ಷೆ ಇಲ್ಲ ಎಂಬ ಪ್ರಶ್ನೆ ಎತ್ತಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ ಎಂಬ ಮಾತಿದೆ. ಆ ಮಾತು ಈ ಪ್ರಕರಣಕ್ಕೆ ಯಾಕೋ ಸೂಕ್ತವಾಗಿ ಕಾಣುತ್ತಿಲ್ಲ. ಕಾರಣ, ಸ್ಪಾಟ್ ಫಿಕ್ಸಿಂಗ್ ನಲ್ಲಿ ಬಹಿರಂಗವಾಗಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದದ್ದು, ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚೌಹಾಣ್. ಈ ಮೂವರಿಗೂ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಇನ್ನು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರು ಭಾಗಿಯಾದ್ದರಿಂದ ಆ ತಂಡಗಳಿಗೂ ಎರಡು ವರ್ಷದ ನಿಷೇಧದ ಶಿಕ್ಷೆ ನೀಡಲಾಗಿದೆ.

ಆದರೆ…

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಧಾ ಸಮಿತಿ ನೀಡಿದ್ದ 13 ಖ್ಯಾತನಾಮರ ಹೆಸರಿನ ಪಟ್ಟಿ ರಹಸ್ಯ ಲಕೋಟೆಯಲ್ಲಿಯೇ ಉಳಿದುಕೊಂಡು ಬಿಟ್ಟಿದೆ. ಹಾಗಾದರೆ ಆ 13 ಮಂದಿಯ ಕಥೆ ಏನು? ಅವರ ವಿರುದ್ಧ ತನಿಖೆ ಇಲ್ಲವೇ? ಶಿಕ್ಷೆ ಇಲ್ಲವೇ? ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದೇ ರೀತಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ವೇಗಿ ಮೊಹಮದ್ ಆಮೀರ್ ಈಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಪಾಕಿಸ್ತಾನ ತಂಡದಲ್ಲಿ ಆಡುತ್ತಿದ್ದಾರೆ. ಆಮೀರ್ ಹಾಗೂ ಶ್ರೀಶಾಂತ್ ಪ್ರಕರಣವನ್ನು ಹೋಲಿಕೆ ಮಾಡುವುದಾದರೆ, ಶ್ರೀಶಾಂತ್ ಗೆ ಶಿಕ್ಷೆಯ ಪ್ರಮಾಣ ತೀವ್ರವಾಗಿಯೇ ಇದೆ.

ಇತ್ತೀಚೆಗೆ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ತೆರವುಗೊಳಿಸಿದ ನಂತರ ಬಿಸಿಸಿಐ ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗಲಿಲ್ಲ. ಆ ನಿರ್ಧಾರ ತನಗಾದ ಮುಖಭಂಗ ಎಂಬಂತೆ ಪರಿಗಣಿಸಿತು. ಹೀಗಾಗಿ ಈ ಆದೇಶ ಪ್ರಶ್ನಿಸಿ ನಾಯ್ಯಾಲಯಕ್ಕೆ ಮರುಅರ್ಜಿ ಸಲ್ಲಿಸಿತು. ಈಗ ನ್ಯಾಯಾಲಯ ಶ್ರೀಶಾಂತ್ ಗೆ ಮತ್ತೆ ನಿಷೇಧದ ಶಿಕ್ಷೆ ಮುಂದುವರಿಸಿರುವುದನ್ನು ಸ್ವಾಗತಿಸಿ ಗೆದ್ದ ಸಂತೋಷದಲ್ಲಿದೆ.

ಶ್ರೀಶಾಂತ್ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಆದರೆ ಶ್ರೀಶಾಂತ್ ಅವರಿಗೆ ಕಠಿಣ ಶಿಕ್ಷೆ ನೀಡಿ, ಉಳಿದವರನ್ನು ರಕ್ಷಿಸುವ ಪ್ರಯತ್ನ ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂಬ ಕಾಳಜಿ ಬಿಸಿಸಿಐಗೆ ಇರುವುದು ನಿಜವೇ ಆದರೆ, ಶ್ರೀಶಾಂತ್ ವಿರುದ್ಧ ಹೇಗೆ ಕಠಿಣ ನಿರ್ಧಾರ ತೆಗೆದುಕೊಂಡಿದೆಯೋ ಅದೇ ರೀತಿ ಲೋಧಾ ಸಮಿತಿ ನ್ಯಾಯಾಲಯಕ್ಕೆ ನೀಡಿದ್ದ 13 ಮಂದಿಗಳ ವಿರುದ್ಧವೂ ಗಟ್ಟಿ ನಿಲುವು ತಾಳಬೇಕು. ಆ 13 ಮಂದಿ ವಿರುದ್ಧವೂ ತನಿಖೆ ನಡೆಯಬೇಕು, ಆನಂತರ ತನಿಖೆಯ ಫಲಿತಾಂಶದ ಆಧಾರದ ಮೇಲೆ ಅವರಿಗೂ ಶಿಕ್ಷೆಯಾಗಬೇಕು. ಆದರೆ ಪ್ರಕರಣ ನಡೆದು ನಾಲ್ಕು ವರ್ಷವಾದರೂ ಆ ಹೆಸರುಗಳಿರುವ ಲಕೋಟೆ ಬಗ್ಗೆ ಯಾರೊಬ್ಬರು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಹೀಗಾಗಿ ಬಿಸಿಸಿಐ ಶ್ರೀಶಾಂತ್ ಗೆ ಶಿಕ್ಷೆಯ ಬರೆ ಎಳೆದು ತಾನು ಸಾಚಾ ಎಂದು ತೋರಿಸಿಕೊಳ್ಳುತ್ತಾ ತನಗೆ ಬೇಕಾದವರನ್ನು ರಕ್ಷಿಸಿಕೊಳ್ಳುತ್ತಿರುವ ಪ್ರಯತ್ನ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

Leave a Reply