ತಾಜ್ ವಿವಾದ: ತೇಪೆ ಹಚ್ಚಲು ಮುಂದಾಯ್ತಾ ಯೋಗಿ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್:

ತಾಜ್ ಮಹಲ್ ವಿವಾದಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ತೇಪೆ ಹಚ್ಚಲು ಹೋರಟಿದೆಯೇ? ಹೀಗೊಂದು ಪ್ರಶ್ನೆ ಈಗ ಹುಟ್ಟುಕೊಂಡಿದೆ.

ಕಾರಣ, ‘ತಾಜ್ ಮಹಲ್ ಭಾರತದ ಸಂಸ್ಕೃತಿಯ ಪ್ರತೀಕ ಅಲ್ಲ, ತಾಜ್ ಮಹಲ್ ಅನ್ನು ಭಾರತೀಯರ ಬೆವರು ಹಾಗೂ ರಕ್ತ ಸುರಿಸಿ ಕಟ್ಟಲಾಗಿದೆ…’ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕರು, ಮಂತ್ರಿಗಳು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಿರುಹೊತ್ತಿಗೆಯಲ್ಲಿ ತಾಜ್ ಮಹಲ್ ಅನ್ನು ಕೈ ಬಿಡಲಾಗಿತ್ತು.

ಆದರೆ ಈಗ ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಅದರಲ್ಲಿ ತಾಜ್ ಮಹಲ್ ಚಿತ್ರವನ್ನು ಪ್ರಕಟಿಸಿದೆ. ತಾಜ್ ಮಹಲ್ ಭಾರತೀಯ ಸಂಸ್ಕೃತಿಯ ಭಾಗವೇ ಅಲ್ಲ ಎನ್ನುತ್ತಿದ್ದ ಯೋಗಿ ಸರ್ಕಾರದ ಈ ಒಂದು ಪ್ರಯತ್ನ ಈಗ ಅಚ್ಚರಿ ಮೂಡಿಸಿದೆ.

ಕ್ಯಾಲೆಂಡರ್ ನಲ್ಲಿ ತಾಜ್ ಮಹಲ್ ಚಿತ್ರ ಪ್ರಕಟಿಸಲಾಗಿದ್ದು, ಕೆಳ ಭಾಗದಲ್ಲಿ ಪ್ರಧಾನಿ ಮೋದಿ ಹಾಗೂ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಿತ್ರವನ್ನು ಹಾಕಲಾಗಿದೆ. ಈ ಕ್ಯಾಲೆಂಡರ್ ನಲ್ಲಿ ತಾಜ್ ಮಹಲ್ ಜತೆಗೆ ಗೋರಖನಾಥ ದೇವಸ್ಥಾನ, ಬನಾರಸ್ ನಲ್ಲಿರುವ ಕಾಶಿ ವಿಶ್ವನಾಥ ದೇವಾಲಯ, ವಿದ್ಯಾಂಚಲ್, ಮಥುರಾದ ಬರ್ಸಾನ, ಶ್ರೀಕೃಷ್ಣ ಜನ್ಮಸ್ಥಳ, ಝಾನ್ಸಿ ಕೋಟೆ, ಅಯೋಧ್ಯೆ, ತ್ರಿವೇಣಿ ಸಂಗಮ, ಗುರುದ್ವಾರದ ಚಿತ್ರಗಳನ್ನು ಪ್ರಕಟಿಸಲಾಗಿದೆ.

ಇದೆಲ್ಲದರ ಜತೆಗೆ ಯೋಗಿ ಅವರು ಇದೇ ತಿಂಗಳು 26ರಂದು ತಾಜ್ ಮಹಲ್ ಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಯೋಗಿ ಅವರ ಸರ್ಕಾರ ತಾಜ್ ಮಹಲ್ ವಿವಾದಕ್ಕೆ ತೇಪೆ ಹಾಕುವ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟವಾಗಿದೆ.

Leave a Reply