ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಯೋಗಿ ಆದಿತ್ಯನಾಥ್ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

‘ನನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡಲು ನಿಮಗೇನು ಅಧಿಕಾರವಿದೆ?’ ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಯೋಧ್ಯೆಯಲ್ಲಿನ ದೀಪಾವಳಿ ಆಚರಣೆ ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಮರು ಪ್ರಶ್ನೆ ಹಾಕಿದ ಪರಿ.

ಈ ಬಾರಿಯ ದೀಪಾವಳಿ ಹಬ್ಬವನ್ನು ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಈ ಆಚರಣೆಯ ಆಯೋಜನೆ ಕುರಿತಂತೆ ಸ್ವತಃ ಯೋಗಿ ಆದಿತ್ಯನಾಥ್ ಅವರೇ ಮುತುವರ್ಜಿ ವಹಿಸಿದ್ದರು. ಯೋಗಿ ಆದಿತ್ಯನಾಥರು ಅಯೋಧ್ಯೆಯಲ್ಲಿನ ಹಬ್ಬದ ಆಚರಣೆಯನ್ನು ಪ್ರಶ್ನಿಸುತ್ತಾ, ಬೇರೆ ವಿಷಯಗಳಿಂದ ಜನರ ಗಮನ ಸೆಳೆಯುವ ಸಲುವಾಗಿ ಈ ಆಚರಣೆ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈ ಟೀಕೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದುವ ಯೋಗಿ ಆದಿತ್ಯನಾಥರು ಹೇಳಿರುವುದಿಷ್ಟು…

‘ಶ್ರೀರಾಮನ ಜನ್ಮಭೂಮಿಗೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಜನ ಆಗಮಿಸುತ್ತಾರೆ. ಈ ಹಬ್ಬದ ಆಚರಣೆಯ ಆಯೋಜನೆ ಜತೆಗೆ ಈ ಪ್ರವಾಸಿಗರ ಭದ್ರತೆ ಹಾಗೂ ಸ್ವಚ್ಛತೆಯ ಪರಿಶೀಲನೆ ನಡೆಸಲು ಭೇಟಿ ನೀಡಿದ್ದೆ. ಈ ಹಬ್ಬದ ಆಚರಣೆ ನನ್ನ ವೈಯಕ್ತಿಕ ನಂಬಿಕೆ. ಅದನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ ಅಧಿಕಾರ ಏನಿದೆ?

ನಾವು ಏನು ಮಾಡಿದರೂ ವಿರೋಧಿಸಬೇಕು ಎಂಬ ಮನಸ್ಥಿತಿಯವರಿದ್ದಾರೆ. ನಾನು ಅಯೋಧ್ಯೆಗೆ ಬಂದರೆ ಪ್ರಶ್ನಿಸುತ್ತಾರೆ. ಬರದಿದ್ದರೆ, ಇಲ್ಲಿಗೆ ಬರಲು ನನಗೆ ಭಯ ಎಂದು ಹೇಳುತ್ತಾರೆ. ಈಗ ಅಯೋಧ್ಯೆಯಲ್ಲಿನ ಹಬ್ಬದ ಆಚರಣೆ ಜನರ ಗಮನವನ್ನು ಬೇರೆಡೆಗೆ ಸೆಳಎಯುವ ಪ್ರಯತ್ನ ಎನ್ನುತ್ತಿದ್ದಾರೆ. ಕೇವಲ ಹಬ್ಬದ ಆಚರಣೆಗಷ್ಟೇ ನಾನು ಇಲ್ಲಿಗೆ ಬಂದಿಲ್ಲ. ಗೋಧಿ ಖರೀದಿ, ಸಾಲ ಮನ್ನಾ ಹಾಗೂ ಇತರೆ ವಿಷಯಗಳ ಪರಿಶೀಲನೆಗಾಗಿ ಆಗಮಿಸಿದ್ದು, ನಾನು ಇಲ್ಲಿಗೆ ಕೆಲಸದ ಮೇಲೆ ಬಂದಿದ್ದೇನೆ.

ಈ ಹಿಂದಿನ ಸರ್ಕಾರಗಳು ಜಾತಿ ಧರ್ಮದ ಆಧಾರದ ಮೇಲೆ ಭೇದ ಭಾವ ಮಾಡುತ್ತಿದ್ದವು. ಆದರೆ ನಾವು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುತ್ತಿದ್ದೇವೆ. ಇಲ್ಲಿನ ಋಣಾತ್ಮಕತೆಯನ್ನು ತೆಗೆದು ಹಾಕಿ ಸಕಾರಾತ್ಮಕ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸುತ್ತಿದ್ದೇವೆ.

ಈ ಹಬ್ಬದ ಆಚರಣೆಗೆ ಅಯೋಧ್ಯೆಯ ಎಲ್ಲ ನಿವಾಸಿಗಳು ಬೆಂಬಲ ನೀಡಿದ್ದಾರೆ. ಇಷ್ಟು ದಿನಗಳ ಕಾಲ ಅಯೋಧ್ಯೆಯ ಮೇಲೆ ನಿರಂತರ ದಾಳಿಯಾಗುತ್ತಿತ್ತು. ಈ ಪ್ರದೇಶವನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಈ ಪ್ರದೇಶದ ಅಭಿವೃದ್ಧಿಗೆ ₹ 133 ಕೋಟಿ ಮೊತ್ತದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಇನ್ನು ಮುಂದೆ ಅಯೋಧ್ಯೆಯಲ್ಲಿನ ಪರಿಸ್ಥಿತಿ ಸುಧಾರಿಸಲಿದೆ.’

Leave a Reply