‘ನೋಟ್ ಬ್ಯಾನ್ ತಪ್ಪು ನಿರ್ಧಾರ ಎಂದು ಒಪ್ಪಿಕೊಂಡ್ರೆ ಮೋದಿಗೆ ಮತ್ತೆ ಸೆಲ್ಯೂಟ್ ಹೊಡಿತೀನಿ’, ಹೇಳಿಕೆಗಳಿಂದಲೇ ರಾಜಕೀಯ ದಾಳ ಉರುಳಿಸುತ್ತಿದ್ದಾರಾ ಕಮಲ್?

ಡಿಜಿಟಲ್ ಕನ್ನಡ ಟೀಮ್:

ರಾಜಕೀಯಕ್ಕೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಖ್ಯಾತ ನಟ ಕಮಲ್ ಹಾಸನ್ ಉತ್ತಮ ರಾಜಕೀಯಪಟುವಾಗುವ ಎಲ್ಲಾ ಲಕ್ಷಣ ತೋರುತ್ತಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ನಿರ್ಧಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದ ಕಮಲ್, ಇಂದು ಮತ್ತೊಂದು ರಾಗ ಹಾಡುತ್ತಿದ್ದಾರೆ. ಅದೇನೆಂದರೆ, ‘ನೋಟು ಅಮಾನ್ಯ ಅತ್ಯಂತ ಕೆಟ್ಟ ನಿರ್ಧಾರ ಎಂದು ಒಪ್ಪಿಕೊಳ್ಳುವುದಾದರೆ ನಾನು ಮೋದಿ ಅವರಿಗೆ ಮತ್ತೆ ಸೆಲ್ಯೂಟ್ ಹೊಡಿತೀನಿ’ ಎಂದು.

ಕಳೆದ ವರ್ಷ ಮೋದಿ ಅವರು ನೋಟು ಅಮಾನ್ಯ ನಿರ್ಧಾರ ಘೋಷಿಸಿದಾಗ ಬೆಂಬಲ ಸೂಚಿಸಿದ್ದ ಕಮಲ್ ಹಾಸನ್ ಹೀಗೆ ಹೇಳಿದ್ದರು. ‘ಮೋದಿ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪ್ರತಿಯೊಬ್ಬರೂ ಪಕ್ಷಭೇದ ಮರೆತು ಈ ನಿರ್ಧಾರಕ್ಕೆ ಬೆಂಬಲಿಸಬೇಕು. ಕಪ್ಪು ಹಣದ ವಿರುದ್ಧದ ಈ ಹೋರಾಟದಿಂದ ಆಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಸಹಿಸಿಕೊಳ್ಳಲೇಬೇಕು.’

ಇನ್ನು ಮೋದಿಯವರ ನಿರ್ಧಾರಕ್ಕೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದಿರುವ ಕಮಲ್, ‘ನಾನು ಪ್ರಧಾನಿಯವರ ನಿರ್ಧಾರವನ್ನು ಬೆಂಬಲಿಸಿದ ನಂತರ ಆರ್ಥಿಕತೆಯ ಬಗ್ಗೆ ಉತ್ತಮ ಜ್ಞಾನ ಹೊಂದಿರುವವರು ನನಗೆ ಕರೆ ಮಾಡಿ, ಸರ್ಕಾರಕ್ಕೆ ಬೆಂಬಲ ನೀಡುತ್ತಿರುವುದನ್ನು ಖಂಡಿಸಿದ್ದರು. ಆದರೆ ಮೋದಿ ಅವರ ಆಲೋಚನೆ ಸರಿಯಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಎಡವಿದ್ದಾರೆ. ಹೀಗಾಗಿ ಅವರಗೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತೇನೆ. ಒಂದು ವೇಳೆ ಪ್ರಧಾನಿ ತಮ್ಮ ನಿರ್ಧಾರ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡರೆ, ನಾನು ಮತ್ತೆ ಅವರಿಗೆ ಸೆಲ್ಯೂಟ್ ಮಾಡುತ್ತೇನೆ.’

ಸದ್ಯ ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ತರುತ್ತೇನೆ ಎಂದು ಹೇಳುತ್ತಾ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಕಮಲ್ ಹಾಸನ್ ಪ್ರಮುಖ ವಿಷಯಗಳ ಕುರಿತು ಹೇಳಿಕೆಗಳನ್ನು ನೀಡುವ ಮೂಲಕ ಜನರ ಗಮನವನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕಮಲ್ ಹಾಸನ್ ಜತೆಗೆ ಮತ್ತೊಬ್ಬ ಸೂಪರ್ ಸ್ಟಾರ್ ರಜನಿ ಕಾಂತ್ ಸಹ ರಾಜಕೀಯಕ್ಕೆ ಪ್ರವೇಶಿಸುವ ಮಾತುಗಳು ದಟ್ಟವಾಗುತ್ತಿವೆ. ರಜನಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಬರುತ್ತಾರೋ ಅಥವಾ ಬಿಜೆಪಿ ಸೇರಿಕೊಳ್ಳುತ್ತಾರೋ ಎಂಬ ಬಗ್ಗೆ ಸ್ಪಷ್ಟವಾಗಿ ಈಗಲೇ ಹೇಳಲಾಗುತ್ತಿಲ್ಲ. ಒಂದುವೇಳೆ ರಜನಿಕಾಂತ್ ರಾಜಕೀಯಕ್ಕೆ ಬಂದರೆ, ಬಿಜೆಪಿಯ ಬೆಂಬಲ ಸಿಗೋದು ಖಚಿತ.

ಇತ್ತ ಕಮಲ್ ಹಾಸನ್ ಎಡಪಂಥಿಯರ ಜತೆ ಗುರಿತಿಸಿಕೊಳ್ಳುತ್ತಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಕಮಲ್ ಹಾಸನ್ ಕೇಂದ್ರ ಸರ್ಕಾರದ ವಿರುದ್ಧದ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ದಾಳ ಉರುಳಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡತೊಡಗಿದೆ.

Leave a Reply