ಮಾಲಿನ್ಯದ ಘೋರತೆ ಯುದ್ಧ, ವಿಪತ್ತು, ಹಸಿವಿಗಿಂತಲೂ ಹೆಚ್ಚು, ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ

ಡಿಜಿಟಲ್ ಕನ್ನಡ ಟೀಮ್:

ಪಟಾಕಿಯ ಹೊಡೆಯುತ್ತಾ ದೀಪಾವಳಿ ಹಬ್ಬ ಆಚರಿಸುವ ಈ ಸಂಭ್ರಮದ ಸಮಯದಲ್ಲಿ ವಾಯು ಮಾಲಿನ್ಯದ ಕುರಿತ ಚರ್ಚೆ ಗಂಭೀರವಾಗಿ ನಡೆಯುತ್ತಿದೆ. ಸದ್ಯ ಮನುಷ್ಯ ಭೂಮಿಯ ಮೇಲೆ ಮಾಡುತ್ತಿರುವ ಮಾಲಿನ್ಯದ ಪ್ರಮಾಣ ಸಾಮಾನ್ಯವಾಗಿಲ್ಲ. ಈ ಮಾಲಿನ್ಯದ ದುಷ್ಪರಿಣಾಮ ಘೋರವಾಗಿದ್ದರೂ ಇದರ ಬಗ್ಗೆ ಅರಿವಿಲ್ಲದೆ ನಾವು ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಈ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ.

ವಿಶ್ವದಲ್ಲಿ ಮಾಲಿನ್ಯದಿಂದ ಸಾಯುತ್ತಿರುವವರ ಪ್ರಮಾಣ ಗಮನಿಸಿದರೆ, ಇದರ ಘೋರತೆ ಯುದ್ಧ, ಹಸಿವು, ಪಾಕೃತಿಕ ವಿಕೋಪಕ್ಕಿಂತ ಹೆಚ್ಚಾಗಿದೆ ಎಂಬುದು ತಿಳಿಯುತ್ತದೆ. ಮಾಲಿನ್ಯದ ಕುರಿತಾಗಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಮಾಲಿನ್ಯ ವಿಶ್ವದ ಅತಿ ದೊಡ್ಡ ಮಾರಕ ಎಂಬುದು ಸ್ಪಷ್ಟವಾಗುತ್ತಿದೆ.

ಈ ಅಧ್ಯಯನದ ವರದಿಯಲ್ಲಿ ವಿಶ್ವದ ಮಾಲಿನ್ಯಕ್ಕೆ ಬಲಿಯಾಗುತ್ತಿರುವವರ ಅಂಕಿ ಅಂಶಗಳತ್ತ ಒಮ್ಮೆ ಗಮನಹರಿಸಿದರೆ ಸಾಕು. ಇದರ ದುಷ್ಪರಿಣಾಮ ಎಷ್ಟಿದೆ ಎಂಬುದರ ಅರಿವಾಗುತ್ತದೆ. ಈ ವರದಿಯಲ್ಲಿನ ಆಘಾತಕಾರಿ ಅಂಶಗಳು ಹೀಗಿವೆ…

  • ಪ್ರತಿ ವರ್ಷ ವಿಶ್ವದಾದ್ಯಂತ ಯುದ್ಧ, ಹಿಂಸಾಚಾರ, ಪ್ರಾಕೃತಿಕ ವಿಕೋಪ, ಹಸಿವು, ಮಾರಕ ರೋಗಗಳಾದ ಏಡ್ಸ್, ಮಲೇರಿಯಾದಿಂದ ಎಷ್ಟು ಜನ ಸಾಯುತ್ತಿದ್ದಾರೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಮಾಲಿನ್ಯದಿಂದ ಸಾಯುತ್ತಿದ್ದಾರೆ.
  • 2015ರಲ್ಲಿ ಪ್ರತಿ ಆರು ಅನಿರೀಕ್ಷಿತ ಸಾವಿನಲ್ಲಿ ಒಂದು ಸಾವು ಮಾಲಿನ್ಯದ ಕಾರಣದಿಂದಾಗಿ ಆಗುತ್ತಿದೆ. ಮಾಲಿನ್ಯ ಅಥವಾ ಟಾಕ್ಸಿಕ್ ದುಷ್ಪರಿಣಾಮವಾಗಿ 2015ರಲ್ಲಿ ಸುಮಾರು 90 ಲಕ್ಷ ಮಂದಿ ಸತ್ತಿದ್ದಾರೆ.
  • ಈ ಮಾಲಿನ್ಯದಿಂದ ಆಗುವ ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಕೋಟ್ಯಂತರ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದೆ. ಈ ವರದಿಯ ಪ್ರಕಾರ ಪ್ರತಿ ವರ್ಷ 4.6 ಟ್ರಿಲಿಯನ್ ಅಮೆರಿಕನ್ ಡಾಲರ್ (299 ಲಕ್ಷ ಕೋಟಿ) ನಷ್ಟು ಅಂದರೆ ವಿಶ್ವದ ಆರ್ಥಿಕತೆಯ ಶೇ.6. ರಷ್ಟು ಹಣ ಈ ಮಾಲಿನ್ಯದಿಂದ ಎದುರಾಗುವ ಆರೋಗ್ಯ ಸಮಸ್ಯೆಗೆ ಖರ್ಚಾಗುತ್ತಿದೆ.
  • ವಾಯು ಮಾಲಿನ್ಯದಿಂದ ಪ್ರತಿ ವರ್ಷ 65 ಲಕ್ಷ ಜನ ಸಾಯುತ್ತಿದ್ದರೆ, ನೀರಿನ ಮಾಲೀನ್ಯದಿಂದ 1.8 ಮಂದಿ ಸಾಯುತ್ತಿದ್ದಾರೆ. ಇನ್ನು ಭಾರತದ ವಿಚಾರಕ್ಕೆ ಬಂದರೆ ಪರಿಸರ ಮಾಲಿನ್ಯದಿಂದ ವರ್ಷಕ್ಕೆ 25 ಲಕ್ಷ ಜನ ಸಾಯುತ್ತಿದ್ದರೆ, ಚೀನಾದಲ್ಲಿ 18 ಲಕ್ಷ ಜನ ಸಾಯುತ್ತಿದ್ದಾರೆ.

ಈ ಅಂಕಿ ಅಂಶಗಳು ಮಾಲಿನ್ಯದ ಭೀಕರತೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿವೆ. ಇವಿಷ್ಟು ಕೇವಲ ಮನುಷ್ಯನ ಸಾವಿನ ಅಂಕಿ ಅಂಶಗಳು ಮಾತ್ರ. ಮನುಷ್ಯನ ತಪ್ಪಿನಿಂದ ಕೇವಲ ಆತ ಮಾತ್ರ ಸಾಯುತ್ತಿಲ್ಲ. ಭೂಮಿ ಮೇಲಿರುವ ಇತರೆ ಜೀವಿಗಳು ನರಳುತ್ತಿವೆ. ಅನೇಕ ಜೀವಸಂಕುಲಗಳು ವಿನಾಶದತ್ತ ಸಾಗಿವೆ. ಹೀಗಿದ್ದರೂ ನಾವು ಮಾಲಿನ್ಯ ತಡೆಗಟ್ಟುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಮಾಲಿನ್ಯ ತಡೆಗಟ್ಟುವ ವಿಚಾರದಲ್ಲಿ ನಮ್ಮ ನಿರ್ಲಕ್ಷ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಪ್ರಸ್ತುತ ದೀಪಾವಳಿ ಹಬ್ಬದ ಸಮಯದಲ್ಲಿ ಎದ್ದಿರುವ ಪಟಾಕಿ ನಿಷೇಧ ವಿಚಾರದಲ್ಲೇ ಕಾಣಬಹುದು.

ಈ ಬಾರಿ ದೀಪಾವಳಿ ಸಮೀಪಿಸುತ್ತಿದ್ದಂತೆ ಪಟಾಕಿ ಹೊಡೆಯದೇ ದೀಪಾವಳಿ ಹಬ್ಬದ ಆಚರಣೆಗಾಗಿ ಸಾಕಷ್ಟು ಸಂದೇಶಗಳನ್ನು ರವಾನೆ ಮಾಡಲಾಗಿತ್ತು. ಆದರೆ ಈ ಸಂದೇಶಗಳಿಗೆ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು ನಮ್ಮ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿವೆ. ದಿನನಿತ್ಯ ಕೈಗಾರಿಕೆ, ವಾಹನ ಸಂಚಾರ, ಜೈವಿಕ ಇಂಧನಗಳಿಂದ ಆಗುತ್ತಿರುವ ಮಾಲೀನ್ಯವನ್ನು ತಡೆಯುವುದನ್ನು ಬಿಟ್ಟು ಪಟಾಕಿ ಹೊಡೆಯೋದು ಬೇಡ ಎನ್ನುವುದು ಎಷ್ಟು ಸರಿ ಎಂಬ ಪ್ರಶ್ನೆ ಎತ್ತಲಾಗುತ್ತಿದೆ. ಇನ್ನು ಪ್ರಾಣಿಗಳ ತೊಂದರೆ ಬಗ್ಗೆ ಪ್ರತಿನಿತ್ಯ ಮಾಂಸಹಾರಕ್ಕೆಂದು ಲಕ್ಷಾಂತರ ಪ್ರಾಣಿ ಸಾಯಿಸುತ್ತೀರಾ ಆ ಬಗ್ಗೆ ಮೌನ ವಹಿಸುವವರು ಪಟಾಕಿ ವಿಷಯದಲ್ಲಿ ಈ ವಾದ ಏಕೆ ಎಂದೂ ಪ್ರಶ್ನಿಸುತ್ತಿದ್ದಾರೆ.

ಈ ಎಲ್ಲ ಪ್ರಶ್ನೆಗಳು ತಮ್ಮ ನಿಲುವುನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಾಗುತ್ತಿದೆಯೇ ಹೊರತು ಮಾಲಿನ್ಯ ನಿಯಂತ್ರಣದ ಕುರಿತು ನಾವು ವಹಿಸುತ್ತಿರುವ ದಿವ್ಯನಿರ್ಲಕ್ಷ್ಯವನ್ನು ತೋರಿಸುತ್ತಿದೆ. ಮಾಲಿನ್ಯ ತಡೆಗಟ್ಟುವ ವಿಚಾರದಲ್ಲಿ ವಿಶ್ವಸಂಸ್ಥೆ, ದೇಶಗಳು, ಸರ್ಕಾರಗಳು, ಅಧಿಕಾರಿಗಳು ಎಷ್ಟು ಜವಾಬ್ದಾರಿ ಹೊಂದಿದ್ದಾರೋ ಅಷ್ಟೇ ಜವಾಬ್ದಾರಿ ಸಾಮಾನ್ಯ ಜನರ ಮೇಲೂ ಇದೆ. ಕೇವಲ ಸಮರ್ಥನೆಗಳಿಗೆ ಮಾರುಹೋಗದೇ ಮಾಲಿನ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಅಂದಹಾಗೆ ಕಳೆದ ವರ್ಷಕ್ಕಿಂತ ಈ ವರ್ಷದ ದೀಪಾವಳಿಯಲ್ಲಿ ಪಟಾಕಿ ಸಿಡಿತದ ಪ್ರಮಾಣ ತಗ್ಗಿದ್ದು, ದೆಹಲಿ, ಮುಂಬೈ ಸೇರಿದಂತೆ ಇತರೆ ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲೂ ಕಡಿಮೆಯಾಗಿದೆ. ಆದರೂ ವಾಯು ಗುಣಮಟ್ಟದಲ್ಲಿ ಇನ್ನು ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

Leave a Reply