ವಿಧಾನಸೌಧ ವಜ್ರಮಹೋತ್ಸವದಿಂದ ದೂರ ಉಳಿಯಲು ಸರ್ಕಾರ ಚಿಂತನೆ, ಸ್ಪೀಕರ್ ಕೋಳಿವಾಡರಿಗೆ ಮತ್ತೊಂದು ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಮಾಡೇ ಮಾಡುತ್ತೇನೆ ಎಂಬ ಹಠ ಹಿಡಿದಿದ್ದ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ಮತ್ತೊಂದು ಮುಖಭಂಗವಾಗಿದೆ.

ಕಳೆದ ಒಂದು ವಾರದಿಂದ ವಿವಾದದ ಗೂಡಾಗಿರುವ ವಿಧಾನಸೌಧ ವಜ್ರಮಹೋತ್ಸವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ. ವಜ್ರಮಹೋತ್ಸವ ನಡೆಯುವ ದಿನದಂದೇ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅದರಲ್ಲೂ ಸಾಕ್ಷ್ಯ ಚಿತ್ರ ಪ್ರದರ್ಶನದ ಸಮಯದಲ್ಲೇ ನಡೆಯಲಿದೆ. ಇದರೊಂದಿಗೆ ಭಾರಿ ವಿವಾದಕ್ಕೆ ಕಾರಣವಾಗಿರುವ ಸಾಕ್ಷ್ಯಚಿತ್ರ ಪ್ರದರ್ಶನ ವೇಳೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕೇಲವು ಶಾಸಕರು ಕಾರ್ಯಕ್ರಮಕ್ಕೆ ಗೈರಾಗುವುದು ಸ್ಪಷ್ಟವಾಗಿದೆ.

ಒಂದೆಡೆ ಈ ವಜ್ರ ಮಹೋತ್ಸವಕ್ಕೆ ಹೆಚ್ಚಿನ ಹಣ ನೀಡುವುದನ್ನು ಆಕ್ಷೇಪಿಸುತ್ತಲೇ ಬಂದಿದ್ದ ಹಣಕಾಸು ಇಲಾಖೆ ಅಧಿಕಾರಿಗಳು ಸೇರಿದಂತೆ ಕಾರ್ಯಾಂಗದ ಪ್ರಮುಖರು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರದ ಬೆನ್ನಲ್ಲೇ ಸರ್ಕಾರ ಸಹ ಕಾರ್ಯಕ್ರಮದಿಂದ ಒಂದು ಹೆಜ್ಜೆ ಹಿಂದೆ ಸರಿದಿರುವುದು ಸಭಾಧ್ಯಕ್ಷರಾದ ಕೋಳಿವಾಡರಿಗೆ ತೀವ್ರ ಮುಖಭಂಗ ಉಂಟುಮಾಡಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ ಸಿದ್ದರಾಮಯ್ಯನವರು ವಜ್ರಮಹೋತ್ಸವದ ಸಾಕ್ಷ್ಯ ಚಿತ್ರ ಪ್ರದರ್ಶನದ ಸಮಯದಲ್ಲೇ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವುದು. ಈ ನಿರ್ಧಾರದಿಂದ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಮಂಡಲ ಈ ಸಾಕ್ಷ್ಯ ಚಿತ್ರ ವೀಕ್ಷಣೆಯಿಂದ ದೂರ ಉಳಿಯುವುದು ಖಚಿತವಾಗಿದ್ದು, ಇದು ಸಜವಾಗಿಯೇ ಸಾಕ್ಷ್ಯ ಚಿತ್ರ ತಯಾರಕರನ್ನೂ ಮುಜುಗರಕ್ಕೀಡು ಮಾಡಲಿದೆ.

ವಜ್ರಮಹೋತ್ಸವ ವಿಜೃಂಭಣೆ ಆಚರಣೆಗೆ ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ವಿವಾದ ಹುಟ್ಟುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಈ ಕಾರ್ಯಕ್ರಮದ ವೆಚ್ಚವನ್ನು 28 ಕೋಟಿ ರುಪಾಯಿಯಿಂದ 10 ಕೋಟಿಗೆ ಇಳಿಸಿತು. ಆದಾಗ್ಯೂ, ರಾಜ್ಯದಲ್ಲಿ ನೆರೆ- ಬರ ಇರುವಾಗ 10 ಕೋಟಿ ರುಪಾಯಿ ವೆಚ್ಚ ಅಗತ್ಯವಿದೆಯೇ? ಸಾಕ್ಷ್ಯ ಚಿತ್ರಕ್ಕೆ ಕೋಟಿಗಟ್ಟಲೆ ಹಣ ನೀಡಬೇಕಿತ್ತೇ? ಎಂಬ ಟೀಕೆಗಳು ಪುಂಖಾನುಪುಂಖವಾಗಿ ಹರಿದು ಬಂದಿದ್ದವು. ಈ ಟೀಕೆ, ವಿವಾದಗಳಿಂದ ದೂರ ಉಳಿಯಲು ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ.

Leave a Reply