ಮತ್ತೆ ಶುರುವಾಯ್ತು ಟಿಪ್ಪು ಜಯಂತಿ ಆಚರಣೆಯ ರಾಜಕೀಯ ಹಗ್ಗಜಗ್ಗಾಟ

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ಮೂರು ವರ್ಷಗಳಿಂದ ಟಿಪ್ಪು ಜಯಂತಿಯ ಆಚರಣೆ ರಾಜಕೀಯ ಹಗ್ಗಜಗ್ಗಾಟದ ವೇದಿಕೆಯಾಗಿ ಪರಿಣಮಿಸಿರುವುದಲ್ಲದೇ, ರಾಜಕೀಯ ಪಕ್ಷಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿಷಯವೂ ಆಗಿಬಿಟ್ಟಿದೆ. ಈ ಬಾರಿಯು ಟಿಪ್ಪು ಜಯಂತಿ ಆಚರಣೆ ಸದ್ದು ಮಾಡಲು ಆರಂಭಿಸಿದೆ.

ನವೆಂಬರ್ 10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆಯಲ್ಲಿ ತಾವು ಭಾಗವಹಿಸುವುದಿಲ್ಲ. ಹೀಗಾಗಿ ತಮ್ಮ ಹೆಸರನ್ನು ಕಾರ್ಯಕ್ರಮದ ಪಟ್ಟಿಗೆ ಸೇರಿಸಬೇಡಿ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ತನ್ನ ವಿರೋಧ ಮುಂದುವರಿಸಿದೆ. ಇನ್ನು ಕಳೆದ ಎರಡು ವರ್ಷಗಳಲ್ಲಿ ವ್ಯಾಪಕ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯೂ ಟಿಪ್ಪು ಜಯಂತಿ ಆಚರಿಸಿಯೇ ತೀರುವ ನಿರ್ಧಾರದಲ್ಲಿದ್ದಾರೆ. ಅಂನತಕುಮಾರ್ ಹೆಗಡೆ ಅವರ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ, ‘ಟಿಪ್ಪು ಜಯಂತಿ ಆಚರಣೆ ವಿಚಾರಕ್ಕೆ ರಾಜಕೀಯ ಬಣ್ಣ ಬಳೆಯಲಾಗುತ್ತಿದೆ’ ಎಂದು ರಾಜಕೀಯ ಹಗ್ಗಜಗ್ಗಾಟಕ್ಕೆ ಆರಂಭ ನೀಡಿದ್ದಾರೆ. ತಮ್ಮ ಮಾತು ಮುಂದುವರಿಸಿದ ಅವರು ಹೇಳಿದಿಷ್ಟು…

‘ಸರ್ಕಾರದ ಪ್ರತಿನಿಧಿಯಾಗಿ ಅವರು ಈ ರೀತಿ ಪತ್ರ ಬರೆದಿರುವುದು ಸರಿಯಲ್ಲ. ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯದ ಎಲ್ಲ ನಾಯಕರುಗಳಿಗೆ ಆಹ್ವಾನ ನೀಡಲಾಗುವುದು. ಆ ಆಹ್ವಾನ ಒಪ್ಪಿ ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅರಿಗೆ ಬಿಟ್ಟ ವಿಚಾರ. ಬ್ರಿಟೀಷರ ವಿರುದ್ಧ ನಡೆದ ನಾಲ್ಕು ಯುದ್ಧಗಳಲ್ಲೂ ಟಿಪ್ಪು ಹೋರಾಡಿದ್ದಾರೆ. ಅವರ ಜಯಂತಿ ಆಚರಣೆಯನ್ನು ರಾಜಕೀಯಗೊಳಿಸಬಾರದು.’

ಇನ್ನು ಅನಂತಕುಮಾರ ಹೆಗಡೆ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟಿಪ್ಪು ಸುಲ್ತಾನ್ ರನ್ನು ‘ಕನ್ನಡ ವಿರೋಧಿ’ ಹಾಗೂ ‘ಹಿಂದೂ ವಿರೋಧಿ’ ಎಂದು ಹೇಳಿದ್ದು ಹೀಗೆ… ‘ಟಿಪ್ಪು ಸುಲ್ತಾನ್ ಕನ್ನಡ ಹಾಗೂ ಹಿಂದೂ ವಿರೋಧಿಯಾಗಿದ್ದ. ಹೀಗಾಗಿ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಈವಿರೋಧ ಎಲ್ಲಾ ಕನ್ನಡಿಗರ ಒಮ್ಮತದ ಆಗ್ರಹ. ಆದರೆ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ ಈ ಆಚರಣೆಗೆ ಮುಂದಾಗಿದೆ.’

ಅನಂತಕುಮಾರ್ ಹೆಗಡೆ ಅವರ ಪತ್ರವನ್ನು ಲೆಕ್ಕಿಸದ ಮುಖ್ಯಮಂತ್ರಿಗಳು, ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಹೆಸರನ್ನು ಹಾಕಲಾಗುವುದು ಎಂದು ತಿಳಿಸಿದ್ದಾರೆ. ಆ ಮೂಲಕ ಅನಂತಕುಮಾರ್ ಅವರ ಮೇಲೆ ಒತ್ತಡ ಹೇರಲು ಸರ್ಕಾರ ಮುಂದಾಗಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಿರೀಕ್ಷೆಯಂತೆ ಟಿಪ್ಪು ಜಯಂತಿ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರೋದಕ್ಕೆ ಈ ಬೆಳವಣಿಗೆಗಳು ಸಾಕ್ಷಿಯಾಗಿವೆ. ಟಿಪ್ಪು ಆಚರಣೆ ವಿರೋಧಿಸಿ ಕೊಡಗು, ಮಡಿಕೇರಿ ಭಾಗದ ವೋಟ್ ಬ್ಯಾಂಕ್ ಅನ್ನು ಕಬಳಿಸಿಕೊಳ್ಳುವುದು ಬಿಜೆಪಿಯ ಗುರಿಯಾದ್ರೆ, ಟಿಪ್ಪು ಜಯಂತಿ ಆಚರಣೆಯಿಂದ ಮುಸ್ಲಿಂ ಸಮುದಾಯದ ಮನವೊಲಿಸುವುದು ಕಾಂಗ್ರೆಸ್ ಉದ್ದೇಶ. ಈ ವಿಚಾರದಲ್ಲಿ ಹಗ್ಗಜಗ್ಗಾಟ ನಡೆಸುತಿರುವ ಎರಡೂ ಪಕ್ಷಗಳ ನಾಯಕರು ಒಬ್ಬರಮೇಲೋಬ್ಬರು ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.

Leave a Reply