ಕಾಂಗ್ರೆಸ್, ಬಿಜೆಪಿ ಮತಬೇಟೆಗೆ ಟಿಪ್ಪು ಖಡ್ಗ ಬಳಕೆ!

ಈ ರಾಜಕೀಯ ಮುಖಂಡರಿಗೆ ಏನಾಗಿದೆಯೋ ಗೊತ್ತಿಲ್ಲ. ಯಾವಾಗಲೂ ಸಮಾಜದ ಸ್ವಾಸ್ಥ್ಯ ಕದಡುವ ದುರಾಲೋಚನೆಗಳೇ ಅವರನ್ನು ಆಳುತ್ತಿವೆ. ಅದರಿಂದ ಯಾರೂ ಹಾಳಾದರೂ, ಯಾರು ಜೀವ ಕಳೆದುಕೊಂಡರೂ ಅವರಿಗೆ ಆಗಬೇಕಾದ್ದೂ ಏನೂ ಇಲ್ಲ. ಏಕೆಂದರೆ ಕಳೆದುಕೊಳ್ಳುವವರು ಜನಸಾಮಾನ್ಯರೇ ಆಗಿರುತ್ತಾರೆ. ರಾಜಕಾರಣಿಗಳಿಗಾಗಲಿ, ಅವರು ಪ್ರತಿನಿಧಿಸುವ ಪಕ್ಷಗಳಿಗಾಗಲಿ ಇದರಿಂದಾಗುವ ನಷ್ಟ ಏನೂ ಇಲ್ಲ. ಹೀಗಾಗಿ ಅವರಿಗೆ ಏನೂ ಅನ್ನಿಸುವುದಿಲ್ಲ. ಹೀಗಾಗಿ ತತ್ವ-ಸಿದ್ಧಾಂತ, ಸಾಧನೆ, ಚಿಂತನೆ, ಭವಿತವ್ಯದ ಯೋಜನೆ ಆಳಬೇಕಾದ ಜಾಗವನ್ನು ಕುಟಿಲ ತಂತ್ರಗಳು, ಸ್ವಾರ್ಥ ಯೋಚನೆಗಳು ತುಂಬಿಕೊಳ್ಳುತ್ತಿವೆ. ಸಮಾಜದ ಸ್ವಾಸ್ಥ್ಯ ಕದಡುವ ಸೂಕ್ಷ್ಮ ವಿಚಾರಗಳು ಮತರಾಜಕಾರಣದ ದಾಳಗಳಾಗಿ ಉರುಳುತ್ತಿವೆ. ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿ ನಾಡಿನ ಶಾಂತಿಯನ್ನು ಕೊತ್ತಂಬರಿ ಸೊಪ್ಪಿನಂತೆ ಕತ್ತರಿಸಿ ಬಿಸಾಕುತ್ತಿದ್ದಾರೆ.

ಕರ್ನಾಟಕ ಸರಕಾರ ಎರಡು ವರ್ಷಗಳ ಹಿಂದೆ ಆಚರಣೆಗೆ ತಂದ ಟಿಪ್ಪು ಜಯಂತಿ ಸೃಷ್ಟಿಸಿರುವ ವಿವಾದ ವರ್ಷದಿಂದ ವರ್ಷಕ್ಕೆ ಭುಗಿಲೇಳುತ್ತಿದ್ದು, ಜನರ ನೆಮ್ಮದಿಗೆ ಕೊಳ್ಳಿ ಹಚ್ಚುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಡ್ಗಿಚ್ಚಿನ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕಾಡ್ಗಿಚ್ಚು ಅತಿರೇಕದ ಮಿತಿಯನ್ನೂ ದಾಟಿದೆ. ಅದು ಹಬ್ಬುತ್ತಿರುವ ಜಾಗವನ್ನೆಲ್ಲ ರಂಜಕವೇ ತುಂಬಿಕೊಂಡಿರುವುದರಿಂದ ಆರುವ, ಆರಿಸುವ ಲಕ್ಷಣಗಳಾಗಲಿ, ಸಾಧನಗಳಾಗಲಿ ಕಾಣುತ್ತಿಲ್ಲ. ಸುಟ್ಟು ಕರಕಲಾದ ಜಾಗದಲ್ಲೂ ಮತ ಅರಸುವ ದುರ್ಮಾರ್ಗಿಗಳೇ ಗೋಚರಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಟಿಪ್ಪು ಜಯಂತಿ ಮೆರವಣಿಗೆ ಸಂದರ್ಭ ಉರಿದ ದಳ್ಳುರಿಗೆ ಕುಟ್ಟಪ್ಪ ಎಂಬುವರು ಬಲಿಯಾದರು. ಮರುವರ್ಷವೂ ಸಾಕಷ್ಟು ಗಲಾಟೆಗಳಾದವು. ಕೋಮುಬೇಗೆ ಪ್ರತಿರೂಪಿ ನೆರೆರಾಜ್ಯ ಕೇರಳದಿಂದ ಕಿಡಿಗೇಡಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂಬ ಮಾತುಗಳೂ ಕೇಳಿ ಬಂದವು. ಹಿಂದೆ ಆದ ಅನಾಹುತಗಳು ಪಾಠ ಕಲಿಸಿದಂತಿಲ್ಲ. ಇದೀಗ ಸರಕಾರಿ ಟಿಪ್ಪು ಜಯಂತಿ ಮತ್ತೆ ಬರುತ್ತಿದೆ. ನವೆಂಬರ್ 9 ರಂದು ನಡೆಯುವ ಕಾರ್ಯಕ್ರಮಕ್ಕೆ ಈಗಿನಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿ ಕತ್ತಿ ಮಸೆಯುತ್ತಿವೆ. ಆ ಪಕ್ಷಗಳ ರಾಜ್ಯ ಮುಖಂಡರು ಸಾಲದು ಎಂಬಂತೆ ರಾಷ್ಟ್ರ ನಾಯಕರೂ ಈ ‘ಯುದ್ಧರಂಗ’ಕ್ಕೆ ಧುಮುಕಿದ್ದಾರೆ. ಒಬ್ಬೊಬ್ಬರ ವೀರಾವೇಶದ ನುಡಿಗಳು, ಭರಾಟೆ  ನೋಡಿದರೆ ಇಂಡಿಯಾ- ಪಾಕಿಸ್ತಾನ ಕರ್ನಾಟಕದಲ್ಲೇ ಮರುಸೃಷ್ಟಿಯಾಗಿದೆಯೇನೂ ಎಂಬ ಭಾವ ಮೂಡಿಸುತ್ತಿದೆ. ಏನು ಇವರ ಡೈಲಾಗ್‌ಗಳು, ಪಂಥಾಹ್ವಾನಗಳು, ಪ್ರತೀಕಾರ ಮನೋಪ್ರದರ್ಶನಗಳು? ಯಾವ ಪೌರಾಣಿಕ ಸಿನಿಮಾಗಳಿಗೂ ಕಡಿಮೆ ಇಲ್ಲ. ಟಿಪ್ಪು ಕನ್ನಡ ವಿರೋಧಿ, ಹಿಂದೂ ವಿರೋಧಿ. ಆತನ ಜನ್ಮದಿನ ಆಚರಿಸಬಾರದು. ಕೋಮುಸೂಕ್ಷ್ಮ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗಲಭೆ ಆದರೆ ರಾಜ್ಯ ಸರಕಾರವೇ ಅದರ ಹೊಣೆ ಹೊರಬೇಕು ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಈಗಲೇ ಕೇವಿಯೆಟ್ ಹಾಕಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಕೇಂದ್ರ ಸಂಪುಟ ಸೇರಿರುವ ರಾಜ್ಯದ ಫೈರ್‌ಬ್ರಾಂಡ್ ಬಿಜೆಪಿ ಮುಖಂಡ ಅನಂತಕುಮಾರ ಹೆಗಡೆ ಅವರಂತೂ ರಾಜ್ಯ ಸರಕಾರ ಶಿಷ್ಟಾಚಾರದ ಹೆಸರೇಳಿಕೊಂಡು ಟಿಪ್ಪು ಜಯಂತಿ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿಸುವಂತಿಲ್ಲ. ಒಂದೊಮ್ಮೆ ಮುದ್ರಿಸಿದರೆ ಸಮಾರಂಭದಲ್ಲೇ ಟಿಪ್ಪು ವಿರುದ್ಧ ಘೋಷಣೆ ಹಾಕುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದು ಅಕ್ಷರಶಃ ಬೆಂಕಿ ಹಚ್ಚಿದ್ದಾರೆ. ಇವರೆಲ್ಲ ಇಷ್ಟೆಲ್ಲ ಹಾರಾಡಿದ ಮೇಲೆ ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಮುರಳೀಧರರಾವ್ ಅವರು ಟಿಪ್ಪು ಪರ ನಿಂತಿರುವವರು ಹಿಂದೂ ವಿರೋಧಿಗಳು, ಬಿಜೆಪಿಯವರಾರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಮ್ಮದೂ ಒಂದು ಸೇರಿಸಿದ್ದಾರೆ.

ಇನ್ನೂ ಟಿಪ್ಪು ಜಯಂತಿ ಆಚರಣೆಗೆ ಟೊಂಕ ಕಟ್ಟಿ ನಿಂತಿರುವ ಕರ್ನಾಟಕ ಸರಕಾರದವರು ಸುಮ್ಮನಿದ್ದಾರೆಯೇ? ಅದ್ಯಾರು ಏನು ಮಾಡಿಕೊಳ್ಳುತ್ತಾರೋ ನಾನು ನೋಡುತ್ತೇನೆ, ಯಾರಿಂದರೂ ಟಿಪ್ಪು ಜಯಂತಿ ಆಚರಣೆ ತಡೆಯಲು ಸಾಧ್ಯವಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸುವುದು ವಾಡಿಕೆ. ಬೇಕಾದವರು ಬರಬೇಕು, ಬೇಡದಿದ್ದವರು ಮನೆಯಲ್ಲಿರಬಹುದು ಎಂದು ತಾವೂ ಕತ್ತಿ ಝಳಪಿಸಿದ್ದಾರೆ. ಸಚಿವ ವಿನಯ ಕುಲಕರ್ಣಿ ಕಾಂಗ್ರೆಸ್ ಸರಕಾರ ಸಮಾನತೆಗೆ ಹೋರಾಡುತ್ತಿದ್ದರೆ ಬಿಜೆಪಿ ಅದಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ತಾವೂ ಒಂದು ಡೈಲಾಗ್ ಬಿಸಾಡಿದ್ದಾರೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ವಾಗ್ಮಳೆ ರಾಜಧಾನಿ ಬೆಂಗಳೂರನ್ನು ಗುಡಿಸಿ, ಗುಂಡಾಂತರ ಮಾಡಿದ ಮುಂಗಾರು-ಹಿಂಗಾರು ಮಳೆಯನ್ನೂ ಹಿಂದಿಕ್ಕಿ ಸುರಿದಿವೆ. ಈ ರಾಜಕೀಯ ಮಳೆಯಲ್ಲಿ ಜನರ ಶಾಂತಿ, ನೆಮ್ಮದಿ ಕೊಚ್ಚಿ ಹೋಗುತ್ತಿವೆ!

ಇಷ್ಟೆಲ್ಲ ಬೆಳವಣಿಗೆಗಳನ್ನು ನೋಡುತ್ತಿರುವಾಗ ಒಂದು ವಿಚಾರವಂತೂ ಮನದಟ್ಟಾಗುತ್ತಿದೆ. ಇಲ್ಲಿ ಯಾರಿಗೂ ಟಿಪ್ಪುವನ್ನಾಗಲಿ, ಆತನ ಜಯಂತಿಯನ್ನಾಗಲಿ ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಬದಲಿಗೆ ಇಲ್ಲಿರುವುದು ಕೋಮುಭಾವನೆಗಳನ್ನು ಕೆರಳಿಸಿ ಅದರಲ್ಲೆಷ್ಟು ವೋಟುಗಳನ್ನು ಗೆಬರಿಕೊಳ್ಳಬಹುದು ಎಂಬ ಸೀಮಿತ ವಾಂಛೆ ಮಾತ್ರ. ಶೋಭಾ ಕರಂದ್ಲಾಜೆ, ಅನಂತುಕುಮಾರ ಹೆಗಡೆ, ಮುರಳೀಧರರಾವ್, ಸಿದ್ದರಾಮಯ್ಯ, ವಿನಯ್ ಕುಲಕರ್ಣಿ ಮತ್ತಿತರ ವಾದಸರಣಿ ಪಾಲುದಾರರ ಉದ್ದೇಶ ಕಾರ್ಯಕ್ರಮ ನಡೆಯುವುದಾಗಲಿ, ಅದನ್ನು ತಡೆಯುವುದಾಗಲಿ ಅಲ್ಲ. ಟಿಪ್ಪು ಈ ನಾಡನ್ನಾಳಿದ ಒಬ್ಬ ರಾಜ, ಆತನ ಆಚಾರ-ವಿಚಾರ, ಒಳಿತು-ಕೆಡಕುಗಳ ಸ್ಮರಣೆ ಹಾಗೂ ನಿಂದನೆ ಎಂಬುದು ಇಲ್ಲಿ ನೆಪ ಮಾತ್ರ. ನಿಜವಾಗಿಯೂ ಇದರಲ್ಲಿರುವುದು ಬರೀ ಮತ ರಾಜಕೀಯ ಮಾತ್ರ. ಅದು ವಿಧಾನಸಭೆ ಚುನಾವಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಜನರ ಭಾವನೆಗಳಿಗೆ ಕಿಚ್ಚು ಹಚ್ಚಿ ಮೈ ಕಾಯಿಸಿಕೊಳ್ಳುವ ದುರ್ಮಾರ್ಗಿಗಳ ವಿಕೃತಭಾವ ಈ ಮತರಾಜಕೀಯದಲ್ಲಿ ವಿಜೃಂಭಿಸುತ್ತಿದೆ. ಕಾರ್ಯಕ್ರಮ ಆಯೋಜಿಸುತ್ತಿರುವ ಕಾಂಗ್ರೆಸ್ಸಿಗರು, ಅದನ್ನು ಪ್ರತಿಭಟಿಸುತ್ತಿರುವ ಬಿಜೆಪಿ ಹಾಗೂ ಇವರಿಬ್ಬರ ಜಗಳದಲ್ಲಿ ಮೈಕಾಯಿಸಿಕೊಳ್ಳುತ್ತಿರವ ಜೆಡಿಎಸ್ ಮನೋಧರ್ಮದ ಹಿಂದೆ ಆಡಗಿರುವುದು ವೋಟ್‌ಬ್ಯಾಂಕ್ ರಾಜಕಾರಣ ಮಾತ್ರ.

ಟಿಪ್ಪು ಹುಟ್ಟಿದ್ದು 1750 ರಲ್ಲಿ, ನಿಧನ ಹೊಂದಿದ್ದು 1799 ರಲ್ಲಿ. ಆತ ಬದುಕಿದ್ದ 49 ವರ್ಷಗಳಲ್ಲಿ ಆಗಿನ ಕಾಲಮಾನದ ರಾಜಾಡಳಿತ, ಅದಕ್ಕೆ ಬೇಕಾದ ತಂತ್ರ, ಪ್ರತಿತಂತ್ರ, ಕುತಂತ್ರಗಳಿಗೆ ಸಾಕ್ಷಿಯಾಗಿ ಹೋದ. ಎಲ್ಲ ರಾಜರೂ ಅವರವರ ವ್ಯಕ್ತಿತ್ವಕ್ಕನುಗುಣವಾಗಿ ನಡೆದುಕೊಂಡಿರುತ್ತಾರೆ. ಅದರಲ್ಲಿ ಒಳಿತು-ಕೆಡಕು ಎರಡೂ ಮಿಳಿತವಾಗಿರುತ್ತದೆ. ಕೆಟ್ಟ ರಾಜನನ್ನು ಒಳ್ಳೆಯವನೆನ್ನಲಾಗದು, ಅದೇ ರೀತಿ ಒಳ್ಳೆ ರಾಜನನ್ನು ಕೆಟ್ಟವನೆನ್ನಲಾಗದು. ಅವತ್ತಿನ ಪರಿಸ್ಥಿತಿಗೆ, ರಾಜಕೀಯ ಬೇಕು-ಬೇಡಗಳಿಗೆ ಎಲ್ಲಕ್ಕಿಂತ ಮಿಗಿಲಾಗಿ ಅವನ ಚಾರಿತ್ರ್ಯಕ್ಕೆ ಅನುಗುಣವಾಗಿ ನಡೆದುಕೊಂಡಿರುತ್ತಾನೆ. ಆ ಚಾರಿತ್ರ್ಯದಿಂದಲೇ ಗುರುತಿಸಿಕೊಳ್ಳುತ್ತಾನೆ. ಇವತ್ತಿನ ರಾಜಕಾರಣಕ್ಕೂ, ಸ್ವಾತಂತ್ರ್ಯಪೂರ್ವ ಬ್ರಿಟಿಷರ ವಿರುದ್ಧದ ಸಂಗ್ರಾಮಕ್ಕೂ, ಬ್ರಿಟಿಷರ ಆಳ್ವಿಕೆಗೆ ಮೊದಲಿನ ರಾಜಾಡಳಿತ ಸ್ವರೂಪಕ್ಕೂ ತಾಳೆ ಹಾಕಿ ನೋಡಲು ಆಗುವುದಿಲ್ಲ. ಅವತ್ತಿಗೆ ಅದು ಪ್ರಸ್ತುತ. ಇವತ್ತಿಗಿದು ಪ್ರಸ್ತುತ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು, ಇಬ್ಬರು ಮಕ್ಕಳನ್ನು ಕಳೆದುಕೊಂಡದ್ದು, ಕೊನೆಗೇ ತನ್ನನ್ನೂ ಎಂಬುದು ನಿರ್ವಿವಾದ. ಆದರೆ ಒಬ್ಬ ವ್ಯಕ್ತಿಯ ಜಯಂತಿ ಆಚರಣೆಗೆ ಸಾಕಷ್ಟು ಮಾನದಂಡಗಳಿರುತ್ತವೆ. ಜನಾನುರಾಗ, ನಾಡಿಗೆ ಕೊಡುಗೆ, ಆತನ ವ್ಯಕ್ತಿತ್ವ, ಚಾರಿತ್ರ್ಯ, ಸನ್ನಡತೆ ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಅದೇ ರೀತಿ ಆತನ ದುರ್ನಡತೆ, ದುಷ್ಟತನ, ಕ್ರೌರ್ಯ, ಸಮಯ ಸಾಧಕತನ ಕೂಡ. ಪರವಾಗಿರುವವರು ಉತ್ತಮ ಗುಣಗಳನ್ನು ಹೆಕ್ಕುತ್ತಾರೆ, ವಿರೋಧಿಸುವವರು ದುರ್ನಡತೆಯನ್ನು ಎತ್ತಿ ಹಿಡಿಯುತ್ತಾರೆ.

ಟಿಪ್ಪು ಬ್ರಿಟಿಷರ ಮೊದಲು ಭಾರತವನ್ನಾಕ್ರಮಿಸಿದ ಪರ್ಶಿಯನ್ನರ ಪ್ರತಿನಿಧಿ. ಹೈದರಾಲಿ ನಂತರ ಪಟ್ಟಕ್ಕೆ ಬಂದು ಮೈಸೂರು ಸಂಸ್ಥಾನದ ಆಳ್ವಿಕೆ ಹಿಡಿದವನು. ಮೊಗಲರು, ಡಚ್ಚರು, ಫ್ರೆಂಚರು, ಪೋರ್ಚುಗೀಸರಂತೆ ಬ್ರಿಟಿಷರು ಇಲ್ಲಿನ ಸಂಪತ್ತು ದೋಚಲು ಭಾರತಕ್ಕೆ ಲಗ್ಗೆ ಇಟ್ಟವರೇ. ತಮ್ಮ ಆಳ್ವಿಕೆ, ವ್ಯಾಪಾರ-ವ್ಯವಹಾರಕ್ಕೆ ಕಂಟಕರಾದ ಬ್ರಿಟಿಷರ ವಿರುದ್ಧ ಪರ್ಶಿಯನ್ನರು, ಡಚ್ಚರು, ಫ್ರೆಂಚರು, ಪೋರ್ಚುಗೀಸರು ಹೋರಾಡಿದವರು. ಹಾಗೆಂದು ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲು ಸಾಧ್ಯವೇ? ಈ ಪರದೇಶಿ ಮುಖಂಡರ ಜಯಂತಿ ಆಚರಿಸಲು ಆಗುತ್ತದೆಯೇ? ಒಂದೊಮ್ಮೆ ಬ್ರಿಟಿಷರು ಬಾರದಿದ್ದರೆ ಭಾರತೀಯರು, ಕನ್ನಡಿಗರು ಅನ್ಯರ ವಿರುದ್ಧ ಹೋರಾಡಬೇಕಿತ್ತು. ತಾನು ಕೆಲಸಕ್ಕಿದ್ದ ಮೈಸೂರು ಅರಸೊತ್ತಿಗೆಯನ್ನೇ ಲಪಟಾಯಿಸಿ, ರಾಜರಾಣಿಯನ್ನು ಜೈಲಲ್ಲಿಟ್ಟು ಮೈಸೂರು ಸಂಸ್ಥಾನದಲ್ಲಿ ಕನ್ನಡದ ಬದಲಿಗೆ ಪರ್ಶಿಯನ್ನನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಟಿಪ್ಪು ಅದೇಗೆ ಕರುನಾಡಿನ ಆತ್ಮವಾಗುತ್ತಾನೆ. ಟಿಪ್ಪುವನ್ನು ಆರಾಧಿಸಿದರೆ ಆತನ ವೈರತ್ವಕ್ಕೆ ಬಲಿಯಾದ ಮೈಸೂರು ಅರಸರೂ ಕನ್ನಡಿಗರ ವೈರಿಗಳಾದಂತೆ ಅಲ್ಲವೇ? ಟಿಪ್ಪುವನ್ನು ಆತನ ಕ್ರೌರ್ಯ ಮತ್ತು ಉದಾರತೆ ಎರಡರಿಂದಲೂ ನೋಡಬೇಕಾಗುತ್ತದೆ. ನಂಜನಗೂಡು, ಶೃಂಗೇರಿ ಸೇರಿದಂತೆ ನಾನಾ ಹಿಂದೂ ದೇಗುಲಗಳಿಗೆ ಉಂಬಳಿ ಕೊಟ್ಟ, ಅವುಗಳ ಜೀರ್ಣೋದ್ಧಾರ ಮಾಡಿದ ಟಿಪ್ಪು ಗುಣಗಾನ ಮಾಡುವಂತೆ ಕೊಡಗು, ಮಲಬಾರು, ಕಾಸರಗೋಡು, ಶ್ರೀರಂಗಪಟ್ಟಣದಲ್ಲಿ ನಡೆಸಿದ ಹಿಂದೂಗಳ ನರಮೇಧ, ದೇಗುಲಗಳ ಧ್ವಂಸವನ್ನೂ ನೆನಪಿಡಬೇಕಾಗುತ್ತದೆ. ರಾಜತಾಂತ್ರಿಕ ನಡೆಯಲ್ಲಿ ಕ್ರೌರ್ಯವೂ ಇರುತ್ತದೆ, ಔದಾರ್ಯವೂ ಇರುತ್ತದೆ. ಸಾಮರ್ಥ್ಯ ಮತ್ತು ಸಮಯ ಸಾಧಕತನವನ್ನೂ ಅಳೆದು ನೋಡಬೇಕಾಗುತ್ತದೆ. ಒಂದನ್ನು ಮರೆಮಾಚಿ, ಮತ್ತೊಂದು ವೈಭವೀಕರಿಸುವುದು ಇತಿಹಾಸಕ್ಕೆ ಬಗೆದ ಅಪಚಾರವಾಗುತ್ತದೆ. ಸಿದ್ದರಾಮಯ್ಯನವರ ಸರಕಾರ ಈ ಕೆಲಸ ಮಾಡಲು ಹೊರಟಿರುವುದು ವಿಪರ್ಯಾಸ.

ಅದೆಲ್ಲ ಪಕ್ಕಕ್ಕಿರಲಿ. ಟಿಪ್ಪು ಮೇಲೆ ಅಷ್ಟೆಲ್ಲ ಪ್ರೀತಿ ಇದ್ದಿದ್ದರೆ ಆತ ಅಲ್ಲಾಹುವಿನ ಪಾದ ಸೇರಿದ ಎರಡು ಶತಮಾನದ ನಂತರ, ಕರ್ನಾಟಕ ಏಕೀಕರಣಗೊಂಡ 59 ವರ್ಷಗಳ ನಂತರ ಕಾಂಗ್ರೆಸ್ ಮತ್ತು ಆ ಪಕ್ಷದ ಸರಕಾರ ಅವರನ್ನು ನೆನೆಸಿಕೊಳ್ಳಲು ಹೋಗುತ್ತಿರಲಿಲ್ಲ. ಹಾಗಂತ ಹಿಂದೆ ಮಾಡಲಿಲ್ಲ ಎಂಬ ಕಾರಣಕ್ಕೆ ಈಗ ಮಾಡಬಾರದು ಎಂದೇನೂ ಇಲ್ಲ. ಆದರೆ ಇಲ್ಲಿ ಕಾಣುವುದು ಟಿಪ್ಪು ಮೇಲಿನ ಪ್ರೀತಿಗಿಂತ ಆತ ಪ್ರತಿನಿಧಿಸಿದ ಮುಸ್ಲಿಂ ಸಮುದಾಯದ ಮತಗಳ ಮೇಲಿನ ಮಮತೆ. ಇಲ್ಲ ಅಂದರೆ ಆತನನ್ನು ನೆನೆಸಿಕೊಳ್ಳಲು 2015 ರವರೆಗೆ ಕಾಯಬೇಕಿತ್ತೇ? ಹಿಂದೆ ಜಾತ್ಯತೀತ ಜನತಾ ದಳದವರು ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಜೆಡಿಸಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಇದು ನಡೆದಿದೆ. ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಮುಖ್ಯಮಂತ್ರಿ ಆದ ಮೇಲೂ ಜೆಡಿಎಸ್‌ನಲ್ಲಿ ಆ ಪರಂಪರೆ ಮುಂದುವರೆದಿತ್ತು. ಅಲ್ಲೂ ಕೂಡ ಇದ್ದದ್ದು ಮುಸ್ಲಿಂ ಸಮುದಾಯದ ಓಲೈಕೆ, ಅವರ ಮತಗಳ ಬಯಕೆ. ಮುಖ್ಯಮಂತ್ರಿ ಆದ ನಂತರ ಸಿದ್ದರಾಮಯ್ಯನವರಿಗೆ ಇದಕ್ಕೆ ಸರಕಾರಿ ಕಾರ್ಯಕ್ರಮ ಸ್ವರೂಪ ಕೊಟ್ಟರೆ ಮತರಾಜಕಾರಣದಲ್ಲಿ ಜೆಡಿಎಸ್ ಅನ್ನು ಹಿಂದಿಕ್ಕಬಹುದು ಎಂಬ ಜ್ಞಾನೋದಯವಾಗಿದೆ. ಹೀಗಾಗಿ ಎರಡು ವರ್ಷದಿಂದ ಟಿಪ್ಪು ಜಯಂತಿ ಆಚರಣೆ ಆಗುತ್ತಿದೆ. ಈ ಆಚರಣೆಗೆ ಸಾವು-ನೋವುಗಳ ತರ್ಪಣವಾಗುತ್ತಿದೆ.

ಹಾಗೆಂದು ಬಿಜೆಪಿ ಕೂಡ ಪರಿಸ್ಥಿತಿ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ. ಸರಕಾರ ಟಿಪ್ಪು ಆಚರಣೆ ಮೂಲಕ ಮತ ಸೆಳೆಯಲು ಹೊರಟರೆ, ಬಿಜೆಪಿ ಅದನ್ನು ವಿರೋಧಿಸುವ ನೆಪದಲ್ಲಿ ಜನರ ಭಾವನೆಗಳನ್ನು ಪ್ರಚೋದಿಸಿ ಮತರಾಜಕಾರಣ ಮೆರೆಯಲು ಹೊರಟಿದೆ. ಶೋಭಾ ಕರಂದ್ಲಾಜೆ ಅವರ ಹೇಳಿಕೆ ಪರಾಮರ್ಶಿಸುವುದಾದರೆ ಒಂದಷ್ಟು ಕಡೆ ಕೋಮುಗಲಭೆ ಆಗುವುದು ಗ್ಯಾರಂಟಿ. ಅಂದರೆ ಮುಂದೇನಾಗುತ್ತದೆ ಎಂಬುದು ಅವರಿಗೆ ಈಗಲೇ ಹೊಳೆದಂತಿದೆ. ಅದರ ಅರ್ಥ ಏನು? ನಾಳೆ ನಡೆಯುವುದನ್ನು ಇಂದೇ ರೂಪಿಸಿದ್ದಾರೆ ಎಂದೇ? ಅದೇ ರೀತಿ ಅನಂತಕುಮಾರ ಹೆಗಡೆ ಅವರು ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸಿದರೆ ತಾವೇನೂ ಮಾಡುತ್ತೇವೆ ಎಂಬುದನ್ನು ಹೇಳಿ ಈಗಾಗಲೇ ಒಂದಷ್ಟು ಮನಸ್ಸುಗಳಿಗೆ ಕೊಳ್ಳಿ ಹಚ್ಚಿದ್ದಾರೆ. ಒಂದೆಡೆ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ, ಮತ್ತೊಂದೆಡೆ ಮುಸ್ಲಿಮರ ಭಾವನೆಗಳನ್ನೂ ಕೆರಳಿಸುವ ತವಕ.

ಈಗ ಕೇಂದ್ರ ಸರಕಾರ ಭಾರತೀಯ ಜನಸಂಘದ ನೇತಾರ ದೀನದಯಾಳ ಉಪಾಧ್ಯಾಯ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಜಯಂತಿ ಕಾರ್ಯಕ್ರಮ ಸ್ವಾಗತ ಸಮಿತಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಮುಖಂಡ ದೇವೇಗೌಡರು ಇದ್ದಾರೆ. ನಾಳೆ ಈ ಕಾರ್ಯಕ್ರಮವನ್ನು ಅನ್ಯ ರಾಜಕೀಯ ಪಕ್ಷಗಳ ಮುಖಂಡರು, ಅವರದೇ ಪಕ್ಷದ ಮುಸ್ಲಿಂ ಮುಖಂಡರು ಅನಂತಕುಮಾರ ಹೆಗಡೆ ಅವರ ಕಣ್ಣಿನಲ್ಲೇ ನೋಡಿದರೆ, ಅದನ್ನು ಬಹಿಷ್ಕರಿಸಿದರೆ, ಕಾರ್ಯಕ್ರಮದಲ್ಲಿ ಉಪಾಧ್ಯಾಯರ ವಿರುದ್ಧ ಘೋಷಣೆ ಹಾಕಿದರೆ ಹೇಗಿರುತ್ತದೆ? ಹೆಗಡೆ ಅವರಿಗೆ ಇಷ್ಟವಿಲ್ಲದಿದ್ದರೆ ಮುರಳೀಧರರಾವ್ ಅವರು ಹೇಳಿರುವಂತೆ ಕಾರ್ಯಕ್ರಮದಿಂದ ದೂರ ಉಳಿಯಬಹುದಿತ್ತು. ಆದರೆ ಕೋಮುಭಾವನೆಗಳನ್ನು ಪ್ರಚೋದಿಸುವ ಮಾತುಗಳನ್ನೇಕೆ ಆಡಬೇಕಿತ್ತು? ಇದರಿಂದ ಯಾರಿಗೆ ಯಾವ ಲಾಭ. ಒಂದೊಮ್ಮೆ ಸಮಾಜ ಹೊತ್ತಿ ಉರಿದರೆ ಹಾಳಾಗುವವರು ಯಾರು? ಜನಸಾಮಾನ್ಯರಲ್ಲವೇ? ಇಷ್ಟು ದಿನ ಆಗಿರುವ ಬಲಿಗಳು ಸಾಲದೇ? ಮತ್ತೆಷ್ಟು ಬೇಕು? ಯಾವುದೇ ಪಕ್ಷವಿರಲಿ ತಮ್ಮ ತತ್ವ, ಸಿದ್ದಾಂತ, ಮಾಡಿರುವ ಸಾಧನೆಗಳ ಆಧಾರದ ಮೇಲೆ ಮತ ಯಾಚಿಸಬೇಕೇ ಹೊರತು ಸಮಾಜಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಮತ ಎಣಿಸುವುದು ರಾಜಕೀಯ ಎನ್ನಿಸಿಕೊಳ್ಳುವುದಿಲ್ಲ, ಕುತಂತ್ರ ಎನಿಸಿಕೊಳ್ಳುತ್ತದೆ. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಅರಿಯುವುದು ನಾಡಿನ ಹಿತದೃಷ್ಟಿಯಿಂದ ಒಳಿತು!

ಲಗೋರಿ: ದಾಸ್ಯದ ಬೇಡಿಯನ್ನೇ ಆಭರಣ ಎಂದು ಭ್ರಮಿಸಬಾರದು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply