ಎತ್ತ ಸಾಗುತ್ತಿದೆ ನಮ್ಮ ಸಮಾಜ? ಆಭರಣಕ್ಕಾಗಿ ಹೂತ ಹೆಣವನ್ನು ಬಿಡದ ಕಳ್ಳರು

ಡಿಜಿಟಲ್ ಕನ್ನಡ ಟೀಮ್:

‘ಹಣ ಕಂಡರೆ ಹೆಣನೂ ಬಾಯ್ಬಿಡುತ್ತೆ…’ ಅನ್ನೋ ಗಾದೆ ಮಾತು ನೀವೆಲ್ಲರೂ ಕೇಳಿದ್ದೀರಿ. ಆದರೆ ಬದಲಾಗಿರುವ ಸಮಾಜದಲ್ಲಿ ಅದೇ ಮಾತನ್ನು ‘ಹೆಣದ ಮೇಲಿರುವ ಒಡವೆ ಕಂಡರೆ ಜನರು ಬಾಯ್ಬಿಡುತ್ತಾರೆ…’ ಎಂದು ಹೇಳುವಂತಾಗಿದೆ. ಅಷ್ಟು ಕೀಳು ಮಟ್ಟಕ್ಕೆ ನಮ್ಮ ಸಮಾಜ ಬಂದುನಿಂತಿರುವುದು ತಲೆತಗ್ಗಿಸುವಂತಾಗಿದೆ.

ಸಮಾಜ ಇಂಥಹ ಹೀನ ಸ್ಥಿತಿಗೆ ತಲುಪಿರುವುದಕ್ಕೆ ಕಲಬುರಗಿಯಲ್ಲಿ ನಡೆದಿರುವ ಈ ಒಂದು ಘಟನೆಯೇ ಸಾಕ್ಷಿ. ಹೌದು… ಕಲಬುರಗಿಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಹೆಣದ ಮೇಲಿದ್ದ ಒಡವೆಗೆ ಕಣ್ಣಿಟ್ಟ ಕಳ್ಳರು ಹೂತ ಶವವನ್ನು ಹೊರತೆಗೆದು ಚಿನ್ನಾಭರಣ ದೋಚಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪ್ರೇಮಾಬಾಯಿ ಎಂಬ 75 ವರ್ಷದ ವೃದ್ಧೆ ಅನಾರೋಗ್ಯದಿಂದ ಬಳಲಿ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. ಮಕ್ಕಳು ಮರಿ ಇಲ್ಲದ ಕಾರಣ ಗ್ರಾಮಸ್ಥರು ಆಭರಣಗಳ ಸಮೇತವಾಗಿ ಅಜ್ಜಿಯ ಶವವನ್ನು ಅಂತ್ಯಸಂಸ್ಕಾರ ಮಾಡಿದ್ದರು.

ಕಳೆದ ರಾತ್ರಿ ವೃದ್ಧೆಯ ಶವವನ್ನು ಸಮಾಧಿಯಿಂದ ಹೊರತೆಗೆದು ಚಿನ್ನಾಭರಣ ದೋಚಿದ್ದಾರೆ. ಚಿನ್ನ ಲಪಟಾಯಿಸಿದ ಮೇಲೆ ಕಳ್ಳರು ಶವವನ್ನು ಹೊರಗೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಗ್ಗೆ ಮೃತದೇಹ ಶವ ಗುಂಡಿಯಿಂದ ಆಚೆ ಇರುವುದನ್ನು ನೋಡಿದ ಗ್ರಾಮಸ್ಥರು ಕಂಗಾಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೃದ್ಧೆಯನ್ನು ಆಭರಣ ಸಮೇತ ಹೂತಿರುವುದನ್ನು ತಿಳಿದಿರುವ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಈ ಪ್ರಕರಣದ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಣದ ಮೇಲೆ 50 ಗ್ರಾಂ ಹೆಚ್ಚಿನ ಚಿನ್ನಾಭರಣವಿತ್ತು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಒಟ್ಟಿನಲ್ಲಿ ಕಷ್ಟಪಟ್ಟು ದುಡಿಯಲು ಯೋಗ್ಯತೆ ಇಲ್ಲದೇ ಕಂಡವರ ಸಂಪತ್ತಿನ ಮೇಲೆ ಆಸೆ ಪಡುವವರು ಎಂತಹ ಕೀಳು ಮಟ್ಟಕ್ಕೆಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

Leave a Reply