ಪ್ರತಿ ಉಸಿರಾಟದಲ್ಲೂ ಸಾವಿಗೆ ಹತ್ತಿರವಾಗ್ತಿದ್ದಾರೆ ದೆಹಲಿ ಜನರು, ವಾಯು ಮಾಲಿನ್ಯದ ತೀವ್ರತೆ ಎಷ್ಟಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಭಾರತದಲ್ಲಿ ವಾಯು ಮಾಲೀನ್ಯ ಸಮಸ್ಯೆ ಕುರಿತ ಚರ್ಚೆ ದಿನೇ ದಿನೇ ಗಂಭೀರತೆ ಪಡೆದುಕೊಳ್ತಿದೆ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ವಾಯ ಮಾಲೀನ್ಯದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೆಹಲಿ ನಿವಾಸಿಗಳು ಹಾಗೂ ರೋಗಿಗಳ ವೈದ್ಯಕೀಯ ದಾಖಲೆಗಳ ಅಧ್ಯಯನದ ವರದಿ ಇಲ್ಲಿನ ವಾಯು ಮಾಲೀನ್ಯ ತೀವ್ರತೆ ಎಷ್ಟಿದೆ ಎಂಬುದನ್ನು ಬಹಿರಂಗಗೊಳಿಸಿದೆ.

ವೈದ್ಯರ ಅಧ್ಯಯನದ ಪ್ರಕಾರ ದೆಹಲಿ ವಾಯು ಮಾಲೀನ್ಯ ಪರಿಣಾಮದಿಂದ ಧೂಮಪಾನ ಮಾಡದವರ ಶ್ವಾಸಕೋಶದಲ್ಲೂ ಟಾಕ್ಸಿಕ್ ಅಂಶಗಳು ಹೆಚ್ಚಾಗುತ್ತಿದೆ. ಅದರೊಂದಿಗೆ ದೆಹಲಿಯಲ್ಲಿನ ಸಾಮಾನ್ಯ ಉಸಿರಾಟ ಧೂಮಪಾನದಷ್ಟೇ ಮಾರಕವಾಗುತ್ತಿರೋದು ಸ್ಪಷ್ಟವಾಗಿದೆ. ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಯ ಎದೆ ಹಾಗೂ ಶ್ವಾಸಕೋಶ ತಜ್ಞ ಪ್ರೊ.ಅರವಿಂದ ಕುಮಾರ್ ಅವರು ವಾಯು ಮಾಲೀನ್ಯ ಹಾಗೂ ಅದರಿಂದ ಜನರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮ ವಿವರಿಸಿರುವುದು ಹೀಗೆ…

‘ಸದ್ಯ ಮಾಯು ಮಾಲೀನ್ಯ ಈ ರಾಜ್ಯದಲ್ಲಿ ಗಂಭೀರ ಸ್ಥಿತಿ ನಿರ್ಮಾಣ ಮಾಡಿದೆ. ಮಾಲೀನ್ಯದ ಪರಿಣಾಮ ಉಸಿರಾಟದ ಮೂಲಕವೇ ವಿಷಕಾರಿ ಅಂಶ ನಮ್ಮ ದೇಹ ಸೇರುತ್ತಿದೆ. 90ರ ದಶಕದಲ್ಲಿ ವೈದ್ಯರಿಗೆ ಗುಲಾಬಿ (ಪಿಂಕ್) ಬಣ್ಣದ ಶ್ವಾಸಕೋಶಗಳು ಹೆಚ್ಚಾಗಿ ಕಾಣಸಿಗುತ್ತಿದ್ದವು. ಅದು ಸ್ವಚ್ಛ ಹಾಗೂ ಆರೋಗ್ಯಕರ ಶ್ವಾಸಕೋಶದ ಗುರುತು. ಆದರೆ ಧೂಮಪಾನಿಗಳ ಶ್ವಾಸಕೋಶದಲ್ಲಿ ಮಾತ್ರ ಕಾರ್ಬನ್ ಹಾಗೂ ಇತರೆ ಟಾಕ್ಸಿಂಕ್ ಅಂಶಗಳು ಪತ್ತೆಯಾಗುತ್ತಿದ್ದವು. ಆದರೆ ಇಂದು ವಾಯುಮಾಲೀನ್ಯದ ಪರಿಣಾಮದಿಂದ ಧೂಮಪಾನ ಮಾಡದವರ ಶ್ವಾಸಕೋಶಗಳಲ್ಲೂ ಈ ಕಾರ್ಬನ್ ಹಾಗೂ ಟಾಕ್ಸಿಕ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಅಷ್ಟೇ ಅಲ್ಲ ಧೂಮಪಾನ ಮಾಡದೇ ಇರುವವರಿಗೂ ಶ್ವಾಸಕೋಶ ಕ್ಯಾನ್ಸರ್ ಬರುತ್ತಿರುವುದು ತೀವ್ರ ಆಘಾತಕಾರಿ ಬೆಳವಣಿಗೆ.

ಯುವ ರೋಗಿಗಳ ಶ್ವಾಸಕೋಶದಲ್ಲೂ ಕಪ್ಪು ಕಲೆಗಳು ಗೋಚರಿಸಲಾರಂಭಿಸಿದೆ. ಈ ವಾಯು ಮಾಲೀನ್ಯದಿಂದ ಮಕ್ಕಳು ಹಾಗೂ ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ವಾಯು ಮಾಲೀನ್ಯ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ನಾವೆಲ್ಲರೂ ಅನಿಲ ಟ್ಯಾಂಕರ್ ಒಳಗೆ ಉಸಿರಾಡುತ್ತಿರುವಂತಾಗಿದೆ. ಪ್ರತಿ ನಿತ್ಯ ನಾವು 25 ಸಾವಿರ ಬಾರಿ ಉಸಿರಾಟ ಮಾಡುತ್ತೇವೆ. ದೆಹಲಿಯಲ್ಲಿ ನೆಲೆಸಿರುವವರು ಪ್ರತಿ ಉಸಿರಾಟದಲ್ಲೂ ಮಾಲೀನ್ಯವಾಗಿರುವ ಗಾಳಿಯನ್ನೇ ಸೇವಿಸುವಂತಾಗಿದೆ. ಹೀಗಾಗಿ ಈ ವಾಯು ಮಾಲೀನ್ಯ ಕ್ರಮೇಣವಾಗಿ ನಮ್ಮನ್ನು ಕೊಲ್ಲಲಾರಂಭಿಸಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಗಂಟಲು, ಮೂಗಿನ ಅಲರ್ಜಿ, ಎದೆ ನೋವಿನಂತಹ ಸಮಸ್ಯೆಗಳನ್ನು ಹೊಂದಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಸ್ತಮಾ ರೋಗ ಇಲ್ಲದಿದ್ದರೂ ಉಸಿರಾಟದ ತೊಂದರೆ ಎದುರಿಸುವಂತಾಗಿದೆ.’

Leave a Reply