ಗುಜರಾತ್ ಚುನಾವಣೆ ಮುಹೂರ್ತ ಫಿಕ್ಸ್, ಸಿಕ್ಕ ಎರಡು ವಾರಗಳಲ್ಲಿ ಬಿಜೆಪಿ ಸಾಧಿಸಿಕೊಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದೆ. ಇಂದು ಚುನಾವಣಾ ದಿನಾಂಕ ಪ್ರಕಟಿಸಿರೋ ಚುನಾವಣಾ ಆಯೋಗ ಡಿಸೆಂಬರ್ 9 ಹಾಗೂ 14 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು ಹಾಗೂ ಡಿಸೆಂಬರ್ 18ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣ ಆಯೋಗದ ಮುಖ್ಯಸ್ಥ ಎಕೆ ಜೋತಿ ತಿಳಿಸಿದ್ದಾರೆ.

ಈ ಚುನಾವಣೆ ಕುರಿತಾಗಿ ಚುನಾವಣಾ ಆಯೋಗ ನೀಡಿದ ಪ್ರಮುಖ ಮಾಹಿತಿಗಳು ಹೀಗಿವೆ…

 • ಡಿಸೆಂಬರ್ 9ರಂದು (ಶನಿವಾರ) ಮೊದಲ ಹಂತದ ಚುನಾವಣೆ ನಡೆಯಲಿದ್ದು, 19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು ಡಿಸೆಂಬರ್ 14ರಂದು (ಗುರುವಾರ) 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತಏಣಿಕೆ ಡಿಸೆಂಬರ್ 18ರಂದು ನಡೆಯಲಿದೆ.
 • ಗುಜರಾತ್ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ನವೆಂಬರ್ 21 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ.
 • ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಈ ಚುನಾವಣೆಗೆ ಖರ್ಚು ಮಾಡುವ ಮೊತ್ತವನ್ನು ₹ 28 ಲಕ್ಷಕ್ಕೆ ಸೀಮಿತ.
 • ಚುನಾವಣೆ ಸುಸೂತ್ರವಾಗಿ ನಡೆಸಲು 50,128 ಮತಗಟ್ಟೆಗಳು ಸ್ಥಾಪನೆ. 102 ಮಹಿಳಾ ಮತಗಟ್ಟೆಗಳ ಸ್ಥಾಪನೆ. ಗಡಿ ಹಾಗೂ ಸೂಕ್ಷ್ಮಪ್ರದೇಶಗಳಲ್ಲಿ ಸಿಸಿಟಿವಿಗಳ ಅಳವಡಿಕೆ.
 • ಈ ಚುನಾವಣೆಯಲ್ಲಿ ಮತಯಂತ್ರಗಳ ಜತೆಗೆ ವಿವಿಪಿಎಟಿಗಳ ಬಳಕೆ ಮಾಡಲಾಗುವುದು. ಇದರಿಂದ ಮತಚಲಾವಣೆ ಯಂತ್ರದಲ್ಲಿ ಮತ್ತಷ್ಟು ಸುಧಾರಣೆ ಕಾಣದಂತಾಗಿದೆ.

ಹಿಮಾಚಲ ಪ್ರದೇಶ ಚುನಾವಣೆ ಪ್ರಕಟಗೊಂಡು 13 ದಿನಗಳ ಬಳಿಕ ಚುನಾವಣಾ ಆಯೋಗ ಗುಜರಾತ್ ಚುನಾವಣೆ ದಿನಾಂಕ ಪ್ರಕಟಿಸುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇತ್ತೀಚಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕಾಲಾವಕಾಶ ಬೇಕು. ಹೀಗಾಗಿ ನೀತಿ ಸಂಹಿತೆಯಿಂದ ತೊಂದರೆ ಎದುರಾಗಲಿದ್ದು, ಚುನಾವಣೆ ದಿನಾಂಕವನ್ನು ತಡವಾಗಿ ಘೋಷಿಸಬೇಕು ಎಂದು ಬಿಜೆಪಿ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಹೀಗಾಗಿ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟಿಸಿದ ದಿನವೇ ಗುಜರಾತ್ ಚುನಾವಣೆಯ ದಿನಾಂಕ ಪ್ರಕಟಿಸಿರಲಿಲ್ಲ.

ಈಗ ಗುಜರಾತ್ ಚುನಾವಣೆ 13 ದಿನಗಳ ನಂತರ ಪ್ರಕಟವಾಗಿದ್ದು, ಬಿಜೆಪಿ ಈ ಅವಧಿಯಲ್ಲಿ ಗುಜರಾತಿನ ಬಿಜೆಪಿ ಸರ್ಕಾರ ತನ್ನ ಜನರಿಗೆ ವಿವಿಧ ಯೋಜನೆಗಳನ್ನು ಘೋಷಿಸಿ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದೆ. ಹಾಗಾದರೆ ವಿಜಯ್ ರುಪಾನಿ ಅವರ ಸರ್ಕಾರ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಕೈಗೊಂಡ ನಿರ್ಧಾರಗಳೇನು ನೋಡೋಣ ಬನ್ನಿ…

 • ಗುಜರಾತ್ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಸೊಸೈಟಿ ಕಾಯ್ದೆ ಅನ್ವಯ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ 11 ತಿಂಗಳ ಗುತ್ತಿಗೆ ನೌಕರರಿಗೆ ಪ್ರತಿನಿತ್ಯ ಸಾರಿಗೆ ಭತ್ಯೆಯಾಗಿ ₹ 250, 11 ದಿನಗಳ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದೆ. ಇನ್ನು ಗರ್ಭಿಣಿಯರಿಗೆ (ಎರಡು ಮಕ್ಕಳ ಜನನಕ್ಕೆ ಮಾತ್ರ ಅನ್ವಯಿಸುವಂತೆ) 90 ದಿನಗಳ ರಜೆ, ಈ ಸಿಬ್ಬಂದಿ ಮೃತಪಟ್ಟರೆ ಆತನ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಘೋಷಣೆ.
 • ಇನ್ನು ತಿಂಗಳಿಗೆ 20 ಸಾವಿರ ವೇತನ ಪಡೆಯುವ ನೌಕರರು ದಿನಕ್ಕೆ 6 ರಿಂದ 12 ಗಂಟೆವರೆಗೆ ಕೆಲಸ ಮಾಡಿದರೆ ₹100 ಹೆಚ್ಚುವರಿ ಭತ್ಯೆ, 12ಕ್ಕೂ ಹೆಚ್ಚು ಗಂಟೆ ಕೆಲಸ ಮಾಡಿದರೆ ₹ 150 ಭತ್ಯೆ ನೀಡಲು ನಿರ್ಧಾರ.
 • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೂಕ್ಷ್ಮ ವ್ಯವಸಾಯಕ್ಕೆ ಪದ್ಧತಿ ಅಳವಡಿಸಿಕೊಂಡ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ ಅಡಿಯಲ್ಲಿ ಶೇ.18ರಷ್ಟು ಜಿಎಸ್ಟಿ ದರ ರದ್ದು ಮಾಡಿ ₹ 77.64 ಕೋಟಿ ಪರಿಹಾರ ಘೋಷಣೆ.
 • ಇನ್ನು ವಿವಿಧ ಕಲ್ಯಾಣ ಯೋಜನೆಹಾಗೂ ಸಾಮಾಜಿಕ ನ್ಯಾಯಾ ಮತ್ತು ಸಶಕ್ತಿಕರಣ ಇಲಾಖೆವತಿಯಿಂದ ನೀಡಲಾಗುವ ಸೌಲಭ್ಯ ಪಡೆಯಲು ಇದ್ದ ಕೌಟುಂಬಿಕ ಆದಾಯ ಮಿತಿಯನ್ನು ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಆದಾಯ ಮಿತಿಯನ್ನು ₹47 ಸಾವಿರದಿಂದ ₹ 1.20 ಲಕ್ಷಕ್ಕೆ ಏರಿಕೆ ಮಾಡಿದರೆ, ನಗರ ಪ್ರದೇಶಗಳಲ್ಲಿ ₹ 68 ಸಾವಿರದಿಂದ ₹ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ 2.5 ಲಕ್ಷ ಮಂದಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲಿದ್ದಾರೆ.
 • ಆಶಾ ಕಾರ್ಯಕರ್ತರಿಗೆ ಶೇ.50ರಷ್ಟು ಪ್ರೋತ್ಸಾಹ ಧನ ಹೆಚ್ಚಳ. ಕಳೆದ ಏಪ್ರಿಲ್ 1ರಿಂದ ಈ ನೂತನ ನಿರ್ಧಾರ ಜಾರಿಯಾಗಲಿದೆ. ಸುಮಾರು 40 ಸಾವಿರಕ್ಕೂ ಹೆಚ್ಚಿನ ನೌಕರರು ಪ್ರತಿ ವರ್ಷ ಎರಡು ಸೀರೆ ಅಥವಾ ಎರಡು ಜತೆ ಬಟ್ಟೆಯನ್ನು ಉಚಿತವಾಗಿ ಪಡೆಯಲಿದ್ದಾರೆ.
 • ಗುಜರಾತ್ ಸರ್ಕಾರ ಎರಡನೇ ಹಂತದ ಅಹ್ಮದಬಾದ್ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಿದ್ದು, 34.5 ಕಿಮೀ ಉದ್ದದ ಈ ಮೆಟ್ರೋ ರೈಲು ಸಂಪರ್ಕ ಅಹ್ಮದಬಾದ್ ನಿಂದ ಗಾಂಧಿನಗರಕ್ಕೆ ಸಂಪರ್ಕ ಹೊಂದಲಿದೆ. ಇದಕ್ಕಾಗಿ ₹ 6,578 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
 • ಇನ್ನು ಪಾಟಿದಾರ್ ಸಮುದಾಯದ ಮನವೊಲೈಕೆಗೆ ಮುಂದಾದ ಗುಜರಾತ್ ಸರ್ಕಾರ ಮುಂದಾಗಿದ್ದು, ಈ ಸಮುದಾಯದ ಆರಾಧ್ಯ ದೇವತೆ ಉಮಿಯಾರ ಪವಿತ್ರ ಸ್ಥಳ ಉಂಝಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಧಾರ್ಮಿಕ ಆಚರಣೆ ಆಯೋಜನೆಗಾಗಿ ₹ 8.75 ಕೋಟಿ ನೀಡಲಾಗಿದೆ.

ಹೀಗೆ ಸಾಲು ಸಾಲು ಹೊಸ ಯೋಜನೆಗಳನ್ನು ಘೋಷಿಸಿರುವ ಗುಜರಾತ್ ಬಿಜೆಪಿ ಸರ್ಕಾರ ಈಗ ಈ ಯೋಜನೆಗಳನ್ನು ಮುಂದಿಟ್ಟುಕೊಂಡೆ ಜನರ ಬಳಿ ಮತಯಾಚನೆಗೆ ಮುಂದಾಗಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಈ ಎರಡು ವಾರಗಳ ಅಂತರದಲ್ಲಿ ಗುಜರಾತ್ ಸರ್ಕಾರ ಮುಂದಿನ ಚುನಾವಣೆಯಲ್ಲಿ ಜನರ ಮನಗೆಲ್ಲಲು ಮಾಡಬೇಕಾದ ಎಲ್ಲಾ ಘೋಷಣೆಗಳನ್ನು ಮಾಡಿ ಚುನಾವಣೆಗೆ ಸಿದ್ಧತೆ ನಡೆಸಿರುವುದು ಸ್ಪಷ್ಟವಾಗಿದೆ. ಇತ್ತ ಕಾಂಗ್ರೆಸ್ ಪಕ್ಷ ಆರೋಪದಂತೆ ಚುನಾವಣಾ ಆಯೋಗದ ನಿರ್ಧಾರ ಬಿಜೆಪಿಗೆ ಹೆಚ್ಚಿನ ಲಾಭ ತಂದಿರುವುದು ಸಾಬೀತಾಗಿದೆ.

Leave a Reply