ಡಿಸೆಂಬರ್ ನಲ್ಲಿ ಕೊಹ್ಲಿ- ಅನುಷ್ಕಾ ಮದುವೆ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಪ್ರೇಮದ ಕಥೆ ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸದ್ಯಕ್ಕೆ ಇವರಿಬ್ಬರ ಕುರಿತಂತೆ ಗಮನ ಸೆಳೆಯುತ್ತಿರುವ ಸುದ್ದಿ ಏನೆಂದರೆ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದೇ ವರ್ಷಾಂತ್ಯದಲ್ಲಿ ದಾಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬುದು.

ಈ ಬಗ್ಗೆ ಕೊಹ್ಲಿಯಾಗಲಿ ಅನುಷ್ಕಾ ಶರ್ಮಾರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತು ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ದೂರ ಉಳಿಯಲು ಇಚ್ಛಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಬಿಸಿಸಿಐಗೆ ಪ್ರಕಟಿಸಿರುವ ವಿರಾಟ್, ವೈಯಕ್ತಿಕ ಕಾರಣ ನೀಡಿ ವಿಶ್ರಾಂತಿ ಕೋರಿದ್ದಾರೆ. ಆದರೆ ಕೊಹ್ಲಿಯ ಈ ವಿಶ್ರಾಂತಿಗೆ ಜನವರಿ ಮೊದಲ ವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿರುವ ನಿಜವಾದ ಕಾರಣ ಮದುವೆ ಎಂಬುದು ಸದ್ಯ ಗಮನಸೆಳೆಯುತ್ತಿರುವ ಅಂಶ.

ಕೊಹ್ಲಿ ಅವರ ಈ ವಿರಾಮ ಕೋರಿಕೆ ಹಿಂದೆ ಈ ವಿವಾಹದ ಪ್ರಶ್ನೆ ಉದ್ಭವಿಸಲು ಕಾರಣವಿದೆ. ಅದೇನೆಂದರೆ, ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಅತ್ಯಂತ ಫಿಟ್ ಆಟಗಾರ. ಆತ ಟೀಂ ಇಂಡಿಯಾ ಪರ ಆಡುವ ಯಾವುದೇ ಅವಕಾಶವನ್ನು ಕೈಚೆಲ್ಲಲು ಬಿಡುವುದಿಲ್ಲ. ಟೀಂ ಇಂಡಿಯಾ ನಿರಂತರವಾಗಿ ಸರಣಿಗಳನ್ನಾಡುತ್ತಿದ್ದರೂ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೂ ಅವರು ಲಂಕಾ ವಿರುದ್ಧದ ಮೂರನೇ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿರುವುದು ಹಾಗೂ ಅದಕ್ಕಾಗಿ ವೈಯಕ್ತಿಕ ಕಾರಣ ನೀಡಿರುವುದರ ಹಿಂದೆ ಮಧುವೆಯ ಕಾರಣವಿದೆ ಎಂದು ಅಂದಾಜಿಸಲಾಗುತ್ತಿದೆ.

ಇತ್ತೀಚೆಗಷ್ಟೇ ನಟ ಅಮೀರ್ ಖಾನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದ ಕೊಹ್ಲಿ, ಅನುಷ್ಕಾ ಶರ್ಮಾ ಬಗ್ಗೆ ತಮ್ಮ ಪ್ರೀತಿಯ ಕುರಿತು ಮಾತನಾಡಿದ್ದರು. ಹೀಗಾಗಿ ಈ ವಿರಾಮದ ವೇಳೆ ಕೊಹ್ಲಿ ವಿವಾಹ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎಂಬ ಚರ್ಚೆ ಕಾವು ಪಡೆದುಕೊಂಡಿದೆ.

ಮುಂದಿನ ವರ್ಷ ದಕ್ಷಿಣ ಆಫ್ರಿಕಾ ಸರಣಿಯಿಂದ ಆರಂಭವಾಗುವ ಟೀಂ ಇಂಡಿಯಾ ಕ್ರಿಕೆಟ್ ಅಭಿಯಾನ ನಿರಂತರವಾಗಿ ಸಾಗಲಿದೆ. ಹೀಗಾಗಿ ಕೊಹ್ಲಿ ಮದುವೆಗೆ ಡಿಸೆಂಬರ್ ತಿಂಗಳು ಸೂಕ್ತ ಸಮಯ ಎಂಬ ಮಾತುಗಳು ಕೇಳಿಬರ್ತಿವೆ. ಈ ನಿರ್ಧಾರದ ಕುರಿತು ಈ ಇಬ್ಬರು ತಾರೆಯರು ಅಧಿಕೃತ ಹೇಳಿಕೆ ನೀಡುವವರೆಗೂ ಈ ವಿಷಯವಾಗಿ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿಯಲಿದೆ.

Leave a Reply