ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಯ್ತು ರಾಷ್ಟ್ರಪತಿಗಳ ಭಾಷಣ

ಡಿಜಿಟಲ್ ಕನ್ನಡ ಟೀಮ್:

ಕಳೆದ ಹದಿನೈದು ದಿನಗಳಿಂದ ವಿವಾದಗಳ ಗೂಡಾಗಿದ್ದ ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ಈ ರಾಷ್ಟ್ರಪತಿಗಳು ಮಾಡಿದ ಭಾಷಣ ರಾಜ್ಯ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಚುನಾವಣೆಯ ವರ್ಷದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸೇರಿದಂತೆ ಸರ್ಕಾರದ ಇತರೆ ನೀಲುವುಗಳ ವಿರುದ್ಧ ಸಮರ ಸಾರಲು ಸಜ್ಜಾಗಿರುವ ಬಿಜೆಪಿ ನಾಯಕರಿಗೆ ರಾಷ್ಟ್ರಪತಿಗಳ ಮಾತುಗಳು ಶಾಕ್ ಕೊಟ್ಟಿವೆ. ಟಿಪ್ಪು ಸುಲ್ತಾನ್ ನನ್ನು ಹಾಡಿ ಹೊಗಳಿದಷ್ಟೇ ಅಲ್ಲದೇ ಸರ್ಕಾರವನ್ನು ಬೆಂಬಲಿಸಿದರು. ಇದರಿಂದ ಸಹಜವಾಗಿಯೇ ಬಿಜೆಪಿಗೆ ಹಿನ್ನಡೆಯುಂಟು ಮಾಡಿದೆ.

ರಾಮನಾಥ್ ಕೋವಿಂದ್ ಅವರು ಬಿಜೆಪಿಯ ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರೂ ಆ ಜವಾಬ್ದಾರಿ ವಹಿಸಿಕೊಂಡ ಮೇಲೆ ಅವರು ಪಕ್ಷಾತೀತರಾಗಿರುತ್ತಾರೆ. ಹೀಗಾಗಿ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನರನ್ನು ಹೊಗಳಿದ್ದಾಗಲಿ ಅಥವಾ ಕಾಂಗ್ರೆಸ್ ಸಂರ್ಕಾರಕ್ಕೆ ಪ್ರಶಂಸೆ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ರಾಜಕೀಯಾಗಿ ನೋಡುವುದಾದರೆ ರಾಷ್ಟ್ರಪತಿಗಳ ಮಾತುಗಳು ರಾಜ್ಯ ಬಿಜೆಪಿ ನಾಯಕರಿಗೆ ಕಸಿವಿಸಿ ತಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ‘ರಾಷ್ಟ್ರಪತಿಗಳಿಂದ ಉತ್ತಮ ಸರ್ಕಾರ ಎಂದು ಹೇಳಿಸಿಕೊಳ್ಳಲಾಗಿದೆ’ ಎಂದು ಹೇಳಿಕೆ ಕೊಟ್ಟಿರುವುದೇ ಬಿಜೆಪಿ ನಾಯಕರ ಅಸಮಾಧಾನಕ್ಕೆ ಸಾಕ್ಷಿಯಾಗಿದೆ. ಇನ್ನು ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸ ಕಾರ್ಯಾದರ್ಶಿ ದಿನೇಶ್ ಗುಂಡುರಾವ್, ‘ರಾಷ್ಟ್ರಪತಿಗಳಿಗೆ ವಿಶೇಷ ತಂಡ ಭಾಷಣ ಸಿದ್ಧಪಡಿಸುತ್ತದೆಯೇ ಹೊರತು ರಾಜ್ಯಸರ್ಕಾರವಲ್ಲ. ಬಿಜೆಪಿ ಆರೋಪ ಮಾಡುವ ಮುನ್ನ ಅದಕ್ಕೆ ಸೂಕ್ತ ಆಧಾರ ಹೊಂದಿರಬೇಕು’ ಎಂದರು.

ಅಂದಹಾಗೆ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ಚಿತ್ರಣ ಹೀಗಿತ್ತು…

‘ಮೂರು ತಿಂಗಳ ಹಿಂದೆ ಇದೇ ದಿನಾಂಕದಂದು ನಾನು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಆನಂತರ ಕರ್ನಾಟಕಕ್ಕೆ ನನ್ನ ಮೊದಲನೇ ಭೇಟಿ ಇದಾಗಿದೆ. ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ. ಇಂದು ವಿಧಾನಸೌಧಕ್ಕೆ ವಜ್ರಮಹೋತ್ಸವ ಎನ್ನುವುದಕ್ಕಿಂತ ವಿಧಾನಸೌಧದಲ್ಲಿ ಆರಂಭವಾದ ಸಂಸದೀಯ ಚಟುವಟಿಕೆಗಳು, ಸದನ, ಕಲಾಪಗಳಿಗೆ ವಜ್ರಮಹೋತ್ಸವವಾಗಿದೆ.

ಸದನದ ಕಲಾಪದಲ್ಲಿ ಗಂಭೀರವಾದ ಚರ್ಚೆ ನಡೆಯಬೇಕು. ಈ ಸದನವು ಅನೇಕ ಉತ್ತಮ ಸಂಸದೀಯಪಟುಗಳನ್ನು ನೀಡಿದೆ. ಕೆಲವು ಸಂದರ್ಭಗಳಲ್ಲಿ ಐತಿಹಾಸಿಕ ಚರ್ಚೆಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಜಾತಿ, ಧರ್ಮ, ಭಾಷೆ, ಲಿಂಗಭೇದ ಮರೆತು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ವಿಜ್ಞಾನ ಹಾಗೂ ತಂತ್ರಜ್ಞನ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ. ಸರ್ ಎಂ. ವಿಶ್ವೇಶ್ವರಯ್ಯನವರು ನವ ಕರ್ನಾಟಕ ನಿರ್ಮಾಣ ಮಾಡಿದವರು. ರಾಜ್ಯದ ಕಲಬುರಗಿ ಜಿಲ್ಲೆ ಸೂಫಿ ಸಂತರ ನೆಲೆಯಾಗಿದೆ.

ಈ ರಾಜ್ಯವನ್ನು ಆಳಿದ ಅನೇಕ ಮುಖ್ಯಮಂತ್ರಿಗಳು ಅಪಾರ ಕೊಡುಗೆ ನೀಡಿದ್ದಾರೆ. ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತರಾಯ, ಕಡಿದಾಳು ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸ್, ಬಿ.ಡಿ ಜತ್ತಿ, ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ, ವೀರೇಂದ್ರ ಪಾಟೀಲ್, ಎಸ್.ಎಂ ಕೃಷ್ಣ ಹೀಗೆ ಅನೇಕ ಮುಖ್ಯಮಂತ್ರಿಗಳು ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ.’

ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹೆಸರನ್ನು ಉಲ್ಲೇಕಿಸದಿದ್ದಕ್ಕೆ ಜೆಡಿಎಸ್ ನಾಯಕರಿಂದ ಆಕ್ಷೇಪ ವ್ಯಕ್ತವಾಯಿತು. ಆಗ ನಗುತ್ತಲೇ ತಮ್ಮ ಭಾಷಣ ಮುಂದುವರಿಸಿದ ಕೋವಿಂದ್, ‘ದೇವೇಗೌಡರು ಮುಖ್ಯಮಂತ್ರಿಯಾಗಿದ್ದವರು, ದೇಶದ ಪ್ರಧಾನಮಂತ್ರಿ ಕೂಡ ಆಗಿದ್ದವರು. ಅವರು ನನಗೆ ಉತ್ತಮ ಸ್ನೇಹಿತರೂ ಹೌದು.’

ಆಗ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರಡ್ಡಿ ಅವರು ಸದನದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಜರಿದ್ದಾರೆ ಎಂದರು. ಆಗ ಕೋವಿಂದ್ ಅವರ ಉತ್ತರ ಹೀಗಿತ್ತು… ‘ಈ ರಾಜ್ಯಕ್ಕೆ ಅನೇಕ ಮುಖ್ಯಮಂತ್ರಿಗಳು ಸೇವೆ ಸಲ್ಲಿಸಿದ್ದಾರೆ. ಆ ಪೈಕಿ ಇಲ್ಲಿ ಕೆಲವರ ಹೆಸರು ಮಾತ್ರ ಉಲ್ಲೇಖಿಸಿದ್ದೇನೆ’ ಎಂದರು.

ತಮ್ಮ 10 ನಿಮಿಷಗಳ ಭಾಷಣದಲ್ಲಿ ರಾಷ್ಟ್ರಪತಿಯವರು ವಿಜಯನಗರ ಸಾಮ್ರಾಜ್ಯ, ಟಿಪ್ಪುಸ್ತುಲಾನ್, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಮೈಸೂರಿನ ಅರಸರ ಆಡಳಿತವನ್ನು ಸ್ಮರಿಸಿದರು. ಈ ವೇಳೆ ಟಿಪ್ಪು ಸುಲ್ತಾನ್ ಕುರಿತು ಮಾತನಾಡಿದ ಅವರು ‘ಟಿಪ್ಪು ಸುಲ್ತಾನ್ ರಾಕೆಟ್ ತಂತ್ರಜ್ಞಾನದ ಜನಕ. ಬ್ರಿಟೀಷರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ದೇಶಪ್ರೇಮಿ’ ಎಂದು ಹೋಗಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮೇಜು ಕುಟ್ಟಿ ಬೆಂಬಲ ಸೂಚಿಸಿದರೆ, ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು.

Leave a Reply