ಹಂಪಿಗೆ ಸಿಕ್ಕ ದತ್ತು ಭಾಗ್ಯ- ತಾಜ್ ಮಹಲಿಗೆ ಸಿಗಲಿಲ್ಲ, ಪ್ರೇಮಸೌಧವನ್ನು ಕೇಳೋರೆ ಇಲ್ಲ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ನಿರ್ಲಕ್ಷ್ಯ ಹಾಗೂ ವಿವಾದಕ್ಕೆ ಸಿಲುಕಿರುವ ತಾಜ್ ಮಹಲ್ ಈಗ ಖಾಸಗಿ ಕಂಪನಿಯವರಿಗೂ ಬೇಡವಾಗಿದೆ.

ಹೌದು, ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಪಾರಂಪರಿಕ ಸ್ಥಳಗಳ ದತ್ತು ಕಾರ್ಯಕ್ರಮದ ಮೂಲಕ ದೇಶದ ಪ್ರಮುಖ ಐತಿಹಾಸಿಕ ತಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲುಮುಂದಾಗಿದೆ. ಆ ಕಾರ್ಯಕ್ರಮದ ಮೊದಲ ಹಂತದಲ್ಲಿ 15 ಪಾರಂಪರಿಕ ಸ್ಥಳಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಆ ಪೈಕಿ ಕರ್ನಾಟಕದ ಹಂಪಿ ಕೂಡ ಒಂದಾಗಿತ್ತು. ಹಂಪಿಯನ್ನು ಪ್ರವಾಸಿ ಆನ್ ಲೈನ್ ಟಿಕೆಟ್ ಬುಂಕಿಂಗ್ ಜಾಲತಾಣ ಯಾತ್ರಾ ಡಾಟ್ ಕಾಂ ಕಂಪನಿಯು ಹಂಪಿಯನ್ನು ದತ್ತು ಪಡೆದುಕೊಂಡಿದ್ದು, ತಾಜ್ ಮಹಲ್ ಅನ್ನು ಯಾವುದೇ ಕಂಪನಿಗಳು ದತ್ತು ಪಡೆಯಲು ಮುಂದಾಗಿಲ್ಲ.

ಅಂದಹಾಗೆ ಕೇಂದ್ರ ಸರ್ಕಾರದ ಈ ಕಾರ್ಯಕ್ರಮದಡಿಯಲ್ಲಿ ತಾಜ್ ಮಹಲ್ ಹಾಗೂ ಹಂಪಿಯ ಜತೆಗೆ ದೆಹಲಿಯ ಕುತುಬ್ ಮಿನಾರ್, ಜಂತರ್ ಮಂತರ್, ಪುರಾನ ಕ್ವಿಲಾ, ಸಫ್ದರ್ ಜಂಗ್ ಸಮಾಧಿ, ಒಡಿಶಾದ ಸೂರ್ಯ ದೇವಾಲಯ, ರತ್ನಗಿರಿ ಸ್ಮಾರಕ ಮತ್ತು ರಾಜರಾಣಿ ದೇವಾಲಯ, ಲೆಹ್ ಅರಮನೆ, ಅಜಂತಾ ಎಲ್ಲೋರಾ ಗುಹೆಗಳು, ಕೊಚ್ಚಿಯ ಮತ್ತಂಚೇರಿ ಅರಮನೆ, ಗಂಗೋತ್ರಿ ದೇವಾಲಯ ಮತ್ತು ಗೋಮುಖ, ಲಡಾಕಿನ ಸ್ಪಾಕ್ ಕಂಗ್ರಿ ಸ್ಥಳಗಳು ಮೊದಲ ಹಂತದ ಪಟ್ಟಿಯಲ್ಲಿದ್ದವು.

ಈ 14 ಪಾರಂಪರಿಕ ಸ್ಥಳಗಳನ್ನು ಏಳು ಖಾಸಗಿ ಕಂಪನಿಗಳು ದತ್ತು ಪಡೆಯಲು ಮುಂದಾಗಿದ್ದು, ತಾಜ್ ಮಹಲ್ ಅನ್ನು ದತ್ತು ಪಡೆಯಲು ಯಾವುದೇ ಕಂಪನಿಗಳು ಮುಂದೆ ಬಂದಿಲ್ಲ. ಸದ್ಯಕ್ಕೆ ತಾಜ್ ಮಹಲ್ ದತ್ತು ಪಡೆಯಲು ಈ ಏಳು ಕಂಪನಿಗಳು ಇಚ್ಛಿಸದ ಹಿನ್ನೆಲೆಯಲ್ಲಿ ತಾಜ್ ಮಹಲ್ ಅನ್ನು ಮುಂದಿನ ಹಂತದಲ್ಲಿ ಖಾಸಗಿಯವರು ದತ್ತು ಪಡೆಯಲು ಅವಕಾಶ ಮಾಡಿಕೊಡಲು ಸಚಿವಾಲಯ ನಿರ್ಧರಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಶ್ಮಿ ವರ್ಮಾ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಪ್ರೇಮದ ಸೌಧ, ವಿಶ್ವದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿರುವ ತಾಜ್ ಮಹಲ್ ಇತ್ತೀಚೆಗೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ಈಗ ಖಾಸಗಿಯವರಿಂದಲೂ ದೂರ ಉಳಿಯುತ್ತಿರುವುದು ಅಚ್ಚರಿ ಮೂಡಿಸಿದೆ.

Leave a Reply