ನಿತ್ಯಾನಂದನ ಹಾದಿಯಲ್ಲೇ ಮತ್ತೊಬ್ಬ ಕಾಮಿಸ್ವಾಮಿ ದಯಾನಂದ!

ಡಿಜಿಟಲ್ ಕನ್ನಡ ಟೀಮ್:

ಕಾವಿ ತೊಟ್ಟಿದ್ದರೂ ಕಾಮದಾಟದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಸ್ವಾಮೀಜಿಯ ಬಂಡವಾಳ ಬೆಳಕಿಗೆ ಬಂದಿದೆ. ಯಲಹಂಕದ ಹುಣಸಮಾರನಹಳ್ಳಿಯ ಜಂಗಮಮಠದ ದಯಾನಂದ ಸ್ವಾಮೀಜಿ ಚಿತ್ರನಟಿಯೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿರುವ ವಿಡಿಯೋ ಸಿಡಿ ಗುರುವಾರ ಬಿಡುಗಡೆಯಾಗಿದ್ದು, ಭಕ್ತಾಧಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುರವಾರ ಬೆಳಗ್ಗೆ ಈ ವಿಡಿಯೋ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಭಕ್ತಾಧಿಗಳು ಮಠದ ಬಳಿ ಆಗಮಿಸಿ ಪ್ರತಿಭಟನೆ ಮಾಡಿದ್ದು, ಅವರನ್ನು ನಿಯಂತ್ರಿಸಲು ಲಘು ಲಾಠಿ ಚಾರ್ಜ್ ಮಾಡಿ ಮಠಕ್ಕೆ ಬೀಗ ಜಡಿಯಲಾಗಿದೆ. ಅತ್ತ ದಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.

ಈ ಮಠ ಯಾವುದು, ಈ ದಯಾನಂದ ಸ್ವಾಮೀಜಿ ಯಾರು? ಈತನ ಹಿನ್ನಲೆ ಏನು? ಈತನ ಮೇಲಿರುವ ಇತರೆ ಅಕ್ರಮಗಳ ಆರೋಪಗಳೇನು? ಈ ಪ್ರಕರಣದಲ್ಲಿರುವ ನಟಿ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಹೀಗಿದೆ…

ಇದು ಐನೂರು ವರ್ಷಗಳ ಇತಿಹಾಸ ಹೊಂದಿರುವ ದೇವಣಾಪುರ ದೇವ ಮಹಸಂಸ್ಥಾನ ಮಠವಾಗಿದ್ದು, ಶ್ರೀಶೈಲ ಮಠದ ಶಾಖಾ ಮಠವಾಗಿದೆ. ಮಠದ ಪೀಠಾಧಿಪತಿ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಅವರ ಪುತ್ರ ದಯಾನಂದ ಸ್ವಾಮೀಜಿ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಯೇ ಈಗ ನಟಿಯೊಂದಿಗಿನ ಲೈಂಗಿಕ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಾಮಿಸ್ವಾಮಿ.

ಮಠದ ಪೀಠಾಧಿಪತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪ್ಯಾರಾಲಿಸಿಸ್ ಆಗಿದೆ. ಇವರ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗ ಈ ದಯಾನಂದ ಸ್ವಾಮಿ. ಈಗ ದಯಾನಂದ ಮಠದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಕೈಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲೇ ಡಿಬಾರ್ ಆಗಿದ್ದ ಇತಿಹಾಸ ಹೊಂದಿರುವ ಈತ ಮಠದ ಉತ್ತರಾಧಿಕಾರಿಯಾಗಲು ಅನೇಕರ ವಿರೋಧವಿತ್ತು. ಆದರೂ ಮಠದ ಆಂತರಿಕ ವಲಯದಲ್ಲೇ ಕೆಲವು ರಾಜಿ ಸಂದಾನಗಳ ಮೂಲಕ ಈತನಿಗೆ ಮಠದ ಜವಾಬ್ದಾರಿ ನೀಡಲಾಗಿತ್ತು. ಈ ಮಠದ ಜವಾಬ್ದಾರಿ ಹೊತ್ತುಕೊಂಡ ಮೇಲೆ ದಯಾನಂದ ಮಠದ ಉತ್ತರಾಧಿಕಾರಿಯಾಗಲು ಅನೇಕ ಪ್ರಯತ್ನ ಮಾಡಲು ಆರಭಿಸಿದ್ದ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ, ಮಠದ ಪೀಠಾಧಿಪತಿಗಳಾಗಿರುವ ಶಿವಚಾರ್ಯ ಸ್ವಾಮೀಜಿಗಳೇ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು. ಅಕ್ರಮ ಸಂಬಂದ ಹೊಂದಿದ್ದ ಸ್ವಾಮೀಜಿ ಅವರ ವಿರುದ್ಧ ಎಲ್ಲರೂ ಮೌನ ವಹಿಸಿದ್ದು ಏಕೆ? ಹಿರಿಯ ಸ್ವಾಮಿಜಿಗಳ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗನಿಗೆ ಈ ಮಠದ ಜವಾಬ್ದಾರಿ ಹೊತ್ತುಕೊಳ್ಳಲು ಅವಕಾಶ ನೀಡಿದ್ದು ಏಕೆ? ಈ ವಿಚಾರ ಗೊತ್ತಿದ್ದರೂ ಯಾರೊಬ್ಬರೂ ಇದನ್ನು ವಿರೋಧಿಸಲಿಲ್ಲವೇ? ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತಿದೆ. ಜತೆಗೆ ಈ ಎಲ್ಲ ಬೆಳವಣಿಗೆಗಳ ಹಿಂದೆ ಅನೇಕ ಪಿತೂರಿಗಳು ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ದಯಾನಂದನ ಈ ಲೈಂಗಿಕ ಪ್ರಕರಣ ಹೊರಬರುತ್ತಿದ್ದಂತೆ ಈತನ ಅನೇಕ ಅಕ್ರಮಗಳು ಹೊರಬರಲಾರಂಭಿಸಿವೆ. ಮೈಸೂರು ರಾಜರು ಈ ಮಠಕ್ಕೆ ಮೂರು ಸಾವಿರ ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಆ ಪೈಕಿ 1200 ಎಕರೆ ಜಮೀನು ವಾಯುಪಡೆ ವ್ಯಾಪ್ತಿಗೆ ಸೇರಿಕೊಂಡಿತು. ಉಳಿದ ಜಮೀನು ಮಠದ ನಿಯಂತ್ರಣದಲ್ಲೇ ಇದೆ. ಇದರಲ್ಲಿ 100 ಎಕರೆ ಜಮೀನನ್ನು ದಯಾನಂದ ಅಕ್ರಮವಾಗಿ ಮಾರಾಟ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬರುತ್ತಿದೆ. ಮಠದ ಆಡಳಿತ ಮಂಡಳಿ ಸ್ವಾಮೀಜಿ ಅಕ್ರಮ ಸಂಬಂಧಕ್ಕೆ ಹುಟ್ಟಿದ ಪುತ್ರನಿಗೆ ಜವಾಬ್ದಾರಿ ವಹಿಸಿದ ಮೇಲೆ ಭಕ್ತಾದಿಗಳು ಈತನಿಂದ ಇನ್ಯಾವ ಲೋಕ ಕಲ್ಯಾಣವನ್ನು ನಿರೀಕ್ಷಿಸಲು ಸಾಧ್ಯ ಎಂಬುದನ್ನು ಯೋಚಿಸಬೇಕು.

ಈ ಎಲ್ಲಾ ಅನಾಚಾರಗಳು ಬಹಿರಂಗವಾಗುತ್ತಿದ್ದಂತೆ ದಯಾನಂದ ತಲೆ ಮರೆಸಿಕೊಂಡಿದ್ದು, ಮತ್ತೊಂದೆಡೆ ಭಕ್ತಾದಿಗಳು ಮಠಕ್ಕೆ ಆಗಮಿಸಿ ದಯಾನಂದನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ 50 ಪೊಲೀಸರನ್ನು ನಿಯೋಜಿಸಲಾಗಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಕೆಲ ವರ್ಷಗಳ ಹಿಂದೆ ಬಿಡದಿಯ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣ ಬೆಳಕಿಗೆ ಬಂದ ನಂತರ ಈಗ ಈ ಪ್ರಕರಣ ಬೆಳಕಿಗೆ ಬಂದಿರುವುದು ಮಠ ಹಾಗೂ ಸ್ವಾಮೀಜಿಗಳಿಗೆ ಮತ್ತೆ ಕಳಂಕ ಅಂಟಿಕೊಂಡಂತಾಗಿದೆ. ಈ ಪ್ರಕರಣದಿಂದ ಇಡೀ ವೀರಶೈವ ಲಿಂಗಾಯತ ಸಮುದಾಯವೇ ತಲೆತಗ್ಗಿಸುವಂತಾಗಿದೆ.

ಈ ರಾಸಲೀಲೆ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು ಚಿತ್ರನಟಿ ರೂಪ ಆಚಾರ್ಯ ಎಂದು ಗುರುತಿಸಲಾಗಿದ್ದು, ಈಕೆ ತೀರ್ಥಹಳ್ಳಿ ಮೂಲದವರಾಗಿದ್ದು, ಖತರ್ನಾಕ್, ಅದೃಷ್ಟ, 141 ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಗಳು ಬಂದಿವೆ. ಆದರೆ ಈವರೆಗೂ ಈ ಪ್ರಕರಣದ ಕುರಿತಂತೆ ಈಕೆಯಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಈಕೆ ಮುಂದಿನ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ನೀಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

Leave a Reply