ಜಾರ್ಜ್ ರಕ್ಷಣೆಗೆ ಕಾಂಗ್ರೆಸ್ ನಾಯಕರ ಕೋಟೆ, ಬಿಜೆಪಿ ದಾಳಿಗೆ ಕೈ ನಾಯಕರ ಸಮರ್ಥನೆ

ಡಿಜಿಟಲ್ ಕನ್ನಡ ಟೀಮ್:

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಿಬಿಐ ಸಚಿವ ಜಾರ್ಜ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಮಾತಿನ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಜಾರ್ಜ್ ಅವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿಯುತ್ತಿದ್ದರೆ, ಅತ್ತ ಕಾಂಗ್ರೆಸ್ ನಾಯಕರು ಜಾರ್ಜ್ ಬೆನ್ನಿಗೆ ನಿಂತು ಸಮರ್ಥನೆಗೆ ಮುಂದಾಗಿದ್ದಾರೆ.

ಈ ಬೆಳವಣಿಗೆ ಕುರಿತಾಗಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರೂ ಜಾರ್ಜ್ ಅವರ ಬೆಂಬಲಕ್ಕೆ ನೀಡಲು ಕರೆ ನೀಡಿದ್ದಾರೆ. ಅಲ್ಲದೆ ಬಿಜೆಪಿಯವರು ಹೋರಾಟ ನಡೆಸಿದರೆ, ಅವರ ವಿರುದ್ಧ ಪ್ರತಿ ಹೋರಾಟ ನಡೆಸಲು ಸೂಚನೆ ನೀಡಿದ್ದಾರೆ. ಅಂದಹಾಗೆ ಈ ಸಭೆಗೆ ಸಚಿವ ಜಾರ್ಜ್ ಗೈರಾಗಿದ್ದು, ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರಾದ ಪರಮೇಶ್ವರ್, ಟಿ.ಬಿ ಜಯಚಂದ್ರ, ಡಿ.ಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಲೇ ಜಾರ್ಜ್ ಅವರ ಸಮರ್ಥನೆಗೆ ಮುಂದಾದರೆ, ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸಿಟಿ ರವಿ ಅವರು ಗಣಪತಿ ಅವರ ಸಾವಿನ ಪ್ರಕರಣದಲ್ಲಿ ಜಾರ್ಜ್ ಕೈವಾಡವಿದ್ದು ರಾಜಿನಾಮೆ ನೀಡಲೇಬೇಕು ಎಂದು ಹೇಳಿದ್ದಾರೆ. ಈ ಹೊತ್ತಿನಲ್ಲಿ ಎರಡು ಪಕ್ಷಗಳ ನಾಯಕರ ವಾದ- ಪ್ರತಿವಾದವೇನು ನೋಡೋಣ ಬನ್ನಿ…

ಬಿಜೆಪಿ ನಾಯಕರ ಆರೋಪ…

  • ‘ಗಣಪತಿ ಅವರ ಆತ್ಮಹತ್ಯೆಗೆ ಜಾರ್ಜ್ ಅವರೇ ಕಾರಣ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರ್ಜ್ ಅವರಿಂದ ರಾಜಿನಾಮೆ ಪಡೆಯಬೇಕು. ಯಾವುದೇ ಒಂದು ಪ್ರಕರಣದಲ್ಲಿ ಮೊದಲನೆಯ ಆರೋಪಿಯಾಗಿ ಎಫ್ಐಆರ್ ನಲ್ಲಿ ದಾಖಲಾದರೆ ರಾಜಿನಾಮೆ ನೀಡುವುದು ಹಾಗೂ ಬಂಧನವಾಗುವುದು ಈವರೆಗೂ ನಡೆದುಕೊಂಡು ಬಂದಿರುವ ಪದ್ಧತಿ. ಮುಖ್ಯಮಂತ್ರಿಗಳ ತಮ್ಮ ಸಚಿವರಿಂದ ರಾಜಿನಾಮೆ ಪಡೆಯಬೇಕು. ಈ ಪ್ರಕರಣದಲ್ಲಿ ಸಿಐಡಿ ದುರುಯೋಗವಾಗಿರುವುದು ಸ್ಪಷ್ಟವಾಗಿದೆ. ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆಸಲಾಗಿದೆ.’- ಬಿ.ಎಸ್ ಯಡಿಯೂರಪ್ಪ.
  • ‘ಸಚಿವ ಜಾರ್ಜ್ ಅವರು ಸಿಐಡಿ ತನಿಖೆ ನಡೆಸುತ್ತಿರುವಾಗ ರಾಜಿನಾಮೆ ಕೊಟ್ಟಿದ್ದರು. ಈಗ ಸಿಬಿಐ ತನಿಖೆ ನಡೆಸುವಾಗ ರಾಜಿನಾಮೆ ಏಕೆ ನೀಡುತ್ತಿಲ್ಲ? ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕೇ ಸಿಗುತ್ತದೆ ಎಂದು ಅವರಿಗೆ ತಿಳಿದಿತ್ತೇ? ಈ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕೆಂದರೆ ಜಾರ್ಜ್ ಅವರು ರಾಜಿನಾಮೆ ನೀಡಲೇಬೇಕು. ಜಾರ್ಜ್ ಅವರ ಜತೆಗೆ ಮುಖ್ಯಮಂತ್ರಿಗಳು ಸಹ ತಮ್ಮ ಕುರ್ಚಿ ಬಿಡಲಿ.’- ಶೋಭಾ ಕರಂದ್ಲಾಜೆ.
  • ‘ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್ ಅತಿಯಾದ ಬುದ್ಧಿ ಬಳಸುತ್ತಿದೆ. ಸಿಐಡಿಯಿಂದ ಸರಿಯಾಗಿ ತನಿಖೆ ನಡೆಸಿಲ್ಲ. ಗಣಪತಿ ಅವರ ಇ ಮೇಲ್ ಅನ್ನು ಡಿಲೀಟ್ ಮಾಡಿರುವುದು ಏಕೆ? ಈ ಪ್ರಕರಣದ ತನಿಖೆ ಸುಗಮವಾಗಿ ಸಾಗಬೇಕಾದರೆ ಜಾರ್ಜ್ ಅವರ ರಾಜಿನಾಮೆ ಅಗತ್ಯವಿದೆ.’- ಸಿ.ಟಿ ರವಿ

ಕಾಂಗ್ರೆಸ್ ನಾಯಕರ ಸಮರ್ಥನೆ…

  • ‘ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಈಗಾಗಲೇ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಆದರೆ ಗಣಪತಿ ಅವರ ತಂದೆ ಎಸ್ ಎಲ್ ಪಿ ದಾಖಲಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಸಿಬಿ ತಿನಿಖೆಗೆ ಆದೇಶ ನೀಡಿದೆ. ಆದರೆ ಎಲ್ಲೂ ಜಾರ್ಜ್ ಅವರ ಹೆಸರು ಪ್ರಸ್ತಾಪ ಮಾಡಿಲ್ಲ. ಈ ಹಿಂದೆ ಸ್ವಯಂಪ್ರೇರಿತರಾಗಿ ಜಾರ್ಜ್ ಅವರು ರಾಜಿನಾಮೆ ನೀಡಿದ್ದರು. ಹೀಗಾಗಿ ಸಚಿವ ಜಾರ್ಜ್ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ಸಚಿವರ ಮೇಲೂ ಆರೋಪಗಳಿವೆ. ಆದರೆ ಅವರ್ಯಾರು ರಾಜಿನಾಮೆಯನ್ನು ಏಕೆ ನೀಡಿಲ್ಲ. ಕೇವಲ ಜಾರ್ಜ್ ಅವರ ರಾಜಿನಾಮೆ ಏಕೆ ಕೇಳುತ್ತಿದ್ದಾರೆ?’- ಮುಖ್ಯಮಂತ್ರಿ ಸಿದ್ದರಾಮಯ್ಯ.
  • ‘ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಬಿಜೆಪಿಯ ಕೇಂದ್ರ ನಾಯಕರ ಮೇಲೂ ಅನೇಕ ಆರೋಪಗಳಿವೆ. ಆದರೆ ಅವರುಗಳು ಯಾಕೆ ರಾಜಿನಾಮೆ ನೀಡಿಲ್ಲ? ಬಿಜೆಪಿಯವರು ಈ ಹಿಂದೆ ಇದೇ ವಿಷಯವಾಗಿ ಪ್ರತಿಭಟನೆಗೆ ಮುಂದಾಗಿದ್ದರು. ನಂತರ ಅವರೇ ಸುಮ್ಮನಾದರು. ಹೀಗಿರುವಾಗಿ ಅವರ ಮಾತು ಕೇಳಲು ಸಾಧ್ಯವೇ?’- ಇಂಧನ ಸಚಿವ ಡಿ.ಕೆ ಶಿವಕುಮಾರ್

Leave a Reply