ಐಪಿಎಲ್ 11ರ ಆಟಗಾರರ ಹರಾಜು- ಆಡಳಿತ ಮಂಡಳಿ ಪ್ರಸ್ತಾವಕ್ಕೆ ಫ್ರಾಂಚೈಸಿಗಳಲ್ಲೇ ಭಿನ್ನಮತ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನು ಆರು ತಿಂಗಳು ಬಾಕಿ ಇದ್ದರೂ ಟೂರ್ನಿ ಈಗಿನಿಂದಲೇ ಸಾಕಷ್ಟು ಸುದ್ದಿಯಾಗಲು ಆರಂಭಿಸಿದೆ. ಹತ್ತು ಐಪಿಎಲ್ ಆವೃತ್ತಿ ಮುಕ್ತಾಯವಾಗಿದ್ದು, ಮುಂದಿನ ವರ್ಷದ ಆವೃತ್ತಿಗೆ ಆಟಗಾರರ ‘ಮೆಘಾ ಹರಾಜು’ ಪ್ರಕ್ರಿಯೆ ನಡೆಯಲಿದೆ ಎಂಬುದು ಗೊತ್ತಿರುವ ವಿಚಾರ. ಈಗ ಹರಾಜು ಪ್ರಕ್ರಿಯೆ ಕುರಿತಾಗಿ ಐಪಿಎಲ್ ಆಡಳಿತ ಮಂಡಳಿಯ ಹೊಸ ಪ್ರಸ್ತಾವನೆ ಈಗ ಐಪಿಎಲ್ ತಂಡಗಳ ಮಾಲೀಕರಲ್ಲೇ ಭಿನ್ನಮತ ಸೃಷ್ಟಿಸಿದೆ.

ಒಂದು ವೇಳೆ ಆಡಳಿತಮಂಡಳಿಯ ಪ್ರಸ್ತಾವನೆ ಜಾರಿಯಾಗಿದ್ದೇ ಆದರೆ, ಅದರಿಂದ ಹೆಚ್ಚಿನ ಸಂತೋಷವಾಗೋದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ. ಆದರೆ ಈ ಪ್ರಸ್ತಾವನೆಗೆ ಈಗ ಕೆಲವು ಫ್ರಾಂಚೈಸಿ ಮಾಲೀಕರು ಅಪಸ್ವರ ಹಾಡುತ್ತಿದ್ದಾರೆ. ಈ ಅಪಸ್ವರಕ್ಕೆ ಕಾರಣವಾಗಿರೋ ಆ ಪ್ರಸ್ತಾವನೆ ಏನು? ಅದರಿಂದ ಸಿಎಸ್ ಕೆ ತಂಡದ ಅಭಿಮಾನಿಗಳಿಗೆ ಆಗುವ ಸಂತೋಷವಾದರೂ ಏನು? ನೋಡೋಣ ಬನ್ನಿ…

2018ರ ಐಪಿಎಲ್ ಆವೃತ್ತಿಗಾಗಿ ಮೆಘಾ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಎಂಟು ತಂಡಗಳ ಎಲ್ಲಾ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದು. ಆದರೆ ಈಗ ಐಪಿಎಲ್ ಆಡಳಿತ ಮಂಡಳಿ, ಪ್ರತಿ ತಂಡಕ್ಕೆ ಒಬ್ಬ ಭಾರತೀಯ ಆಟಗಾರ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲು ಮುಂದಾಗಿದೆ. ಒಂದು ವೇಳೆ ಈ ನಿರ್ಧಾರ ಜಾರಿಯಾಗಿದ್ದೇ ಆದರೆ, ಸಿಎಸ್ ಕೆ ತಂಡ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಳ್ಳುವುದು ಖಚಿತ. ಕೇವಲ ಸಿಎಸ್ ಕೆ ಮಾತ್ರವಲ್ಲ, ಆರ್ ಸಿಬಿ ತಂಡ ವಿರಾಟ್ ಕೊಹ್ಲಿಯನ್ನು, ಕೆಕೆಆರ್ ತಂಡ ಗೌತಮ್ ಗಂಭೀರ್ ನನ್ನು, ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾರನ್ನು ಉಳಿಸಿಕೊಳ್ಳಲಿವೆ. ಆದರೆ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಉಳಿಸಿಕೊಳ್ಳಲೇಬೇಕು ಎಂಬಂತಹ ಈ ರೀತಿಯಾದ ಐಕಾನ್ ಹಾಗೂ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿಲ್ಲ. ಹೀಗಾಗಿ ಫ್ರಾಂಚೈಸಿ ಮಾಲೀಕರ ನಡುವೆ ಸಹಮತ ಇಲ್ಲದಂತಾಗಿದೆ.

ಆಡಳಿತ ಮಂಡಳಿಯ ಈ ಪ್ರಸ್ತಾವದಲ್ಲಿ ಒಬ್ಬ ಭಾರತೀಯ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವುದಾದರೆ ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಮೆಘಾ ಹರಾಜು ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂಬುದು ಕೆಲವು ಫ್ರಾಂಚೈಸಿ ಮಾಲೀಕರ ವಾದವಾಗಿದೆ. ಒಂದು ವೇಳೆ ಎಲ್ಲಾ ಆಟಗಾರರು ಹರಾಜಿಗೆ ಹೋಗಿದ್ದೇ ಆದರೆ, ಐಪಿಎಲ್ ಟೂರ್ನಿಗಿಂತ ಅದರ ಹರಾಜು ಪ್ರಕ್ರಿಯೆಯೇ ಅಭಿಮಾನಿಗಳ ಗಮನ ಸೆಳೆಯಲಿದೆ.

Leave a Reply