ಜಾರ್ಜ್ ಕೈಬಿಡಲು ಸಿದ್ರಾಮಯ್ಯ ಸಂಪುಟದಲ್ಲೇ ಹೆಚ್ಚುತ್ತಿರುವ ಒತ್ತಡ

ಡಿಜಿಟಲ್ ಕನ್ನಡ ಟೀಮ್:

ತಮ್ಮ ಮತ್ತು ಹೈಕಮಾಂಡ್ ನಡುವೆ ‘ಅರ್ಥ ಸೇತು’ವಾಗಿರುವ ಕೆ.ಜೆ. ಜಾರ್ಜ್ ಅವರನ್ನು ಸಂಪುಟದಲ್ಲೇ ಉಳಿಸಿಕೊಳ್ಳಲು ನಡೆಸಿರುವ ಶತಾಯಗತಾಯ ಪ್ರಯತ್ನಕ್ಕೆ ಹಿರಿಯ ಸಚಿವರೇ ಅಡ್ಡಗಾಲಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿರುವ ಜಾರ್ಜ್ ಅವರನ್ನು ಸಂಪುಟದಲ್ಲೇ ಉಳಿಸಿಕೊಂಡರೆ ಸಮೀಪದಲ್ಲೇ ಇರುವ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಲಿದೆ. ಪ್ರಮುಖ ಪ್ರತಿಪಕ್ಷ ಇದನ್ನೇ ಪ್ರಮುಖ ಚುನಾವಣೆ ಅಸ್ತ್ರವಾಗಿ ಮಾಡಿಕೊಳ್ಳಲಿದೆ. ಹೀಗಾಗಿ ಜಾರ್ಜ್ ಕೈಬಿಡುವುದು ಸೂಕ್ತ ಎಂದು ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಎಸ್.ಆರ್. ಪಾಟೀಲರಂತಹ ಹಿರಿಯ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಸಿಎಂಗೆ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಒಂದೆಡೆ ಪ್ರತಿಪಕ್ಷ ಬಿಜೆಪಿ ನವೆಂಬರ್ 2 ರಿಂದ ಆರಂಭಿಸಲಿರುವ ನವಪರಿವರ್ತನಾ ಯಾತ್ರೆ ಹಾಗೂ ಅದೇ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಜಾರ್ಜ್ ರಾಜೀನಾಮೆ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಹೋರಾಟ ನಡೆಸಲು ತೀರ್ಮಾನಿಸಿದೆ. ಮತ್ತೊಂದೆಡೆ ಹಿರಿಯ ಸಚಿವರೂ ಒತ್ತಡ ತರುತ್ತಿರುವುದು ಸಿದ್ದರಾಮಯ್ಯ ಅವರನ್ನು ಅಡಕತ್ತರಿಯಲ್ಲಿ ಸಿಕ್ಕಿಸಿದೆ.

ಸಂಪುಟ ಮತ್ತು ಕಾಂಗ್ರೆಸ್ನ ಹಿರಿಯ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಜಾರ್ಜ್ ಅವರನ್ನು ಸಮರ್ಥಿಸಿಕೊಳ್ಳುವ ಮಾತುಗಳನ್ನಾಡುತ್ತಾ, ಆಂತರಿಕವಾಗಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಹಿಂದೆ ಕೋರ್ಟ್ ಸೂಚನೆಯಂತೆ ಸಿಐಡಿ ಅಧಿಕಾರಿಗಳು ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದಾಗ ಅವರ ರಾಜೀನಾಮೆ ಪಡೆಯಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ಸಿಬಿಐ ಎಫ್ಐಆರ್ ದಾಖಲಿಸಿರುವಾಗ ರಾಜೀನಾಮೆ ಪಡೆಯದಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಜಾರ್ಜ್ ಮೊದಲಿಂದಲೂ ಆಪ್ತರು. ಜತೆಗೆ ಬೇರೆಲ್ಲರಿಗಿಂತೂ ಹೆಚ್ಚು ನಂಬಿಕಸ್ಥರು. ಸೋನಿಯಾ ಗಾಂಧಿ ಮತ್ತು ತಮ್ಮ ನಡುವೆ ಪಕ್ಷದ ಆಂತರಿಕ ಅದರಲ್ಲೂ ವಿಶೇಷವಾಗಿ ಆರ್ಥಿಕ ವ್ಯವಹಾರದಲ್ಲಿ ಸಂಪರ್ಕ  ಸೇತುವಾಗಿ ಕೆಲಸ ಮಾಡುತ್ತಾ ಬಂದಿರುವವರು. ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ರಾಷ್ಟ್ರಮಟ್ಟದಲ್ಲಿ ಪಕ್ಷದ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿರುವ ಸಂಪನ್ಮೂಲ ರಾಜ್ಯವೂ ಹೌದು. ಈ ಜವಾಬ್ದಾರಿ ನಿರ್ವಹಣೆಯಲ್ಲಿ ಜಾರ್ಜ್ ಸಿದ್ಧಹಸ್ತರು. ಇಂಥವರನ್ನು ಚುನಾವಣೆ ಹೊಸ್ತಿಲಲ್ಲಿ ಸಂಪುಟದಿಂದ ಕಳೆದುಕೊಳ್ಳಲು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಹಾಗೇನಾದರೂ ಆದರೆ ಒಂದು ಕೈ ಮುರಿದು ಹೋದಂತೆಯೇ ಎಂದು ಅವರು ಭಾವಿಸಿದ್ದಾರೆ. ಹೀಗಾಗಿ ಶತಾಯ-ಗತಾಯ ಅವರನ್ನು ಉಳಿಸಿಕೊಳ್ಳಲು ಶ್ರಮ ಮೀರಿ ಹೋರಾಡುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Leave a Reply