ದಿನೇ ದಿನೇ ಗಟ್ಟಿಯಾಗುತ್ತಿದೆ ಭಾರತ- ಅಮೆರಿಕ ಮಿಲಿಟರಿ ಒಪ್ಪಂದ, ಪಾಕಿಸ್ತಾನ ಹೊಟ್ಟೆಯಲ್ಲಿ ಕಿಚ್ಚು ಹೊತ್ತಿಕೊಂಡಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದಕರಿಗೆ ಆಶ್ರಯ ನೀಡುತ್ತಲೇ, ಭಾರತ ಹಾಗೂ ಅಮೆರಿಕದ ಕಣ್ಣಿಗೆ ವಿಲನ್ ಆಗಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಅದೇನೆಂದರೆ ಅಮೆರಿಕ ಭಾರತ ಜತೆಗಿನ ರಕ್ಷಣಾ ಒಪ್ಪಂದಗಳನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಇದರಿಂದ ಭಾರತಕ್ಕೆ ಅಮೆರಿಕದಿಂದ ಎಫ್ 16 ಹಾಗೂ ಎಫ್-18 ಯುದ್ಧ ವಿಮಾನಗಳು ಮಾತ್ರವಲ್ಲದೆ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಗೂ ಅಮೆರಿಕ ಭಾರತಕ್ಕೆ ನೆರವು ನೀಡಲಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಭಾರತ ಹಾಗೂ ಅಮೆರಿಕ ನಡುವಣ ಸ್ನೇಹ ಸಂಬಂಧ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಅದೇ ಸಮಯದಲ್ಲಿ ಅಮೆರಿಕ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹದಗೆಡುತ್ತಿದೆ. ತನಗೆ ಅಪಯಕಾರಿಯಾಗಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಲೇಬೇಕು ಎಂದು ಪಣ ತೊಟ್ಟಿರುವ ಅಮೆರಿಕ ಇನ್ನು ಪಾಕಿಸ್ತಾನದ ಸುಳ್ಳಿನ ಕಥೆಗಳನ್ನು ಕೇಳಿಕೊಂಡು ಕೂರಲು ಸಿದ್ಧವಿಲ್ಲ. ಹೀಗಾಗಿ ತನ್ನ ನೆಲದಲ್ಲಿರುವ ಉಗ್ರರನ್ನು ಮಟ್ಟ ಹಾಕಬೇಕು ಎಂದು ಪಾಕಿಸ್ತಾನದ ಮೇಲೆ ಅಮೆರಿಕ ಇನ್ನಿಲ್ಲದ ಒತ್ತಡ ಹೇರುತ್ತಿದೆ.

ನಿನ್ನೆಯಷ್ಟೇ ಅಮೆರಿಕ ರಕ್ಷಣಾ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ರು. ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಟ ನಡೆಸದಿದ್ದರೆ, ಆ ಕೆಲಸವನ್ನು ನಾವು ಬೇರೆಯದೇ ದಾರಿಯಲ್ಲಿ ಮಾಡಬೇಕಾಗುತ್ತದೆ ಎಂದಿದ್ದರು. ಹೀಗೆ ಪಾಕಿಸ್ತಾಕ್ಕೆ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಈಗ ಭಾರತದ ಜತೆಗಿನ ಮಿಲಿಟರಿ ಒಪ್ಪಂಧವನ್ನು ಅಮೆರಿಕ ಗಟ್ಟಿಗೊಳಿಸುತ್ತಿರುವುದು ಪಾಕಿಸ್ತಾನಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಅಮೆರಿಕ ಎಫ್16 ಹಾಗೂ ಎಫ್ 18 ಯುದ್ಧ ವಿಮಾನಗಳನ್ನು ನೀಡುವುದಷ್ಟೇ ಅಲ್ಲದೆ ಭಾರತದ ಮನವಿಯನ್ನು ಪುರಸ್ಕರಿಸಿ ತನ್ನ ಶಸ್ತ್ರಸಜ್ಜಿತ ಮಿಲಿಟರಿ ಡ್ರೋನ್ ಗಳನ್ನು ನೀಡುವ ಚಿಂತನೆ ನಡೆಸುಕತ್ತಿದೆ. ಅಮೆರಿಕದ ಈ ನಡೆಗೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಅಮೆರಿಕದ ಈ ನಿರ್ಧಾರ ಸರಿಯಲ್ಲ. ಅಮೆರಿಕ ಶಸ್ತ್ರಸಜ್ಜಿತ ಮಿಲಿಟರಿ ಡ್ರೋನ್ ಗಳನ್ನು ನೀಡಿದರೆ, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮಿಲಿಟರಿ ಸಂಘರ್ಷಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಮೆರಿಕದ ಈ ನಿರ್ಧಾರದಿಂದ ಪ್ರಾದೇಶಿಕವಾಗಿ ಭಾರತದ ಮಿಲಿಟರಿ ಬಲ ಹೆಚ್ಚಲಿದೆ. ಅಸಮತೋಲನಕ್ಕೆ ಕಾರಣವಾಗಲಿದೆ. ಹೀಗಾಗಿ ಅಮೆರಿಕದ ಈ ನಿರ್ಧಾರವನ್ನು ವಿರೋಧಿಸುತ್ತೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ತಿಳಿಸಿದ್ದಾರೆ.

ಪಾಕಿಸ್ತಾನದ ಈ ಆತಂಕಕ್ಕೆ ಬಲವಾದ ಕಾರಣವೂ ಇದೆ. ಅಮೆರಿಕದ ಈ ಶಸ್ತ್ರಸಜ್ಜಿತ ಮಿಲಿಟರಿ ಡ್ರೋನ್ ಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಈಗಾಗಲೇ ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಗುರಿ ನಿರ್ದಿಷ್ಟ ದಾಳಿ ನಡೆಸಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ. ಒಂದು ವೇಳೆ ಈ ಮಿಲಿಟರಿ ಡ್ರೋನ್ ಭಾರತಕ್ಕೆ ಸೇರಿದರೆ ಉಗ್ರರ ನೆಲೆಗಳ ಮೇಲೆ ಮತ್ತಷ್ಟು ದಾಳಿಯಾಗುವ ಆತಂಕ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ.

ಒಟ್ಟಿನಲ್ಲಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರರನ್ನು ದಮನ ಮಾಡಲು ಅಮೆರಿಕ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಅದು ಕೈಗೊಳ್ಳುತ್ತಿರುವ ನಿರ್ಧಾರಗಳು ಭಾರತಕ್ಕೆ ಲಾಭವಾಗಿ ಪರಿಣಮಿಸುತ್ತಿದೆ.

Leave a Reply